Crime News: ವಿಷ ಕುಡಿದು ಪ್ರಿಯಕರನ ತೊಡೆ ಮೇಲೇ ಪ್ರಾಣ ಬಿಟ್ಟ ವಿವಾಹಿತೆ; ಇದು ಅಂತಿಂಥಾ ಲವ್ ಸ್ಟೋರಿಯಲ್ಲ!
Vijayapura Crime: ವಿಜಯಪುರದ ರೇಣುಕಾಗೆ ಮದುವೆಯಾಗಿ 3 ಮಕ್ಕಳು, ಬಸವರಾಜ್ಗೆ 6 ಮಕ್ಕಳು ಇದ್ದರೂ ಅನೈತಿಕ ಸಂಬಂಧ ಹೊಂದಿದ್ದರು. ತಮ್ಮ ಮಕ್ಕಳ ಬಗ್ಗೆಯೂ ಯೋಚಿಸದ ಅವರು ವಿಷ ಕುಡಿದಿದ್ದು, ಪ್ರೇಮಿಯ ಮಡಿಲಲ್ಲೇ ರೇಣುಕಾ ಪ್ರಾಣ ಬಿಟ್ಟಿದ್ದಾಳೆ.
ವಿಜಯಪುರ (ಜೂನ್ 23): ಪ್ರೀತಿಸಿ ಕೈ ಕೊಡುವವರ ಸಂಖ್ಯೆ ಎಷ್ಟು ಹೆಚ್ಚಾಗುತ್ತಿದೆಯೋ ಅದೇ ರೀತಿ ಪ್ರೀತಿಗಾಗಿ ಪ್ರಾಣವನ್ನೇ ಬಿಡುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಬೇರೆ ಮದುವೆಯಾಗಿದ್ದರೂ ಒಬ್ಬರನ್ನು ಒಬ್ಬರು ಪ್ರೀತಿಸುತ್ತಿದ್ದ ಪ್ರೇಮಿಗಳಿಬ್ಬರು ಇದ್ದರೂ ಒಟ್ಟಿಗೇ, ಸತ್ತರೂ ಒಟ್ಟಿಗೇ ಎಂದು ನಿರ್ಧರಿಸಿದ್ದರು. ಅದೇ ಕಾರಣಕ್ಕೆ ದುಡುಕಿ ತಪ್ಪಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಪ್ರೀತಿ ಕುರುಡು ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ. 3 ಮತ್ತು 6 ಮಕ್ಕಳಿರುವ ವಿವಾಹಿತರಿಬ್ಬರು ತಮ್ಮ ಮಕ್ಕಳ ಬಗ್ಗೆಯೂ ಯೋಚಿಸದೆ ತಮ್ಮ ಪ್ರೀತಿಗಾಗಿ ವಿಷ ಸೇವಿಸಿದ್ದಾರೆ. ಇಬ್ಬರಿಗೂ ಬೇರೆಯವರ ಜೊತೆ ಮದುವೆಯಾಗಿತ್ತು. ಹೀಗಾಗಿ, ತಮ್ಮ ಪ್ರೀತಿಯನ್ನು ಈ ಸಮಾಜ ಒಪ್ಪುವುದಿಲ್ಲ ಎಂದು ವಿಷಯ ಕುಡಿದು ಸಾಯಲು ನಿರ್ಧರಿಸಿದ್ದರು. ಬೇರೊಬ್ಬಳನ್ನು ಮದುವೆಯಾದ ವ್ಯಕ್ತಿಯನ್ನು ಪ್ರೀತಿಸುತ್ತಿದ್ದ ಮಹಿಳೆ ತನ್ನ ಪ್ರೇಮಿಯ ಜೊತೆ ವಿಷ ಸೇವಿಸಿ ಆತನ ತೊಡೆಯ ಮೇಲೇ ಸಾವನ್ನಪ್ಪಿದ್ದಾಳೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ನಿನ್ನೆ ಸಂಜೆ ಈ ದುರ್ಘಟನೆ ನಡೆದಿದೆ. ಇಬ್ಬರೂ ವಿಷ ಕುಡಿದು ಸಾಯಬೇಕೆಂದು ನಿರ್ಧರಿಸಿದ್ದ ಜೋಡಿ ಗುಡ್ಡದ ತುದಿಗೆ ಹೋಗಿದ್ದರು. ಅಲ್ಲಿ ವಿಷ ಕುಡಿದ ಅವರು ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದುಕೊಂಡು ಕುಸಿದಿದ್ದಾರೆ. ಆದರೆ, ಹೆಚ್ಚು ವಿಷ ಸೇವಿಸಿದ್ದ ಯುವತಿ ತನ್ನ ಪ್ರೇಮಿಯ ಕಾಲಿನ ಮೇಲೆ ನರಳಿ ನರಳಿ ಪ್ರಾಣ ಬಿಟ್ಟಿದ್ದಾಳೆ!
ಹಾಗಂತ ಅವರೇನೂ ಹದಿಹರೆಯದ ಪ್ರೇಮಿಗಳಲ್ಲ. ವಿಜಯಪುರದ ಗಂಗೂರು ಗ್ರಾಮದ 36 ವರ್ಷದ ರೇಣುಕಾ ಝಳಕಿ ಹಾಗೂ ಹಡಲಗೇರಿ ಗ್ರಾಮದ 40 ವರ್ಷದ ಕುಡುಕ ಬಸವರಾಜ್ ಕಿಲಾರಹಟ್ಟಿ ಪರಸ್ಪರ ಪ್ರೀತಿಸುತ್ತಿದ್ದರು. ಬೇರೊಬ್ಬರೊಂದಿಗೆ ಮದುವೆಯಾಗಿ ರೇಣುಕಾಗೆ 3 ಮಕ್ಕಳು, ಬಸವರಾಜ್ ಗೆ 6 ಮಕ್ಕಳು ಇದ್ದರೂ ಅನೈತಿಕ ಸಂಬಂಧ ಹೊಂದಿದ್ದರು.
ನಿನ್ನೆ ಸಂಜೆ ಇಬ್ಬರೂ ಬಿದಕುಂದಿ ಗ್ರಾಮದ ಹೊರವಲಯದಲ್ಲಿ ಸೇರಿ ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಸೇವಿಸಿದ್ದರು. ಈ ವೇಳೆ ಬಸವರಾಜ್ ಕುಡಿದ ಅಮಲಿನಲ್ಲಿದ್ದ ಮತ್ತು ಕಡಿಮೆ ವಿಷ ಕುಡಿದಿದ್ದ.ಆದರೆ, ರೇಣುಕಾ ಹೆಚ್ಚು ವಿಷ ಸೇವಿಸಿದ್ದರಿಂದ ಸ್ಥಳದಲ್ಲೆ ಅಸ್ವಸ್ಥಗೊಂಡು ಒದ್ದಾಡಿದ್ದಾಳೆ. ಈ ವೇಳೆ ಆಕೆಯನ್ನ ತೊಡೆಯ ಮೇಲೆ ಮಲಗಿಸಿಕೊಂಡು ಸಂತೈಸುತ್ತಿದ್ದ ಪ್ರಿಯಕರ ಬಸವರಾಜ್ ತೊಡೆ ಮೇಲೆಯೇ ರೇಣುಕಾ ರಕ್ತ ಕಾರಿಕೊಂಡು, ಒದ್ದಾಡಿ ಸಾವನ್ನಪ್ಪಿದ್ದಾಳೆ.
ನಾನೂ ನಿನ್ನ ಜೊತೆ ಬಂದುಬಿಡುತ್ತೇನೆ. ಇಬ್ಬರೂ ಒಟ್ಟಿಗೇ ಸಾಯೋಣ ಎಂದು ಆಕೆಯನ್ನು ಸಂತೈಸುತ್ತಿದ್ದ ಬಸವರಾಜ್ ಆಕೆ ರಕ್ತ ಕಾರುವುದನ್ನು ಕಂಡು ಗಾಬರಿಯಾಗಿದ್ದ. ಆದರೂ ಆಕೆಯನ್ನು ಆಸ್ಪತ್ರೆಗೆ ದಾಖಲಿಸದೆ ತೊಡೆಯ ಮಲಗಿಸಿಕೊಂಡಿದ್ದ. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯರು ರೇಣುಕಾ ಸಾವನ್ನಪ್ಪಿದ ಬಳಿಕ ಬಸವರಾಜ್ನನ್ನು ತಾಲೂಕಾಸ್ಪತ್ರೆಗೆ ದಾಖಲು ಮಾಡಿದ್ದಾರೆ.
ರೇಣುಕಾಳ ಗಂಡ ಅಶೋಕ ದುಡಿಯಲು ಕೇರಳಕ್ಕೆ ಗುಳೆ ಹೋಗಿದ್ದ. ರೇಣುಕಾಳ ಪತಿ ಅಶೋಕನ ಸ್ನೇಹಿತನಾಗಿದ್ದ ಬಸವರಾಜ್ ತನ್ನ ಗೆಳೆಯನ ಹೆಂಡತಿಯೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ. ಬಸವರಾಜ್ ತೊಡೆಯ ಮೇಲೆ ರೇಣುಕಾ ರಕ್ತ ಕಾರಿಕೊಂಡು ಸಾವನ್ನಪ್ಪಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದಾರೆ. ಮಕ್ಕಳ ಬಗ್ಗೆಯೂ ಯೋಚಿಸದೆ ಇಬ್ಬರೂ ವಿಷ ಸೇವಿಸಿ ಸಾಯಲು ಪ್ರಯತ್ನಿಸಿದ್ದಕ್ಕೆ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಈ ಪ್ರಕರಣದ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿದೆ
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ