ಗ್ರಹಣಕ್ಕೆ ಹೆದರಿ ಮನೆ ಸೇರಿದ್ದ ರಾಜಕೀಯ ಗಣ್ಯರು, ಕೇಕ್ ಕತ್ತರಿಸಿ ಬರಮಾಡಿಕೊಂಡ ವಿಚಾರವಾದಿಗಳು..!


Updated:July 28, 2018, 7:30 AM IST
ಗ್ರಹಣಕ್ಕೆ ಹೆದರಿ ಮನೆ ಸೇರಿದ್ದ ರಾಜಕೀಯ ಗಣ್ಯರು, ಕೇಕ್ ಕತ್ತರಿಸಿ ಬರಮಾಡಿಕೊಂಡ ವಿಚಾರವಾದಿಗಳು..!

Updated: July 28, 2018, 7:30 AM IST
ಗಣೇಶ್​ ನಚಿಕೇತು, ನ್ಯೂಸ್​-18 ಕನ್ನಡ

ಬೆಂಗಳೂರು(ಜುಲೈ.27): ಒಂದೆಡೆ ಶತಮಾನದ ಧೀರ್ಘಾವಧಿಯ ಖಗ್ರಾಸ ಚಂದ್ರಗ್ರಹಣವನ್ನು ರಾಹುವೋ ಕೇತುವೋ ನುಂಗುತ್ತಿದೆ, ನಾವು ಮನೆಯಿಂದ ಹೊರಗೆ ಬಂದಲ್ಲಿ ಘಾತುಕ ಘಟನೆಗಳು ಸಂಭವಿಸಲಿವೆ ಎಂದು ರಾಜಕೀಯ ಗಣ್ಯರು ಅನಾದಿ ಕಾಲದ ಮೌಢ್ಯವನ್ನು ನಂಬಿ ಮನೆ ಸೇರಿದ್ದರೆ, ಮತ್ತೊಂದೆಡೆ ವಿಚಾರವಾದಿಗಳು  ಗ್ರಹಣ ನೈಸರ್ಗಿಕ ಕ್ರಿಯೆ, ಇದನ್ನು ನೋಡುವುದರಿಂದ ಜನರಿಗೆ ಕೆಟ್ಟದಾಗುವುದಿಲ್ಲ ಎಂದು ಮೂಢ ನಂಬಿಕೆಗೆ ಸೆಡ್ಡು ಹೊಡೆದು ಕೇಕ್​ ಕತ್ತರಿಸಿ ಗ್ರಹಣವನ್ನು ಬರಮಾಡಿಕೊಳ್ಳುವ ಮೂಲಕ ಜನರಲ್ಲಿ ವೈಚಾರಿಕ ಬೀಜವನ್ನು ಬಿತ್ತಲು ಯತ್ನಿಸಿದರು.

ಗ್ರಹಣ ಕಣ್ತುಂಬಿಸಿಕೊಂಡ ಜನ: ನಿನ್ನೆ ಜುಲೈ(27) ಶುಕ್ರವಾರದಂದು ಶತಮಾನದ ಧೀರ್ಘಾವಧಿಯ ಖಗ್ರಾಸ ಚಂದ್ರಗ್ರಹಕ್ಕೆ ಆಕಾಶ ಸಾಕ್ಷಿಯಾಗಿತ್ತು. ಖಗೋಳ ವಿಸ್ಮಯ ವೀಕ್ಷಿಸಲು ಜನರು ಅಚ್ಚರಿಯಿಂದ ಆಕಾಶದೆಡೆಗೆ ಮುಖ ಮಾಡಿದ್ದರು. ರಾತ್ರಿ ಆರಂಭದಲ್ಲಿ ಸ್ವಲ್ಪ ಕಾಲ ಮೋಡ ಕಂಡುಬಂದರೂ, ನಂತರ ಶುಭ್ರ ಆಕಾಶದಿಂದ ಜನರು ಶತಮಾನದ ಅಚ್ಚರಿಯನ್ನು ಕಣ್ತುಂಬಿಕೊಂಡರು.

ರಾಜ್ಯ, ದೇಶ, ವಿದೇಶಗಳಲ್ಲಿ ಈ ಮಹಾ ಚಂದ್ರಗ್ರಹಣ ಗೋಚರಿಸಿದೆ. ಈ ಶತಮಾನದ ಅತಿ ದೀರ್ಘಾವಧಿಯ ಚಂದ್ರಗ್ರಹಣವಾಗಿದೆ. ನಿನ್ನೆ ರಾತ್ರಿ 11.54ಕ್ಕೆ ಗ್ರಹಣ ಸ್ಪರ್ಶವಾಗಿ, 1 ಗಂಟೆಯಿಂದ ಸುಮಾರು 103 ನಿಮಿಷಗಳ ಕಾಲ ಚಂದ್ರ ರಕ್ತ ವರ್ಣದಲ್ಲಿ ವಿಜೃಂಭಿಸುವ ವಿದ್ಯಮಾನವನ್ನು ಕಣ್ಣಾರೆ ಕಾಣುವ ತವಕ ಜನರಲ್ಲಿತ್ತು.

ದೇವಸ್ಥಾನಗಳಲ್ಲಿ ಭೋಜನ ರದ್ದು: ಸರ್ಕಾರವೇ ಹಲವು ಕಡೆ ಗ್ರಹಣ ವೀಕ್ಷಣೆಗೆ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆದರೆ, ಹಲವಾರು ದೇಗುಲಗಳಲ್ಲಿ ಗ್ರಹಣ ಹಿನ್ನಲ್ಲೆಯಲ್ಲಿ ರಾತ್ರಿಯ ಮಹಾಪೂಜೆಯನ್ನು ಬೇಗನೆ ಮುಗಿಸಲಾಗಿತ್ತು. ಬೆಂಗಳೂರಿನ ನೆಹರೂ ತಾರಾಲಯ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಟೆಲಿಸ್ಕೋಪ್ ಬಳಸಿ ಚಂದ್ರಗ್ರಹಣ ವೀಕ್ಷಣೆಗೆ ಆಸಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು.

ಗ್ರಹಣದ ಹಿನ್ನಲ್ಲೆಯಲ್ಲಿ ಹಲವು ದೇವಸ್ಥಾನಗಳಲ್ಲಿ ಭೋಜನ ರದ್ದು ಮಾಡಿ ಸಂಜೆಯ ಬಳಿಕ ದೇವರ ದರ್ಶನವನ್ನು ಅಂತ್ಯಗೊಳಿಸಲಾಯಿತು. ಮತ್ತೊಂದೆಡೆ ಮೌಢ್ಯವನ್ನು ಹೋಗಿಸಲು ಶಾಸಕ ಸತೀಶ್​ ಜಾರಕೊಹೊಳಿ ನೇತೃತ್ವದಲ್ಲಿ ರಾಜ್ಯದ ಪ್ರಗತಿಪರ ಬುದ್ಧಿಜೀವಿ ವರ್ಗ ಸ್ಮಶಾನದಲ್ಲಿಯೇ ಭೋಜನ ಸವಿಯುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮೌಢ್ಯವನ್ನು ವಿರೋಧಿಸಿತ್ತು.

ಉಡುಪಿ ಕೃಷ್ಣ ಮಠ, ಕೊಲ್ಲೂರು, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು ದೇಗುಲಗಳಲ್ಲಿ ರಾತ್ರಿ ಭೋಜನ ಇರಲಿಲ್ಲ. ಧರ್ಮಸ್ಥಳದಲ್ಲಿ ದೇವರ ದರ್ಶನ, ಪೂಜಾ ವೇಳೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಮೇಲುಕೋಟೆ ಚೆಲುವನಾರಾಯಣ ಸ್ವಾಮಿಗೆ ರಾತ್ರಿ ನಡೆಯಬೇಕಾಗಿದ್ದ ಕೃಷ್ಣರಾಜಮುಡಿ ಬ್ರಹ್ಮೋತ್ಸವದ ಅಂಕುರಾರ್ಪಣೆ ಸಂಜೆಯೇ ನೆರವೇರಿದೆ.
Loading...

ಜಾಗೃತಿ ಕಾರ್ಯಕ್ರಮ: ಗ್ರಹಣದ ಬಗ್ಗೆಯ ಜನರಲ್ಲಿನ ಮೌಡ್ಯವನ್ನು ತೊಲಗಿಸಲು ಚಿತ್ರದುರ್ಗದ ಮುರುಘಾ ಮಠದಲ್ಲಿ ರಾತ್ರಿಯೇ ದೀಕ್ಷೆ , ಕಲ್ಯಾಣ ಮಹೋತ್ಸವ ನಡೆಸಲಾಯಿತು. ಹಾಗೆಯೇ ಶಾಸಕ ಸತೀಶ ಜಾರಕಿಹೊಳಿ ಅವರ ಮಾನವ ಬಂಧುತ್ವ ವೇದಿಕೆಯಿಂದಲೂ ಬೆಳಗಾವಿಯ ರುದ್ರ ಭೂಮಿಯಲ್ಲಿಯೂ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಪ್ರಗತಿಪರರು ಒಟ್ಟಾಗಿ ವಿಜ್ಞಾನದೆಡೆಗೆ ನಮ್ಮ ನಡಿಗೆ ಎಂಬ ಕಾರ್ಯಕ್ರಮ ಆಯೋಜಿಸಿ, ಗ್ರಹಣ ಕಾಲದಲ್ಲಿ ಭೋಜನ ಸವಿದರು. ಈ ವೇಳೆ ಗ್ರಹಣದ ಬಗೆಗಿನ ಮೌಢ್ಯವನ್ನು ಹೇಗೆ ಬಿತ್ತಲಾಗಿದೆ, ಇದರಿಂದ ಜನರಿಗೆ ಏನು ಆಗುವುದಿಲ್ಲ? ಎಂಬುದರ ಕುರಿತು ಅರಿವು ಮೂಡಿಸಿದರು.

ಮನೆ ಸೇರಿದ್ದ ರಾಜಕೀಯ ಗಣ್ಯರು: ರಾಜಕೀಯ ಗಣ್ಯರು ಅನಾದಿ ಕಾಲದ ಮೌಢ್ಯಗಳಿಗೆ ಕಟ್ಟುಬಿದ್ದು ಮನೆ ಸೇರಿದರೆ, ವಿಚಾರವಾದಿಗಳು ಕೇಕ್​ ಕತ್ತರಿಸಿ ಕುಣಿದು ಕುಪ್ಪಳಿಸುವ ಮೂಲಕ ಚಂದ್ರಗ್ರಹಣವನ್ನು ವೀಕ್ಷಿಸಿದರು. ಅಲ್ಲದೇ ವಿಜ್ಞಾನದೆಡೆಗೆ ನಮ್ಮ ನಡಿಗೆ, ತೊಲಗಲಿ ಮೌಢ್ಯ ತೊಲಗಲಿ ಎಂದು ಘೋಷಣೆ ಕೂಗುವ ಮೂಲಕ ಜನ ಜಾಗೃತಿ ಮೂಡಿಸಿದರು.

 

40 ಕಡೆ ಜಾಗೃತಿ ಕಾರ್ಯಕ್ರಮ: ಇನ್ನು ಮೂಢನಂಬಿಕೆ ವಿರುದ್ಧ ಹಲವು ವರ್ಷಗಳಿಂದ ಹೋರಾಟ ಕೈಗೊಂಡಿರುವ ಶಾಸಕ ಸಚಿವ ಸತೀಶ್‌ ಜಾರಕಿಹೊಳಿ ನೇತೃತ್ವದಲ್ಲಿ ಸದಾಶಿವನಗರದ ಸ್ಮಶಾನದಲ್ಲಿ ನಿನ್ನೆ ಸಂಜೆ ಜಾಗೃತಿ ಕಾರ್ಯಕ್ರಮ, ನಡೆಸಿ ಬೆಂಬಲಿಗರೊಂದಿಗೆ ಅಲ್ಪೋಪಹಾರ ಸೇವಿಸಲಾಯಿತು. ಈ ಮೂಲಕ ಜನರಲ್ಲಿ ಗ್ರಹಣದಿಂದ ಏನು ಆಗುವುದಿಲ್ಲ ಎಂಬುದನ್ನು ತೋರಿಸಿಕೊಡಲು ಮುಂದಾಗಿದ್ದರು ಎನ್ನುತ್ತಿವೆ ಮೂಲಗಳು.

 ಈ ವೇಳೆ ಮಾತಾಡಿದ ಅವರು ''ಜನ ಮೌಢ್ಯ ಮತ್ತು ಜಾದೂಗಳ ನಿಜಾರ್ಥ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಯಾವುದರಿಂದ ನಮ್ಮ ಆರ್ಥಿಕ ಶಕ್ತಿ ಹೆಚ್ಚಿಸಬಹುದು, ಮಕ್ಕಳ ವಿಚಾರ ಶಕ್ತಿಯಲ್ಲಿ ಬದಲಾವಣೆ ತರಬಲ್ಲವೇ ಎಂಬುದನ್ನು ಯೋಚಿಸಬೇಕು. ವೈಚಾರಿಕ ಶಿಕ್ಷಣದಿಂದಲೇ ಮೂಢನಂಬಿಕೆಗಳು ಕಡಿಮೆಯಾಗುತ್ತವೆ. ಆಗ ಮಾತ್ರ ನಾವು ಬೌದ್ಧಿಕ ಗುಲಾಮಗಿರಿಯಿಂದ ಹೊರಬಂದು ಸ್ವತಂತ್ರ ಜೀವನ ನಡೆಸಬಹುದು'', ಎಂದರು.

''ಗ್ರಹಣ ಭೂಮಿಯ ಗುರುತ್ವ ಶಕ್ತಿಯ ಮೇಲೆ ಕೆಲ ಮಟ್ಟಿಗೆ ಪ್ರಭಾವ ಬೀರಲಿದೆ. ಅದೊಂದು ನಿಸರ್ಗ ಸಹಜ ಕ್ರಿಯೆ. ಆದರೆ ಅದರಿಂದ ಮನುಷ್ಯನಿಗೇನೂ ತೊಂದರೆ ಆಗದು. ಗ್ರಹಣದ ಮೊದಲು ಮತ್ತು ನಂತರ ಏನನ್ನೂ ತಿನ್ನಬಾರದು ಎನ್ನುವುದರಲ್ಲಿ ಅರ್ಥವಿಲ್ಲ. ಈ ಎಲ್ಲದ ಕುರಿತು ಜಾಗೃತಿ ಮೂಡಿಸಲೆಂದೇ ಮಾನವ ಬಂಧುತ್ವ ವೇದಿಕೆ ಇಂದು ರಾಜ್ಯಾದ್ಯಂತ 40 ಕಡೆಗೆ ಇಂಥ ಕಾರ್ಯಕ್ರಮಗಳನ್ನು ಆಯೋಜಿಸಿದೆ'', ಎಂದು ಸತೀಶ್‌ ಜಾರಕಿಹೊಳಿ ಅಭಿಪ್ರಾಯಪಟ್ಟರು.
First published:July 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...