ಬೀದರ್ (ಮೇ 29): ಮಹರಾಷ್ಟ್ರದ ನಾಗಪುರದಿಂದ ರಾಜ್ಯದ ಬೀದರ್ ಜಿಲ್ಲೆಯತ್ತ ಮುಖ ಮಾಡಿದ್ದ ಮಿಡತೆಗಳ ಗುಂಪು ಗಾಳಿಯ ದಿಕ್ಕು ಬದಲಾದ ಕಾರಣ ಮಧ್ಯಪ್ರದೇಶದತ್ತ ಹಾರಿವೆ. ಹೀಗಾಗಿ ರಾಜ್ಯದ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಮಹಾರಾಷ್ಟ್ರದ ನಾಸಿಕ್ ಹಾಗೂ ನಾಗಪುರ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದ ಡೆಸರ್ಟ ಲೋಕೆಸ್ಟ್ ಮಿಡತೆಗಳ ಗುಂಪು ಬೀದರ್ ಜಿಲ್ಲೆಗೆ ಆಗಮಿಸುವ ಕುರಿತು ಜಿಲ್ಲಾಡಳಿತವನ್ನು ಎರಡು ದಿನಗಳ ಹಿಂದೆ ಸರ್ಕಾರ ಎಚ್ಚರಿಸಿತ್ತು. ನಾಗಪುರ ಬೀದರ್ ಜಿಲ್ಲೆಯಿಂದ 510 ಕಿಲೋಮೀಟರ್ ಅಂತರದಲ್ಲಿದೆ. ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದ್ದ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳತ್ತಲೂ ಗಮನ ಹರಿಸಿತ್ತು. ಜೊತೆಗೆ ಸಾಕಷ್ಟು ಜೈವಿಕ ಕೀಟನಾಶಕಗಳನ್ನು ಸಹ ಸಂಗ್ರಹಿಸಿತ್ತು. ಈ ಬಗ್ಗೆ ಬೀದರ್ ಜಿಲ್ಲೆಯ ಕೃಷಿ ಅಧಿಕಾರಿಗಳು ದೆಹಲಿಯ ಮಿಡತೆ ಎಚ್ಚರಿಕೆ ಸಂಸ್ಥೆಯ ಅಧಿಕಾರಿಗಳನ್ನು ಸಹ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಕಲೆಹಾಕಿದ್ದರು.
ಈಗ ಮಿಡತೆಗಳ ಗುಂಪು ಮಧ್ಯಪ್ರದೇಶದತ್ತ ಮುಖ ಮಾಡಿದ್ದು, ರಾಜ್ಯದ ಮಹಾರಾಷ್ಟ್ರ ಗಡಿ ಜಿಲ್ಲೆಯ ಜನರು ಆತಂಕಿತರಾಗಬೇಕಿಲ್ಲ ಎಂಬ ಮಾಹಿತಿ ದೆಹಲಿ ಮಿಡತೆ ಸಂಸ್ಥೆಯಿಂದ ದೊರಕಿದೆ ಎಂದು ಇಲಾಖೆಯ ಜಂಟಿ ನಿರ್ದೇಶಕ ವಿದ್ಯಾನಂದ ನ್ಯೂಸ್ ೧೮ ಗೆ ಸ್ಪಷ್ಟಪಡಿಸಿದ್ದಾರೆ. ಆದರೂ ಬೀದರ್ ಜಿಲ್ಲಾಡಳಿತ ಜಿಲ್ಲೆಯ ಗಡಿ ಭಾಗದ ಎಲ್ಲ ರೈತರನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದ್ದು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೂಲಕ ತಿಳುವಳಿಕೆ ನೀಡುವ ಕಾರ್ಯವನ್ನು ಮಾಡುತ್ತಿದೆ.
ಇದನ್ನೂ ಓದಿ: ಕೋಲಾರದಲ್ಲಿ ಕಾಣಿಸಿಕೊಂಡ ಮಿಡತೆಗಳು; ತೋಟಗಾರಿಕಾ ಇಲಾಖೆ ತಜ್ಞರು ಹೇಳಿದ್ದೇನು?
ಒಂದು ವೇಳೆ ಅಚಾನಕ್ಕಾಗಿ ಬೀದರ್ ಜಿಲ್ಲೆಯತ್ತ ಮಿಡತೆಗಳ ದಂಡು ನುಗ್ಗುವ ಮಾಹಿತಿ ತಿಳಿದರೆ, ಕೂಡಲೇ ರೈತರಿಗೆ ತಿಳಿಸಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿದ್ಯಾನಂದ ತಿಳಿಸಿದ್ದಾರೆ. ಮಿಡತೆಗಳ ಗುಂಪು ಗಾಳಿಯ ದಿಕ್ಕು ಅವಲಂಬಿಸಿ ಹಾರುತ್ತವೆ. ಒಂದು ಮಿಡತೆ ಗುಂಪು ಮಧ್ಯಪ್ರದೇಶಕ್ಕೆ ಹಾರಿದೆ. ಹೀಗಾಗಿ ಇವುಗಳಿಂದ ರಾಜ್ಯಕ್ಕೆ ಸದ್ಯ ಯಾವುದೆ ಅಪಾಯ ಇಲ್ಲದಿದ್ದರೂ ಜಿಲ್ಲಾಡಳಿತ, ಮಹಾರಾಷ್ಟ್ರದ ಸ್ಥಳೀಯ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ಉಳಿದ ಮಿಡತೆ ಗುಂಪುಗಳ ಹಾರಾಟದ ದಿಕ್ಕಿನ ಮೇಲೂ ಹದ್ದಿನ ಕಣ್ಣಿಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ