ಸತತ ಮೂರು ಬಾರಿ ಗೆದ್ದ ಬಿಜೆಪಿ ಸಂಸದನಿಗೆ ಸೋಲಿನ ರುಚಿ ತೋರಿಸಲಿದ್ದಾರಾ ಸಿದ್ದರಾಮಯ್ಯ?

8 ವಿಧಾನಸಭಾ ಕ್ಷೇತ್ರಗಳಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 18,02,050 ಜನಸಂಖ್ಯೆಯಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಬಾಗಲಕೋಟೆಯ ಬದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸಿ ಶಾಸಕರಾದವರು. ಬಿಜೆಪಿಯ ಪಿ.ಸಿ. ಗದ್ದಿಗೌಡರ ಇಲ್ಲಿನ ಹಾಲಿ ಸಂಸದರಾಗಿದ್ದು, ಮೂರು ಬಾರಿ ಸತತವಾಗಿ ಗೆಲುವು ಸಾಧಿಸಿದ್ದಾರೆ.

sushma chakre | news18
Updated:January 24, 2019, 4:25 PM IST
ಸತತ ಮೂರು ಬಾರಿ ಗೆದ್ದ ಬಿಜೆಪಿ ಸಂಸದನಿಗೆ ಸೋಲಿನ ರುಚಿ ತೋರಿಸಲಿದ್ದಾರಾ ಸಿದ್ದರಾಮಯ್ಯ?
ಗದ್ದಿ ಗೌಡರ್​-ವೀಣಾ ಕಾಶಪ್ಪನವರ್​
sushma chakre | news18
Updated: January 24, 2019, 4:25 PM IST
ರಾಚಪ್ಪ ಬನ್ನಿದಿನ್ನಿ

ಉತ್ತರ ಕರ್ನಾಟಕ ಭಾಗದ ಪ್ರಮುಖ ಜಿಲ್ಲೆಗಳಲ್ಲಿ ಒಂದಾದ ಬಾಗಲಕೋಟೆ ಚಾಲುಕ್ಯ ಅರಸರು ಆಳಿದ ಜಿಲ್ಲೆ. ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ, ಕರಕುಶಲ, ಇಳಕಲ್ ಗ್ರಾನೈಟ್, ಗುಳೇದಗುಡ್ಡ ಖಣ, ಇಳಕಲ್ ಸೀರೆ, ಅಮೀನಗಡ ಕರದಂಟು, ಕುಂದರಗಿ ಕಂಬಳಿ, ಮುಧೋಳ ಶ್ವಾನ ಮುಂತಾದವು ಹೆಸರು ಪಡೆದಿವೆ. 8 ವಿಧಾನಸಭಾ ಕ್ಷೇತ್ರಗಳಿರುವ ಈ ಜಿಲ್ಲೆಯಲ್ಲಿ ಒಟ್ಟು 16,87,163 ಮತದಾರರಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಬಾಗಲಕೋಟೆಯ ಬದಾಮಿ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ.

ಗದಗ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿ ಹೊರತುಪಡಿಸಿ ಬಾಗಲಕೋಟೆ ಜಿಲ್ಲೆಯಲ್ಲಿ 2011ರ ಜನಗಣತಿ ಪ್ರಕಾರ 11.12 ಲಕ್ಷ ಜನಸಂಖ್ಯೆಯಿದೆ. ಶೇ. 68.82 ಸಾಕ್ಷರತೆ ಪ್ರಮಾಣ ಹೊಂದಿರುವ ಈ ಜಿಲ್ಲೆಯಲ್ಲಿ ಪುರುಷರು ಶೇ. 79.23 ಹಾಗೂ ಮಹಿಳೆಯರು ಶೇ. 58.40 ಸಾಕ್ಷರತೆ ಪ್ರಮಾಣ ಹೊಂದಿದ್ದಾರೆ. ಬಾಗಲಕೋಟೆ ಲೋಕಸಭಾ ಕ್ಷೇತ್ರ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ಹಾಗೂ ಗದಗ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರವನ್ನು ಹೊಂದಿದೆ. ಬಾಗಲಕೋಟೆ ಲೋಕಸಭಾ ಮತಕ್ಷೇತ್ರ ತನ್ನದೇ ಆದ ವಿಶೇಷತೆ ಹೊಂದಿದೆ.

ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಸೋಲಿಗೂ ಕಾರಣವಾಗಿ ದೇಶದಲ್ಲೇ ಗಮನ ಸೆಳೆದಿದೆ ಬಾಗಲಕೋಟೆ. ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಗೆಲುವು ರಾಷ್ಟ್ರದ ಗಮನ ಸೆಳೆದಿದೆ. ಇದೀಗ 2019 ಲೋಕ ಸಮರಕ್ಕೆ ಕೋಟೆ ನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇನ್ನು ಕಳೆದ ಮೂರು ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ, ಬಾಗಲಕೋಟೆ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆ ಆಗಿದೆ. ಬಾಗಲಕೋಟೆ ಅತೀ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆ. ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾಗಿ 'ಮುಳುಗಡೆ ನಗರಿ' ಎಂಬ ಖ್ಯಾತಿ ಪಡೆದುಕೊಂಡಿದೆ. ಕೃಷ್ಣಾ ಮೇಲ್ಡಂಡೆ ಯೋಜನೆ ರಾಷ್ಟ್ರದ ಪ್ರಮುಖ ನೀರಾವರಿ ಯೋಜನೆಗಳಲ್ಲೊಂದಾಗಿದೆ. ರಾಷ್ಟ್ರದ ಎರಡನೇ ತೋಟಗಾರಿಕೆ ವಿಶ್ವವಿದ್ಯಾನಿಲಯದ ಹೊಂದಿರುವ ಖ್ಯಾತಿ ಬಾಗಲಕೋಟೆಗಿದೆ.

ಇದನ್ನೂ ಓದಿ: ಕೇಂದ್ರ ಸಚಿವ ರಮೇಶ್​ ಜಿಗಜಿಣಗಿ ಹ್ಯಾಟ್ರಿಕ್​ ಗೆಲುವಿಗೆ ಬ್ರೇಕ್​ ಹಾಕಲಿದೆಯೇ ಕಾಂಗ್ರೆಸ್​?

ಒಂದು ರೀತಿ ಬಾಗಲಕೋಟೆ ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ಸ್ವಕ್ಷೇತ್ರ ಬಾಗಲಕೋಟೆ ಲೋಕಸಭೆ ಚುನಾವಣೆ ರಾಷ್ಟ್ರ ರಾಜಕಾರಣದಲ್ಲಿ ಗಮನ ಸೆಳೆಯಲಿದೆ‌. ಪಕ್ಷಕ್ಕಿಂತ ಜಾತಿ ರಾಜಕಾರಣ ಲೆಕ್ಕಾಚಾರದ ಜೊತೆಗೆ ಪಕ್ಷದ ಹವಾದ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ‌. ಹಾಲಿ ಬಿಜೆಪಿ ಸಂಸದ ಪಿ. ಸಿ. ಗದ್ದಿಗೌಡರ ಮೂರು ಬಾರಿ ಸಂಸದರಾಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ. ಕ್ಷೇತ್ರದ ಜನರು ಹಾಗೂ ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕ ಹೊಂದಿಲ್ಲ ಎನ್ನೋ ಮಾತು ಕೇಳಿ ಬರುತ್ತಿದೆ. ಹಾಲಿ ಸಂಸದರ ಬದಲಿಗೆ ಬೇರೆಯವರಿಗೆ ಟಿಕೆಟ್ ನೀಡಬೇಕು ಎಂದು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಹಾಲಿ ಸಂಸದರ ಬದಲಿಗೆ ತಮಗೆ ಟಿಕೆಟ್ ನೀಡಬೇಕು ಎಂದು ಮಾಜಿ ಶಾಸಕ ಪಿ.ಎಚ್. ಪೂಜಾರ ಫೈಟ್ ನಡೆಸಿದ್ದಾರೆ. ಈ ಕುರಿತು ಹೈಕಮಾಂಡ್ ನಲ್ಲಿ ಒತ್ತಡ ಹೇರಲು ವೇದಿಕೆ ಸಿದ್ಧವಾಗಿದೆ.
Loading...

ಇನ್ನು ಲೋಕಾ ಸಮರಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಮೈತ್ರಿ ಪಕ್ಕಾ ಆಗಿದ್ದು, ಕಾಂಗ್ರೆಸ್ ನಲ್ಲಿಯೂ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ. ಪ್ರಮುಖವಾಗಿ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ್, ಅಜಯ್ ಕುಮಾರ್ ಸರನಾಯಕ ರೇಸ್ ನಲ್ಲಿದ್ದರೆ ಹೈಕಮಾಂಡ್ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದೆ. ಹೊರ ಜಿಲ್ಲೆಯ ಪ್ರಮುಖ ನಾಯಕರು ಕೈ ಅಭ್ಯರ್ಥಿಯಾದರೂ ಅಚ್ಚರಿಪಡಬೇಕಿಲ್ಲ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಸಚಿವ ಶಿವಾನಂದ ಪಾಟೀಲ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಲಿಂಗಾಯತ ಸಮುದಾಯಕ್ಕೆ ಸೇರಿರುವುದರಿಂದ ಇವರನ್ನೂ ಅಭ್ಯರ್ಥಿಯನ್ನಾಗಿಸುವ ಲೆಕ್ಕಾಚಾರ ನಡೆದಿದೆ. ಇನ್ನು ಬಾಗಲಕೋಟೆ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ, ಕುರುಬ, ಹಾಗೂ ರೆಡ್ಡಿ ಸಮುದಾಯದ ನಾಯಕರಿಗೆ ಟಿಕೆಟ್ ನೀಡಲಾಗುತ್ತಿದೆ. ಬಿಜೆಪಿ ಭದ್ರಕೋಟೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಗೆಲ್ಲಿಸುವುದು ಮಾಜಿ ಸಿಎಂ ಹಾಗೂ ಬದಾಮಿ ಶಾಸಕ ಸಿದ್ದರಾಮಯ್ಯರಿಗೆ ಪ್ರತಿಷ್ಠೆಯಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಸೂಕ್ತ ಅಭ್ಯರ್ಥಿ ಹುಡುಕಾಟ ನಡೆಸಿದೆ‌.

ವಿಧಾನಸಭಾ ಕ್ಷೇತ್ರಗಳು

ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಗದಗದ ನರಗುಂದ ಜಿಲ್ಲೆ ಕೂಡ ಇದೇ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ. 8 ಶಾಸಕರಲ್ಲಿ  6 ಮಂದಿ ಬಿಜೆಪಿ ಶಾಸಕರು ಮತ್ತು ಇಬ್ಬರು ಕಾಂಗ್ರೆಸ್​ ಶಾಸಕರು ಅಧಿಕಾರದಲ್ಲಿದ್ದಾರೆ. ಬಾಗಲಕೋಟೆ- ವೀರಣ್ಣ ಚರಂತಿಮಠ ಬದಾಮಿ- ಸಿದ್ದರಾಮಯ್ಯ, ಹುನಗುಂದ- ದೊಡ್ಡನಗೌಡ ಪಾಟೀಲ್, ಬೀಳಗಿ- ಮುರುಗೇಶ್ ನಿರಾಣಿ, ಮುಧೋಳ- ಗೋವಿಂದ ಕಾರಜೋಳ, ತೇರದಾಳ- ಸಿದ್ದು ಸವದಿ, ಜಮಖಂಡಿ- ಆನಂದ ನ್ಯಾಮಗೌಡ, ನರಗುಂದ- ಸಿ.ಸಿ. ಪಾಟೀಲ್ ಪ್ರಸ್ತುತ ಅಧಿಕಾರದಲ್ಲಿದ್ದಾರೆ.

ಪಕ್ಷಗಳ ಬಲಾಬಲ

2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ ಕುಮಾರ್ ಸರನಾಯಕ ವಿರುದ್ಧ 1,16,560 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಗೆಲುವು ಸಾಧಿಸಿದ್ದರು. 1998ರಲ್ಲಿ ಲೋಕ ಜನಶಕ್ತಿ ಪಕ್ಷದಿಂದ ಸ್ಪರ್ಧಿಸಿ ಅಜಯ್​ ಕುಮಾರ್ ಸರನಾಯಕ ಅವರು ಇತ್ತೀಚೆಗೆ ಸಾವನ್ನಪ್ಪಿದ ಕಾಂಗ್ರೆಸ್​ ಹಿರಿಯ ರಾಜಕಾರಣಿ ಸಿದ್ದು ನ್ಯಾಮಗೌಡ ಅವರ ವಿರುದ್ಧ ಜಯ ಗಳಿಸಿದ್ದರು. 1999ರಲ್ಲಿ ಕಾಂಗ್ರೆಸ್​ನ ಆರ್.ಎಸ್. ಪಾಟೀಲ್ ಜೆಡಿಯು ಅಭ್ಯರ್ಥಿ ಅಜಯ್ ಕುಮಾರ್ ಸರನಾಯಕ ವಿರುದ್ಧ ಗೆಲುವು ಸಾಧಿಸಿದ್ದರು. 2004ರಲ್ಲಿ ಬಿಜೆಪಿಯ ಪಿ.ಸಿ. ಗದ್ದಿಗೌಡರ ಕಾಂಗ್ರೆಸ್​ನ ಆರ್.ಎಸ್. ಪಾಟೀಲ್ ವಿರುದ್ಧ ಗೆಲುವು ಸಾಧಿಸಿದ್ದರು. 2009ರಲ್ಲಿ ಬಿಜೆಪಿಯ ಪಿ.ಸಿ. ಗದ್ದಿಗೌಡರ ಕಾಂಗ್ರೆಸ್​ ಅಭ್ಯರ್ಥಿ ಜೆ.ಟಿ. ಪಾಟೀಲ್ ವಿರುದ್ಧ ಜಯ ಗಳಿಸಿದ್ದರು. 2014ರಲ್ಲಿ ಮತ್ತೆ ಬಿಜೆಪಿಯ ಪಿ.ಸಿ. ಗದ್ದಿಗೌಡರ ಕಾಂಗ್ರೆಸ್​ ಅಭ್ಯರ್ಥಿ ಅಜಯ್ ಕುಮಾರ್ ಸರನಾಯಕ ವಿರುದ್ಧ ಗೆಲುವಿನ ನಗೆ ಬೀರಿದ್ದರು. ಮೂರು ಅವಧಿಯಲ್ಲಿ ಸತತವಾಗಿ ಪಿ.ಸಿ. ಗದ್ದಿಗೌಡರ ಜಯ ಗಳಿಸಿರುವುದರಿಂದ ಈ ಬಾರಿಯೂ ಸಹಜವಾಗಿ ನಿರೀಕ್ಷೆಗಳು ಹೆಚ್ಚಾಗಿವೆ.

ಇದನ್ನೂ ಓದಿ: ಒಕ್ಕಲಿಗ ಪ್ರಾಬಲ್ಯದ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ, ಬಿಜೆಪಿ ಜಯದ ಕುದುರೆಯನ್ನು ಕಟ್ಟಿಹಾಕತ್ತಾ ಮೈತ್ರಿ ಸರ್ಕಾರ?

ಜಾತಿವಾರು ಜನಸಂಖ್ಯೆ

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 18,02,050. ಇದರಲ್ಲಿ 3 ಲಕ್ಷ ಎಸ್​ಸಿ, 1 ಲಕ್ಷ ಎಸ್​ಟಿ, 2.5 ಲಕ್ಷ ಕುರುಬರು, 1.5 ಲಕ್ಷ ಪಂಚಮಸಾಲಿಗಳು, 1.5 ಲಕ್ಷ ಗಾಣಿಗರು, 2 ಲಕ್ಷ ಮುಸ್ಲಿಮರು, 1.5 ಲಕ್ಷ ನೇಕಾರರು, 1.5 ಲಕ್ಷ ರೆಡ್ಡಿಗಳು, 3.2 ಲಕ್ಷ -ಇತರರು (ಬ್ರಾಹ್ಮಣ, ಮರಾಠ, ಉಪ್ಪಾರ, ಮಾಳಿ, ಸೋಮ ವಂಶ, ಭಾವಸಾರ, ಸ್ವಕುಳಸಾಲಿ ಸಮುದಾಯದವರು) ಇದ್ದಾರೆ.

ಆಕಾಂಕ್ಷಿಗಳು

ಬಿಜೆಪಿಯಲ್ಲಿ ಹಾಲಿ ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕ ಪಿ.ಎಚ್. ಪೂಜಾರ, ಸಂಗಮೇಶ್ ನಿರಾಣಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ್, ಮಾಜಿ ಸಚಿವ ಅಜಯ್ ಕುಮಾರ್ ಸರನಾಯಕ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಜಿಪಂ ಸದಸ್ಯೆ ಭಾಯಕ್ಕ ಮೇಟಿ/ ಮಾಜಿ ಸಚಿವ ಎಚ್.ವೈ. ಮೇಟಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಬಾರಿಯ ಬಾಗಲಕೋಟೆ ಚುನಾವಣೆಯಲ್ಲಿ ಬಿಜೆಪಿಯ ಪಿ.ಸಿ. ಗದ್ದಿಗೌಡರ ಮತ್ತು ಕಾಂಗ್ರೆಸ್​ನ ವೀಣಾ ಕಾಶಪ್ಪನವರ್​ ಎದುರಾಳಿಗಳಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

ಹಾಲಿ ಸಂಸದರ ಬಗ್ಗೆ

ಹಾಲಿ ಬಿಜೆಪಿ ಸಂಸದ ಪಿ.ಸಿ. ಗದ್ದಿಗೌಡರ ಮೂರು ಬಾರಿ ಬಾಗಲಕೋಟೆ ಲೋಕಸಭಾ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರೂ ಜನರೊಂದಿಗೆ, ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿಲ್ಲ ಎಂಬ ಅಭಿಪ್ರಾಯವಿದೆ. ಜಿಲ್ಲೆಯ ಪ್ರಮುಖ ಸಮಸ್ಯೆಗಳಿಗೆ ದನಿಯಾಗಿಲ್ಲ. ಮುಳುಗಡೆ ಸಂತ್ರಸ್ತರ ಸಮಸ್ಯೆ, ಕಬ್ಬು ಬೆಳೆಗಾರರ ಸಮಸ್ಯೆಗೆ ಸಂಸದರು ಸ್ಪಂದಿಸಿಲ್ಲ. ಬದಾಮಿ, ಪಟ್ಟದಕಲ್ಲು, ಐಹೊಳೆ ಪ್ರವಾಸಿ ತಾಣ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿಲ್ಲ ಎಂಬಿತ್ಯಾದಿ ಆರೋಪಗಳಿವೆ.‌

ಲೋಕಸಭಾ ಚುನಾವಣೆ ಆಕಾಂಕ್ಷಿಗಳ ಪ್ರೊಫೈಲ್

ಬಿಜೆಪಿ ಆಕಾಂಕ್ಷಿ ಪಿ.ಸಿ. ಗದ್ದಿಗೌಡರ ಗಾಣಿಗ ಸಮುದಾಯಕ್ಕೆ ಸೇರಿದವರು. ಬಿಎ ಎಲ್​ಎಲ್​ಬಿ ಶಿಕ್ಷಣ ಪಡೆದಿರುವ ಇವರು ಕೃಷಿ ಕುಟುಂಬದಿಂದ ಜನತಾ ಪರಿವಾರದ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. 2004ರಲ್ಲಿ ಬಿಜೆಪಿಯಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. 2008 ಹಾಗೂ 2014ರಲ್ಲಿ ಮತ್ತೆ ಸಂಸದರಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಪ್ರಸ್ತುತ ಬಾಗಲಕೋಟೆ ಸಂಸದರಾಗಿದ್ದಾರೆ.

ಕಾಂಗ್ರೆಸ್​ನ ಆಕಾಂಕ್ಷಿ ವೀಣಾ ಕಾಶಪ್ಪನವರ್​ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಬಿಕಾಂ ಪದವೀಧರೆಯಾಗಿರುವ ಇವರ ಪತಿ ವಿಜಯಾನಂದ ಕಾಶಪ್ಪನವರ್ ಮಾಜಿ ಶಾಸಕ. ಪ್ರಸ್ತುತ ವೀಣಾ ಕಾಶಪ್ಪನವರ್ ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸಂಘದ​ ಉಪಾಧ್ಯಕ್ಷೆಯಾಗಿದ್ದಾರೆ.

ಕ್ಷೇತ್ರದ ಪ್ರಮುಖ ಬೇಡಿಕೆಗಳು

ಮುಳುಗಡೆ ಪ್ರದೇಶದ ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸುವುದು, ಮೂಲಭೂತ ಸೌಕರ್ಯ ಒದಗಿಸುವುದು. ಕೈಗಾರಿಕೆ ಸ್ಥಾಪನೆ, ಕಬ್ಬು ಬೆಳೆಗಾರರ ಸಮಸ್ಯೆ. ಆಲಮಟ್ಟಿ ಜಲಾಶಯವನ್ನು 527 ಮೀಟರ್​ಗೆ ಹೆಚ್ಚಿಸಿ, ನೀರಾವರಿ ಯೋಜನೆ ಜಾರಿ ಮಾಡಬೇಕು. ನೇಕಾರರಿಗೆ ಜವಳಿ ಪಾರ್ಕ್ ನಿರ್ಮಾಣ, ಆಧುನಿಕ ತಂತ್ರಜ್ಞಾನ, ಮಾರುಕಟ್ಟೆ ಕಲ್ಪಿಸಬೇಕು. ನಿರುದ್ಯೋಗಿ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ, ಉದ್ಯೋಗಾವಕಾಶ ಕಲ್ಪಿಸಬೇಕಿದೆ. ಮಲಪ್ರಭಾ ನದಿ ತೀರದ ಪ್ರವಾಹ ಪೀಡಿತ ಗ್ರಾಮಗಳಿಗೆ ಪುನರ್ವಸತಿ, ಮೂಲಸೌಲಭ್ಯ ಕಲ್ಪಿಸುವುದು. ಐತಿಹಾಸಿಕ ತಾಣ ಬದಾಮಿ, ಐಹೊಳೆ, ಪಟ್ಟದಕಲ್ಲು ಅಭಿವೃದ್ಧಿಗೊಳಿಸಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ನೀಡಬೇಕು.
First published:January 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626