ಬೆಂಗಳೂರು: ಚನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ (Channagiri BJP MLA Madalu Virupakshappa) ಪುತ್ರನ ಲಂಚಾವತಾರದ ಕಥೆಗಳು ಒಂದೊಂದಾಗೇ ಹೊರಬರುತ್ತಿವೆ. 80 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, 40 ಲಕ್ಷ ಪಡೆದಿದ್ದ ಮಾಡಾಳು ಪ್ರಶಾಂತ್ (Madalu Prashant) ಲೋಕಾಯುಕ್ತ ಪೊಲೀಸರ (Lokayukta Police) ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದ. ಬಳಿಕ ಅವರ ಮನೆ, ಕಚೇರಿ ಸೇರಿದಂತೆ ಹಲವೆಡೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ 40 ಲಕ್ಷ ಲಂಚದ ಹಣ ಸೇರಿದಂತೆ ಬರೋಬ್ಬರಿ 8 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣ ಪತ್ತೆಯಾಗಿದ್ಯಂತೆ. ಇನ್ನು ಇತ್ತ ಮಾಡಾಳ್ ವಿರೂಪಾಕ್ಷಪ್ಪಗೂ ಲೋಕಾಯುಕ್ತ ಟೀಂ ಬಿಸಿ ಮುಟ್ಟಿಸಿದೆ. ಮತ್ತೊಂದೆಡೆ ಮಾಡಾಳು ಪ್ರಶಾಂತ್ ಭ್ರಷ್ಟಾಚಾರದ ಪ್ರಕರಣವನ್ನು ಲೋಕಾಯುಕ್ತ ಕೋರ್ಟ್‌ನಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.
ಲೋಕಾಯುಕ್ತ ಕೋರ್ಟ್‌ನಿಂದ ವಿಶೇಷ ನ್ಯಾಯಾಲಯಕ್ಕೆ ಕೇಸ್ ವರ್ಗ
ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರನ ಲಂಚಾವತಾರದ ಕೇಸ್ ಅನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ. ನಿನ್ನೆ ರೇಡ್ ನಡೆಸಿದ್ದ ವೇಳೆ ಲೋಕಾಯುಕ್ತ ಪೊಲೀಸರು ಮಾಡಾಳು ಪುತ್ರ ಪ್ರಶಾಂತ್‌ನನ್ನು ವಶಕ್ಕೆ ಪಡೆದಿದ್ದರು. ಈ ಪ್ರಕರಣದಲ್ಲಿ ಮಾಡಾಳು ವಿರೂಪಾಕ್ಷಪ್ಪ ಅವರ ಮೇಲೂ ಆರೋಪ ಇರೋದ್ರಿಂದ ಕೇಸ್‌ನ ವಿಚಾರಣೆಯನ್ನು ಲೋಕಾಯುಕ್ತ ಕೋರ್ಟ್‌ನಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ: Madalu Prashant: ಬಗೆದಷ್ಟು ಹೊರ ಬರುತ್ತಿದೆ ಮಾಡಾಳು ಮಗನ ಭ್ರಷ್ಟಾಚಾರ! ಡೀಲ್ ನಡೆಸ್ತಿದ್ದನಾ ಪ್ರಶಾಂತ್?
ಮಾಡಾಳ್ ಪ್ರಶಾಂತ್ ಮನೆಯಲ್ಲಿ ಡೈರಿ ಪತ್ತೆ
ಇನ್ನು ಲೋಕಾಯುಕ್ತ ದಾಳಿ ವೇಳೆ ಮಾಡಾಳು ಪ್ರಶಾಂತ್ ಮನೆಯಲ್ಲಿ ಮಹತ್ವದ ಡೈರಿಯೊಂದು ಪತ್ತೆಯಾಗಿದೆ. ಡೈರಿಯಲ್ಲಿ ಕೆಲವು ಮಾಹಿತಿ, ಹೆಸರುಗಳು ಉಲ್ಲೇಖವಾಗಿವೆ. ಈ ಹಿಂದೆ ಕೆಲಸ ಮಾಡಿದ್ದ ಹುದ್ದೆಗಳ ಬಗ್ಗೆಯೂ ಡೈರಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿಂದೆ ಎಸಿಬಿಯಲ್ಲಿ ಅಕೌಂಟೆಂಟ್ ಕೆಲಸ ಮಾಡಿದ್ದ ಪ್ರಶಾಂತ್ ಮಡಾಳ್, ಎಸಿಬಿಯಲ್ಲಿ ಇದ್ದಾಗಲೂ ದೊಡ್ಡ ಅಕ್ರಮ ನಡೆಸಿದ್ದ ಎನ್ನಲಾಗಿದೆ. ಇನ್ನು 40 ಲಕ್ಷ ರೂಪಾಯಿ ಅಕ್ರಮ ಹಣ ನೀಡಿರುವ ಬಗ್ಗೆ ಡೈರಿಯಲ್ಲಿ ಉಲ್ಲೇಖಿಸಲಾಗಿದೆ. ಐಪಿಎಸ್ ಅಧಿಕಾರಿ ಒಬ್ಬರಿಗೆ ಹಣ ಕೊಟ್ಟಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಸದ್ಯ ಡೈರಿ ವಶಕ್ಕೆ ಪಡೆದು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಮಾಡಾಳು ಸೇರಿ 6 ಮಂದಿ ಮೇಲೆ ಎಫ್ಐಆರ್
ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೇಯಸ್ ಕಶ್ಯಪ್ ಕೆಮಿಕಲ್ ಕಂಪನಿಯ ಪಾಲುದಾರ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸೇರಿ ಆರು ಜನರ ವಿರುದ್ದ ಎಫ್ಐಆರ್ ದಾಳಲಾಗಿದೆ. ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದ ಎ1 ಆರೋಪಿ, ಪುತ್ರ ಪ್ರಶಾಂತ ಮಾಡಾಳ್, ಬಿಡಬ್ಯೂ ಎಸ್ ಎಸ್ ಬಿ ಸಿಇಓ A2, ಕಚೇರಿ ಲೆಕ್ಕಾಧಿಕಾರಿ ಸುರೇಂದ್ರ A3, ಪ್ರಶಾಂತ ಮಾಡಾಳ್ ಸಂಬಂಧಿ ಸಿದ್ದೇಶ A4 ಹಾಗೂ ಕರ್ನಾಟಕ ಅರೋಮಸ್ ಕಂಪನಿಯ ಸಿಬ್ಬಂದಿ ಆಲ್ಬರ್ಟ್ ನಿಕೋಲಾಸ್ A5 ಹಾಗೂ ಗಂಗಾಧರ್ A6 ಆರೋಪಿಯಾಗಿದ್ದಾರೆ. ದಾಳಿಯಲ್ಲಿ ಒಟ್ಟು 8 ಕೋಟಿ12 ಲಕ್ಷ 30 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.
ಮಾಡಾಳು ಪತ್ನಿಗೆ ಅನಾರೋಗ್ಯ
ಈ ನಡುವೆ ಶಾಸಕ ಮಾಡಾಳು ವೀರುಪಾಕ್ಷಪ್ಪ ಮನೆ ಮೇಲೆ ಲೊಕಾಯುಕ್ತ ದಾಳಿ ನಡೆಯುತ್ತಿದ್ದಂತೆ ಅವರ ಪತ್ನಿ ಲೀಲಾವತಿ ಆರೋಗ್ಯದಲ್ಲಿ ಏರಪೇರಾಗಿದ್ಯಂತೆ. ಹೀಗಾಗಿ ವೀರೂಪಾಕ್ಷಪ್ಪ ಮನೆಗೆ ಕುಟುಂಬ ವೈದ್ಯರು ಭೇಟಿ ನೀಡಿ, ಆರೋಗ್ಯ ಪರೀಕ್ಷಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ