ಸಕ್ಕರೆನಾಡಲ್ಲಿ ಪತ್ತೆಯಾಯ್ತು ಲಿಥಿಯಂ‌ ಖನಿಜ; ಇಪ್ಪತ್ತು ವರ್ಷಗಳಿಂದ ಕರಿಘಟ್ಟ ಬೆಟ್ಟದ ತಪ್ಪಲಿನ ನಡೆಯುತ್ತಿದೆ ಸಂಶೋಧನೆ

ಕರ್ನಾಟಕದಲ್ಲಿ ಅದರಲ್ಲೂ ಮಂಡ್ಯದಲ್ಲಿ ಈ ಅಪರೂಪದ ಈ‌ ಖನಿಜವಾದ ಲಿಥಿಯಂ ನಿಕ್ಷೇಪ ಪತ್ತೆಯಾಗಿರುವ  ವಿಚಾರ ವಿಜ್ಞಾನಿಗಳಿಗೆ ಸಂತಸ ತರಿಸಿದೆ. ಈ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆದು ಖಚಿತ ಮಾಹಿತಿ ಹೊರ ಬೀಳಬೇಕಾಗಿದೆ.

ಲಿಥಿಯಂ ಖನಿಜ ನಿಕ್ಷೇಪವಿರುವ ಕರಿಘಟ್ಟ ತಪ್ಪಲು.

ಲಿಥಿಯಂ ಖನಿಜ ನಿಕ್ಷೇಪವಿರುವ ಕರಿಘಟ್ಟ ತಪ್ಪಲು.

  • Share this:
ಮಂಡ್ಯ: ಪೆಟ್ರೋಲ್, ಡಿಸೇಲ್ ಮೇಲಿನ ಅವಲಂಭನೆ ತಗ್ಗಿಸಲು ಭಾರತ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುತ್ತಿದೆ. ಇದಕ್ಕಾಗಿ  ಬಜೆಟ್‌‌ನಲ್ಲಿ ನೂರಾರು ಕೋಟಿ ಮೀಸಲಿಟ್ಟಿದೆ. ಇಂತಹ ಸಂಧರ್ಭದಲ್ಲಿ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳ ತಯಾರಿಕೆಗೆ ಅತ್ಯಗತ್ಯವಾದ ಲಿಥಿಯಂ ಖನಿಜ ಇಂಡಿಯಾದಲ್ಲಿ ಪತ್ತೆಯಾಗಿದೆ.‌ಮಂಡ್ಯ ಜಿಲ್ಲೆಯ  ಶ್ರೀರಂಗಪಟ್ಟಣದಲ್ಲಿ  ಪತ್ತೆಯಾಗಿರುವ ನಿಕ್ಷೇಪದ  ಸುದ್ದಿ ಇದೀಗ ದೇಶಾದ್ಯಂತ ಭಾರಿ ಸಂಚಲನ ಉಂಟುಮಾಡಿದೆ. 

ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಯಾರಿಕೆಗೆ ಬೇಕಾದ  ಅತ್ಯಾವಶ್ಯಕವಾದ ಲಿಥಿಯಂ ಖನಿಜ ಇದೀಗ  ಭಾರತದಲ್ಲೇ ಪತ್ತೆಯಾಗಿದೆ ಎಂದು ಬ್ಯಾಟರಿ ತಂತ್ರಜ್ಞಾನ ಸಂಶೋಧಕ, ಐಐಟಿ ಗೌರವ ಪ್ರಾಧ್ಯಾಪಕರಾದ ಎನ್.ಮುನಿಚಂದ್ರಯ್ಯ 'ಕರೆಂಟ್ ಸೈನ್ಸ್' ಪತ್ರಿಕೆಯಲ್ಲಿ ಲೇಖನ ಬರೆದು ಬಹಿರಂಗಪಡಿಸಿದ್ದಾರೆ. ಮಾಹಿತಿ ಪ್ರಕಾರ ಲಿಥಿಯಂ ನಿಕ್ಷೇಪ ಪತ್ತೆಯಾಗಿರೋದು ಸಕ್ಕರೆ ನಾಡು ಮಂಡ್ಯದಲ್ಲಿ. ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟ ಬೆಟ್ಟದ ತಪ್ಪಲಿನ  ಪ್ರದೇಶದಲ್ಲಿ  ಮರಳಗಾಲ ಮತ್ತು ಅಲ್ಲಾಪಟ್ಟಣ ಎಂಬ ಗ್ರಾಮದಲ್ಲಿ. ಈ ಗ್ರಾಮದ ನಡುವಿನ ಸುಮಾರು 150 ಎಕರೆ ಪ್ರದೇಶದಲ್ಲಿ ಈ ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ.

ಇನ್ನು  ಇಡೀ ಇಂಡಿಯಾದಲ್ಲೇ ಸಿಗದ ಈ ಲಿಥಿಯಂ ನಿಕ್ಷೇಪ ಮಂಡ್ಯದಲ್ಲಿ ಪತ್ತೆಯಾಗಿರುವುದು ಇದೀಗ ಭಾರೀ ಸಂಚಲನ ಮೂಡಿಸಿದೆ. 2017ನೇ ಸಾಲಿನಲ್ಲಿ 384 ಮಿಲಿಯನ್ ಲಿಥಿಯಂ ಬ್ಯಾಟರಿಗಳನ್ನು ಇತರೆ ದೇಶಗಳಿಂದ ಭಾರತ ಆಮದು ಮಾಡಿಕೊಳ್ಳುತ್ತಿತ್ತು. 2019ರಲ್ಲಿ ಅದರ ಪ್ರಮಾಣ 1.2 ಬಿಲಿಯನ್‌ಗೆ ಏರಿಕೆಯಾಗಿತ್ತು. ಆದರೆ ಇದೀಗ ಇಂಡಿಯಾದಲ್ಲೇ ಲಿಥಿಯಂ ನಿಕ್ಷೇಪ ಪತ್ತೆಯಾಗಿರುವುದರಿಂದ ದೇಶದ ವಾಣಿಜ್ಯ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ಮಂಡ್ಯದ ಪಿಇಎಸ್ ಕಾಲೇಜಿನ ಭೂ ವಿಜ್ಞಾನ ವಿಭಾಗದ ಪ್ರಾಧ್ಯಾಪಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲಿಥಿಯಂ ಖನಿಜ ನಿಕ್ಷೇಪ.


ಇನ್ನು ಕರಿಘಟ್ಟದ ಈ ತಪ್ಪಲಿನಲ್ಲಿ ಪ್ರಧಾನ ಮಂತ್ರಿ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಟಾಮಿಕ್ ಮಿನರಲ್ ಡೈರೆಕ್ಟರ್ಸ್​ನ 10ಕ್ಕೂ ಹೆಚ್ಚು ವಿಜ್ಞಾನಿಗಳ ತಂಡ ಕಳೆದ 20 ವರ್ಷಗಳಿಂದ ಅಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಮಂಡ್ಯದ ಅಲ್ಲಾಪಟ್ಟಣ-ಮರಳಗಾಲ ವ್ಯಾಪ್ತಿಯಲ್ಲಿ ಸುಮಾ ರು 14,100 ಟನ್‌ಗಳಷ್ಟು ಲಿಥಿಯಂ ಸಿಗುವ ಸಾಧ್ಯತೆ ಇದೆ. ಆದರೆ ಚಿಲಿ, ಆಸ್ಟ್ರೇಲಿಯಾ, ಪೋರ್ಚುಗಲ್ ದೇಶಗಳಲ್ಲಿ ಸಿಗುವಷ್ಟು ಇಲ್ಲಿ ಸಿಗಲಾರದು ಎಂದು ಉಲ್ಲೇಖಿಸಲಾಗಿದೆ. ಚಿಲಿಯಲ್ಲಿ 8.6 ಮಿಲಿಯ ಟನ್, ಆಸ್ಟ್ರೇಲಿಯಾದಲ್ಲಿ 2.8ಮಿಲಿಯ ಟನ್, ಅರ್ಜೆಂಟೀನಾದಲ್ಲಿ1.7ಮಿಲಿಯನ್ ಟನ್, ಪೋರ್ಚುಗಲ್‌ನಲ್ಲಿ ವಾರ್ಷಿಕವಾಗಿ 60ಸಾವಿರ ಟನ್‌ಗಳಷ್ಟು ಲಿಥಿಯಂ ಲೋಹ ಸಿಗುತ್ತದೆ. ಆದರೆ ಮಂಡ್ಯದಲ್ಲಿ ಲಿಥಿಯಂ ಪತ್ತೆಯಾಗಿರುವ ಪ್ರದೇಶದಲ್ಲಿ 14,100 ಟನ್‌ಗಳಷ್ಟೇ ಲಿಥಿಯಂ ನಿಕ್ಷೇಪ ಸಿಗುವ ಸಾಧ್ಯತೆ ಇದೆ. ಲಿಥಿಯಂ ಉತ್ಪಾದಿಸುವ ದೇಶಗಳಿಗೆ ಹೋಲಿಸಿದರೆ ಇದು ತೀರಾ ಕಡಿಮೆ ಎಂದು ಹೇಳಲಾಗಿದೆ.

ಇದನ್ನು ಓದಿ: ಮೈಸೂರಿನ ಕಿರು ಅರಣ್ಯಕ್ಕೆ ಬೆಂಕಿ; ಕಿಡಿಗೇಡಿಗಳು ಕೃತ್ಯ ಎಸಗಿರುವ ಶಂಕೆ

ಒಟ್ಟಾರೆ ಕರ್ನಾಟಕದಲ್ಲಿ ಅದರಲ್ಲೂ ಮಂಡ್ಯದಲ್ಲಿ ಈ ಅಪರೂಪದ ಈ‌ ಖನಿಜವಾದ ಲಿಥಿಯಂ ನಿಕ್ಷೇಪ ಪತ್ತೆಯಾಗಿರುವ  ವಿಚಾರ ವಿಜ್ಞಾನಿಗಳಿಗೆ ಸಂತಸ ತರಿಸಿದೆ. ಈ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆದು ಖಚಿತ ಮಾಹಿತಿ ಹೊರ ಬೀಳಬೇಕಾಗಿದೆ.
First published: