ಶಿವಮೊಗ್ಗ (ನ.29): ಭದ್ರಾವತಿಯ ವಿಐಎಸ್ ಎಲ್ ಕಾರ್ಖಾನೆಗೆ ಸರ್ಕಾರದ ಸೌಮ್ಯದಲ್ಲೇ ಉಳಿಸಬೇಕು ಎಂಬುದು ತಾಲೂಕಿನ ಜನರ ಆಶಯವಾಗಿದೆ. ಕೇಂದ್ರ ಸರ್ಕಾರ ರೋಗಗ್ರಸ್ತ ಕಾರ್ಖಾನೆ ಪಟ್ಟಿಗೆ ವಿಐಎಸ್ ಎಲ್ ಕಾರ್ಖಾನೆಗೆ ಸೇರಿಸಿದ್ದು, ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿದೆ. ಖಾಸಗಿಯವರು ಖರೀದಿ ಮಾಡದೇ ಹೋದರೆ, ಕಾರ್ಖಾನೆ ಬಾಗಿಲು ಮುಚ್ಚುವುದು ಗ್ಯಾರಂಟಿಯಾಗಿದೆ. ಹೀಗಾಗಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಮತ್ತು ಖಾಯಂ ನೌಕರರ ಭವಿಷ್ಯ ಡೋಲಾಯಮಾನವಾಗಿದೆ. ಈಗಾಗಲೇ ಎಪಿಎಂ ಕಾರ್ಖಾನೆ ಬಾಗಿಲು ಮುಚ್ಚಿದ್ದು, ತಾಲೂಕಿನ ಆರ್ಥಿಕ ವ್ಯವಸ್ಥೆ ಮೇಲೆ ಬಾರಿ ಪೆಟ್ಟು ಬಿದ್ದಿದೆ. ಸಾವಿರಾರೂ ಕುಟುಂಬಗಳು ಬೀದಿಗೆ ಬಂದಿವೆ. ಇದರ ಜೊತೆಗೆ ಈಗ ವಿಐಎಸ್ ಎಲ್ ಕಾರ್ಖಾನೆ ಮೇಲೆ ಸಹ ಕರಿ ನೆರಳು ಆವರಿಸಿದ್ದು, ತಾಲೂಕಿನ ಜನರಲ್ಲಿ ಆತಂಕ ಶುರುವಾಗಿದೆ. 103 ವರ್ಷಗಳ ಇತಿಹಾಸ ಇರುವಂತ ಕಾರ್ಖಾನೆ ಜೊತೆಗೆ ಭದ್ರಾವತಿ ತಾಲೂಕಿನ ಜನರು ಅವಿನಾಭಾವ ಸಂಬಂಧ ಹೊಂದಿದ್ದಾರೆ. ತಾಲೂಕಿನ ಸಾವಿರಾರೂ ಕುಟುಂಬಗಳಿಗೆ ಈ ಕಾರ್ಖಾನೆ ಆಧಾರ ಸ್ತಂಭವಾಗಿತ್ತು. ಹೀಗಾಗಿ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಖಾಸಗಿಕರಣ ಮಾಡಬಾರದು ಎಂಬುದು ಇಲ್ಲಿಯ ಜನರ ಆಗ್ರಹ.
ಇಷ್ಟು ದಿನ ಕಾರ್ಖಾನೆ ಉಳಿಸುತ್ತೇವೆ ಎಂಬ ಭರವಸೆ ನೀಡಿದ್ದವರು ಈಗ ಖಾಸಗಿಕರಣಕ್ಕೆ ಮುಂದಾಗಿದ್ದಾರೆ. ಇವರ ವಿರುದ್ಧ ಹೋರಾಟಕ್ಕೂ ವೇದಿಕೆ ಸಿದ್ಧಗೊಳ್ಳುತ್ತಿದೆ. ವಿಐಎಸ್ ಎಲ್ ಉಳಿಸಿ ಹೋರಾಟ ಸಮಿತಿ ರಚನೆ ಮಾಡಿಕೊಂಡು ಹೋರಾಟದ ರೂಪುರೇಷೆ ಸಿದ್ಧಪಡಿಸಿಕೊಳ್ಳಲಾಗಿದೆ. ಕಾರ್ಖಾನೆ ಉಳಿವಿಗಾಗಿ ಪಕ್ಷ ಭೇದ ಮರೆತು ಎಲ್ಲರೂ ಒಂದಾಗಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷ ಸೇರಿದಂತೆ ತಾಲೂಕಿನ ಹಲವು ಸಂಘಟನೆಗಳು ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಹೋರಾಟಕ್ಕೆ ಸಿದ್ಧವಾಗಿದ್ದಾರೆ.
ರಾಜ್ಯ ಸರ್ಕಾರ 1989-90 ರಲ್ಲಿ ಕೇಂದ್ರ ಸರ್ಕಾರ ಮತ್ತು ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಕೇವಲ 1 ರೂಪಾಯಿಗೆ ಕಾರ್ಖಾನೆ ಸೇರಿದಂತೆ ಅದರ ಎಲ್ಲಾ ಆಸ್ತಿಗಳನ್ನು ನೀಡಿತ್ತು. ಅದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಉಳಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು. ಕಾರ್ಖಾನೆಯಲ್ಲಿ 220 ಜನ ಖಾಯಂ, 1300 ಜನ ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಭರವಸೆ ನೀಡಿದಂತೆ ರಾಜಕೀಯ ಮುಖಂಡರು, ಕಾರ್ಖಾನೆ ಉಳಿಸಿಕೊಡಬೇಕು.
ಮೊದಲ ಹಂತವಾಗಿ ಸಂಸದ ರಾಘವೇಂದ್ರ ಮತ್ತು ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ ಚರ್ಚೆ ನಡೆಸಲು ಚಿಂತನೆ ಮಾಡಲಾಗಿದೆ. ನಂತರ ಮಾಜಿ ಪ್ರಧಾನಿ ದೇವೇಗೌಡರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಸಂಪರ್ಕ ಮಾಡಿ ಕಾರ್ಖಾನೆ ಉಳಿಸುವ ಬಗ್ಗೆ ಮನವಿ ಮಾಡಿಕೊಳ್ಳಲಾಗುವುದು. ಕಾರ್ಖಾನೆ ಖಾಸಗಿಯವರಿಗೆ ನೀಡಿದರೆ, ನಿವೃತ್ತ ಕಾರ್ಮಿಕರು ಇರುವಂತ ಕಾರ್ಖಾನೆಯ ಮನೆಗಳನ್ನು ತೆರವುಗೊಳಿಸುತ್ತಾರೆ ಎಂಬ ವದಂತಿ ಇದೆ. 3 ಸಾವಿರಕ್ಕೂ ಹೆಚ್ಚು ಜನ ನಿವೃತ್ತ ಕಾರ್ಮಿಕರು ಕಾರ್ಖಾನೆಯ ಕ್ವಾಟ್ರಸ್ ನಲ್ಲಿ ವಾಸ ಮಾಡುತ್ತಿದ್ದಾರೆ. ಅವರು ಸಹ ಆತಂಕಕ್ಕೆ ಒಳಗಾಗಿದ್ದಾರೆ. ಭದ್ರಾವತಿ ತಾಲೂಕಿನ ಜನರು ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಸಿಎಂ ತವರಿನಲ್ಲಿ ಕಾರ್ಖಾನೆ ಉಳಿವಿಗಾಗಿ ಎಲ್ಲರೂ ಒಂದಾಗಿದ್ದಾರೆ. ಈಗಲಾದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾರ್ಖಾನೆ ಉಳಿವಿಗೆ ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ