ಎಲ್ಲೀದ್ದೀರಿ ಪಿ.ಸಿ. ಮೋಹನ್?: ಚುನಾವಣೆ ಸಂದರ್ಭದಲ್ಲೂ ಜನರ ಕೈಗೆ ಸಿಗದಿದ್ದರೆ ಹೇಗೆ? ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ಪ್ರಶ್ನೆ

ಸಂಸದ ಪಿ.ಸಿ. ಮೋಹನ್ ತಮ್ಮ ಕ್ಷೇತ್ರದಲ್ಲಿ ತಾವು ಕೊಟ್ಟ ಭರವಸೆಯಂತೆಯೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಜನರ ಪ್ರಶ್ನೆಗಳಿಗೆ ಹೆದರಿ ಸಾರ್ವಜನಿಕ ಚರ್ಚೆಯಿಂದ ಹೀಗೇಕೆ ದೂರ ಉಳಿಯಬೇಕು? ಎಂಬ ಪ್ರಶ್ನೆಗಳು ಉದ್ಭವವಾಗುತ್ತಿವೆ.

ಮಹಾ ಡಿಬೇಟ್​ ಕಾರ್ಯಕ್ರಮದ ಚಿತ್ರ

ಮಹಾ ಡಿಬೇಟ್​ ಕಾರ್ಯಕ್ರಮದ ಚಿತ್ರ

 • News18
 • Last Updated :
 • Share this:
  ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಅತ್ಯಂತ ವೈವಿಧ್ಯಮಯ ಕ್ಷೇತ್ರ ಎಂದರೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ. ಎಲ್ಲಾ ಭಾಷಿಕರು ಹಾಗೂ ಎಲ್ಲಾ ಧರ್ಮದವರಿಗೂ ನೆಲೆ ಕಲ್ಪಿಸುವ ಮೂಲಕ ಬೆಂಗಳೂರಿನಲ್ಲೇ ಇದ್ದಾಗ್ಯೂ ಮಿನಿ ಭಾರತದಂತೆ ಗೋಚರಿಸುವುದು ಈ ಕ್ಷೇತ್ರದ ವೈಶಿಷ್ಠ್ಯಗಳಲ್ಲೊಂದು.

  ಅಂದಹಾಗೆ ಈ ಮಿನಿ ಭಾರತದ ಹಾಲಿ ಸಂಸದ ಹಾಗೂ ಬಿಜೆಪಿ ಪಕ್ಷದ ಹುರಿಯಾಳು ಪಿ.ಸಿ. ಮೋಹನ್. ಕಾಂಗ್ರೆಸ್​ನಿಂದ ರಿಜ್ವಾನ್ ಅರ್ಷದ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಚಿತ್ರ ನಟ ಪ್ರಕಾಶ ರಾಜ್ ಸ್ಪರ್ಧಿಸಿದ್ದಾರೆ.

  ಸರ್ವಜ್ಱ ನಗರ, ಸಿ.ವಿ. ರಾಮನ್ ನಗರ, ಶಿವಾಜಿ ನಗರ, ಶಾಂತಿ ನಗರ, ಗಾಂಧಿ ನಗರ, ರಾಜಾಜಿ ನಗರ, ಚಾಮರಾಜಪೇಟೆ ಹಾಗೂ ಮಹದೇವಪುರ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಈ ಕ್ಷೇತ್ರ ಎಷ್ಟು ವೈವಿಧ್ಯತೆಯಿಂದ ಕೂಡಿದೆಯೋ ಕ್ಷೇತ್ರದೊಳಗಿನ ಸಮಸ್ಯೆಗಳು ಅಷ್ಟೇ ಜಟಿಲವಾಗಿರುವುದು ಸುಳ್ಳಲ್ಲ.

  ಬೆಂಗಳೂರಿನಲ್ಲಿರುವ ಸುಮಾರು 362 ಸ್ಲಂಗಳ ಪೈಕಿ ಶೇ.60 ರಷ್ಟು ಸ್ಲಂ ಪ್ರದೇಶಗಳು ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತವೆ. ಇಲ್ಲಿ ವಾಸಿಸುವ ಜನರಿಗೆ ಈವರೆಗೆ ಹಕ್ಕುಪತ್ರ ನೀಡಲಾಗಿಲ್ಲ. ಕ್ಷೇತ್ರದ ಶೇ.50ಕ್ಕೂ ಹೆಚ್ಚು ಪ್ರದೇಶಗಳಿಗೆ ಈವರೆಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಅಲ್ಲದೆ ರಸ್ತೆ ಸೇರಿದಂತೆ ಈ ಎಂಟೂ ವಿಧಾನಸಭಾ ಕ್ಷೇತ್ರಗಳ ಜನ ಸಾಕಷ್ಟು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

  ಆದರೆ, ಈ ಕ್ಷೇತ್ರದಿಂದ ಕಳೆದ ಎರಡು ಅವಧಿಗೆ ಸಂಸದರಾಗಿ ಆಯ್ಕೆಯಾಗಿದ್ದ ಪಿ.ಸಿ. ಮೋಹನ್ ಕಳೆದ 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇಲ್ಲಿನ ಜನರಿಗೆ ಭರಪೂರ ಆಶ್ವಾಸನೆಗಳನ್ನು ನೀಡಿದ್ದರು. ನೀರು ರಸ್ತೆ ಸೇರಿದಂತೆ ಕ್ಷೇತ್ರದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಪ್ರಾಮಾಣಿಕವಾಗಿ ಶ್ರಮಿಸುವ ಹಾಗೂ ಮನೆಯಿಲ್ಲದ ಸ್ಲಂ ನಿವಾಸಿಗಳಿಗೆ ಸ್ಲಂ ಬೋರ್ಡ್ ನಿಂದ ಆಶ್ರಯ ಮನೆ ಕಲ್ಪಿಸಿಕೊಡುವ ಭರವಸೆ ನೀಡಿದ್ದರು. ಪರಿಣಾಮ ಚುನಾವಣೆಯಲ್ಲಿ ಭಾರಿ ಅಂತರದ ಗೆಲುವು ಸಾಧಿಸಿದ್ದರು.

  ಆದರೆ, ಕಳೆದ ಐದು ವರ್ಷದ ಅವಧಿಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಹದೇವಪುರ ಹಾಗೂ ರಾಜಾಜಿನಗರದಲ್ಲಿ ಕಿರು ಅರಣ್ಯ ಹಾಗೂ ಉದ್ಯಾನವನಗಳ ಅಭಿವೃದ್ಧಿಯ ಹೊರತು ಸಂಸದ ಪಿ.ಸಿ. ಮೋಹನ್ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಬೇರೆ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎನ್ನುತ್ತಿದೆ ಅವರ ರಿಪೋರ್ಟ್ ಕಾರ್ಡ್. ಸಂಸದರ ನಿಧಿಯನ್ನೂ ಅವರು ಸಮರ್ಪಕವಾಗಿ ಬಳಸಿಲ್ಲ ಎಂಬುದು ಅವರ ಮೇಲಿನ ಗಂಭೀರ ಆರೋಪ.

  ಎಲ್ಲಿದ್ದೀರಿ ಪಿ.ಸಿ.ಮೋಹನ್? : ಚುನಾವಣಾ ಸಂದರ್ಭದಲ್ಲಿ ನೀಡಲಾಗುವ ಆಶ್ವಾಸನೆಗಳನ್ನು ಈಡೇರಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಅದೇರೀತಿ ಜನರ ಹಾಗೂ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುವ ಉತ್ತರದಾಯಿತ್ವವೂ ಪ್ರತಿನಿಧಿಗಳಿಗಿರುತ್ತದೆ ಎಂಬುದು ಪ್ರಜಾಪ್ರಭುತ್ವದ ಮೂಲ ಪಾಠ.

  ಹೀಗಾಗಿ ಅಭಿವೃದ್ಧಿ ಕಾರ್ಯದ ಕುರಿತು ಸ್ವತಃ ಪ್ರಜೆಗಳೆ ತಮ್ಮ ಪ್ರತಿನಿಧಿಗಳನ್ನು ಪ್ರಶ್ನಿಸಿ ಮಾಹಿತಿ ಪಡೆದುಕೊಳ್ಳಲಿ ಹಾಗೂ ಆ ಮೂಲಕ ರಾಜಕೀಯ ಅರಿವು ಬೆಳೆಸಿಕೊಳ್ಳಲಿ ಎಂಬುದು ನ್ಯೂಸ್ 18 ಕನ್ನಡದ ಉದ್ದೇಶವಾಗಿತ್ತು.

  ಇದೇ ಕಾರಣಕ್ಕಾಗಿ ದೇಶದ ದೊಡ್ಡ ನೆಟ್​ವರ್ಕ್ ಜಾಲವಾಗಿರುವ ನೆಟ್​ವರ್ಕ್​18 ಭಾಗವಾದ ನ್ಯೂಸ್ 18 ಕನ್ನಡ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಅಭ್ಯರ್ಥಿಗಳೊಂದಿಗೆ ಮತದಾರರ ಭೇಟಿ ಮಾಡಿಸುವ “ಲೊಸಕಭಾ ಚುನಾವಣೆ-2019 ಮಹಾ ಡಿಬೇಟ್” ಎಂಬ ವಿನೂತನ ಕಾರ್ಯಕ್ರಮವನ್ನು ರೂಪಿಸಿತ್ತು.

  ಈ ಕಾರ್ಯಕ್ರದಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಹಾಗೂ ಪಕ್ಷೇತರ ಅಭ್ಯರ್ಥಿ ಖ್ಯಾತ ನಟ ಪ್ರಕಾಶ ರಾಜ್ ಭಾಗವಹಿಸಿದ್ದರು. ಅಸಂಖ್ಯಾತ ಜನ ತಮ್ಮ ಸಂಸದರನ್ನು ಪ್ರಶ್ನಿಸುವ ಉಮೇದಿನಲ್ಲಿ ಕಾರ್ಯಕ್ರಮದ ಭಾಗವಾಗಿದ್ದರು.

  ಆದರೆ, ಬಿಜೆಪಿಯ ಹಾಲಿ ಸಂಸದ ಕಳೆದ ಎರಡು ಅವಧಿಯಿಂದ ಬೆಂಗಳೂರು ಕೇಂದ್ರವನ್ನು ಪ್ರತಿನಿಧಿಸುತ್ತಿರುವ ಪಿ.ಸಿ. ಮೋಹನ್ ಮಾತ್ರ ಕಾರ್ಯಕ್ರಮಕ್ಕೆ ಆಗಮಿಸದೆ ತಮ್ಮ ಬರುವಿಕೆಗಾಗಿ ಕಾದುಕುಳಿತಿದ್ದ ಮತದಾರರ ನಿರೀಕ್ಷೆ ಹುಸಿ ಮಾಡಿದ್ದರು. ಆ ಮೂಲಕ ಕ್ಷೇತ್ರದ ಮತದಾರರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಇನ್ನೂ ಈ ಕಾರ್ಯಕ್ರಮಕ್ಕೆ ಬಿಜೆಪಿ ಪರವಾಗಿ ಮಾಜಿ ಸಂಸದೆ ತೇಜಸ್ವಿನಿ ಗೌಡ ಆಗಮಿಸಿದ್ದರು. ಅವರೂ ಸಹ ಕಾರ್ಯಕ್ರಮದ ಅರ್ಧದಲ್ಲೇ ವೇದಿಕೆಯನ್ನು ತ್ಯಜಿಸಿ ಹೊರ ನಡೆದಿದ್ದರು.

  ನ್ಯೂಸ್ 18 ಕನ್ನಡ ಮಾತ್ರವಲ್ಲ ರಾಜ್ಯದಲ್ಲಿ ಜನರಿಗೆ ಮತದಾನದ ಕುರಿತು ಅರಿವು ಮೂಡಿಸುವ ಸಲುವಾಗಿ ದುಡಿಯುತ್ತಿರುವ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯಾದ 'ಬಿ-ಪ್ಯಾಕ್' ಸಹ ಇದೇ ತಿಂಗಳ 8 ರಂದು “ಅಭ್ಯರ್ಥಿಗಳೊಂದಿಗೆ ಮತದಾರರ ಭೇಟಿ” ಎಂಬ ಕಾರ್ಯಕ್ರಮ ಆಯೋಜಿಸಿತ್ತು. ಆದರೆ ಜನರ ಪ್ರಶ್ನೆಗಳನ್ನು ಎದುರಿಸಲು ಹಿಂಜರಿದ ಸಂಸದ ಪಿ.ಸಿ. ಮೋಹನ್ ಆ ಕಾರ್ಯಕ್ರಮದಲ್ಲೂ ಭಾಗವಹಿಸದೆ ತಮ್ಮ ಬೇಜಾವ್ದಾರಿ ನಡೆಯನ್ನು ಮುಂದುವರೆಸಿದ್ದಾರೆ.

  ಟ್ವೀಟರ್​ನಲ್ಲಿ ಹರಿಹಾಯ್ದ ರಿಜ್ವಾನ್ ಅರ್ಷದ್ : ಇದೇ ಸಂದರ್ಭದಲ್ಲಿ ಜನರ ಪ್ರಶ್ನೆಗಳಿಗೆ ಉತ್ತರಿಸಲು ಹಿಂಜರಿದಿರುವ ಸಂಸದ ಪಿ.ಸಿ. ಮೋಹನ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಹರಿಹಾಯ್ದಿದ್ದಾರೆ.

  ತಮ್ಮ ಟ್ವೀಟರ್ ಖಾತೆಯಲ್ಲಿ ಪಿ.ಸಿ. ಮೋಹನ್ ವಿರುದ್ಧ ಸರಣಿ ಟ್ವೀಟ್ ಮಾಡುವ ಮೂಲಕ ಪ್ರಮುಖ ಪ್ರಶ್ನೆಯನ್ನು ಮುಂದಿಟ್ಟಿರುವ ರಿಜ್ವಾನ್, “ಸಂಸದ ಮೋಹನ್ ಅವರೆ ಹೆಚ್​.ಎ.ಎಲ್ ರಾಜ್ಯದ ಹೆಮ್ಮೆ. ಆದರೆ ಕೇಂದ್ರ ಸರ್ಕಾರ ನಿರಂತರವಾಗಿ ಹೆಚ್​.ಎ.ಎಲ್ ಸಂಸ್ಥೆಯನ್ನು ಮೂಲೆಗುಂಪು ಮಾಡುತ್ತಿದ್ದಾಗ, ಅವಮಾನಿಸುತ್ತಿದ್ದಾಗ ನೀವು ಬೆಂಗಳೂರಿನ ಲಕ್ಷಾಂತರ ಜನರ ಪ್ರತಿನಿಧಿಯಾಗಿ ಹೆಚ್​.ಎ.ಎಲ್ ಪರ ನಿಲ್ಲಲಿಲ್ಲವೇಕೆ ? ಎಂದು ಚಾಟಿ ಬೀಸಿದ್ದಾರೆ.

  ಅಲ್ಲದೆ, “ಪ್ರಶ್ನೆಗಳನ್ನು ತಪ್ಪಿಸಲು ಸಾರ್ವಜನಿಕ ಚರ್ಚೆಗಳಿಂದ ನೀವು ಎಷ್ಟು ದಿನ ನೀವು ದೂರವಿರುತ್ತೀರಿ? ನ್ಯೂಸ್ 18 ಹಾಗೂ ಬಿ-ಪ್ಯಾಕ್ ಸಂಸ್ಥೆಗಳು ಸಾರ್ವಜನಿಕ ಚರ್ಚೆಗೆ ವೇದಿಕೆ ಕಲ್ಪಿಸಿದ್ದವು. ಅದರಲ್ಲಿ ಬೆಂಗಳೂರಿಗೆ ನೀವು ನೀಡಿದ ಕೊಡುಗೆ ಹಾಗೂ ಮುಂದಿನ 5 ವರ್ಷದ ನಿಮ್ಮ ಅಭಿವೃದ್ಧಿ ದೃಷ್ಟಿಕೋನದ ಕುರಿತು ಚರ್ಚೆಯಾಗಲಿತ್ತು. ಆದರೆ, ನೀವು ಅದರಲ್ಲಿ ಪಾಲ್ಗೊಳ್ಳಲಿಲ್ಲ. ಮುಂದಿನ ತೀರ್ಮಾನಗಳನ್ನು ಜನರೇ ಕೈಗೊಳ್ಳಲಿದ್ದಾರೆ” ಎಂದು ಮೋಹನ್ ವಿರುದ್ಧ ಕಿಡಿಕಾರಿದ್ದಾರೆ.

  ಒಟ್ಟಾರೆ ಕಳೆದ 10 ವರ್ಷದಿಂದ ಸಂಸದರಾಗಿರುವ ಪಿ.ಸಿ. ಮೋಹನ್ ಅವರಿಗೆ ಚುನಾವಣಾ ಸಂದರ್ಭದಲ್ಲಿ ಜನರ ಎದುರೇ ಮುಖಾಮುಖಿಯಾಗಿ ತಮ್ಮ ಅಭಿವೃದ್ಧಿ ಕೆಲಸದ ಕುರಿತು ಮಾಹಿತಿ ನೀಡುವ ಉತ್ತಮ ಅವಕಾಶ ಲಭ್ಯವಾಗಿತ್ತು. ಆದರೆ ಅವರು ಅಂತಹ ಒಂದು ಅವಕಾಶವನ್ನು ಕಳೆದುಕೊಂಡಿದ್ದಾರೆ. ಈ ನಡುವೆ ತಮ್ಮ ಕ್ಷೇತ್ರದಲ್ಲಿ ಅವರು ಕೊಟ್ಟ ಭರವಸೆಯಂತೆಯೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಜನರ ಪ್ರಶ್ನೆಗಳಿಗೆ ಹೆದರಿ ಸಾರ್ವಜನಿಕ ಚರ್ಚೆಗಳಿಂದ ಹೀಗೇಕೆ ದೂರ ಉಳಿಯಬೇಕು? ಎಂಬ ಪ್ರಶ್ನೆಗಳು ಉದ್ಭವವಾಗುತ್ತಿವೆ.

  ಒಟ್ಟಾರೆ ಒಂದು ಮಾಧ್ಯಮದ ವೇದಿಕೆಯಲ್ಲಿ ತಮಗೆ ಮತ ಚಲಾಯಿಸಿದ ಜನರ ಪ್ರಶ್ನೆಗಳಿಗೆ ಉತ್ತರಿಸುವ ಕನಿಷ್ಠ ಸೌಜನ್ಯವು ಸಂಸದ ಪಿ.ಸಿ. ಮೋಹನ್ ಅವರಿಗೆ ಇಲ್ಲದಿರುವುದು ದುರಂತವೇ ಸರಿ ಎಂಬ ಮಾತುಗಳು ಸಾಮಾಜಿಕವಾಗಿ ಕೇಳಿ ಬರುತ್ತಿವೆ.
  First published: