ಮೂರೂ ಪಕ್ಷಗಳು ಸೇರಿ ಸರ್ಕಾರ ರಚಿಸಿ: ಪೇಜಾವರ ಶ್ರೀ ಸಲಹೆ

Karnataka Crisis: ಯಾವಾಗಲೂ ಅಲ್ಲ, ಎಂಟತ್ತು ಸ್ಥಾನಗಳ ವ್ಯತ್ಯಾಸವಾಗಿ ಯಾರಿಗೂ ಬಹುಮತ ಇಲ್ಲದ ಇಂಥ ಬಿಕ್ಕಟ್ಟು ಸಂದರ್ಭದಲ್ಲಿ ಮಾತ್ರ ಸರ್ವಪಕ್ಷ ಆಡಳಿತ ಬರಬೇಕು ಎಂದು ವಿಶ್ವೇಶ ತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

news18
Updated:July 19, 2019, 6:42 PM IST
ಮೂರೂ ಪಕ್ಷಗಳು ಸೇರಿ ಸರ್ಕಾರ ರಚಿಸಿ: ಪೇಜಾವರ ಶ್ರೀ ಸಲಹೆ
ಪೇಜಾವರ ಶ್ರೀ
  • News18
  • Last Updated: July 19, 2019, 6:42 PM IST
  • Share this:
ಕೊಪ್ಪಳ(ಜುಲೈ 19): ಕರ್ನಾಟಕ ರಾಜಕಾರಣದಲ್ಲಿ ಜಂಘೀ ಕುಸ್ತಿ ನಡೆಯುತ್ತಿರುವ ಹೊತ್ತಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥರು ಕುತೂಹಲಕಾರಿ ಪ್ರತಿಕ್ರಿಯೆ ಕೊಟ್ಟಿದ್ಧಾರೆ. ಗಂಗಾವತಿಯಲ್ಲಿ ನ್ಯೂಸ್18 ಕನ್ನಡದ ಜೊತೆ ಮಾತನಾಡುತ್ತಿದ್ದ ಸ್ವಾಮೀಜಿ, ರಾಷ್ಟ್ರಪತಿ ಆಳ್ವಿಕೆ ಬರುವ ಬದಲು ಎಲ್ಲಾ ಪಕ್ಷಗಳು ಸೇರಿ ಸರ್ಕಾರ ರಚಿಸಬೇಕೆಂದು ಸಲಹೆ ನೀಡಿದ್ಧಾರೆ. ಆದರೆ, ಯಾವಾಗಲೂ ಅಲ್ಲ, ಎಂಟತ್ತು ಸ್ಥಾನಗಳ ವ್ಯತ್ಯಾಸವಾಗಿ ಯಾರಿಗೂ ಬಹುಮತ ಇಲ್ಲದ ಇಂಥ ಬಿಕ್ಕಟ್ಟು ಸಂದರ್ಭದಲ್ಲಿ ಮಾತ್ರ ಸರ್ವಪಕ್ಷ ಆಡಳಿತ ಬರಬೇಕು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಎಲ್ಲರೂ ಅಧಿಕಾರಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಮೂರೂ ಪಕ್ಷಗಳು ಜಗಳವಾಡಿಕೊಂಡಿವೆ. ಬಿಜೆಪಿ ಹಿಂದೂಪರ ಇದೆ ಎಂದು ವಿರೋಧಿಸಿ ಎರಡು ಪಕ್ಷಗಳು ಮೈತ್ರಿ ಸರ್ಕಾರ ಮಾಡಿಕೊಂಡಿವೆ. ಈಗ ಈ ಸರ್ಕಾರದಲ್ಲೂ ಜಗಳವಾಗಿದೆ. ಬಿಜೆಪಿ ಸರ್ಕಾರ ಬಂದರೂ ಈ ಸಮಸ್ಯೆ ನಿಂತು ಹೋಗುವುದಿಲ್ಲ. ಈ ಸ್ಥಿತಿಯಲ್ಲಿ ಸರ್ವಪಕ್ಷಗಳ ಆಡಳಿತವೇ ಸರಿಯಾದ ಕ್ರಮ ಎಂದು ಶ್ರೀಗಳು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಏನಿದು ರಾಷ್ಟ್ರಪತಿ ಆಡಳಿತ, ಯಾವ ಸಂದರ್ಭದಲ್ಲಿ ಹೇರಲಾಗುತ್ತದೆ; ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ನೀಡಿದ ಆದೇಶವೇನು?

ಬಹುಮತ ಇಲ್ಲದಿದ್ದಾಗ ಯಾವಾಗಲೂ ಪಕ್ಷಾಂತರದ ಭಯ ಇದ್ದೇ ಇರುತ್ತದೆ. ರಾಜೀನಾಮೆ ಕೊಡುವುದು ಮತ್ತು ಅದೇ ಸ್ಥಾನಕ್ಕೆ ಮತ್ತೆ ಚುನಾವಣೆ ನಡೆಯುವುದು ಇರುತ್ತದೆ. ಆಗ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಬಿಜೆಪಿಯವರು ಸರ್ಕಾರ ರಚಿಸಿದರೂ ಭದ್ರ ಎಂದು ಹೇಳಲು ಆಗುವುದಿಲ್ಲ. ಅಲ್ಲಿಯೂ ಈ ಸಮಸ್ಯೆ ಪ್ರಾರಂಭವಾಗುತ್ತದೆ. ರೆಸಾರ್ಟ್ ರಾಜಕೀಯ ಮತ್ತೆ ನಡೆಯುತ್ತದೆ. ಎಲ್ಲರನ್ನೂ ಮಂತ್ರಿ ಮಾಡೋಕೆ ಸಾಧ್ಯವಿಲ್ಲ ಎಂದು ವಿಶ್ವೇಶ್ವರ ತೀರ್ಥ ಸ್ವಾಮಿಗಳು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಯೂ ಸಹ ಜಾತ್ಯತೀತ ಪಕ್ಷವಾಗಿದೆ. ಮೂರು ಪಕ್ಷಗಳು ಒಂದಾಗಿ ಸರ್ಕಾರ ಮಾಡಬಹುದು. ಇಂಥ ಸಂದರ್ಭದಲ್ಲಿ ವಿಪಕ್ಷವಿಲ್ಲದೆ ಸರ್ಕಾರ ಮಾಡಿದರೆ ರಾಜ್ಯದ ಅಭಿವೃದ್ಧಿ ಆಗುತ್ತದೆ. ಒಂದು ಪೂರ್ಣ ಬಹುಮತದ ಸರ್ಕಾರ ಇರಬೇಕು. ಇಲ್ಲವೇ ಎಲ್ಲಾ ಪಕ್ಷಗಳ ಸರ್ಕಾರ ಇರಬೇಕು ಎಂದು ಪೇಜವಾರಶ್ರೀಗಳು  ಹೇಳಿದ್ಧಾರೆ.

ಇದನ್ನೂ ಓದಿ: ಸಾಂವಿಧಾನಿಕ ಬಿಕ್ಕಟ್ಟಿನಲ್ಲಿ ರಾಜ್ಯ ರಾಜಕಾರಣ; ರಾಜ್ಯಪಾಲರ ಡೆಡ್​ಲೈನ್ ಉಲ್ಲಂಘಿಸಿದ ಸರ್ಕಾರ; ಮುಂದಿನ ಆಯ್ಕೆಗಳೇನು?

ಕೆಲ ದಿನಗಳಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಇಂಥದ್ದೇ ಸಲಹೆಗಳು ವೈರಲ್ ಆಗಿ ಹಬ್ಬಿದ್ದವು. ಎಲ್ಲಾ ಪಕ್ಷಗಳು ಸೇರಿ ಸರ್ಕಾರ ಮಾಡಲಿ. ಎಲ್ಲರಿಗೂ ಮಂತ್ರಿ ಪದವಿ ಕೊಡಲಿ. ಒಬ್ಬರಿಗೆ ಸಕ್ಕರೆ ಖಾತೆ, ಇನ್ನೊಬ್ಬರಿಗೆ ಗೋದಿ ಖಾತೆ, ಮಗದೊಬ್ಬರಿಗೆ ರಾಗಿ ಖಾತೆ.. ಹೀಗೆ ಎಲ್ಲರಿಗೂ ಖಾತೆ ವಿಭಜಿಸಿ ಹಂಚಿಕೆಯಾಗಲಿ ಎಂದು ಯಾರೋ ಸಲಹೆ ಕೊಟ್ಟಿದ್ದರು. ಇದೀಗ ಪೇಜಾವರ ಶ್ರೀಗಳೇ ಇಂಥದ್ದೊಂದು ಸಲಹೆ ನೀಡಿರುವುದು ಕುತೂಹಲದ ವಿಷಯ.(ವರದಿ: ಬಸವರಾಜ ಕರುಗಲ್)

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:July 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ