ಬಿಜೆಪಿ ಮಡಿಲಿಗೆ ಶಿವಮೊಗ್ಗ ಮಹಾನಗರ ಪಾಲಿಕೆ: ಕಾಂಗ್ರೆಸ್, ಜೆಡಿಎಸ್​ಗೆ ಮುಖಭಂಗ

news18
Updated:September 3, 2018, 5:39 PM IST
ಬಿಜೆಪಿ ಮಡಿಲಿಗೆ ಶಿವಮೊಗ್ಗ ಮಹಾನಗರ ಪಾಲಿಕೆ: ಕಾಂಗ್ರೆಸ್, ಜೆಡಿಎಸ್​ಗೆ ಮುಖಭಂಗ
news18
Updated: September 3, 2018, 5:39 PM IST
- ನಾಗರಾಜ್, ನ್ಯೂಸ್ 18 ಕನ್ನಡ 

ಶಿವಮೊಗ್ಗ (ಸೆ.03) : ತೀವ್ರ ಕುತೂಹಲ ಕೆರಳಿಸಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಮತದಾರ ಪ್ರಭುಗಳು ಕಮಲದ ಹೂವಿನ ಚಿನ್ಹೆಯನ್ನು ಕೈಹಿಡಿದಿದ್ದಾರೆ. 35 ವಾರ್ಡ್ ಗಳ ಮಹಾನಗರ ಪಾಲಿಕೆಯಲ್ಲಿ 20 ವಾರ್ಡ್ ಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಳೆದ ಬಾರಿ ಮೈತ್ರಿ ಆಡಳಿತ ನಡೆಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಬಾರಿ ಮುಖಭಂಗವಾಗಿದೆ.

ಶಿವಮೊಗ್ಗ ಮಹಾನಗರ ಪಾಲಿಕೆಯ 35 ಸ್ಥಾನಗಳಲ್ಲಿ ಬಿಜೆಪಿ 20, ಜೆಡಿಎಸ್ 02, ಕಾಂಗ್ರೆಸ್ 07, ಎಸ್ ಡಿ ಪಿ ಐ 1 ಸ್ಥಾನದಲ್ಲಿ ಜಯಗಳಿಸಿವೆ. 5 ವಾರ್ಡ್ ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪ್ರಾಭಲ್ಯ ಮೆರೆದಿದೆ. ಕಳೆದ ಬಾರಿ ಮೈತ್ರಿ ಆಡಳಿತ ನಡೆಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮುಗ್ಗರಿಸಿವೆ. ಶಿವಮೊಗ್ಗ ನಗರದ ಜನತೆ, ಕಮಲದ ಹೂವಿಗೆ ಜೈ ಎಂದಿದ್ದಾರೆ.  35 ವಾರ್ಡ್ ಗಳಲ್ಲಿ 20 ವಾರ್ಡ್ ಗೆಲ್ಲುವ ಮೂಲಕ ಬಿಜೆಪಿಗೆ ಬಹುಮತ ಸಿಕ್ಕಿದೆ.

ಇನ್ನು ಬಿಜೆಪಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂದಿದ್ದರೂ, ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪನವರ ಮನೆ ಇರುವಂತ ವಾರ್ಡ್ ನಲ್ಲಿ ಬಿಜೆಪಿ ಸೋತಿದೆ.  ಮಲ್ಲೇಶ್ವರ ನಗರ ವಾರ್ಡ್ ನಂಬರ್ ನಾಲ್ಕರಲ್ಲಿ ಈಶ್ವರಪ್ಪನವರ ಮನೆ ಇದ್ದು, ಈ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್, ಜಯ ಗಳಿಸಿದ್ದಾರೆ. ಇದು ಈಶ್ವರಪ್ಪನವರಿಗೆ ತೀವ್ರ ಮುಜುಗರ ತರಿಸುವ ಸಂಗತಿಯಾಗಿದೆ.

ಇನ್ನು ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡ ಅವರ ಮನೆ ಇರುವ ವಾರ್ಡ್ ನಲ್ಲಿ ಸಹ ಇದೇ ಕತೆಯಾಗಿದೆ. ಗಾಂಧಿನಗರ ವಾರ್ಡ್ ನಂಬರ್ 9 ರಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ಕಂಡಿದ್ದಾರೆ. ಇಲ್ಲಿ ಜೆಡಿಎಸ್ ಅಭ್ಯರ್ಥಿ ನಾಗರಾಜ್ ಕಂಕಾರಿ ಜಯ ಗಳಿಸಿದ್ದಾರೆ. ಇದು ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡರಿಗೆ ಮುಜುಗರ ತರುವ ಸಂಗತಿಯಾಗಿದೆ.

ಇನ್ನು  ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಗೆದ್ದ ಹಿನ್ನಲೆಯಲ್ಲಿ ಬಿಜೆಪಿ ಶಾಸಕ ಈಶ್ವರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿದ್ದು, ಇದು ಬಿಜೆಪಿ ಕಾರ್ಯಕರ್ತರ ಶ್ರಮ.  ಹಿಂದುತ್ವದ ಆಧಾರದ ಮೇಲೆ ಗೆದ್ದಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆಯ ಮೊದಲ ಚುನಾವಣೆಯಲ್ಲೇ ಬಿಜೆಪಿಗೆ ಅಭೂತಪೂರ್ವ ಗೆಲುವು ದೊರೆತಿದೆ.

ವಿಧಾನಸಭಾ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮತ ಪಡೆದು ನಾನು ಗೆಲುವು ಸಾಧಿಸಿದ್ದೆ. ವಿಧಾನಸಭಾ ಚುನಾವಣೆಯ ಗೆಲುವು ಇಲ್ಲಿ ಕೂಡ ಮುಂದುವರೆದಿದೆ ಎಂದು ತಿಳಿಸಿದ್ದಾರೆ.  ಶಿವಮೊಗ್ಗ ನಗರದ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿ ಬದ್ದವಾಗಿರಲಿದೆ ಎಂದು ಹೇಳಿದ್ದಾರೆ. ನಗರದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇನ್ನು ಹರಿಗೆ ವಾರ್ಡ್ ನಂಬರ್ 15 ರಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್ ಅಭ್ಯರ್ಥಿಗಳು ಸಮ ಮತಗಳನ್ನು ಗಳಿಸಿದ್ದರು. ಕಾಂಗ್ರೆಸ್ ನ ರಾಜಶೇಖರ್ ಮತ್ತು ಜೆಡಿಎಸ್ ನ ಸತ್ಯನಾರಾಯಣ ಇಬ್ಬರು ಸಹ  ತಲಾ 1708 ಮತಗಳನ್ನು ಗಳಿಸಿದ್ದರು. ಈ ವೇಳೆ ಮತ್ತೆ ಮರು ಎಣಿಕೆ ನಡೆಸಲಾಯಿತು. ಅಗಲೂ 1708 ಮತಗಳು ಇಬ್ಬರಿಗೂ ಬಂದವು. ಈ ವೇಳೆ ಚುನಾವಣಾಧಿಕಾರಿಗಳು  ಚೀಟಿ ಎತ್ತುವ ಮೂಲಕ  ಅಭ್ಯರ್ಥಿಯ ಆಯ್ಕೆ ಮಾಡಲಾಯಿತು. ಆಗ ಅದೃಷ್ಟ ಜೆಡಿಎಸ್ ಅಭ್ಯರ್ಥಿಗೆ ಒಲಿಯಿತು. ಜೆಡಿಎಸ್ ನ ಸತ್ಯನಾರಾಯಣ ಚೀಟಿಯ ಮೂಲಕ ಗೆಲುವು ಸಾಧಿಸಿದರು.

ಕಳೆದ ಬಾರಿ 12 ಸ್ಥಾನಗಳಲ್ಲಿ ಜಯ ಗಳಿಸಿದ್ದ ಕಾಂಗ್ರೆಸ್ ಈಗ ಬಾರಿ ಕೇವಲ 7 ಸ್ಥಾನಗಳನ್ನು ಮಾತ್ರ ಗಳಿಸಿದೆ.  ಕಳೆದ ಬಾರಿ 5 ಸ್ಥಾನ ಗಳಿಸಿದ್ದ ಜೆಡಿಎಸ್ ಈ ಬಾರಿ 2 ಸ್ಥಾನಗಳಿಗೆ ತೃಪ್ತಿ ಪಟ್ಟಿಕೊಳ್ಳುವ ಸ್ಥಿತಿ ಬಂದೋದಗಿದೆ. ಕಳೆದ ಬಾರಿ ಬಿಜೆಪಿ 08 ಸ್ಥಾನ ಮತ್ತು ಕೆಜೆಪಿ 7 ಸ್ಥಾನ ಗಳಿಸಿತ್ತು. ಆಗ ಅಧಿಕಾರ ಕಳೆದುಕೊಂಡಿದ್ದ ಬಿಜೆಪಿ ಈ ಬಾರಿ 20 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿದಿದೆ. ಕಳೆದ ಬಾರಿ ಒಂದು ಸ್ಥಾನ ಗಳಿಸಿದ್ದ ಎಸ್ ಡಿ ಪಿಐ ಈ ಬಾರಿಯೂ ಒಂದು ಸ್ಥಾನ ಗಳಿಸಿದೆ. ಇನ್ನು ಪಕ್ಷೇತರರು 5 ಸ್ಥಾನಗಲ್ಲಿ ಈ ಬಾರಿ ಗೆಲುವು ಸಾಧಿಸಿದ್ದಾರೆ.

ಇನ್ನು ಗೆದ್ದ ಅಭ್ಯರ್ಥಿಗಳು ನಗರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂತಸ ವ್ಯಕ್ತಪಡಿಸಿದ್ದಾರೆ. ವಾರ್ಡ್ ಗಳಲ್ಲಿ ಇರುವಂತ ಸಮಸ್ಯೆಗಳನ್ನು ಬಗೆ ಹರಿಸುವ ಬರವಸೆ ನೀಡಿದ್ದಾರೆ.

ಗೆದ್ದ ಅಭ್ಯರ್ಥಿಗಳು ಸಂಭ್ರಮಾಚರಣೆ ಮಾಡಿದರು, ಒಟ್ಟಾರೆ  ಶಿವಮೊಗ್ಗ ಮಹಾ ನಗರ ಪಾಲಿಕೆಯಲ್ಲಿ ನಗರದ ಜನತೆ ಬಿಜೆಪಿಗೆ ಜೈ ಎಂದಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್​ಗೆ  ತೀವ್ರ ಮುಖಭಂಗ ಅನುಭವಿಸಿದೆ.

 

 
First published:September 3, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ