ಲಿಂಗಾಯತ ಧರ್ಮ ಹೋರಾಟ; ಬುಧವಾರದ ಸಂಪುಟ ಸಭೆಯತ್ತ ಎಲ್ಲರ ಚಿತ್ತ

news18
Updated:March 13, 2018, 8:19 PM IST
ಲಿಂಗಾಯತ ಧರ್ಮ ಹೋರಾಟ; ಬುಧವಾರದ ಸಂಪುಟ ಸಭೆಯತ್ತ ಎಲ್ಲರ ಚಿತ್ತ
news18
Updated: March 13, 2018, 8:19 PM IST
-ಆನಂದ್​, ನ್ಯೂಸ್​ 18 ಕನ್ನಡ

ಬಾಗಲಕೋಟೆ, (ಮಾ.13): ರಾಜ್ಯದಲ್ಲಿ ತೀವ್ರ ಸಂಚಲನ ಉಂಟು ಮಾಡಿರುವ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ವಿಚಾರ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ನಾಳೆ ನಡೆಯುವ ಸಂಪುಟ ಸಭೆಯಲ್ಲಿ ನ್ಯಾ. ನಾಗಮೋಹನದಾಸ ನೇತೃತ್ವದ ತಜ್ಞರ ವರದಿಯನ್ನು ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡುತ್ತಿದೆ ಎನ್ನುವ ವಿಚಾರದ ಹಿನ್ನೆಲೆಯಲ್ಲಿ ಇಂದು ವೀರಶೈವ ವಟುಗಳ ವಿಶ್ವವಿದ್ಯಾಲಯ ಎಂದೇ ಖ್ಯಾತಿ ಪಡೆದಿರುವ ಶಿವಯೋಗ ಮಂದಿರದಲ್ಲಿ ವೀರಶೈವ-ಲಿಂಗಾಯತ ಒಂದೇ ಎನ್ನುವ ನಿಲುವು ಹೊಂದಿರುವ ನಾಡಿನ ವಿವಿಧ ಮಠಾಧೀಶರು ಮಹತ್ವದ ಸಭೆಯನ್ನು ನಡೆಸಿ, ಎರಡು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ.

ಚುನಾವಣೆ ಹೊಸ್ತಿಲಲ್ಲಿ ರಾಜ್ಯದಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ವಿಚಾರ ತೀವ್ರ ವಿವಾದಕ್ಕೆ ಎಡೆಮಾಡಿದೆ. ಯಾವುದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾ. ನಾಗಮೋಹನದಾಸ ನೇತೃತ್ವದ ತಜ್ಞರ ವರದಿಯನ್ನು ಕೇಂದ್ರಕ್ಕೆ ಶಿಪಾರಸು ಮಾಡಲು ಸಿದ್ದತೆ ಮಾಡಿಕೊಂಡಿದೆ. ವರದಿ ಶಿಫಾರಸು ಮಾಡುವಂತೆ ನಿನ್ನೆಯಷ್ಟೇ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯ ಪರವಾಗಿರುವ ಮಠಾಧೀಶರು ಸಚಿವ ಎಂ.ಬಿ.ಪಾಟೀಲ ಜೊತೆ ಗೌಪ್ಯ ಸಭೆ ನಡೆಸಿ  ಸಿಎಂಗೆ ಮನವಿ ಸಲ್ಲಿಸಿದ್ದಾರೆ.

ಇದರ ಬೆನ್ನಲ್ಲೆ ಇವತ್ತು ಬಾಗಲಕೋಟೆ ಜಿಲ್ಲೆ  ಬಾದಾಮಿ ತಾಲೂಕಿನ ಶಿವಯೋಗ ಮಂದಿರದಲ್ಲಿ ವೀರಶೈವ-ಲಿಂಗಾಯತ ಒಂದೇ ಎನ್ನುವ ನಿಲುವು ಹೊಂದಿರುವ ಪ್ರಮುಖ ಗುರು-ವಿರಕ್ತ ಮಠಗಳ ಸ್ವಾಮೀಜಿಗಳ ಸಹ ಮಹತ್ವದ ಸಭೆ ನಡೆದಿದರು.ಶಿವಯೋಗ ಮಂದಿರದ ಸಾಂಸ್ಕೃತಿಕ ಭವನದಲ್ಲಿ ಬೆಳಗ್ಗೆ ನಡೆದ ಸಭೆಯಲ್ಲಿ ಪಂಚಪೀಠಗಳಲ್ಲಿ ಒಂದಾದ ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಜಗದ್ಗುರುಗಳು, ಶಿವಯೋಗ ಮಂದಿರದ ಅಧ್ಯಕ್ಷರಾದ ಡಾ.ಸಂಗನಬಸವ ಸ್ವಾಮೀಜಿ, ಮುಂಡರಗಿಯ ಡಾ.ಅನ್ನದಾನ ಮಹಾಸ್ವಾಮೀಜಿ, ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಯವರು ಭಾಗವಹಿಸಿ, ಸುಧೀರ್ಘ ಚರ್ಚೆ ನಡೆಸಿ, ಅಂತಿಮವಾಗಿ ಎರಡು ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ.

ಬಳಿದ ಸಭೆಯ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಸಭೆಯಲ್ಲಿ ತೆಗೆದುಕೊಂಡು ಎರಡು ತೀರ್ಮಾನಗಳನ್ನು ಮಾಧ್ಯಮಗಳಿಗೆ ವಿವರಿಸಿದರು.

ಲಿಂಗಾಯತ ಮಠಾಧೀಶರ ಮನವಿ ಲೆಕ್ಕಿಸದೇ ಸ್ವತಂತ್ರ ಧರ್ಮದ ಪರ ಇರುವ ಮಠಾಧೀಶರ ಒತ್ತಡಕ್ಕೆ ಮಣಿದು ಶಿಪಾರಸು ಮಾಡಿದಲ್ಲಿ ನಾಡಿನಾದ್ಯಂತ ನೇರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಘೋಷಿಸಿದರು. ಸ್ವಾಮೀಜಿಗಳು ಈ ವರೆಗೂ ಯಾವುದೇ ಪಕ್ಷದ ಪರ ಮತ್ತು ವಿರುದ್ಧವಾಗಿ ಮಾತನಾಡಿಲ್ಲ. ಇದೀಗ ನಮ್ಮ ವೀರಶೈವ ಸಮಾಜಕ್ಕೆ ಆತಂಕ, ಕುತ್ತು, ಕಂಟಕ ಎದುರಾಗಿರುವುದರಿಂದ ಅನಿವಾರ್ಯವಾಗಿ ನಾವು ಮಾತನಾಡಬೇಕಿದೆ. ಇವತ್ತು ಧರ್ಮ ಒಡೆಯುವ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿರುವುದರಿಂದ ಆ ಪಕ್ಷದ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಸರ್ಕಾರದ ವಿರುದ್ಧ ಮಾತ್ರವಲ್ಲದೇ ವೀರಶೈವ ಮಠದ ಪಠಾಧಿಪತಿಗಳಾಗಿ ಮಠದ ಆಸ್ತಿ ಅನುಭವಿಸುತ್ತ, ಮಾರಾಟ ಮಾಡಿದ್ದಲ್ಲದೇ ಇದೀಗ ಲಿಂಗಾಯತ ಪ್ರತ್ಯೇಕ ಧರ್ಮ ಎನ್ನುತ್ತಿರುವ ಸ್ವಾಮೀಜಿಗಳ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ. ಈ ಬಗ್ಗೆ ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಎಚ್ಚರಿಸಿದರು.

ಲಿಂಗಾಯತ ಧರ್ಮದ ವಿಚಾರವಾಗಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರ ಶಿವಶಂಕ್ರಪ್ಪ ಅವರ ನಿಲುವು ನಮ್ಮ ನಿಲುವು ಸಹ ಆಗಿದೆ. ನಾಳೆ ನಡೆಯುವ ಸಂಪುಟದ ತೀರ್ಮಾನ ನೋಡಿಕೊಂಡು ಮುಂದಿನ ತೀರ್ಮಾನ ಹಾಗೂ ಹೋರಾಟದ ರೂಪರೇಶಗಳು ತಯಾರಾಗಲಿವೆ. ವರದಿ ಕೈಬಿಟ್ಟಲ್ಲಿ ಸರ್ಕಾರ ಮತ್ತು ಸ್ವಾಮೀಜಿಗಳ ವಿರುದ್ಧದ ಹೋರಾಟವನ್ನು ಕೈಬಿಡುವುದಾಗಿ ಸಭೆ ತೀರ್ಮಾನ ತೆಗೆದುಕೊಂಡಿದ್ದಾಗಿ ಸ್ವಾಮೀಜಿ ಹೇಳಿದರು.

ಒಟ್ಟಾರೆ, ನಾಳೆ ನಡೆಯುವ ಸಂಪುಟ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಾಗಮೋಹನದಾಸ ನೇತೃತ್ವದ ತಜ್ಞರ ವರದಿ ಕೈಬಿಡುತ್ತ ಅಥವಾ ಕೇಂದ್ರಕ್ಕೆ ಶಿಫಾರಸು ಮಾಡುತ್ತಾ?  ಎನ್ನುವ ಕುತೂಹಲ ಗರಿಗೆದರಿದೆ.
First published:March 13, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ