HOME » NEWS » State » LIVE BOMB FOUND IN MANGALURU INTERNATIONAL AIRPORT MANGALORE MAK

ಮಂಗಳೂರು ಏರ್​ಪೋರ್ಟ್​ನಲ್ಲಿ ಪತ್ತೆಯಾಯ್ತು ಸಜೀವ ಬಾಂಬ್; ಭದ್ರತಾ ವೈಫಲ್ಯ, ವಿಮಾನ ನಿಲ್ದಾಣ ಕೆಲಕಾಲ ಬಂದ್

ಈ ಪ್ರಸಂಗದಿಂದಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದರು. ಹೀಗಾಗಿ ಪೊಲೀಸರು ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಿದ್ದು, ಬಾಂಬ್ ಅನ್ನು ನಿಷ್ಕ್ರಿಯಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

MAshok Kumar | news18-kannada
Updated:January 20, 2020, 2:05 PM IST
ಮಂಗಳೂರು ಏರ್​ಪೋರ್ಟ್​ನಲ್ಲಿ ಪತ್ತೆಯಾಯ್ತು ಸಜೀವ ಬಾಂಬ್; ಭದ್ರತಾ ವೈಫಲ್ಯ, ವಿಮಾನ ನಿಲ್ದಾಣ ಕೆಲಕಾಲ ಬಂದ್
ಏರ್​ಪೋರ್ಟ್​ನಲ್ಲಿ ಪತ್ತೆಯಾದ ಸಜೀವ ಬಾಂಬ್​ ಪರಿಶೀಲನೆ ನಡೆಸುತ್ತಿರುವ ಪೊಲೀಸರು.
  • Share this:
ಮಂಗಳೂರು (ಜನವರಿ 20); ನಗರದ ಏರ್​ಪೋರ್ಟ್​ನಲ್ಲಿ ಸಜೀವ ಬಾಂಬ್ ಪತ್ತೆಯಾದ ಕಾರಣ ವಿಮಾನಗಳ ಹಾರಾಟದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಗಿದ್ದು, ಭದ್ರತಾ ಸಿಬ್ಬಂದಿಗಳು ಕೆಲಕಾಲ ತಬ್ಬಿಬ್ಬಾದ ಘಟನೆ ಇಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಇಂದು ಬೆಳಗ್ಗೆ 7 ರಿಂದ 8 ಗಂಟೆ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಓರ್ವ ಆಟೋ ಚಾಲಕ ಒಂದು ಸಜೀವ ಬಾಂಬ್ ಇದ್ದ ಲ್ಯಾಪ್​ಟಾಪ್​ ಬ್ಯಾಗ್ ಅನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದಾನೆ. ಆದರೆ, ಈ ಬ್ಯಾಗ್​ನಲ್ಲಿ ಸಜೀವ ಬಾಂಬ್ ಇರುವುದು ನಂತರ ಪತ್ತೆಯಾಗಿದೆ. ಹೀಗಾಗಿ ಕೆಲ ಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ನಗರದ ಪೊಲೀಸ್ ಆಯುಕ್ತ ಡಾ.ಹರ್ಷ ಸ್ಥಳಕ್ಕೆ ಆಗಮಿಸಿ ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರಿನಿಂದ ಈಗಾಗಲೇ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ತುರ್ತಾಗಿ ಮಂಗಳೂರಿಗೆ ತೆರಳುತ್ತಿದ್ದಾರೆ ಎಂಬ ಮಾಹಿತಿಗಳು ನ್ಯೂಸ್​18ಗೆ ಲಭ್ಯವಾಗಿದೆ. ಅಲ್ಲದೆ, ಪ್ರಸ್ತುತ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದು, ವಿಮಾನ ನಿಲ್ದಾಣದಲ್ಲಿ ಬಾಂಬ್ ಇದ್ದ ಬ್ಯಾಗ್ ಅನ್ನು ಬಿಟ್ಟು ಹೋದದ್ದು ಯಾರು? ಎಂದು ಪತ್ತೆಹಚ್ಚುವ ಕೆಲಸಕ್ಕೆ ಪೊಲೀಸರು ಮುಂದಾಗಿದ್ದಾರೆ.

ಈ ಪ್ರಸಂಗದಿಂದಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದರು. ಹೀಗಾಗಿ ಪೊಲೀಸರು ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಿದ್ದು, ಬಾಂಬ್ ಅನ್ನು ನಿಷ್ಕ್ರಿಯಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಘಟನೆಯಿಂದಾಗಿ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದ್ದು, ಎಲ್ಲಾ ವಾಹನಗಳನ್ನೂ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ, ಇತ್ತೀಚೆಗೆ ಸಿಎಎ ವಿರೋಧ ಹೋರಾಟ ನಗರದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿದ್ದ ಹಿನ್ನೆಲೆಯಲ್ಲಿ ಈ ಹೋರಾಟಕ್ಕೂ, ವಿಮಾನ ನಿಲ್ದಾಣದಲ್ಲಿ ಬಾಂಬ್ ಎಸೆದಿರುವ ಕೃತ್ಯಕ್ಕೂ ಸಂಬಂಧ ಇದೆಯೇ?, ಹಾಗೂ ಭದ್ರತಾ ವೈಫಲ್ಯದ ಕುರಿತು ಸೂಕ್ತ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರಿನ ಏರ್​ಪೋರ್ಟ್​ನಲ್ಲಿ ಸಜೀವ ಬಾಂಬ್ ಪತ್ತೆಯಾಗುತ್ತಿದ್ದಂತೆ ಬೆಂಗಳೂರು ವಿಮಾನ ನಿಲ್ದಾಣಕ್ಕೂ ಹೆಚ್ಚಿನ ಭದ್ರತೆ ನೀಡಲಾಗಿದೆ.

ಕೆಟ್ಟು ಕೂತಿವೆ ಸಿಸಿಟಿವಿ ಕ್ಯಾಮೆರಾ :ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಂದು ಪತ್ತೆಯಾಗಿರುವ ಸಜೀವ ಬಾಂಬ್ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗುತ್ತಿದೆ. ಈ ಬಾಂಬ್ ಅನ್ನು ಇಲ್ಲಿ ಇಟ್ಟಿದ್ದು ಯಾರು? ಬಾಂಬ್ ಇಡಲು ಕಾರಣ ಏನು? ಎಂಬ ಕುರಿತ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಆದರೆ, ಅವರ ತನಿಖೆಗೆ ಕೆಟ್ಟುಕೂತಿರುವ ಸಿಸಿಟಿವಿ ಕ್ಯಾಮೆರಾಗಳಿಂದಾಗಿ ಹಿನ್ನಡೆ ಉಂಟಾಗುತ್ತಿದೆ ಎಂದು ತಿಳಿದುಬಂದಿದೆ.

ಇಂದು ವಿಮಾನ ನಿಲ್ದಾಣಕ್ಕೆ ಬಂದು ಹೋದವರ ಕುರಿತು ಪರಿಶೀಲನೆ ನಡೆಸಲು ಪೊಲೀಸರು ಸಿಸಿಟಿವಿ ದೃಶ್ಯ ನೊಡಲು ಮುಂದಾಗಿದ್ದಾರೆ. ಆದರೆ, ವಿಮಾನ ನಿಲ್ದಾಣದ ಬಹುತೇಕ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟುಹೋಗಿವೆ. ಹೀಗಾಗಿ ಪೊಲೀಸರು ತನಿಖೆಗೆ ಹಿಂದೇಟಾಗಿದೆ ಎನ್ನಲಾಗುತ್ತಿದೆ. ಇಂತಹ ಭದ್ರತಾ ವೈಫಲ್ಯವನ್ನೇ ಕೆಲವು ಆಗಂತುಕರು ಬಳಸಿಕೊಂಡಿರುವ ಶಂಕೆಯೂ ಇದೆ.

ಘಟನೆ ಕುರಿತು ಆತಂಕ ಪಡುವ ಅಗತ್ಯವಿಲ್ಲ; ಪೊಲೀಸ್​ ಆಯುಕ್ತ ಡಾ. ಹರ್ಷ ಸ್ಪಷ್ಟನೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆಯಾಗಿರುವ ಕುರಿತು ಸಾರ್ವಜನಿಕರು ಆತಂಕಪಡುವ ಅಗತ್ಯ ಇಲ್ಲ ಎಂದು ಮಂಗಳೂರು ಪೊಲೀಸ್​ ಆಯುಕ್ತ ಡಾ. ಹರ್ಷ ತಿಳಿಸಿದ್ದಾರೆ.

ಘಟನ ಸಂಬಂಧ ಇಂದು ಪತ್ರಿಕಾಗೋಷ್ಠಿ ಕರೆದು ಮಾತನಾಡಿರುವ ಅವರು, "ವಿಮಾನ ನಿಲ್ದಾಣದಲ್ಲಿ ಬಾಂಬ್ ಇರುವ ಬ್ಯಾಗ್​ ಅನ್ನು ಇಡಲಾಗಿದೆ ಎಂದು ಮಾಹಿತಿ ದೊರೆತ ತಕ್ಷಣ ಬಾಂಬ್ ನಿಷ್ಕ್ರಿಯ ದಳ ವಿಮಾನ ನಿಲ್ದಾಣಕ್ಕೆ ತೆರಳಿದೆ. ಭದ್ರತಾ ನಿಯಮದ ಪ್ರಕಾರ ಈ ಬಾಂಬ್ ಅನ್ನು ನಿಷ್ಕ್ರಿಯಗೊಳಿಸುವ ಕೆಲಸ ನಡೆಯುತ್ತಿದೆ. ಸ್ಥಳದಲ್ಲಿ ಯಾವುದೇ ಆತಂಕ ಅಥವಾ ಭಯದ ವಾತಾವರಣ ಇಲ್ಲ. ಭದ್ರತಾ ವೈಫಲ್ಯದ ಕುರಿತು ತನಿಖೆ ನಡೆಸಲಾಗುತ್ತಿದೆ" ಎಂದು ನಗರ ಪೊಲೀಸ್​ ಆಯುಕ್ತ ಡಾ. ಹರ್ಷ ತಿಳಿಸಿದ್ದಾರೆ.

ಉಗ್ರರು ಈ ಕೃತ್ಯ ಎಸಗಿರುವ ಶಂಕೆ:

ರಾಜ್ಯದಲ್ಲಿ ಇತ್ತೀಚೆಗೆ ಅನೇಕ ಕಡೆಗಳಲ್ಲಿ ಉಗ್ರರನ್ನು ಬಂಧಿಸಲಾಗಿತ್ತು. ಇದಲ್ಲದೆ ಜನವರಿ 26 ಗಣರಾಜ್ಯೋತ್ಸವ ಹತ್ತರವಾಗುತ್ತಿದ್ದು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕದಡುವ ಸಲುವಾಗಿ ಉಗ್ರರು ಇಂತಹ ಕೃತ್ಯಕ್ಕೆ ಕೈ ಹಾಕಿದ್ದಾರ? ಎಂಬ ಶಂಕೆ ವ್ಯಕ್ತವಾಗಿದೆ.

ಅಲ್ಲದೆ, ಮತ್ತೊಂದು ಕೋನದಲ್ಲೂ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಉಗ್ರರು ನಗರದಲ್ಲಿ ಬೀಡುಬಿಟ್ಟಿದ್ದು, ತಮ್ಮ ಸಂಘಟನೆಯ ಶಕ್ತಿಯನ್ನು ತೋರ್ಪಡಿಸುವ ಸಲುವಾಗಿ ಉದ್ದೇಶ ಪೂರ್ವಕವಾಗಿ ವಿಮಾನ ನಿಲ್ದಾಣದಲ್ಲಿ ಸಂಪರ್ಕ ಕಡಿತ ಮಾಡಿದ ಬಾಂಬ್​ ಇಡಲಾಗಿದೆಯೇ? ಅಥವಾ ಅವರ ವಿಧ್ವಂಸಕ ಕೃತ್ಯ ಕೂದಲೆಳೆಯಲ್ಲಿ ತಪ್ಪಿತೇ? ಎಂಬ ಕುರಿತು ತನಿಖೆ ನಂತರ ಉತ್ತರ ಸಿಗಲಿದೆ.

ಇದೀಗ ಬಾಂಬ್​ ಅನ್ನು ಪಣಂಬೂರು ಬೀಚ್​ಗೆ ಬಾಂಬ್​ ನಿಷ್ಕ್ರಿಯ ದಳದ ಅಧಿಕಾರಿಗಳು ರವಾನೆ ಮಾಡಿದ್ದಾರೆ ಎಂಬ ವರದಿಗಳು ಲಭ್ಯವಾಗುತ್ತಿದೆ.

ಇದನ್ನೂ ಓದಿ : ಸಾಮಾಜಿಕ ನ್ಯಾಯದ ಆಧಾರದ ಮೇಲೆ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡಿ - ಸೋನಿಯಾಗೆ ಪತ್ರ ಬರೆದ ಪರಮೇಶ್ವರ್
Youtube Video
First published: January 20, 2020, 12:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories