HOME » NEWS » State » LOCKDOWN RULES ECLIPSE FOR DK SHIVAKUMAR KPCC PRESIDENT OATH CEREMONY MAK

ಡಿಕೆಶಿ ಕೆಪಿಸಿಸಿ ಪದಗ್ರಹಣಕ್ಕೆ ಲಾಕ್‌ಡೌನ್ ರೂಲ್ಸ್ ಗ್ರಹಣ; ಜೂನ್‌ 7ಕ್ಕೂ ನಡೆಯಲ್ಲ ಪ್ರಮಾಣ ವಚನ

ಜೂನ್ 8ರವರೆಗೆ ಯಾವುದೇ ರಾಜಕೀಯ ಕಾರ್ಯಕ್ರಮ ಮಾಡುವ ಹಾಗಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು ಡಿಕೆಶಿ ಪದಗ್ರಹಣಕ್ಕೆ ಸರ್ಕಾರ ಅನುಮತಿ ನಿರಾಕರಿಸಿದೆ.

news18-kannada
Updated:June 1, 2020, 6:48 PM IST
ಡಿಕೆಶಿ ಕೆಪಿಸಿಸಿ ಪದಗ್ರಹಣಕ್ಕೆ ಲಾಕ್‌ಡೌನ್ ರೂಲ್ಸ್ ಗ್ರಹಣ; ಜೂನ್‌ 7ಕ್ಕೂ ನಡೆಯಲ್ಲ ಪ್ರಮಾಣ ವಚನ
ಡಿ.ಕೆ. ಶಿವಕುಮಾರ್
  • Share this:
ಕಾಂಗ್ರೆಸ್‌ ಪಾಲಿನ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್‌ ಅವರನ್ನು ಕೆಪಿಸಿಸಿ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಎರಡು ತಿಂಗಳು ಕಳೆದೇ ಹೋಯಿತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಡಿಕೆಶಿ ಇಷ್ಟೊತ್ತಿಗಾಗಿ ಪದಗ್ರಹಣ ಮುಗಿಸಿ ಅಧಿಕೃತವಾಗಿ ಪಕ್ಷದ ಅಧ್ಯಕ್ಷರಾಗಿ ಫೀಲ್ಡ್‌ಗೆ ಇಳಿಯಬೇಕಿತ್ತು. ಆದರೆ, ಅವರು ಪ್ರಮಾಣ ವಚನ ಸ್ವೀಕರಿಸಲು ಕೊರೋನಾ ಅಡ್ಡಿಯಾಗಿರುವುದು ವಿಪರ್ಯಾಸ.

ಅಸಲಿಗೆ ಕಾಂಗ್ರೆಸ್‌ ಹೈಕಮಾಡ್‌ ಡಿಕೆಶಿ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಘೋಷಿಸುತ್ತಿದ್ದಂತೆ ಇತ್ತ ಕಡೆ ಡಿಕೆಶಿ ಅಭಿಮಾನಿಗಳು ಪದಗ್ರಹಣದ ಕಾರ್ಯಕ್ರಮವನ್ನು ಭರ್ಜರಿಯಾಗಿಯೇ ರೂಪಿಸಿದ್ದರು. ಆದರೆ, ಕೊರೋನಾ ಎಫೆಕ್ಟ್‌ ಮತ್ತು ಲಾಕ್‌ಡೌನ್‌ ಕನಕಪುರದ ಶಾಸಕರ ಆಸೆಗೆ ತಣ್ಣೀರೆರಚಿತ್ತು. ಹೀಗಾಗಿ ಕೊರೋನಾ ಸಮಸ್ಯೆ ಮುಗಿದ ನಂತರ ಪದಗ್ರಹಣ ಸ್ವೀಕರಿಸಿದರಾಯಿತು ಎಂದು ಡಿಕೆಶಿ ಸಹ ಸುಮ್ಮನಿದ್ದರು.

ಆದರೆ, ಕೊರೋನಾ ಸಮಸ್ಯೆ ಸದ್ಯಕ್ಕೆ ನೀಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಹೀಗಾಗಿ ಡಿ.ಕೆ. ಶಿವಕುಮಾರ್ ಅನಿವಾರ್ಯಾವಾಗಿ ಜೂನ್ 7ನೇ ತಾರೀಖು ವಿನೂತನ ವಾಗಿ ಪ್ರತಿಜ್ಞಾ ಹೆಸರಿನಲ್ಲಿ ಪದಗ್ರಹಣ ಇಟ್ಟುಕೊಂಡಿದ್ದರು.

ಜೂನ್‌ 07 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ 150 ಜನ ರಾಜ್ಯ ನಾಯಕರ ಕ್ಷಮಕ್ಷಮದಲ್ಲಿ ಕಾಂಗ್ರಸ್ ಧ್ವಜ ಮತ್ತು ರಾಷ್ಟ್ರ ಧ್ವಜ ಹಾರಸಿ ವಂದೇ ಮಾತರಂ ಗೀತೆಯನ್ನು ಹಾಡುವುದು. ನಂತರ ಸಂವಿಧಾನ ಪೀಠಿಕೆ ಓದುವ ಮೂಲಕ ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕೃತವಾಗಿ ಪದಗ್ರಹಣ ಮಾಡೋ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು.

ರಾಜ್ಯದ 7800 ಕಡೆಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಿಂದ ವಾರ್ಡ್ ವರೆಗೂ ಪ್ರತಿಜ್ಞೆ ಸ್ವೀಕರಿಸೋ ಏರ್ಪಾಟು ನಡೆದಿತ್ತು. ಹಾಗಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮದ ಅನುಮತಿಗಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ‌ಭಾಸ್ಕರ್, ಡಿಜಿಪಿ ಪ್ರವೀಣ್ ಸೂದ್, ಸಿಎಂ ಬಿಎಸ್‌ವೈ ಗೂ ಸಹ ಅನುಮತಿಗಾಗಿ ಮನವಿ ಮಾಡಲಾಗಿತ್ತು. ಲಾಕ್‌ಡೌನ್ 5.0 ಹೊಸ ಮಾರ್ಗಸೂಚಿ ಡಿಕೆಶಿ ಆಸೆಗೆ ತಣ್ಣೀರೆರೆಚಿದೆ.

ಜೂನ್ 8ರವರೆಗೆ ಯಾವುದೇ ರಾಜಕೀಯ ಕಾರ್ಯಕ್ರಮ ಮಾಡುವ ಹಾಗಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು ಡಿಕೆಶಿ ಪದಗ್ರಹಣಕ್ಕೆ ಸರ್ಕಾರ ಅನುಮತಿ ನಿರಾಕರಿಸಿದೆ.

ಸರ್ಕಾರ ಅನುಮತಿ ನಿರಾಕರಿಸದ್ದಕ್ಕೆ ಡಿಕೆಶಿ ಸಿಟ್ಟಿಗೆದ್ದಿದ್ದಾರೆ. "ಕಾರ್ಯಕ್ರಮದ ಎಲ್ಲಾ ಸಿದ್ಧತೆ ಆಗಿದೆ. ಸಾಮಾಜಿಕ ಅಂತರದಲ್ಲೇ ನಾವು ಕೂಡ ಪ್ರತಿಜ್ಞೆ ಸ್ವೀಕರಿಸುತ್ತಿದ್ದೆವು.ಆದರೆ, ರಾಜಕೀಯ ಕಾರಣಕ್ಕಾಗಿ ಅನುಮತಿ ನಿರಾಕರಿಸಲಾಗಿದೆ. ಜೂನ್ 8ನೇ ತಾರೀಖಿನ ಬಳಿಕವಾದರೂ ಅನುಮತಿ ಕೊಡಿ ಎಂದು ಕೇಳಿದ್ದೇವೆ. ಒಂದು ವೇಳೆ ಆಗಲೂ ಅನುಮತಿ ಕೊಡದಿದ್ದರೆ ನಮ್ಮ ಕಾರ್ಯಕರ್ತರಿಂದ ಅಧಿಕಾರಿಗಳಿಗೆ ತೊಂದರೆ ಆಗಲಿದೆ ಎಂದು ಎಚ್ಚರಿಸಿದ್ದಾರೆ. ಅಲ್ಲದೆ, ಅನುಮತಿಗಾಗಿ ಕಾಯುತ್ತೇವೆ ಕೊಡದಿದ್ದರೆ ನನಗೂ ಗೊತ್ತು? ಏನು ಮಾಡಬೇಕು ಎಂದು ಕನಕಪುರ ಬಂಡೆ ಅಬ್ಬರಿಸಿದ್ದಾರೆ. ಒಟ್ಟಲ್ಲಿ ಲಾಕ್‌ಡೌನ್‌ ಕಾರಣದಿಂದಾಗಿ ಡಿಕೆಶಿ ಪದಗ್ರಹಣ ಮುಂದೂಡುತ್ತಲೇ ಇರುವುದು ಕಾಂಗ್ರೆಸ್‌ ಪಾಲಿಗೆ ನುಂಗಲಾರದ ತುತ್ತಾಗಿದೆ.

(ವರದಿ - ಚಿದಾನಂದ ಪಟೇಲ್)

ಇದನ್ನೂ ಓದಿ : 20 ಲಕ್ಷ ಕೋಟಿ ರೂ ಪ್ಯಾಕೇಜ್‌ಗೆ ಹಂತಹಂತವಾಗಿ ಒಪ್ಪಿಗೆ ನೀಡುತ್ತಿರುವ ಕೇಂದ್ರ ಸಂಪುಟ; ಯಾರಿಗೆ ಏನೇನು?
First published: June 1, 2020, 6:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading