Kodagu: ಕೋಟೆ ಬೆಟ್ಟ-ಮೇದೂರನ್ನು ಪ್ರವಾಸಿ ತಾಣಗಳೆಂದು ಘೋಷಿಸಲು ಒತ್ತಾಯ 

ಕೋಟೆ ಬೆಟ್ಟವನ್ನು ಜಿಲ್ಲಾಡಳಿತ ಪ್ರವಾಸಿತಾಣ ಎಂದು ಘೋಷಿಸದೆ ಮೂಲಭೂತ ಸೌಕರ್ಯದಿಂದ ವಂಚಿಸಲಾಗಿದೆ. ಹೀಗಾಗಿಯೇ ಕೋಟೆ ಬೆಟ್ಟ ಮತ್ತು ಮೇದುರ ಹೊಳೆಯನ್ನು ಪ್ರವಾಸಿ ತಾಣ ಎಂದು ಘೋಷಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರತಿಭಟನೆ ನಡೆಸಿದ ಸ್ಥಳೀಯರು

ಪ್ರತಿಭಟನೆ ನಡೆಸಿದ ಸ್ಥಳೀಯರು

  • Share this:
ಕೊಡಗು(ಅ.04): ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ವ್ಯಾಪ್ತಿಯ ಶಿರಂಗಳ್ಳಿಯಲ್ಲಿ ಗ್ರಾಮಸ್ಥರು ಭಾನುವಾರ ರಸ್ತೆ ತಡೆ ಮಾಡಿ ಪ್ರತಿಭಟಿಸಿದರು. ಮಾದಾಪುರದಿಂದ ಶಿರಂಗಳ್ಳಿ ಮಾರ್ಗವಾಗಿ ಗರ್ವಾಲೆ, ಸೂರ್ಲಬ್ಬಿಗೆ ತೆರಳುವ ರಸ್ತೆಯು ತುಂಬಾ ಕಿರಿದಾಗಿದ್ದು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಮಳೆಗಾಲದಲ್ಲಿ ಕಾಡು ಕಡಿಯದೆ ರಸ್ತೆಯನ್ನು ನಿರ್ಲಕ್ಷಿಸುತ್ತಿದ್ದು, ಕೋಟೆಬೆಟ್ಟಕ್ಕೆ ಮತ್ತು ಮಲ್ಲಳ್ಳಿ ಜಲಪಾತ, ಮೇದುರ ಜಲಪಾತಕ್ಕೆ ತೆರಳುವ ರಸ್ತೆಗಳೇ ಕಾಣದಂತೆ ಆಗಿವೆ. ಈ ರಸ್ತೆಗಳಲ್ಲಿ ಓಡಾಡುವ ಪ್ರವಾಸಿಗರು ಅತಿವೇಗದಲ್ಲಿ ವಾಹನಗಳ ಚಾಲಾಯಿಸುತ್ತಿದ್ದು, ಗ್ರಾಮಸ್ಥರು ಹಲವು ಅಪಘಾತಕ್ಕೆ ತುತ್ತಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಟೆ ಬೆಟ್ಟವನ್ನು ಜಿಲ್ಲಾಡಳಿತ ಪ್ರವಾಸಿತಾಣ ಎಂದು ಘೋಷಿಸದೆ ಮೂಲಭೂತ ಸೌಕರ್ಯದಿಂದ ವಂಚಿಸಲಾಗಿದೆ. ಅಲ್ಲಿನ ಪರಿಸರ ಪ್ರವಾಸಿಗರ ತ್ಯಾಜ್ಯಗಳಿಂದ ತುಂಬಿ ಹೋಗಿದ್ದು, ಕನಿಷ್ಟ ಶೌಚಾಲಯ, ನೀರಿನ ವ್ಯವಸ್ಥೆ ಇರುವುದಿಲ್ಲ. ಇದನ್ನು ಮನಗಂಡು ಅಲ್ಲಿನ ದೇವಸ್ಥಾನ ಸಮಿತಿಯವರು ಮತ್ತು ಊರಿನ ಅಭಿವೃದ್ಧಿ ಸಮಿತಿಯವರು ಪ್ರತಿ  ವಾಹನವನ್ನು ತಡೆದು ಸುಂಕ ವಸೂಲು ಮಾಡುತ್ತಿದ್ದಾರೆ. ಈ ಕುರಿತು ಜಿಲ್ಲಾಡಳಿತಕ್ಕೆ ದೂರು ಸಲ್ಲಿಕೆಯಾಗಿದೆ. ಆದರೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಅನ್ನೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Chikkamagalur and Madikeri are favorite vacation spots of people in Karnataka this season
ಸಾಂದರ್ಭಿಕ ಚಿತ್ರ (ಚಿತ್ರಕೃಪೆ: ಸುಧಾಕರ್)


ಈ ಸಂದರ್ಭ ಗ್ರಾಮಸ್ಥರಾದ ಉಡುವೆರಾ ಗೈನಿಕ ಶಿವ ಮಾತನಾಡಿ, ರಸ್ತೆಯು ಬಹಳ ಕಿರಿದಾಗಿದ್ದು ಬಸ್ ಸಂಚಾರ ತುಂಬಾ ದುಸ್ತರವಾಗಿದೆ. ಶಾಲಾ ಮಕ್ಕಳು ಮತ್ತು ಕಾರ್ಮಿಕರು ತಮ್ಮ ಕೆಲಸಕಾರ್ಯಗಳಿಗೆ ತೆರಳಲು ತುಂಬಾ ಕಷ್ಟಪಡಬೇಕಾಗಿದೆ ಎಂದರು. ಶಿರಂಗಳ್ಳಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕಾರ್ಯಪ್ಪ ಮಾತನಾಡಿ ನಾವು ಈಗಾಗಲೇ ಜಿಲ್ಲಾಧಿಕಾರಿ, ಅರಣ್ಯಾಧಿಕಾರಿ, ಜಿಲ್ಲಾ ಪಂಚಾಯತ್ ಎಲ್ಲರಿಗೂ ಮನವಿಯನ್ನು ಸಲ್ಲಿಸಲಾಗಿದೆ. ಜಿಲ್ಲಾಡಳಿತ ಕೂಡಲೇ ಇತ್ತ ಗಮನಹರಿಸಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Kodagu: ಕಡೆಗೂ ಅನ್​ಲಾಕ್ ಆದ ಕೊಡಗು​; ಕೋವಿಡ್​​ ನಿಯಮ ಪಾಲಿಸುವುದು ಕಡ್ಡಾಯ

ನಮ್ಮ ಗ್ರಾಮದ ರಸ್ತೆಯು ಐವತ್ತು ವರ್ಷದಿಂದ ಅಭಿವೃದ್ಧಿ ಕಂಡಿಲ್ಲ. ಆಗ ಬೆರಳಣಿಕೆಯಷ್ಟು ವಾಹನಗಳು ಓಡಾಡುತಿದ್ದು, ಈಗ ಪ್ರವಾಸಿಗಳ ದಂಡೇ ಹರಿದುಬರುತ್ತಿದೆ ಎಂದರು. ಆದುದರಿಂದ ನಮ್ಮ ಮನವಿಗೆ ಆದಷ್ಟು ಬೇಗ ಸ್ಪಂದಿಸಬೇಕೆಂದು ಒತ್ತಾಯಿಸಿದ್ದಾರೆ. ಗ್ರಾಮ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೊರ್ಕಂಡ ಸಚಿನ್ ಮಾತನಾಡಿ ಅನಧಿಕೃತ ಸುಂಕ ವಸೂಲಾತಿಯ ಬಗ್ಗೆ ನಾವು ಜಿಲ್ಲಾಡಳಿತ ಮತ್ತು ಇದಕ್ಕೆ ಸಂಬಂಧಪಟ್ಟ ಹಲವು ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಏನು ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೊಡಗು ಜಿಲ್ಲೆ ವಾರದಲ್ಲಿ ಐದು ದಿನ ಸಂಪೂರ್ಣ ಲಾಕ್ ಡೌನ್; ಜಿಲ್ಲಾಡಳಿತ ಆದೇಶ

ಮಲ್ಲಳ್ಳಿ,  ಕೋಟೆಬೆಟ್ಟ, ಮೇದುರ ಹೊಳೆ ಕಡೆ ಹೋಗುವ ಪ್ರವಾಸಿಗರು ರಸ್ತೆಯ ಬಗ್ಗೆ ಮಾಹಿತಿ ಇಲ್ಲದೆ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆ ಮಾಡುತ್ತಿದ್ದಾರೆ. ಲೋಕೋಪಯೋಗಿ ಇಲಾಖೆ ಕೂಡ ರಸ್ತೆ ಬಗ್ಗೆ ಮಾಹಿತಿ ಫಲಕ ಹಾಕಿಲ್ಲ. ಗ್ರಾಮ ಪಂಚಾಯಿತಿಯವರು ಇದರ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ನೀಡಿ ಕೋಟೆ ಬೆಟ್ಟ ಮತ್ತು ಮೇದುರ ಹೊಳೆಯನ್ನು ಪ್ರವಾಸಿ ತಾಣ ಎಂದು ಘೋಷಿಸಬೇಕು ಎಂದಿದ್ದಾರೆ.  ಊರಿನ ಜನರಿಗೆ ಕೃಷಿ ಆದಾಯ ಒಂದು ಬಿಟ್ಟರೆ ಬೇರೆ ಆದಾಯವಿರುವುದಿಲ್ಲ. ಇದು ಪ್ರವಾಸಿ ತಾಣವಾದರೆ ತಮಗೆ ಉಪ ಕಸುಬು ದೊರೆಯುತ್ತದೆ ಎಂದು ಆಗ್ರಹಿಸಿದ್ದಾರೆ.
Published by:Anitha E
First published: