ನವದೆಹಲಿ(ಆ.18): ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನ್ಕಕೇರುತ್ತಲೇ ಇದೆ. ಗೃಹೋಪಯೋಗಿ ವಸ್ತುಗಳು, ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಮೊದಲೆಲ್ಲಾ ಪೆಟ್ರೋಲ್-ಡೀಸೆಲ್ ಹಾಗೂ ಅಡುಗೆ ಎಣ್ಣೆ ಬೆಲೆ ಏರಿಕೆ ಮಾಡಿದ್ದ ಸರ್ಕಾರ, ಬಳಿಕ ದಿನಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏರಿಸಿತ್ತು. ಸದ್ಯ ಕಳೆದ ಒಂದು ತಿಂಗಳಿನಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳವಾಗಿಲ್ಲ. ಅಡುಗೆ ಎಣ್ಣೆಯ ಬೆಲೆಯೂ ಸಹ ಸ್ಥಿರತೆ ಕಾಯ್ದುಕೊಂಡಿದೆ. ಆದರೆ ಈಗ ಪ್ರತಿದಿನ ಬಳಸುವ ಎಲ್ಪಿಜಿ ಗ್ಯಾಸ್ ಸಿಲಿಂಡರ್(LPG Price Hike) ಬೆಲೆಯನ್ನು ಏರಿಸುವ ಮೂಲಕ ಗ್ರಾಹಕರಿಗೆ ಮತ್ತೆ ಬರೆ ಹಾಕಿದೆ.
ಪೆಟ್ರೋಲಿಯಂ ಕಂಪನಿಗಳು ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 25 ರೂ. ಹೆಚ್ಚಿಸಿವೆ. ಈಗ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆ.ಜಿ ಸಿಲಿಂಡರ್ ಬೆಲೆ 859.50 ರೂ. ಆಗಿದೆ. ಪರಿಷ್ಕೃತ ದರಗಳು ಆಗಸ್ಟ್ 17ರಿಂದಲೇ ಜಾರಿಯಾಗಿವೆ. ದೇಶದ ಬಹುತೇಕ ನಗರಗಳಲ್ಲಿ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಇತ್ತೀಚೆಗೆ ಜುಲೈ 1ರಂದು ಎಲ್ಪಿಜಿ ಸಿಲಿಂಡರ್ ಬೆಲೆ 25.50 ರೂಪಾಯಿ ಏರಿಕೆಯಾಗಿತ್ತು.
ಇದನ್ನೂ ಓದಿ:Weekend Curfew: ಚಾಮರಾಜನಗರ ಜಿಲ್ಲೆಯಲ್ಲಿ ಆ.30ರವರೆಗೂ ವೀಕೆಂಡ್ ಕರ್ಫ್ಯೂ ವಿಸ್ತರಣೆ; ಹೆಚ್ಚುವರಿ ನಿರ್ಬಂಧ
ತೈಲ ಕಂಪನಿಗಳು ಸತತ ಎರಡನೇ ತಿಂಗಳೂ ಸಹ ಗೃಹೋಪಯೋಗಿ ಗ್ಯಾಸ್ ಬೆಲೆಯನ್ನು ಹೆಚ್ಚಿಸಿವೆ. ಜೂನ್ 1ರಂದು ಎಲ್ಪಿಜಿ ಸಿಲಿಂಡರ್ ಬೆಲೆ 809 ರೂ. ಇತ್ತು. ಜುಲೈ 1ರಂದು 834 ರೂ.ಗೆ ಏರಿಸಲಾಯಿತು. ತೈಲ ಕಂಪನಿಗಳು ಪ್ರತೀ ತಿಂಗಳ ಮೊದಲನೇ ದಿನವೇ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಬದಲಾಯಿಸುತ್ತವೆ.
ಜನವರಿ 1ರಿಂದ ಆಗಸ್ಟ್ 17ರ ನಡುವೆ ಎಲ್ಪಿಜಿ ಸಿಲಿಂಡರ್ ಬೆಲೆ ಬರೋಬ್ಬರಿ 165 ರೂ. ಹೆಚ್ಚಾಗಿದೆ. ಸದ್ಯದ ಗ್ಯಾಸ್ ಸಿಲಿಂಡರ್ ಬೆಲೆಗೆ ಹೋಲಿಸಿದರೆ, ಎಲೆಕ್ಟ್ರಿಕ್ ಒಲೆ ಕಡಿಮೆ ಬೆಲೆಗೆ ಸಿಗುತ್ತಿದೆ. ಈ ವರ್ಷ ಮೊದಲ ಬಾರಿಗೆ ಫೆಬ್ರವರಿ 4ರಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ಗೆ 25 ರೂಪಾಯಿ ಏರಿಸಲಾಗಿತ್ತು. ಬಳಿಕ ಫೆಬ್ರವರಿ 15ರಂದು 50 ರೂಪಾಯಿ ಏರಿಕೆ ಮಾಡಲಾಗಿತ್ತು. ಫೆಬ್ರವರಿ 25 ಮತ್ತು ಮಾರ್ಚ್ 1ರಂದು ಮತ್ತೆ 25 ರೂ. ಹೆಚ್ಚಿಸಲಾಗಿತ್ತು. ಇದರೊಂದಿಗೆ ಫೆಬ್ರವರಿ ತಿಂಗಳೊಂದರಲ್ಲೇ 3 ಬಾರಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಸಲಾಗಿತ್ತು. ಪ್ರತಿ ಗ್ಯಾಸ್ ಸಿಲಿಂಡರ್ಗೆ 125 ರೂಪಾಯಿ ಏರಿಕೆಯಾದ ಬಳಿಕ, ಏಪ್ರಿಲ್ 1ರಂದು ಪ್ರತೀ ಸಿಲಿಂಡರ್ಗೆ 10 ರೂಪಾಯಿ ಕಡಿತ ಮಾಡಲಾಗಿತ್ತು.
ಇದನ್ನೂ ಓದಿ:Karnataka 2nd PUC Exam: ನಾಳೆಯಿಂದ ದ್ವಿತೀಯ ಪಿಯು ಪರೀಕ್ಷೆ; ಈ ವಿದ್ಯಾರ್ಥಿಗಳಿಗೆ ಕೊರೋನಾ ನೆಗೆಟಿವ್ ರಿಪೋರ್ಟ್ ಕಡ್ಡಾಯ
ವಿವಿಧ ನಗರಗಳಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ ಹೀಗಿದೆ:
- ಮುಂಬೈನಲ್ಲಿ 14.2 ಕೆ.ಜಿ ತೂಕದ ಎಲ್ಪಿಜಿ ಸಿಲಿಂಡರ್ ಬೆಲೆ ಈಗ 859.5. ರೂ ಆಗಿದೆ. ಈ ಮೊದಲು 834.50 ರೂ. ಇತ್ತು.
- ಕೊಲ್ಕತ್ತಾದಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ ಈಗ 886 ರೂ. ಆಗಿದೆ. ಈ ಮೊದಲು 861 ರೂ. ಇತ್ತು.
- ಚೆನ್ನೈನಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ ಈಗ 875.50 ರೂ. ಆಗಿದೆ. ನಿನ್ನೆವರೆಗೂ 850.50 ರೂ. ಇತ್ತು.
- ಉತ್ತರ ಪ್ರದೇಶದ ಲಕ್ನೋದಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ 897.5 ರೂ. ಆಗಿದೆ.
- ಅದೇ ರೀತಿ ಅಹಮದಾಬಾದ್ ಮತ್ತು ಗುಜರಾತ್ನಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ 866.50 ರೂ. ಆಗಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ