ಸ್ಥಳೀಯ ಸಂಸ್ಥೆ ಚುನಾವಣೆ: ಮತ ಎಣಿಕೆ ಆರಂಭ, ಯಾರಿಗೆ ಸಿಗಲಿದೆ ಗೆಲುವು?


Updated:September 3, 2018, 8:45 AM IST
ಸ್ಥಳೀಯ ಸಂಸ್ಥೆ ಚುನಾವಣೆ: ಮತ ಎಣಿಕೆ ಆರಂಭ, ಯಾರಿಗೆ ಸಿಗಲಿದೆ ಗೆಲುವು?
  • Share this:
ನ್ಯೂಸ್​-18 ಕನ್ನಡ

ಬೆಂಗಳೂರು(ಸೆಪ್ಟೆಂಬರ್​​.03): ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಮೊದಲ ಅಗ್ನಿ ಪರೀಕ್ಷೆ ಎದುರಾಗಿದೆ. ಸ್ಥಳೀಯ ಸಂಸ್ಥೆಯ ಚುನಾವಣೆ ಫಲಿತಾಂಶ ಇಂದು(ಸೆಂ​.03) ಹೊರ ಬೀಳಲಿದ್ದು, ಭಾರೀ ಕುತೂಹಲ ಕೆರಳಿಸಿದೆ. ರಾಜ್ಯದ 105 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮತ ಎಣಿಕೆ ಕಾರ್ಯ ಶುರುವಾಗಿದ್ದು, ಮಧ್ಯಾಹ್ನದ ವೇಳೆಗೆ ಸಂಪೂರ್ಣ ಫ‌ಲಿತಾಂಶ ಚಿತ್ರಣ ಸಿಗುವ ಸಾಧ್ಯತೆಯಿದೆ.

ರಾಜ್ಯ ಚುನಾವಣ ಆಯೋಗದ ಆದೇಶದ ಮೇರೆಗೆ ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ  ಸಕಲ ಸಿದ್ಧತೆ ಮಾಡಿಕೊಂಡಿದೆ. ಮಹಾನಗರ ಪಾಲಿಕೆಗಳ ಮತ ಎಣಿಕೆ ಕಾರ್ಯ ಜಿಲ್ಲಾ ಕೇಂದ್ರಗಳಲ್ಲಿ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ ಚುನಾವಣೆ ಮತ ಎಣಿಕೆ ತಾಲೂಕು ಕೇಂದ್ರಗಳಲ್ಲಿ ನಡೆಯುತ್ತಿದೆ.

ಮತ ಎಣಿಕೆ ಕಾರ್ಯ ಸಲುವಾಗಿ ಸಿಬಂದಿಗೆ ಅಧಿಕಾರಿಗಳು ತರಬೇತಿ ನೀಡಿದ್ದಾರೆ. ಅಲ್ಲದೇ ಮತ ಎಣಿಕೆ ಕಾರ್ಯದ ಸಿದ್ಧತೆಗಳ ಬಗ್ಗೆ ಕ್ಷಣಕ್ಷಣದ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಪಡೆಯುತ್ತಿದ್ದಾರೆ. ಇನ್ನು ಯಾವುದೇ ಗಲಭೆ ನಡೆಯದಂತೆ ತಡೆಯುವ ಹಿನ್ನೆಲ್ಲೆಯಲ್ಲಿ ಮುನ್ನೆಚ್ಚರ ಕ್ರಮಕೈಗೊಂಡಿದ್ಧಾರೆ.

ಮೈಸೂರು, ತುಮಕೂರು, ಶಿವಮೊಗ್ಗ ಮಹಾ ನಗರಪಾಲಿಕೆಗಳ ಒಟ್ಟು 135 ವಾರ್ಡ್‌ಗಳು, 29 ನಗರಸಭೆ, 53 ಪುರಸಭೆ, 20 ಪಟ್ಟಣ ಪಂಚಾಯತ್‌ಗಳ ಸಮೇತ ಒಟ್ಟು 102 ನಗರ ಸ್ಥಳೀಯ ಸಂಸ್ಥೆಗಳ 2,497 ವಾರ್ಡ್‌ಗಳಿಗೆ ಮತ ಎಣಿಕೆ ನಡೆಯುತ್ತಿದ್ದು, ಗರಿಷ್ಠ 13 ಸುತ್ತುಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಆಯೋಗ ಮೂಲಗಳು ತಿಳಿಸಿವೆ.

ಕಳೆದ ಆಗಸ್ಟ್​.31ರಂದು 105 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ರಾಜ್ಯದಲ್ಲಿ ಒಟ್ಟಾಗಿ ಆಡಳಿತ ನಡೆಸುತ್ತಿರುವ ಜೆಡಿಎಸ್​ ಕಾಂಗ್ರೆಸ್​ ಪಕ್ಷಗಳು ಕೂಡ, ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳದೆ ಪ್ರತ್ಯೇಕ ಸ್ಪರ್ಧಿಸಿದ್ದವು. ಹೀಗಾಗಿ ತ್ರಿಕೋನ ಸ್ಪರ್ಧೆಯಲ್ಲಿ ಯಾರು ಗೆಲ್ಲಲಿದ್ದಾರೆ ಎನ್ನುವ ಕಾತುರ ಹೆಚ್ಚಾಗಿದೆ.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರದಲ್ಲಿ ನಡೆದ ಮೊದಲ ಚುನಾವಣೆ ಇದಾಗಿದೆ. ಪಕ್ಷಗಳು ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯನ್ನು ಬಲಪಡಿಸಿಕೊಳ್ಳಲು ಚುನಾವಣೆ ಸಹಾಯಕವಾಗಲಿದೆ. ಅಲ್ಲದೇ ಕಳೆದ ಬಾರಿ ಗೆದ್ದ ಸ್ಥಳೀಯ ಸಂಸ್ಥೆಗಳನ್ನು ಉಳಿಸಿಕೊಳ್ಳಲು ಮೂರು ಪಕ್ಷಗಳು ಪ್ರಯತ್ನ ನಡೆಸುತ್ತಿವೆ.
First published: September 3, 2018, 8:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading