ಉತ್ತರ ಕನ್ನಡದಲ್ಲಿ ಕಾಂಗ್ರೆಸ್​​, ಬಿಜೆಪಿ ಸಮಬಲ ; 2 ಕಡೆ ಪಕ್ಷೇತರರೇ ನಿರ್ಣಾಯಕ...!

news18
Updated:September 3, 2018, 9:13 PM IST
ಉತ್ತರ ಕನ್ನಡದಲ್ಲಿ ಕಾಂಗ್ರೆಸ್​​, ಬಿಜೆಪಿ ಸಮಬಲ ; 2 ಕಡೆ ಪಕ್ಷೇತರರೇ ನಿರ್ಣಾಯಕ...!
news18
Updated: September 3, 2018, 9:13 PM IST
- ರಾಜೇಂದ್ರ ಸಿಂಗನಮನೆ, ನ್ಯೂಸ್ 18 ಕನ್ನಡ

ಶಿರಸಿ( ಸೆ.03) :  ಉತ್ತರ ಕನ್ನಡದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಪಕ್ಷದ ಹಿಡಿತ ಸಡಿಲವಾಗಿದೆ. 8 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಇದೀಗ 4ಕ್ಕೆ ತೃಪ್ತಿಪಟ್ಟುಕೊಂಡಿದೆ. ವಿಧಾನಸಭೆ ಚುನಾವಣೆಯಿಂದ ಬಿಜೆಪಿ ತನ್ನ ನಾಗಾಲೋಟ ಆರಂಭಿಸಿದ್ದು ಈಗಲೂ ಮುಂದುವರೆಸಿದೆ. ಉಸ್ತುವಾರಿ ಸಚಿವ ಸಚಿವ ಆರ್.ವಿ.ದೇಶಪಾಂಡೆ ತವರು ಜಿಲ್ಲೆಯಲ್ಲಿ ಬಿಜೆಪಿ ಗೆಲುವಿನ ಅಲೆ ಹೆಚ್ಚುತ್ತಿದ್ದು ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ನಿಚ್ಛಳವಾಗಿದೆ.

ವಿಧಾನಸಭಾ ಚುನಾವಣೆಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಅಲೆ ಸೃಷ್ಠಿ ಯಾಗಿದ್ದು, ಇದೀಗ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದ ಮೇಲೂ ಪರಿಣಾಮ ಬೀರಿದೆ. ಕುಮಟಾದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ವಾಷ್ ಔಟ್ ಆದರೆ ಕಮಲ ಪಕ್ಷ 16 ಸ್ಥಾನಗಳನ್ನು ಪಡೆದು ಪುರಸಭೆಯ ಚುಕ್ಕಾಣಿ ಹಿಡಿಯಲು ತಯಾರಿ ನಡೆಸಿದೆ.

ಇನ್ನು ಶಿರಸಿಯಲ್ಲಿ ಕೂಡ 31 ಸ್ಥಾನಗಳಲ್ಲಿ 17 ಸ್ಥಾನ ಪಡೆದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಮೊದಲು ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ 9 ಸ್ಥಾನ ಪಡೆಯುವ ಮೂಲಕ ಹೀನಾಯ ಪ್ರದರ್ಶನ ನೀಡಿದೆ.  ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ಮುಂಡಗೋಡ ಪಟ್ಟಣ ಪಂಚಾಯ್ತಿಯನ್ನು ಈ ಬಾರಿ ಬಿಜೆಪಿ ಛಿದ್ರಗೊಳಿಸಿದೆ. 19 ಸ್ಥಾನ ಬಲಾಬಲದ ಮುಂಡಗೋಡ ಪಟ್ಟಣ ಪಂಚಾಯ್ತಿಯಲ್ಲಿ 10 ಸ್ಥಾನವನ್ನು ತೆಕ್ಕೆಗೆ ಸೆಳೆದುಕೊಂಡಿರುವ ಬಂದ ಬಿಜೆಪಿ ಗೆಲುವಿನ ನಗೆ ಬೀರಿದ್ದು ಕಾಂಗ್ರೆಸ್ ಗೆ ಭಾರೀ ಮುಖಭಂಗವಾಗಿದೆ.

ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದ್ದು 8 ಸ್ಥಳೀಯ ಸಂಸ್ಥೆಗಳಲ್ಲಿ 4 ಸ್ಥಾನಗಳನ್ನು ಉಳಿಸಿಕೊಳ್ಳಲು ಹೆಣಗಿದೆ. ಯಲ್ಲಾಪುರ ಪಟ್ಟಣ ಪಂಚಾಯಿತಿಯ ಆಡಳಿತದ ಚುಕ್ಕಾಣಿ ಈಗ ಕಾಂಗ್ರೆಸ್ ಪಾಲಾಗಿದೆ. ಕಳೆದ ಎರಡು ಅವಧಿಯಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಕ್ಷ ಇದೀಗ 12 ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರಕ್ಕೆ ಏರಲಿದೆ. ಸಚಿವ ಆರ್.ವಿ.ದೇಶಪಾಂಡೆ ತವರಾದ ಹಳಿಯಾಳ ಪುರಸಭೆಯ 23 ವಾರ್ಡ್​ಗಳಲ್ಲಿ 14ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಂಡಿದೆ.

ದಾಂಡೇಲಿ ನಗರಸಭೆಯಲ್ಲಿ 16 ಸ್ಥಾನ ಪಡೆದ ಕಾಂಗ್ರೆಸ್ ಬಿಜೆಪಿ ಮಣಿಸಿ ತನ್ನ ಪಟ್ಟು ಬಿಗಿಮಾಡಿದೆ. ಕರಾವಳಿಯ ಅಂಕೋಲಾ ಪುರಸಭೆಯಲ್ಲಿ 10 ಸ್ಥಾನ ಪಡೆದ ಕಾಂಗ್ರೆಸ್ ಪ್ರಯಾಸದ ಗೆಲುವು ತನ್ನದಾಗಿಸಿಕೊಂಡಿದೆ. ಇನ್ನು ಕಾರವಾರ ನಗರಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸಮಬಲದ ಪ್ರದರ್ಶನ ನೀಡಿದ್ದು 5 ಪಕ್ಷೇತರರು ಹಾಗೂ 4 ಜೆಡಿಎಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರಿಂದಾಗಿ ಕಾರವಾರದ ನಗರಸಭೆಯಲ್ಲಿ ಅತಂತ್ರ ಸ್ಥಿತಿ ತಲೆದೋರಿದಂತಾಗಿದೆ.

ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆಗಳ 200 ವಾರ್ಡ್​ಗಳಿಗೆ  ನಡೆದ ಚುನಾವಣೆಯಲ್ಲಿ ಬಿಜೆಪಿ 85, ಕಾಂಗ್ರೆಸ್ 87, ಪಕ್ಷೇತರರು 20 ಹಾಗೂ ಜೆಡಿಎಸ್ ಕೇವಲ 8 ಸ್ಥಾನಗಳನ್ನು ಪಡೆದಿವೆ.
Loading...

ಒಟ್ಟಾರೆ ಪ್ರಸ್ತುತ ಇರುವ ಅಧಿಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ವಿಫಲವಾದರೆ ಜಿಲ್ಲೆಯಲ್ಲಿ ಒಂದೂ ಸ್ಥಾನವಿಲ್ಲದ ಬಿಜೆಪಿ 3 ಕಡೆ ಅಧಿಕಾರ ಹಿಡಿದು ಗೆಲುವಿನ ನಗೆ ಬೀರಿದೆ. ಇದು ಕಾಂಗ್ರೆಸ್​ ಭಾರೀ ಮುಖಭಂಗ ತಂದಿದೆ.

 

 

 

 

 
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ