ಲಾಕ್‌ಡೌನ್ ನೆಪದಲ್ಲಿ ಹಲ್ಲೆ ಮಾಡ್ತಿದಾರಾ ಪೊಲೀಸರು?; ಕೊರೋನಾಗಿಂತ ಅಪಾಯಕಾರಿಯಾಯ್ತು ಇವರ ಲಾಠಿ

ಪಿಎಸ್‌ಐ ಹಲ್ಲೆಯಿಂದ ಮಹೇಶ್ ತಲೆ ಮತ್ತು ಕೈ ಕಾಲಿಗೆ ತೀವ್ರ ಪೆಟ್ಟಾಗಿದ್ದು, ತಲೆಯಲ್ಲಿ 12 ಹೊಲಿಗೆ ಹಾಕಿದ್ದಾರೆ. ಅಲ್ಲದೆ, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಮಹೇಶ್ ಅವರನ್ನು ಒತ್ತಾಯಪೂರ್ವಕವಾಗಿ ಡಿಸ್ಜಾರ್ಜ್‌ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.

ಪಿಎಸ್‌ಐ ಕಲ್ಮೇಶ್ ಅವರಿಂದ ಹಲ್ಲೆಗೆ ಒಳಗಾಗಿರುವ ಮಹೇಶ್.

ಪಿಎಸ್‌ಐ ಕಲ್ಮೇಶ್ ಅವರಿಂದ ಹಲ್ಲೆಗೆ ಒಳಗಾಗಿರುವ ಮಹೇಶ್.

 • Share this:
  ಬಾಗಲಕೋಟೆ (ಮಾರ್ಚ್‌ 30); ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪೊಲೀಸರು ಜೀವದ ಹಂಗೂ ತೊರೆದು ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಕೆಲವರು ಮಾಡುವ ಅಮಾನವೀಯ ಕೆಲಸದಿಂದಾಗಿ, ಅದರಲ್ಲೂ ಅಗತ್ಯ ವಸ್ತುಗಳಿಗಾಗಿ ಬೀದಿಗೆ ಬರುವ ಅಮಾಯಕರ ಮೇಲೆ ಲಾಠಿ ಬೀಸುವ ಕ್ರಮದಿಂದಾಗಿ ಇಡೀ ಪೊಲೀಸ್‌ ಇಲಾಖೆ ಇದೀಗ ತಲೆ ತಗ್ಗಸುವಂತಾಗಿದೆ. ಇಂತಹ ಘಟನೆಗೆ ಬಾಗಲಕೋಟೆ ಸಾಕ್ಷಿಯಾಗಿದೆ.

  ದೇಶದಾದ್ಯಂತ ಲಾಕ್‌ಡೌನ್ ಇದ್ದರೂ ಸಹ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ಇದೆ. ಹೀಗಾಗಿ ಬಾಗಲಕೋಟೆ ನವನಗರದ 61ನೇ ಸೆಕ್ಟರ್ ನಿವಾಸಿ ಮಹೇಶ್ ಬಾಡಂಗಡಿ ಇಂದು ಹಾಲು ಮತ್ತು ಔಷಧಿ ತರಲು ಮನೆಯಿಂದ ಹೊರ ಬಂದಿದ್ದಾರೆ. ಆದರೆ, ಹೀಗೆ ಮನೆಯಿಂದ ಹೊರಬಂದ ವ್ಯಕ್ತಿಯ ಮೇಲೆ ಬಾಗಲಕೋಟೆ ಪಿಎಸ್‌ಐ ಕಲ್ಮೇಶ್ ಬನ್ನೂರು ಮನಸ್ಸೋ ಇಚ್ಚೆ ಲಾಠಿ ಬೀಸಿದ್ದಾರೆ. ತನ್ನ ತಾಯಿಗೆ ಅನಾರೋಗ್ಯವಿದೆ ಹೀಗಾಗಿ ನಾನು ಔಷಧಿ ತರಲು ಬಂದಿದ್ಧೇನೆ ಎಂದರೂ ಕೇಳದೆ ಅಮಾನವೀಯವಾಗಿ ಥಳಿಸಿದ್ದಾರೆ.

  ಪರಿಣಾಮ ಮಹೇಶ್ ತಲೆ ಮತ್ತು ಕೈ ಕಾಲಿಗೆ ತೀವ್ರ ಪೆಟ್ಟಾಗಿದ್ದು, ತಲೆಯಲ್ಲಿ 12 ಹೊಲಿಗೆ ಹಾಕಿದ್ದಾರೆ. ಅಲ್ಲದೆ, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಮಹೇಶ್ ಅವರನ್ನು ಒತ್ತಾಯಪೂರ್ವಕವಾಗಿ ಡಿಸ್ಜಾರ್ಜ್‌ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.

  ಪಿಎಸ್‌ಐ ಕಲ್ಮೇಶ್ ಬನ್ನೂರು ಈ ಹಿಂದೆ ಲಾಕ್‌ಡೌನ್‌ ಸುದ್ದಿ ಮಾಡಲು ಹೊರಟಿದ್ದ ಮಾಧ್ಯಮದವರ ಮೇಲೂ ಹೀಗೆ ಹಲ್ಲೆ ಮಾಡಿ ಪೇಚಿಗೆ ಸಿಲುಕಿದ್ದರು. ಆದರೂ, ಸುಧಾರಿಸುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಇದೀಗ ತೀವ್ರವಾಗಿ ಹಲ್ಲೆಗೊಳಗಾಗಿರುವ ಮಹೇಶ್ ಅವರ ಪೋಷಕರು ಪೊಲೀಸ್ ಇಲಾಖೆಯ ಎದುರು ನ್ಯಾಯಕ್ಕಾಗಿ ಮೊರೆಯಿಟ್ಟಿದ್ದಾರೆ. ಹೀಗಾಗಿ ಇಲಾಖೆ ಅಮಾನವೀಯವಾಗಿ ವರ್ತಿಸಿದ ಪಿಎಸ್‌ಐ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.

  (ವರದಿ - ರಾಚಪ್ಪ ಬನ್ನಿದಿನ್ನಿ)

  ಇದನ್ನೂ ಓದಿ : ಲಾಕ್‌ಡೌನ್ ಉಲ್ಲಂಘಿಸಿ ವಿನಾಃಕಾರಣ ರಸ್ತೆಗಿಳಿದ ವಾಹನ ಸವಾರರು; ಹಾಸನ-ಬಾಗಲಕೋಟೆಯಲ್ಲಿ ಬೈಕ್‌ಗಳು ಸೀಜ್
  First published: