ಹಾವೇರಿ (ಮಾ. 23): ಜಿಲ್ಲೆಯ ಕೆಲ ಭಾಗದಲ್ಲಿ ರೈತರು ತಮ್ಮ ಜಮೀನಿನಲ್ಲಿ ನೀರು ಹಾಯಿಸಲು, ದನಕರುಗಳನ್ನು ಮೇಯಿಸಲು ಹೋಗುವುದಕ್ಕೆ ಭಯದ ವಾತಾವರಣ ಸೃಷ್ಟಿಯಾಗಿದೆ. ಅದಕ್ಕೆ ಕಾರಣ ಕಾಡು ಮೃಗ ಚಿರತೆ. ಚಿರತೆ ಹಾವಳಿಯಿಂದ ಜಿಲ್ಲೆಯ ರೈತರು ಬೆಚ್ಚಿ ಬಿದ್ದಿದ್ದಾರೆ. ಕಳೆದ ರಾತ್ರಿ ಜಮೀನಿನಲ್ಲಿ ನೀರು ಹಾಯಿಸಲು ಹೋದ ರೈತರ ಮೇಲೆ ಚಿರತೆ ದಾಳಿ ಮಾಡಿದೆ. ಚಿರತೆ ಜೊತೆಗೆ ಸೆಣಸಾಡಿ ಹೇಗೋ ಪ್ರಾಣ ಉಳಿಸಿಕೊಂಡಿದ್ದು, ಈ ಕಾದಾಟದಲ್ಲಿ ಚಿರತೆ ಸಾವನ್ನಪ್ಪಿದೆ. ಇಬ್ಬರಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದರೆ, ಮತ್ತೊಬ್ಬನ ಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಹಾಡೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ರೈತ 46 ವರ್ಷದ ಗದಿಗೆಪ್ಪ ಯಳವಳ್ಳಿ ಮತ್ತು 45 ವರ್ಷದ ಕೃಷ್ಣಪ್ಪ ಮೂಡಬಾಗಿಲ ಎಂಬ ರೈತರು ರಾತ್ರಿ ಜಮೀನಿಗೆ ನೀರು ಹಾಯಿಸಲು ಹೋಗಿದ್ದರು. ಈ ವೇಳೆ ಕೆಲಸ ಮುಗಿಸಿ ಹಿಂದಿರುಗುವ ವೇಳೆ ಚಿರತೆ ದಾಳಿ ಮಾಡಿದೆ. ಗದಿಗೆಪ್ಪ ಚಿರತೆ ಜೊತೆ ಸೆಣಸಾಟ ನಡೆಸಿದ್ದಾನೆ. ನಂತರ ಗದಿಗೆಪ್ಪನ ಕೂಗಾಟ ಕೇಳಿ, ಚಿರತೆ ಕಂಡು ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣಪ್ಪ ಸಹಾಯಕ್ಕೆ ಧಾವಿಸಿದ್ದಾರೆ. ಈ ವೇಳೆ ಪ್ರಾಣ ರಕ್ಷಣೆಗೆ ಚಿರತೆ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ. ಆಗ ಚಿರತೆ ನೆಲಕ್ಕೆ ಬಿದ್ದಿದೆ. ನಂತರ ಚಿರತೆಯನ್ನ ಇಬ್ಬರೂ ಸೇರಿಕೊಂಡು ಸಾಯಿಸಿ, ಮನೆಯವರಿಗೆ ವಿಷಯ ತಿಳಿಸಿದ್ದಾರೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ಚಿಂತಾಜನಕ ಸ್ಥಿತಿಯಲ್ಲಿ ರೈತ ಗದಿಗೆಪ್ಪ
ಗದಿಗೆಪ್ಪನ ತಲೆಗೆ ಚಿರತೆ ದಾಳಿಯಿಂದ ಬಲವಾದ ಪೆಟ್ಟು ಬಿದ್ದಿದೆ. ಚಿರತೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಗದಿಗೆಪ್ಪನನ್ನ ತುಮ್ಮಿನಕಟ್ಟಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಆತನನ್ನ ದಾವಣಗೆರೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಗದಿಗೆಪ್ಪನನ್ನು ಸದ್ಯ ಚಿತ್ರದುರ್ಗದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನು ಓದಿ: ರಾಜ್ಯದಲ್ಲಿಂದು 2000 ಗಡಿದಾಟಿದ ಕೊರೋನಾ ಸೋಂಕಿತರ ಸಂಖ್ಯೆ; ನಾಲ್ಕು ತಿಂಗಳಲ್ಲಿ ಮೊದಲ ಬಾರಿಗೆ ಗರಿಷ್ಠ ಪ್ರಕರಣ ದಾಖಲು
ಇತ್ತ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಪರಿಶೀಲನೆ ನಡೆಸಿದರು. ಮೇಲ್ನೋಟಕ್ಕೆ ಪ್ರಾಣರಕ್ಷಣೆಗಾಗಿ ಚಿರತೆಯನ್ನು ಹೊಡೆದು ಕೊಲೆ ಮಾಡಿರುವುದು ಕಂಡು ಬಂದಿದೆ. ಹೆಚ್ಚಿನ ತನಿಖೆ ನಡೆಸಲಾಗುವುದು. ಗಾಯಾಳುಗಳಿಗೆ ಸೂಕ್ತ ಪರಿಹಾರ ಒದಗಿಸಿಕೊಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ಮಾಡಿ ಚಿರತೆ ಸಾಯಿಸಿರುವ ವಿಷಯ ತಿಳಿಸಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರಲು ತಡಮಾಡಿದ್ದಾರೆ ಎಂದು ಗಾಯಾಳುಗಳ ಸಂಬಂಧಿಕರು ಹಾಗೂ ಸ್ಥಳೀಯರು. ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ಹತ್ಯೆಯಾಗಿರುವ ಚಿರತೆ ಮಾತ್ರವಲ್ಲದೆ, ಗ್ರಾಮದ ಬಳಿ ಸಾಕಷ್ಟು ಚಿರತೆಗಳಿವೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಗಾಯಗೊಂಡವರಿಗೆ ಸೂಕ್ತ ಪರಿಹಾರ ಕೊಡಬೇಕು. ಇನ್ನೂ ಗ್ರಾಮದ ಬಳಿ ಓಡಾಡಿಕೊಂಡಿರೋ ಚಿರತೆಗಳನ್ನ ಬೋನಿಟ್ಟು ಹಿಡಿದು ದೂರದ ಕಾಡಿಗೆ ಬಿಡಬೇಕು ಎಂಬುದು ಗ್ರಾಮಸ್ಥರ ಮಾತಾಗಿದೆ.
(ವರದಿ: ಮಂಜುನಾಥ್ ತಳವಾರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ