ಬೆಳಗಾವಿ: ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತ ನಾಯಕರಿಗೆ ಹಚ್ಚಿನ ಪ್ರಾತಿನಿಧ್ಯ ಸಿಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಭೇಟಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯನ್ನು ಸಹ ಭೇಟಿಯಾಗುತ್ತೇವೆ. ಮಾಜಿ ಸಿಎಂ ವಿರೇಂದ್ರ ಪಾಟೀಲ್ ಇದ್ದಂತಹ ಸಂದರ್ಭದಲ್ಲಿ ಇದ್ದಂತಹ ಗಥ ವೈಭವವನ್ನು ಮತ್ತೆ ಮರಳಿ ತರಲು ಪ್ರಯತ್ನಿಸುತ್ತೇವೆ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ವಿಚಾರಕ್ಕೆ ಕೆಲ ದಿನಗಳ ಹಿಂದೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಅನೇಕ ಶಾಸಕರು ತಮ್ಮ ನಾಯಕರ ಪರವಾಗಿ ಬ್ಯಾಟಿಂಗ್ ಮಾಡಿದ್ದರು. ಇದು ಪಕ್ಷಕ್ಕೆ ಮುಜುಗರ ಸಹ ಉಂಟು ಮಾಡಿತ್ತು. ಈಗಾಗಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಡುವೆ ಪೈಪೋಟಿ ಇರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ನಡುವೆ ಮತ್ತೊಬ್ಬ ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತ ನಾಯಕ ಇದೀಗ ಸಮುದಾಯದಲ್ಲಿ ಹೆಚ್ಚಿನ ವರ್ಚಸ್ಸು ಗಳಿಸಿಕೊಳ್ಳುವ ಯತ್ನಕ್ಕೆ ಹಾಕಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತರಿಗೆ ದೊಡ್ಡ ಹುದ್ದೆ ಸಿಗಬಹುದೇ?
ಶಾಸಕ ಎಂ ಬಿ ಪಾಟೀಲ್ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠಕ್ಕೆ ಭೇಟಿ ನೀಡಿದ್ದರು. ಹಾಗು ಇದೇ ವೇಳೆ ತೋಂಟದಾರ್ಯ ಜಗದ್ಗುರು ಡಾ. ಸಿದ್ದರಾಮ ಸ್ವಾಮಿಜೀಗಳ ಜೊತೆಗೆ ಮಹತ್ವದ ಮಾತುಕತೆಯನ್ನು ನಡೆಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹ ಇದ್ದರು.
ನಂತರ ಮಾಧ್ಯಮಗಳ ಜತೆಗೆ ಮಾತನಾಡಿದ ಎಂ.ಬಿ ಪಾಟೀಲ್, ಶ್ರೀಗಳ ಜತೆಗೆ ಪ್ರಭು ಹಳಕಟ್ಟಿ ಅವರ ಶಿವಾನುಭವ ಪತ್ರಿಕೆ ಮರು ಮುದ್ರಿಕೆಯ ಬಗ್ಗೆ ಚರ್ಚೆಗೆ ಬಂದಿದ್ದೇನೆ. ಜತೆಗೆ ಬಸವಾದಿ ಶರಣರ ಸಮಗ್ರ ಮಾಹಿತಿಯುಳ್ಳ ಅಂತರರಾಷ್ಟ್ರೀಯ ಗ್ರಂಥಾಲಯ ಸ್ಥಾಪನೆಗೆ ಚಿಂತನೆ ಸಹ ನಡೆಸಲಾಗಿದೆ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ಹೇಳಿದರು.
ನಾನು ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ನಾಯಕ ಎಂದು ಜನ ಹೇಳಬೇಕು. ನನಗೆ ನಾನೇ ಸರ್ಟಿಫಿಕೇಟ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಲಿಂಗಾಯತ ಸಮುದಾಯದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ದೊಡ್ಡ ನಾಯಕರು. ಕಾಂಗ್ರೆಸ್ ಪಕ್ಷದಲ್ಲಿ ಹಲವು ಲಿಂಗಾಯತ ನಾಯಕರು ಇದ್ದಾರೆ. ಹಿಂದೆ ವೀರೇಂದ್ರ ಪಾಟೀಲ್ ಇದ್ದಾಗ 168 ಸ್ಥಾನವನ್ನು ಕಾಂಗ್ರೆಸ್ ಗೆದ್ದಿತ್ತು. ನಂತರ ಕಾಂಗ್ರೆಸ್ ಹಿನ್ನಡೆಯಾಗಿದೆ, ಮತ್ತೆ ಅದೇ ಗಥವೈಭವ ವಾಪಸ್ ತರಲು ಪ್ರಯತ್ನ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ: ಮೇಕೆದಾಟು ವಿಚಾರವಾಗಿ ಪಿಎಂ ಜೊತೆ ಚರ್ಚೆ
ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತ ನಾಯಕರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು ಈ ನಿಟ್ಟಿನಲ್ಲಿ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಜತೆಗೆ ಮಾತುಕತೆ ನಡೆಸಿದ್ದೇವೆ. ಮುಂದಿನ ದಿನದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಸಹ ಮನವಿ ಮಾಡುತ್ತೇವೆ. ಈ ಮೂಲಕ ಪಕ್ಷದಿಂದ ದೂರವಾಗಿರೋ ಸಮಾಜವನ್ನು ಮತ್ತೆ ಪಕ್ಷದ ಕಡೆಗೆ ತರುತ್ತೇವೆ. ಈ ಮೂಲಕ ಹಳೆಯ ಗಥವೈಭವಕ್ಕೆ ಸಾಕ್ಷಿಯಾಗುತ್ತೇವೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ