Chamarajanagara Lok Sabha Profile: ಸೋಲಿಲ್ಲದ ಸರದಾರ ಧ್ರುವನಾರಾಯಣ್​ ಎದುರು ಈ ಬಾರಿ ಪ್ರಬಲ ಅಭ್ಯರ್ಥಿಗಳೇ ಇಲ್ಲ!

Chamarajanagara Lok Sabha Profile | ಸಂಸದ ಆರ್.ಧ್ರುವನಾರಾಯಣ್  ಹಿಂದಿನ ಚುನಾವಣೆ ವೇಳೆ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿದ್ದಾರೆ ಎಂಬುದು ಜನಸಾಮಾನ್ಯರ ಅಭಿಪ್ರಾಯವಾಗಿದೆ. ಉತ್ತಮ ರಸ್ತೆಗಳ ಜೊತೆಗೆ ಕೇಂದ್ರ ಸರ್ಕಾರದಿಂದ ಕ್ಷೇತ್ರಕ್ಕೆ ಆಗಬೇಕಾದ ಕೆಲಸಗಳನ್ನು ಮಾಡಿಕೊಡಬೇಕೆಂಬುದು ಕ್ಷೇತ್ರದ ಜನರ ಅಪೇಕ್ಷೆಯಾಗಿತ್ತು. ಜನರ ಅಪೇಕ್ಷೆಗೆ ತಕ್ಕಂತೆ ಕೆಲಸ ನಿರ್ವಹಿಸುವಲ್ಲಿ ಧ್ರುವನಾರಯಣ ಯಶಸ್ವಿಯೂ ಆಗಿದ್ದು, ಜನಸಾಮಾನ್ಯರ ಕೈಗೆ  ಸಿಗುತ್ತಾರೆ ಎಂಬ ಅಭಿಪ್ರಾಯವೂ ಇದೆ.

HR Ramesh | news18
Updated:March 27, 2019, 3:18 PM IST
Chamarajanagara Lok Sabha Profile: ಸೋಲಿಲ್ಲದ ಸರದಾರ ಧ್ರುವನಾರಾಯಣ್​ ಎದುರು ಈ ಬಾರಿ ಪ್ರಬಲ ಅಭ್ಯರ್ಥಿಗಳೇ ಇಲ್ಲ!
ಆರ್​. ಧ್ರುವನಾರಾಯಣ್ ಮತ್ತು ಬಿಜೆಪಿ ನಿರೀಕ್ಷಿತ ಅಭ್ಯರ್ಥಿಗಳಾದ ಕೋಟೆ ಎಂ ಶಿವಣ್ಣ ಹಾಗೂ ಕೆ.ಶಿವರಾಂ
 • News18
 • Last Updated: March 27, 2019, 3:18 PM IST
 • Share this:
- ಎಸ್.ಎಂ.ನಂದೀಶ್  

ಚಾಮರಾಜನಗರ ಎಸ್​ಸಿ ಮೀಸಲು ಲೋಕಸಭಾ ಕ್ಷೇತ್ರ ಜಿಲ್ಲೆಯ ನಾಲ್ಕು ಹಾಗೂ ಮೈಸೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕರ್ನಾಟಕದ ದಕ್ಷಿಣ ಗಡಿ ಭಾಗದ ತುತ್ತ ತುದಿಯಲ್ಲಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರ ಶೇಕಡ 49ರಷ್ಟು  ಅರಣ್ಯ ಪ್ರದೇಶ ಹೊಂದಿದೆ. ಬಂಡೀಪುರ ಹಾಗೂ ಬಿ.ಆರ್.ಟಿ. ಎಂಬ ಎರಡು ಹುಲಿ ಸಂರಕ್ಷಿತಾರಣ್ಯಗಳು ಹಾಗೂ ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಒಳಗೊಂಡ ಹೆಗ್ಗೆಳಿಕೆಗೆ ಪಾತ್ರವಾಗಿರುವ ಈ ಕ್ಷೇತ್ರದಲ್ಲಿ ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ತಲಕಾಡು, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ನಂಜನಗೂಡಿನಂತಹ ಪ್ರಸಿದ್ದ ಯಾತ್ರಾ ಸ್ಥಳಗಳಿವೆ. ಹೊಗೆನಕಲ್, ಭರಚುಕ್ಕಿ, ಬಂಡೀಪುರ  ಮೊದಲಾದ ಪ್ರವಾಸಿ ತಾಣಗಳಿವೆ.

ಈ ಲೋಕಸಭಾ ಕ್ಷೇತ್ರವು ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ವಿಧಾನಸಭಾ ಕ್ಷೇತ್ರಗಳು ಹಾಗೂ ಮೈಸೂರು ಜಿಲ್ಲೆಯ ನಂಜನಗೂಡು, ಹೆಚ್.ಡಿ.ಕೋಟೆ, ಟಿ.ನರಸೀಪುರ, ಹಾಗು ವರುಣಾ ವಿಧಾನಸಭಾ ಕ್ಷೇತ್ರಗಳು  ಸೇರಿ ಒಟ್ಟು ಎಂಟು ಕ್ಷೇತ್ರಗಳನ್ನು ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳು ಪರಿಶಿಷ್ಟ ಜಾತಿ ಹಾಗೂ ಒಂದು ವಿಧಾನಸಭಾ ಕ್ಷೇತ್ರ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿರುವುದು ವಿಶೇಷ.

1962ರಲ್ಲಿ ರಚನೆಗೊಂಡ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ ಆರಂಭದಿಂದಲೂ ಕಾಂಗ್ರೆಸ್ ಭದ್ರಕೋಟೆ. ಆದರೆ, ಬದಲಾದ ರಾಜಕೀಯ ಸನ್ನಿವೇಶದ ಪರಿಣಾಮ 1996 ರಿಂದ 2004ರವರೆಗೂ ಕ್ಷೇತ್ರದಲ್ಲಿ ಜನತಾದಳ ಪ್ರಭುತ್ವ ಸ್ಥಾಪಿಸಿತ್ತು. ಬಳಿಕ ಜನತಾ ದಳದ ಒಳಜಗಳದಿಂದಾಗಿ ತನ್ನ ಅಸ್ತಿತ್ವ ಕಳೆದುಕೊಂಡು, 2009ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ತನ್ನ ಪ್ರಭುತ್ವ ಸ್ಥಾಪಿಸಿತು.

ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕು ಮಂದಿ ಕಾಂಗ್ರೆಸ್ ಶಾಸಕರು, ಇಬ್ಬರು ಬಿಜೆಪಿ ಹಾಗೂ  ಜೆಡಿಎಸ್ ಮತ್ತು ಬಿಎಸ್​ಪಿಯಿಂದ ತಲಾ ಒಬ್ಬರು ಶಾಸಕರಿದ್ದಾರೆ. ಮಾಜಿ  ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ವಿ.ಶ್ರೀನಿವಾಸಪ್ರಸಾದ್, ಎಚ್.ಸಿ.ಮಹದೇವಪ್ಪ, ಗೀತಾ ಮಹಾದೇವ ಪ್ರಸಾದ್, ಹಾಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರಂತಹ ಪ್ರಭಾವಿ ನಾಯಕರು ಇದೇ ಲೋಕಸಭಾ ಕ್ಷೇತ್ರದವರಾಗಿರುವುದು ವಿಶೇಷ. ಅಲ್ಲದೆ ನಾಲ್ಕು ಮೀಸಲು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವುದು ಈ ಕ್ಷೇತ್ರದ ಪ್ರಮುಖ ಅಂಶವಾಗಿದೆ.

2004ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಂತೇಮರಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಕೇವಲ ಒಂದು ಮತದ ಅಂತರದಿಂದ ಗೆದ್ದು ಇತಿಹಾಸ ಸೃಷ್ಟಿಸಿದ್ದ ಕಾಂಗ್ರೆಸ್​ನ ಆರ್. ಧ್ರುವನಾರಾಯಣ್ ಅದೇ ಒಂದು ಮತದ ಅಂತರದಿಂದ ಸೋತಿದ್ದ ಬಿಜೆಪಿಯ ಎ.ಆರ್.ಕೃಷ್ಣಮೂರ್ತಿ ವಿರುದ್ಧ 2009 ಹಾಗೂ 2014 ರ ಲೋಕಸಭಾ ಚುನಾವಣೆಗಳಲ್ಲೂ ಗೆಲುವು ದಾಖಲಿಸಿದರು. ಪ್ರಸ್ತುತ ಈಗ ಎ.ಆರ್.ಕೃಷ್ಣಮೂರ್ತಿ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಈ ಇಬ್ಬರು ಪ್ರಬಲ ನಾಯಕರು ಈಗ ಕಾಂಗ್ರೆಸ್ ನಲ್ಲೇ ಇರುವುದು ಮತ್ತೊಂದು ವಿಶೇಷವಾಗಿದ್ದು, ಧ್ರುವನಾರಾಯಣ್​ಗೆ ಪ್ರಬಲ ಎದುರಾಳಿಗಳೇ ಇಲ್ಲವಾಗಿದೆ. 2004ರಲ್ಲಿ ಸಂತೇಮರಹಳ್ಳಿ  ಕ್ಷೇತ್ರದಿಂದ ವಿಧಾನಸಭೆಗೆ ಆರಿಸಿ ಹೋಗಿದ್ದ ಆರ್.ಧ್ರುವನಾರಾಯಣ್ ಬಳಿಕ 2008ರಲ್ಲಿ ಕೊಳ್ಳೇಗಾಲ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ, ಬಳಿಕ 2009 ಹಾಗೂ 2014ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ.

ಕ್ಷೇತ್ರದ ಮತದಾರರ ವಿವರ ಪುರುಷ ಮತದಾರರು    8,34,428
ಮಹಿಳಾ ಮತದಾರರು   8,32,590
ಒಟ್ಟು ಮತದಾರರು      16,67,080

ಜಾತಿವಾರು ಮತಗಳು 

ಪರಿಶಿಷ್ಟ ಜಾತಿ                     4 ಲಕ್ಷ
ಲಿಂಗಾಯಿತರು                    3.7 ಲಕ್ಷ
ನಾಯಕರು                            2 ಲಕ್ಷ
ಉಪ್ಪಾರರು                          1.50 ಲಕ್ಷ
ಕುರುಬರು                            90 ಸಾವಿರ
ಒಕ್ಕಲಿಗರು                           1.25 ಲಕ್ಷ
ಮುಸ್ಲಿಮರು                       70 ಸಾವಿರ

ಇತರೆ ಸುಮಾರು ಎರಡೂವರೆ ಲಕ್ಷ ಮತದಾರರು ಈ ಕ್ಷೇತ್ರದಲ್ಲಿದ್ದಾರೆ

ಪ್ರಭಾವ ಬೀರುವ ಅಂಶಗಳು

ಜಾತಿ ಆಧಾರದ ಮೇಲೆಯೇ ಇಲ್ಲಿಯೂ ಚುನಾವಣೆ ನಡೆಯುತ್ತದೆ. ಎಂದಿನಂತೆ ಮೇಲ್ವರ್ಗದ ಮತಗಳು ಬಿಜೆಪಿ ಬುಟ್ಟಿಗೆ ಬಿದ್ದರೆ, ಅಹಿಂದ ಮತಗಳು ಕಾಂಗ್ರೆಸ್ ಪಾಲಾಗಲಿವೆ. ಮೀಸಲು ಕ್ಷೇತ್ರವಾದ್ದರಿಂದ ಪರಿಶಿಷ್ಟ ಜಾತಿಯ ಮತಗಳು ಇಬ್ಬಾಗವಾಗಬಹುದು. ಕೇಂದ್ರ ಸರ್ಕಾರದ ವೈಫಲ್ಯಗಳ ಜೊತೆಗೆ ರಾಜ್ಯ ಸರ್ಕಾರದ ವೈಫಲ್ಯಗಳು, ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಪಿಎ ಬಳಿ ದೊರೆತ ಲಂಚದ ಹಣ ಪ್ರಕರಣ, ಕಾಂಗ್ರೆಸ್ ಶಾಸಕರ ನಡುವಿನ ಗಲಾಟೆ ಈ ಚುನಾವಣೆಯ ಪ್ರಮುಖ ಅಂಶಗಳಾಗುವ ಸಾಧ್ಯತೆಗಳು ಇವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಚಸ್ಸು ಹಾಗೂ  ಹಾಲಿ ಸಂಸದ ಆರ್.ಧ್ರುವನಾರಾಯಣ್ ಮಾಡಿರುವ ಅಭಿವೃದ್ಧಿ ಕೆಲಸಗಳು ಕಾಂಗ್ರೆಸ್​ಗೆ ವರದಾನವಾಗಲಿದೆ.

ನಿರೀಕ್ಷಿತ ಅಭ್ಯರ್ಥಿಗಳು

ಕಾಂಗ್ರೆಸ್​ನಿಂದ ಹಾಲಿ ಸಂಸದ ಆರ್.ಧ್ರುವನಾರಾಯಣ್ ಸ್ಪರ್ಧಿಸಲಿದ್ದಾರೆ. ಇನ್ನು ಬಿಜೆಪಿಯಿಂದ ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಂ ಅಥವಾ  ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಅಥವಾ ಮಾಜಿ ಸಚಿವ ಕೋಟೆ ಶಿವಣ್ಣ, ನಿವೃತ್ತ ಐಎಫ್ಎಸ್ ಅಧಿಕಾರಿ ಡಾ.ರಾಜು ಅಥವಾ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರ ಅಳಿಯ ಡಾ.ಮೋಹನ್ ಆಕಾಂಕ್ಷಿಗಳಾಗಿದ್ದಾರೆ. ಬಿಎಸ್​ಪಿಯಿಂದ ಪಕ್ಷದ ರಾಜ್ಯ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ  ಸ್ಪರ್ಧಿಸುವ ಸಾಧ್ಯತೆ ಇದೆ.

ಅಭ್ಯರ್ಥಿಗಳ ಬಲಾಬಲ

ಕಾಂಗ್ರೆಸ್ ಅಭ್ಯರ್ಥಿ ಆರ್ ಧ್ರುವನಾರಾಯಣ್​ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಲಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಅಲ್ಲದೆ ಮೂವರು ಕಾಂಗ್ರೆಸ್  ಶಾಸಕರು  ಬೆಂಬಲಕ್ಕಿದ್ದಾರೆ. ಅಲ್ಲದೆ ಸಾಂಪ್ರದಾಯಿಕ ಎದುರಾಳಿ ಎ.ಆರ್.ಕೃಷ್ಣಮೂರ್ತಿ ಅವರು ಸಹ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿರುವುದು ಪ್ಲಸ್ ಪಾಯಿಂಟ್. ಜೊತೆಗೆ ರಾಜ್ಯದಲ್ಲಿ ಹಾಲಿ ಸಮ್ಮಿಶ್ರ ಸರ್ಕಾರವಿರುವುದರಿಮದ ಜೆಡಿಎಸ್ ಮತಗಳು ಧ್ರುವನಾರಯಣ್ ಬುಟ್ಟಿಗೆ ಬೀಳಬಹುದು. ಬಿಜೆಪಿ ಸ್ಥಳೀಯ ಮುಖಂಡರಲ್ಲಿ ಹೊಂದಾಣಿಕೆಯಿಲ್ಲದಿರುವುದು ಧ್ರುವನಾರಾಯಣ್ ಗೆ ವರವಾಗಬಹುದು. ಹಾಲಿ ಸಂಸದ ಆರ್.ಧ್ರುವನಾರಾಯಣ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದು ಅವರನ್ನು ಮತ್ತೊಮ್ಮೆ  ಕೈ ಹಿಡಿಯಬಹುದು.

ಬಿಜೆಪಿ ಅಭ್ಯರ್ಥಿ ಬೆಂಬಲಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೆ ಶ್ರೀರಕ್ಷೆಯಾಗಿದ್ದಾರೆ. ಈ  ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿದ್ದ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರ ಬೆಂಬಲ ಹಾಗೂ ಇಬ್ಬರು ಬಿಜೆಪಿ ಶಾಸಕರು ಇರುವುದು ಅನುಕೂಲಕರವಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ಲಿಂಗಾಯತ ಮತಗಳು ಎರಡನೆ ಸ್ಥಾನದಲ್ಲಿ ಇರುವುದು ಬಿಜೆಪಿಗೆ ದೊಡ್ಡ ವರದಾನವಾಗಿದೆ.

ಇನ್ನು ಬಿಎಸ್​ಪಿ ಅಭ್ಯರ್ಥಿಗೆ ಬಿಎಸ್​ಪಿ ಪ್ರಭಾವಿ ಮುಖಂಡ, ಮಾಜಿ ಸಚಿವ, ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಅವರ ಬೆಂಬಲವಿದೆ. ಕೊಳ್ಳೇಗಾಲ ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಬಿಎಸ್​ಪಿ ಮತದಾರರು, ಉಳಿದ ಕಡೆಗಳಲ್ಲಿ ದಲಿತರ ಮತಗಳು ಒಲಿಯಬಹುದು.

ಸಂಸದ ಆರ್.ಧ್ರುವನಾರಾಯಣ್  ಹಿಂದಿನ ಚುನಾವಣೆ ವೇಳೆ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿದ್ದಾರೆ ಎಂಬುದು ಜನಸಾಮಾನ್ಯರ ಅಭಿಪ್ರಾಯವಾಗಿದೆ. ಉತ್ತಮ ರಸ್ತೆಗಳ ಜೊತೆಗೆ ಕೇಂದ್ರ ಸರ್ಕಾರದಿಂದ ಕ್ಷೇತ್ರಕ್ಕೆ ಆಗಬೇಕಾದ ಕೆಲಸಗಳನ್ನು ಮಾಡಿಕೊಡಬೇಕೆಂಬುದು ಕ್ಷೇತ್ರದ ಜನರ ಅಪೇಕ್ಷೆಯಾಗಿತ್ತು. ಜನರ ಅಪೇಕ್ಷೆಗೆ ತಕ್ಕಂತೆ ಕೆಲಸ ನಿರ್ವಹಿಸುವಲ್ಲಿ ಧ್ರುವನಾರಯಣ ಯಶಸ್ವಿಯೂ ಆಗಿದ್ದು, ಜನಸಾಮಾನ್ಯರ ಕೈಗೆ  ಸಿಗುತ್ತಾರೆ ಎಂಬ ಅಭಿಪ್ರಾಯವೂ ಇದೆ. ಹಾಗಾಗಿ ಹಾಲಿ ಸಂಸದ ಆರ್.ಧ್ರುವನಾರಾಯಣ್​ ಬಗ್ಗೆ ಕ್ಷೇತ್ರದಲ್ಲಿ ಒಳ್ಳೆಯ ಅಭಿಪ್ರಾಯವಿದೆ.

ಸಂಸದ ಆರ್.ಧ್ರುವನಾರಾಯಣ ತಂದ ಪ್ರಮುಖ ಯೋಜನೆಗಳು

 •  429 ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 212 ಅಭಿವೃದ್ಧಿ (ಕೊಳ್ಳೇಗಾಲ, ಟಿ.ನರಸೀಪುರ, ಮೈಸೂರು ನಂಜನಗೂಡು ಹಾಗೂ ಗುಂಡ್ಲುಪೇಟೆ ಮಾರ್ಗವಾಗಿ  ಮೂಳೆಹೊಳೆ ಕೇರಳ ರಾಜ್ಯದ ಗಡಿವರೆಗೆ)

 • ರಾಷ್ಟ್ರೀಯ ಹೆದ್ದಾರಿ 209 ರ ಅಗಲೀಕರಣ ಹಾಗೂ ಅಭಿವೃದ್ಧಿ (ಬೆಂಗಳೂರು, ಕನಕಪುರ, ಮಳವಳ್ಳಿ ಕೊಳ್ಳೇಗಾಲ, ಯಳಂದೂರು, ಚಾಮರಾಜನಗರ ಮಾರ್ಗವಾಗಿ ಪುಣಜನೂರು ಚೆಕ್ ಪೋಸ್ಟ್  ತಮಿಳುನಾಡು ಗಡಿವರೆಗೆ)

 • ನಂಜನಗೂಡಿನಿಂದ ಚಾಮರಾಜನಗರದವರೆಗಿನ ರಾಷ್ಟ್ರೀಯ ಹೆದ್ದಾರಿ 150/ಎ ಅಭಿವದ್ಧಿ

 • ಕೇಂದ್ರೀಯ ರಸ್ತೆ ನಿಧಿಯಿಂದ ಚಾಮರಾಜನಗರ ಬಿ.ರಾಚಯ್ಯ ಜೋಡಿ ರಸ್ತೆ ಅಭಿವೃದ್ಧಿ

 • ಚಾಮರಾಜನಗರಕ್ಕೆ  ಪಾಸ್ ಪೋರ್ಟ್ ಸೇವಾ ಕೇಂದ್ರ ಮಂಜೂರು

 • ಚಾಮರಾಜನಗರದಲ್ಲಿ ಸುಸಜ್ಜಿತ ಕೇಂದ್ರೀಯ ವಿದ್ಯಾಲಯ

 • ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎರಡು ಏಕಲವ್ಯ ಶಾಲೆಗಳ ಪ್ರಾರಂಭ

 • ಜಿಲ್ಲಾ ಕ್ರೀಡಾಂಗಣದಲ್ಲಿ 5.5 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರಾಕ್

 • ಚಾಮರಾಜನಗರಕ್ಕೆ ಕೃಷಿ ವಿಜ್ಷಾನ ಕಾಲೇಜು ಮಂಜೂರು

 • ಚಾಮರಾಜನಗರಕ್ಕೆ ಗೂಡ್ಸ್ ರೈಲು

 • ಚಾಮರಾಜನಗರಕ್ಕೆ ಕಾನೂನು ಕಾಲೇಜು ಮಂಜೂರು

 • ಚಾಮರಾಜನಗರದಿಂದ ಬೆಂಗಳೂರಿಗೆ ನೇರ ರೈಲು ಸಂಚಾರ, ಮೈಸೂರಿನಿಂದ ಚಾಮರಾಜನಗರಕ್ಕೆ ಹೆಚ್ಚುವರಿ ರೈಲಿನ ಸೌಲಭ್ಯ

 • ಹೆಚ್.ಡಿ.ಕೋಟೆಯಲ್ಲಿ 9 ಕೋಟಿ ವೆಚ್ಚದಲ್ಲಿ ತಂಬಾಕು ಹರಾಜು ಮಾರುಕಟ್ಟೆ

 • ಟಿ.ನರಸೀಪುರದಲ್ಲಿ ಕಾರ್ಮಿಕ ವಿಮಾ ಆಸ್ಪತ್ರೆ ನಿರ್ಮಾಣ

 • ಚಾಮರಾಜಗರದಲ್ಲಿ ವಿಭಾಗೀಯ ಅಂಚೆ ಕಚೇರಿ ಸ್ಥಾಪನೆಗೆ ಕ್ರಮ. ಸಂಸದರ ಅದರ್ಶ ಗ್ರಾಮ ಯೋಜನೆಯಡಿ 39 ಕೋಟಿ ರೂ. ವೆಚ್ಚದಲ್ಲಿ ಹೆಚ್.ಡಿ.ಕೋಟೆ ತಾಲೂಕಿನ ಬಿ.ಮಟಕೆರೆ ಗ್ರಾಮ ಅಭಿವೃದ್ಧಿ, ಎರಡನೇ ಹಂತದಲ್ಲಿ ಚಾಮರಾಜನಗರ ತಾಲೂಕಿನ ದೊಡ್ಡಮೋಳೆ ಗ್ರಾಮದ ಅಭಿವೃದ್ಧಿಗೆ ಕ್ರಮ

 • ಚಾಮರಾಜನಗರದಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ ಸ್ಥಾಪನೆ

 • ನಳಂದ ಬೌದ್ಧ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ 25 ಎಕರೆ ಭೂಮಿ ಹಾಗೂ ಹತ್ತು ಕೋಟಿ ರೂಪಾಯಿ ಅನುದಾನ ಬಿಡುಗಡೆ

 • ಸುಳ್ವಾಡಿ ವಿಷಪ್ರಸಾದ ಪ್ರಕರಣದಲ್ಲಿ ಮಡಿದವರ ಕುಟುಂಬಗಳಿಗೆ ಕೇಂದ್ರ ಸರ್ಕಾರದಿಂದ ತಲಾ 2 ಲಕ್ಷ ರೂಪಾಯಿ ಪರಿಹಾರ ಹಾಗೂ ಅಸ್ವಸ್ಥರಾದವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ


ಕ್ಷೇತ್ರ ಪ್ರಮುಖ ಬೇಡಿಕೆಗಳು

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಹೊಗೇನಕಲ್ ಜಲಪಾತ, ಭರಚುಕ್ಕಿ ಜಲಪಾತ,  ಮಲೆಮಹದೇಶ್ವರಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ,  ಬಂಡೀಪುರ, ತಲಕಾಡು, ಸೇರಿದಂತೆ ಸಾಕಷ್ಟು ಪ್ರವಾಸಿತಾಣಗಳಿದ್ದು ಇಲ್ಲಿ ಮೂಲಸೌಕರ್ಯಗಳ ಕೊರೆತೆ ಇದೆ. ಈ ತಾಣಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು. ನನೆಗುದಿಗೆ ಬಿದ್ದಿರುವ ಕನಕಪುರ ಮಾರ್ಗ ಬೆಂಗಳೂರು ಚಾಮರಾಜನಗರ ರೈಲು ಯೋಜನೆ ಜಾರಿಗೊಳಿಸಬೇಕು. ಬಂಡೀಪುರ ಹುಲಿ ರಕ್ಷಿತಾರಣ್ಯದ ಮೂಲಕ ಕೇರಳ ರಾಜ್ಯಕ್ಕೆ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಎಂಬುದು ಇಲ್ಲಿನ ಪ್ರಮುಖ ಬೇಡಿಕೆಗಳಾಗಿವೆ.

 ದೇವೇಗೌಡ, ನಿಖಿಲ್​, ಶಿವರಾಮೇಗೌಡ ಈ ಮೂವರಲ್ಲಿ ಮಂಡ್ಯ ಕ್ಷೇತ್ರದ​ ಅಭ್ಯರ್ಥಿ ಯಾರು?

 ಸತತ ಮೂರು ಬಾರಿ ಗೆದ್ದ ಬಿಜೆಪಿ ಸಂಸದನಿಗೆ ಸೋಲಿನ ರುಚಿ ತೋರಿಸಲಿದ್ದಾರಾ ಸಿದ್ದರಾಮಯ್ಯ?

 ಕೇಂದ್ರ ಸಚಿವ ರಮೇಶ್​ ಜಿಗಜಿಣಗಿ ಹ್ಯಾಟ್ರಿಕ್​ ಗೆಲುವಿಗೆ ಬ್ರೇಕ್​ ಹಾಕಲಿದೆಯೇ ಕಾಂಗ್ರೆಸ್​?

ಒಕ್ಕಲಿಗ ಪ್ರಾಬಲ್ಯದ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ, ಬಿಜೆಪಿ ಜಯದ ಕುದುರೆಯನ್ನು ಕಟ್ಟಿಹಾಕತ್ತಾ ಮೈತ್ರಿ ಸರ್ಕಾರ?
First published:January 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ