ಬೆಳಗಾವಿ ಲೋಕಸಮರದಲ್ಲಿ ನಾಲ್ಕನೇ ಬಾರಿ ಜಯ ಸಾಧಿಸಲಿದ್ದಾರ ಬಿಜೆಪಿಯ ಸುರೇಶ್​ ಅಂಗಡಿ?

Belgaum Lok Sabha Constituency Profile: ಕಳೆದ ಮೂರು ಬಾರಿ ಬೆಳಗಾವಿಯಿಂದ ಸಂಸದರಾಗಿ ಆಯ್ಕೆಯಾಗಿರುವ ಬಿಜೆಪಿ ಅಭ್ಯರ್ಥಿ ಸುರೇಶ್​ ಅಂಗಡಿ ಅವರ ಬದಲಾಗಿ ಬೇರೆಯವರನ್ನು ಕಣಕ್ಕೆ ಇಳಿಸಲು ಬಿಜೆಪಿ ಯೋಚಿಸುತ್ತಿದೆ. ಆದರೆ, ಪರ್ಯಾಯವಾಗಿ ಬೇರೆ ಯಾವ ಪ್ರಭಾವಿ ಅಭ್ಯರ್ಥಿಯೂ ಇಲ್ಲದ ಕಾರಣ ಮತ್ತೊಮ್ಮೆ ಅವರಿಗೇ ಟಿಕೆಟ್​ ನೀಡುವ ಸಾಧ್ಯತೆ ಇದೆ.

Sushma Chakre | news18
Updated:March 28, 2019, 8:44 PM IST
ಬೆಳಗಾವಿ ಲೋಕಸಮರದಲ್ಲಿ ನಾಲ್ಕನೇ ಬಾರಿ ಜಯ ಸಾಧಿಸಲಿದ್ದಾರ ಬಿಜೆಪಿಯ ಸುರೇಶ್​ ಅಂಗಡಿ?
ಅಶೋಕ್ ಪಟ್ಟಣ, ಶಿವಕಾಂತ್ ಸಿದ್ನಾಳ್, ಸುರೇಶ್​ ಅಂಗಡಿ ಹಾಗೂ ವಿವೇಕ್​ ರಾವ್ ಪಾಟೀಲ್
  • News18
  • Last Updated: March 28, 2019, 8:44 PM IST
  • Share this:
ಚಂದ್ರಕಾಂತ್​ ಸುಗಂಧಿ

ಬೆಳಗಾವಿ: ಗಡಿನಾಡು ಬೆಳಗಾವಿಯ ರಾಜಕಾರಣ ಕಳೆದ ಒಂದು ವರ್ಷದಿಂದ ಭಾರೀ ಸದ್ದು ಮಾಡುತ್ತಿದೆ. ರಾಜ್ಯದ 2ನೇ ರಾಜಧಾನಿಯನ್ನಾಗಿ ಬೆಳಗಾವಿಯನ್ನು ಘೋಷಣೆ ಮಾಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳಿದ್ದರೂ ಇನ್ನೂ ಅಧಿಕೃತವಾಗಿ ಆ ಘೋಷಣೆಯಾಗಿಲ್ಲ. ಬೆಳಗಾವಿ ಮಹಾರಾಷ್ಟ್ರ, ಕರ್ನಾಟಕ ಗಡಿಭಾಗದಲ್ಲಿರುವ ಜಿಲ್ಲೆಯಾದ್ದರಿಂದ ಗಡಿ ವಿವಾದ, ಭಾಷಾ ವಿವಾದ ಹೀಗೆ ಬೇರೆ ರೀತಿಯಿಂದ ಸದ್ದು ಮಾಡುತ್ತಿದ್ದ ಬೆಳಗಾವಿ ಇತ್ತೀಚೆಗೆ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿಯೂ ಬದಲಾಗಿತ್ತು.

ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣವಾದ ನಂತರ ರಾಜ್ಯದ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿಯೂ ಗಮನ ಸೆಳೆದಿದೆ. ಬೆಳಗಾವಿಯ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಮತ್ತು ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ನಡುವಿನ ಮುಸುಕಿನ ಗುದ್ದಾಟ ಬಹಿರಂಗ ಸಂಘರ್ಷವಾಗಿ ಬದಲಾಗಿ ಕಾಂಗ್ರೆಸ್​ ಹೈಕಮಾಂಡ್​ಗೂ ತಲೆನೋವು ತಂದಿಟ್ಟಿತ್ತು. ಅಂದಿನಿಂದಲೂ ರಮೇಶ್​ ಮೈತ್ರಿ ಸರ್ಕಾರದ ಬುಡಕ್ಕೆ ಕೊಡಲಿ ಪೆಟ್ಟು ನೀಡುತ್ತಲೇ ಬಂದಿದ್ದಾರೆ.

ವಿಧಾನಸಭಾ ಕ್ಷೇತ್ರಗಳು:

ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ಸವದತ್ತಿ ಯಲ್ಲಮ್ಮ, ರಾಮದುರ್ಗ, ಗೋಕಾಕ್, ಅರಭಾವಿ ವಿಧಾನಸಭಾ ಕ್ಷೇತ್ರಗಳು ಇಲ್ಲಿವೆ. 8 ವಿಧಾನಸಭಾ ಕ್ಷೇತ್ರಗಳಲ್ಲಿ ಐವರು ಬಿಜೆಪಿ ಶಾಸಕರು ಮತ್ತು ಮೂವರು ಕಾಂಗ್ರೆಸ್​ ಶಾಸಕರಿದ್ದಾರೆ. ಬೆಳಗಾವಿ ಉತ್ತರ- ಬಿಜೆಪಿಯ ಅನಿಲ್ ಬೆನಕೆ, ಬೆಳಗಾವಿ ದಕ್ಷಿಣ- ಬಿಜೆಪಿಯ ಅಭಯ ಪಾಟೀಲ್, ಬೆಳಗಾವಿ ಗ್ರಾಮೀಣ- ಕಾಂಗ್ರೆಸ್​ನ ಲಕ್ಷ್ಮೀ ಹೆಬ್ಬಾಳ್ಕರ್, ಬೈಲಹೊಂಗಲ- ಕಾಂಗ್ರೆಸ್​ನ ಮಹಾಂತೇಶ ಕೌಜಲಗಿ, ಸವದತ್ತಿ- ಬಿಜೆಪಿಯ ಆನಂದ ವಿಶ್ವನಾಥ ಮಾಮನಿ, ರಾಮದುರ್ಗ- ಬಿಜೆಪಿಯ ಮಹಾದೇವಪ್ಪ ಯಾದವಾಡ, ಗೋಕಾಕ್- ಕಾಂಗ್ರೆಸ್​ನ ರಮೇಶ ಜಾರಕಿಹೊಳಿ, ಅರಭಾವಿ- ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಶಾಸಕರಾಗಿದ್ದಾರೆ.

ಇದನ್ನು ಓದಿ: ಸತತ ಮೂರು ಬಾರಿ ಗೆದ್ದ ಬಿಜೆಪಿ ಸಂಸದನಿಗೆ ಸೋಲಿನ ರುಚಿ ತೋರಿಸಲಿದ್ದಾರಾ ಸಿದ್ದರಾಮಯ್ಯ?

ಪಕ್ಷಗಳ ಬಲಾಬಲ:2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸುರೇಶ ಅಂಗಡಿ 5,54,417 ಮತಗಳನ್ನು ಪಡೆಯುವ ಮೂಲಕ ಜಯ ಸಾಧಿಸಿದ್ದರು. ಕಾಂಗ್ರೆಸ್​ನ ಲಕ್ಷ್ಮೀ ಹೆಬ್ಬಾಳ್ಕರ್​ 4,78,557 ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದಿದ್ದರು. ಹಾಗೇ, 2009, 2004ರ ಚುನಾವಣೆಯಲ್ಲೂ ಬಿಜೆಪಿಯ ಸುರೇಶ್​ ಅಂಗಡಿಯವರೇ ಜಯಭೇರಿ ಬಾರಿಸಿದ್ದರು. ಈಗಾಗಲೇ ಹ್ಯಾಟ್ರಿಕ್ ಗೆಲುವು ಕಂಡಿರುವ ಸುರೇಶ್​ ಅಂಗಡಿ ಈ ಬಾರಿಯ ಚುನಾವಣೆಯಲ್ಲೂ ಗೆಲುವು ಸಾಧಿಸಲಿದ್ದಾರಾ ಎಂಬುದನ್ನು ಕಾದು ನೋಡಬೇಕಾಗಿದೆ.
ಈ ಬಾರಿಯೂ ಬಿಜೆಪಿಯಿಂದ ಸುರೇಶ್​ ಅಂಗಡಿ ಕಣಕ್ಕೆ ಇಳಿಯುವ ಸಾಧ್ಯತೆಯಿದ್ದು, ಕ್ಷೇತ್ರದೆಲ್ಲೆಡೆ ಅವರ ಬಗ್ಗೆ ಮಿಶ್ರ ಅಭಿಪ್ರಾಯಗಳಿವೆ. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ 141 ಕೋಟಿ ಅನುದಾನ, ಬೆಳಗಾವಿ ನಗರದಲ್ಲಿ ಒಟ್ಟು 6 ರೈಲ್ವೆ ಬೃಹತ್ ಮೇಲ್ಸೆತುವೆ ನಿರ್ಮಾಣಕ್ಕೆ ತೀರ್ಮಾನ. ಅದರಲ್ಲಿ 3 ರೈಲ್ವೆ ಮೇಲ್ಸೆತುವೆ ನಿರ್ಮಾಣ ಮಾಡಲಾಗಿದೆ. ಬೆಳಗಾವಿ ಪ್ರಧಾನ ಅಂಚೆ ಕಚೇರಿಯಲ್ಲಿ ಪಾಸ್ ಪೋರ್ಟ್ ಕಚೇರಿ ಮಂಜೂರು, ಸಮುದಾಯ ಭವನಗಳಿಗೆ ಹೆಚ್ಚಿನ ಅನುದಾನ ನೀಡಿರುವುದು ಸುರೇಶ ಅಂಗಡಿ ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳು.

ಇದನ್ನು ಓದಿ: ಸೋಲಿಲ್ಲದ ಸರದಾರ ಧ್ರುವನಾರಾಯಣ್​ ಎದುರು ಈ ಬಾರಿ ಪ್ರಬಲ ಅಭ್ಯರ್ಥಿಗಳೇ ಇಲ್ಲ!

ಜಾತಿವಾರು ಮತಗಳು:

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 17 ಲಕ್ಷ ಮತದಾರರಿದ್ದಾರೆ. ಅವರಲ್ಲಿ ಲಿಂಗಾಯತ- 4.42 ಲಕ್ಷ, ಮರಾಠ- 2.26 ಲಕ್ಷ, ಮುಸ್ಲಿಂ- 1.84 ಲಕ್ಷ, ಕುರುಬ-1.50 ಲಕ್ಷ, ಎಸ್​ಸಿ- 1.67 ಲಕ್ಷ, ಎಸ್​ಟಿ- 86 ಸಾವಿರ, ನೇಕಾರ- 70 ಸಾವಿರ, ಉಪ್ಪಾರ- 50 ಸಾವಿರ, ಹಣಬರ- 15 ಸಾವಿರ, ಬ್ರಾಹ್ಮಣ- 37 ಸಾವಿರ, ರೆಡ್ಡಿ - 28 ಸಾವಿರ, ಇತರೆ- 1.40 ಲಕ್ಷ ಮತದಾರರಿದ್ದಾರೆ.

ಲಿಂಗವಾರು ಮತಗಳು:

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17 ಲಕ್ಷ ಮತದಾರರಿದ್ದು, 8,79,382 ಪುರುಷ ಮತದಾರರು, 8,70,927 ಮಹಿಳಾ ಮತದಾರರು, 49 ಇತರೆ ಮತದಾರರು ಇದ್ದಾರೆ.

ಹಾಲಿ ಸಂಸದರ ವಿರುದ್ಧ ಕೇಳಿ ಬರುತ್ತಿದೆ ಅಪಸ್ವರ:

ಈಗಾಗಲೇ 3 ಮೂರು ಬಾರಿ ಬೆಳಗಾವಿ ಸಂಸದರಾಗಿ ಕೆಲಸ ಮಾಡಿರುವ ಸುರೇಶ ಅಂಗಡಿ ಅವರಿಗೂ ಈ ಬಾರಿಯ ಲೋಕಸಭಾ ಟಿಕೆಟ್ ಅಷ್ಟು ಸುಲಭವಾಗಿಲ್ಲ. ಪಕ್ಷದಲ್ಲಿಯೇ ಸುರೇಶ್​ ಅಂಗಡಿ ಬದಲಾವಣೆಗೆ ಅನೇಕರು ಒತ್ತಾಯ ಮಾಡಿದ್ದಾರೆ. ಅಂಗಡಿ ಜಾಗಕ್ಕೆ ಪರ್ಯಾಯ ಯಾರು ಅಂತ ಕೇಳಿದರೂ ಬಿಜೆಪಿಯ ಯಾರೊಬ್ಬರ ಬಳಿಯೂ ಉತ್ತರವಿಲ್ಲ. ಕೊನೆಗೆ ಸಂಸದ ಸುರೇಶ ಅಂಗಡಿ ಮತ್ತೊಮ್ಮೆ ಅನಿವಾರ್ಯ ಆಗುವುದು ನಿಶ್ಚಿತವಾದಂತಿದೆ.

ಇದನ್ನು ಓದಿ: ಸೋಲಿಲ್ಲದ ಸರದಾರ ಕೆ.ಎಚ್​. ಮುನಿಯಪ್ಪಗೆ ಈ ಬಾರಿ ಗೆಲುವಿನ ಹಾದಿ ಸುಗಮವಲ್ಲ?

ಕ್ಷೇತ್ರದ ಜನರ ಬೇಡಿಕೆಗಳೇನು?:

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿದ್ದು, ಇನ್ನೂ ಇತ್ಯರ್ಥ ಕಂಡಿಲ್ಲ. ಪ್ರಮುಖವಾಗಿ ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ರೈಲು ಸಂಪರ್ಕ ಕಲ್ಪಿಸಬೇಕು ಎನ್ನುವ ಬೇಡಿಕೆ ಇನ್ನೂ ಈಡೇರಿಲ್ಲ. ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಯಾವುದೇ ಮಹತ್ವ ಯೋಜನೆ ತರುವಲ್ಲಿ ವಿಫಲವಾಗಿದೆ. ಸುರೇಶ ಅಂಗಡಿ ಕೇವಲ ಮೋದಿ ಅಲೆಯಲ್ಲಿ ಆಯ್ಕೆಯಾಗಿದ್ದು, ಯಾವುದೇ ಹೇಳಿಕೊಳ್ಳುವ ಕೆಲಸ ಮಾಡಿಲ್ಲ ಎಂದು ಜನರಲ್ಲಿ ಕೋಪವಿದೆ.

ಕಾಂಗ್ರೆಸ್​ಗೆ ಸಮರ್ಥ ಅಭ್ಯರ್ಥಿ ಕೊರತೆ:

ಬೆಳಗಾವಿ ಲೋಕಸಭೆ ಸ್ಪರ್ಧಿಸಲು ಕಾಂಗ್ರೆಸ್ ಸಮರ್ಥ ಅಭ್ಯರ್ಥಿಯ ಕೊರತೆ ಎದ್ದು ಕಾಣುತ್ತಿದೆ. ಕಳೆದ ಬಾರಿ ಲಕ್ಷ್ಮೀ ಹೆಬ್ಬಾಳ್ಕರ್ ಸಾಕಷ್ಟು ಪ್ರಯತ್ನ ಮಾಡಿದ್ದರೂ ಗೆಲುವು ಸಾಧ್ಯವಾಗಲಿಲ್ಲ. ಸದ್ಯ ಕಾಂಗ್ರೆಸ್ ಪರಿಸ್ಥಿತಿ ಬದಲಾಗಿದೆ. ಈಗ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ಯಕ್ಷಪ್ರಶ್ನೆಯಾಗಿದೆ. ಕಾಂಗ್ರೆಸ್​ನಿಂದ ಮಾಜಿ ಸಚಿವ ರಮೇಶ ಜಾರಕಿಹೊಳಿ, ಎಂಎಲ್​ಸಿ ವಿವೇಕ ರಾವ್ ಪಾಟೀಲ್ ಹೆಸರು ಕೇಳಿ ಬಂದಿದ್ದು, ಅವರೇ ಇದೀಗ ಆಪರೇಷನ್​ ಕಮಲದ ಬಲೆಗೆ ಬಿದ್ದಿದ್ದಾರೆ. ಇನ್ನು, ಮಾಜಿ ಶಾಸಕ ಅಶೋಕ್ ಪಟ್ಟಣ ಹೆಸರು ಜಾತಿ ಆಧಾರದಲ್ಲಿ ಕೇಳಿಬರುತ್ತಿದ್ದು, ಮಾಜಿ ಸಂಸದ ಎಸ್​.ಬಿ. ಸಿದ್ನಾಳ್ ಪುತ್ರ ಶಿವಕಾಂತ ಸಿದ್ನಾಳ್ ಸಹ ಆಕಾಂಕ್ಷಿಯಾಗಿದ್ದಾರೆ. ವಿಧಾಸಭೆಯಲ್ಲಿ ಸೋತ ಅಭ್ಯರ್ಥಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವ ಬಗ್ಗೆ ಇನ್ನೂ ಕಾಂಗ್ರೆಸ್ ನಿರ್ಧಾರ ಕೈಗೊಂಡಿಲ್ಲ.

ಇದನ್ನು ಓದಿ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್​ನಿಂದ ಯಾರಾಗಲಿದ್ದಾರೆ ಅಭ್ಯರ್ಥಿ- ದೇವೇಗೌಡ ಇಲ್ಲ ಪ್ರಜ್ವಲ್​ ರೇವಣ್ಣ?
First published: February 11, 2019, 5:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading