ಚಾಮರಾಜನಗರ(ಜ.08): ಕಾಡುಪ್ರಾಣಿಗಳು ನಾಡಿನತ್ತ ಬರುವ ಪ್ರಮಾಣ ಹೆಚ್ಚಾಗುತ್ತಿದೆ. ಇಲ್ಲಿಯವರೆಗೂ ಕಾಡಂಚಿನ ಗ್ರಾಮಗಳಿಗೆ ದಾಂಗುಡಿ ಇಡುತ್ತಿದ್ದ ಹುಲಿ, ಚಿರತೆಯಂತಹ ಕಾಡು ಮೃಗಗಳು ಈಗ ಕಾಲೇಜಿಗೂ ಪಾದಾರ್ಪಣೆ ಮಾಡಿವೆ. ಈ ದೃಶ್ಯ ಎಂತಹವರ ಎದೆಯನ್ನು ಝಲ್ ಎನಿಸುತ್ತದೆ. ಚಾಮರಾಜನಗರದ ಮೆಡಿಕಲ್ ಕಾಲೇಜಿಗೆ ಎಂಟ್ರಿ ಕೊಟ್ಟಿರುವ ಚಿರತೆ ಅಲ್ಲಿನ ಹಾಸ್ಟೆಲ್ ಕಾರಿಡಾರ್ನಲ್ಲಿ ಗಾಂಭೀರ್ಯದಿಂದ ತಿರುಗಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಈ ಚಿರತೆಯೇನು ಕಾಲೇಜು ಪರಿಶೀಲನೆಗೆ ಬಂದಿದೆಯಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಸಿಸಿಟಿವಿಯಲ್ಲಿ ಚಿರತೆಯೊಂದು ಮೆಡಿಕಲ್ ಕಾಲೇಜಿನ ಹಾಸ್ಟೆಲ್ನೊಳಗೆ ಓಡುತ್ತಿರುವ ದೃಶ್ಯ ಸೆರೆಯಾಗಿದೆ. ಈ ಸಿಸಿಟಿವಿ ದೃಶ್ಯಾವಳಿಯನ್ನು ಭಾರತೀಯ ಅರಣ್ಯಾಧಿಕಾರಿ ಪರ್ವೀನ್ ಕಸ್ವಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕಸ್ವಾನ್ ಅವರು ಮೊದಲಿಗೆ ಚಿರತೆಯನ್ನು ಬ್ಲ್ಯಾಕ್ ಪ್ಯಾಂಥರ್ ಎಂದು ಗುರುತಿಸಿದ್ದಾರೆ. ಮೆಲನಿಸ್ಟಿಕ್ ದೊಡ್ಡ ಬೆಕ್ಕುಗಳಿಗೆ ನೀಡಲಾಗುವ ಸಾಮಾನ್ಯ ಹೆಸರು. ಸಿಸಿಟಿವಿ ದೃಶ್ಯದಲ್ಲಿರುವ ಚಿರತೆ ಮೆಲನಿಸ್ಟಿಕ್ ಅಲ್ಲದಿರಬಹುದು ಎಂದು ಕಸ್ವಾನ್ ಅಭಿಪ್ರಾಯಪಟ್ಟಿದ್ದಾರೆ.
ಕೊರೋನಾ ವೈರಸ್ನಿಂದ ತನ್ನನ್ನು ರಕ್ಷಿಸಿಕೊಳ್ಳಲು ಇಡೀ ವಿಮಾನವನ್ನೇ ಬುಕ್ ಮಾಡಿದ ಭೂಪ..!
ಇದು ಸಾಮಾನ್ಯ ಚಿರತೆ. ಸ್ವಲ್ಪ ಗಾಢ ಮೈಬಣ್ಣವನ್ನು ಹೊಂದಿರುತ್ತದೆ. ಬ್ಲ್ಯಾಕ್ ಫ್ಯಾಂಥರ್ಸ್ ಕೂಡ ಸಾಮಾನ್ಯ ಚಿರತೆಯೇ. ಇದು ಮೆಲನಿಸ್ಟಿಕ್ ಆದರೂ ರಾತ್ರಿ ವೇಳೆಯಲ್ಲಿ ಮೆಲನಿಸ್ಟಿಕ್ ಅಲ್ಲದಂತೆ ಗೋಚರಿಸಬಹುದು ಎಂದು ಕಸ್ವಾನ್ ಹೇಳಿದ್ದಾರೆ.
When a black panther comes for college inspection. Karnataka. @anil_lulla pic.twitter.com/754rGgRBx4
— Parveen Kaswan, IFS (@ParveenKaswan) January 7, 2021
ವಿಡಿಯೋ ನೋಡಿದ ನೆಟ್ಟಿಗರು ಚಿರತೆಯ ಕಾಲೆಳೆದು ತಮಾಷೆ ಮಾಡಿದ್ದಾರೆ. ಭಗೀರ ಅಡ್ಮಿಷನ್ ಆಗಲು ಬಂದಿರಬೇಕು ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಕಾಲೇಜು ಪರಿಶೀಲನೆ ನಡೆಸಲು ಬಂದಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಚಾಮರಾಜನಗರ ಮೆಡಿಕಲ್ ಕಾಲೇಜಿನ ಡೀನ್ ಡಾ.ಸಂಜೀವ್ ಪತ್ರಿಕೆಯೊಂದಕ್ಕೆ ಮಾತನಾಡಿ, ಚಿರತೆ ಕಾಲೇಜಿಗೆ ಬಂದಿರುವ ಬಗ್ಗೆ ಖಚಿತಪಡಿಸಿದ್ದಾರೆ. ಈ ಸರ್ಕಾರಿ ಮೆಡಿಕಲ್ ಕಾಲೇಜು ಹುಲಿ ರಕ್ಷಿತಾರಣ್ಯಕ್ಕೆ ಹೊಂದಿಕೊಂಡಿತಿದೆ. ಹೀಗಾಗಿ ಚಿರತೆ ಕಾಲೇಜು ಕ್ಯಾಂಪಸ್ನೊಳಗೆ ಹೊಕ್ಕಿರಬಹುದು ಎಂದು ಡೀನ್ ಅಭಿಪ್ರಾಯಪಟ್ಟಿದ್ದಾರೆ. ಈ ಘಟನೆ ಜನವರಿ 2ರ ರಾತ್ರಿ ನಡೆದಿದ್ದು, ಕಾಲೇಜು ಸಿಬ್ಬಂದಿ ಕೂಡ ಈ ಬಗ್ಗೆ ದೃಢಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ