ಬೆಂಗಳೂರು: ಮದ್ಯ ಖರೀದಿಗೆ ವಯೋಮಿತಿ ಇಳಿಕೆ (Liquor Buying Age) ಮಾಡುವ ತನ್ನ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿದಿದೆ. ಮದ್ಯ ಖರೀದಿ ವಯಸ್ಸನ್ನು 21 ರ ಬದಲಾಗಿ 18ಕ್ಕೆ ಇಳಿಸಲು ಯೋಜನೆ (Liquor Buying Policy) ರೂಪಿಸಿದ್ದ ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ (Karnataka Government) ಈ ನಿರ್ಧಾರವನ್ನು ಕೈಬಿಟ್ಟಿದೆ.
1967ರ ಅಬಕಾರಿ ನಿಯಮ 10(1) (ಇ)ಕ್ಕೆ ತಿದ್ದುಪಡಿ ಮಾಡಿದ್ದ ರಾಜ್ಯ ಸರ್ಕಾರ ಮದ್ಯ ಖರೀದಿಸಲು 21 ವಯಸ್ಸೇ ಆಗಬೇಕಂತಿಲ್ಲ. ಕರ್ನಾಟಕ ಸರ್ಕಾರ 18 ವಯಸ್ಸಿನವರೂ ಮದ್ಯ ಖರೀದಿ ಮಾಡೋಕೆ ಅವಕಾಶ ನೀಡಲು ನಿರ್ಧರಿಸಿತ್ತು. ಈವರೆಗೆ ಇದ್ದ ನಿಯಮವನ್ನು ಪರಿಷ್ಕರಿಸಲು ನಿರ್ಧರಿಸಿತ್ತು. ಆದರೆ ಭಾರೀ ವಿರೋಧದಿಂದ ಈ ನಿರ್ಧಾರವನ್ನು ಇದೀಗ ಸರ್ಕಾರ ಕೈಬಿಟ್ಟಿದೆ.
ಅಬಕಾರಿ ಪರವಾನಗಿಗಳ (ಸಾಮಾನ್ಯ ಷರತ್ತುಗಳು) (ತಿದ್ದುಪಡಿ) ನಿಯಮಗಳು-2023 ಎಂಬ ಶೀರ್ಷಿಕೆಯ ಕರಡು ಅಧಿಸೂಚನೆಯನ್ನು ಸರ್ಕಾರವು ಸೋಮವಾರ ಪ್ರಕಟಿಸಿತ್ತು. ಸರ್ಕಾರವು ಈ ಬಗ್ಗೆ ಸಾರ್ವಜನಿಕರಿಗೆ ಆಕ್ಷೇಪ/ಸಲಹೆ ನೀಡಲು 30 ದಿನಗಳ ಕಾಲಾವಕಾಶ ನೀಡಿತ್ತು.
ಹೊಸ ತಿದ್ದುಪಡಿಯಲ್ಲಿ ಏನಿತ್ತು?
ಈ ಹಿಂದೆ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ಕಾನೂನಿತ್ತು. ಆದರೆ ಈಗ ಮದ್ಯ ಕೊಳ್ಳುವ ನಿರ್ಬಂಧವನ್ನು ಸಡಿಲಿಸಿ ವಯಸ್ಸಿನ ಮಿತಿಯನ್ನು 18 ವರ್ಷಕ್ಕಿಳಿಸಲು ಸರ್ಕಾರ ಸಜ್ಜಾಗಿದೆ.
ಕರ್ನಾಟಕ ಅಬಕಾರಿ ಪರವಾನಗಿಗಳ (ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ಸೆಕ್ಷನ್ 10(1)(ಇ) ಅಡಿಯಲ್ಲಿದ್ದ ಮದ್ಯ ಖರೀದಿದಾರನ ವಯಸ್ಸಿನ ಮಿತಿಯನ್ನು 21 ರಿಂದ ಇಳಿಸಿ ಹೊಸ ಪ್ರಸ್ತಾಪದಂತೆ ಆ ವಯಸ್ಸಿನ ಮಿತಿಯನ್ನು 18 ಕ್ಕೆ ಬದಲಾಯಿಸಲು ತಿದ್ದುಪಡಿ ಉದ್ದೇಶಿಸಿದೆ. ಅಂದರೆ ಸೆಕ್ಷನ್ 10(1)(ಇ) ನಿಯಮವನ್ನು ತಿದ್ದುಪಡಿ ಮಾಡಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಹೊಸ ತಿದ್ದುಪಡಿ ಹೇಳುತ್ತದೆ.
"ಇದು ಮದ್ಯ ಉದ್ಯಮದ ದೀರ್ಘಕಾಲದ ಬೇಡಿಕೆ"
ಈ ಬಗ್ಗೆ ಸ್ಪಷ್ಟಪಡಿಸಿದ ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು "ವಯಸ್ಸಿನ ಮಿತಿಯನ್ನು 18 ಕ್ಕೆ ಇಳಿಸುವುದು ಮದ್ಯದ ಉದ್ಯಮದಿಂದ ಬಹುಕಾಲದಿಂದ ಬಾಕಿ ಉಳಿದಿರುವ ಬೇಡಿಕೆಗಳಲ್ಲಿ ಒಂದಾಗಿದೆ" ಎಂದು ಹೊಸ ಪ್ರಸ್ತಾವನೆ ಬಗ್ಗೆ ಹೇಳಿದರು.
ಕರ್ನಾಟಕ ಅಬಕಾರಿ ಪರವಾನಗಿ (ಸಾಮಾನ್ಯ ಷರತ್ತುಗಳು) ನಿಯಮಗಳು 1965 ರ ಪ್ರಕಾರ, ಕನಿಷ್ಠ ಕಾನೂನು ವಯಸ್ಸು 21 ಆಗಿದೆ. ಈ ಗೊಂದಲವನ್ನು ಯುವಕರಿಗೆ ಮತದಾನದ ವಯಸ್ಸಿಗೆ ಅನುಗುಣವಾಗಿ ಮಾಡುವುದರ ಜೊತೆಗೆ ಇಲಾಖೆಯು ಈ ಗೊಂದಲವನ್ನು ಪರಿಹರಿಸಲು ಬಯಸಿದೆ" ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: Kalaburagi Goshala: 200 ಕ್ಕೂ ಹೆಚ್ಚು ಗೋವುಗಳಿಗೆ 'ಪುಣ್ಯಕೋಟಿ'ಯ ಆಶ್ರಯ, ಕೃಷಿಕರಿಗೂ ಲಾಭ!
ಮದ್ಯ ಖರೀದಿ ಮತ್ತು ಮಾರಾಟಕ್ಕೆ ನಿಗದಿಪಡಿಸಿದ್ದ ವಯಸ್ಸನ್ನು ಮಾತ್ರ ಇಳಿಸಲಾಗಿದೆ ಆದರೆ ಮದ್ಯದ ವ್ಯಾಪಾರ ಆರಂಭಿಸಲು ಸರ್ಕಾರ ಕನಿಷ್ಠ ವಯೋಮಿತಿಯಲ್ಲಿ ಬದಲಾವಣೆ ಮಾಡಿಲ್ಲ, ಆ ವಯಸ್ಸಿನ ಮಿತಿ 21ಕ್ಕೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಸರ್ಕಾರದ ಬೊಕ್ಕಸ ತುಂಬಲು ಸಹಕಾರಿ"
ವಯೋಮಿತಿಯನ್ನು ಕಡಿತಗೊಳಿಸುವಂತೆ ಮದ್ಯ ಉದ್ಯಮವು ಒತ್ತಾಯಿಸುತ್ತಿದ್ದು, ಇದು ಗ್ರಾಹಕರ ನೆಲೆಯನ್ನು ವಿಸ್ತರಿಸುತ್ತದೆ ಮತ್ತು ಸರ್ಕಾರಕ್ಕೆ ಹೆಚ್ಚಿನ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಸರ್ಕಾರಕ್ಕೆ ಬಂದ ಆದಾಯ ಎಷ್ಟು?
ಮದ್ಯ ಉದ್ಯಮದಿಂದ 2019 - 20ರಲ್ಲಿ 21,583 ಕೋಟಿ ರೂ ಆದಾಯ ಸರ್ಕಾರದ ಬೊಕ್ಕಸ ಸೇರಿದ್ದರೆ 2021-22ರಲ್ಲಿ 26,377 ಕೋಟಿ ರೂ. ಆದಾಯ ಬಂದಿದೆ.
ಇದನ್ನೂ ಓದಿ: BK Hariprasad: ಯಶವಂತಪುರದಲ್ಲಿ ಚಪ್ಪಲಿ, ಪೊರಕೆ ಸೇವೆ ಮಾಡಿದ್ದು ಯಾಕಂತ ಹೇಳಲಿ: ಬಿ.ಸಿ ಪಾಟೀಲ್ಗೆ ಹರಿಪ್ರಸಾದ್ ಟಾಂಗ್
ಬೇರೆ ರಾಜ್ಯಗಳಲ್ಲಿ ವಯಸ್ಸಿನ ಮಿತಿ ಎಷ್ಟಿದೆ?
ಗೋವಾ, ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಪುದುಚೇರಿ ಸೇರಿ ಕೆಲವು ರಾಜ್ಯಗಳು ವಯಸ್ಸಿನ ಮಿತಿಯನ್ನು ಈಗಾಗಲೇ 18 ಕ್ಕೆ ಇಳಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ