ತಾಯಿ-ಮಗಳ ಸಂಬಂಧಕ್ಕೆ ಕಾನೂನು ತೊಡಕು...ಕಲಬುರ್ಗಿಯಲ್ಲೊಂದು ಕರುಣಾಜನಕ ಕಥೆ

news18
Updated:October 3, 2018, 12:50 PM IST
ತಾಯಿ-ಮಗಳ ಸಂಬಂಧಕ್ಕೆ ಕಾನೂನು ತೊಡಕು...ಕಲಬುರ್ಗಿಯಲ್ಲೊಂದು ಕರುಣಾಜನಕ ಕಥೆ
  • News18
  • Last Updated: October 3, 2018, 12:50 PM IST
  • Share this:
- ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ ( ಅ.03) :  ಇದು ಕರುಳು ಕಿತ್ತಿ ಬರುವಂತೆ ಘಟನೆ ಒಂದಲ್ಲ, ಎರಡಲ್ಲ, ಬರೋಬ್ಬರಿ 7 ವರ್ಷಗಳ ಕಾಲ ಸಾಕಿ ಸಲುಹಿ ದೊಡ್ಡವಳನ್ನಾಗಿ ಮಾಡಿದ್ದ ಬಾಲಕಿಯನ್ನು ಅನಾಥಾಲಯಕ್ಕೆ ಕಳಿಸಬೇಕಾದ ಸ್ಥಿತಿ ಈಗ ಪೋಷಕರಿಗೆ ಎದರಾಗಿದೆ.

ಹೆತ್ತವರಿಗೆ ಬೇಡವಾಗಿ, ಕಂಟಿಯಲ್ಲಿ ಎಸೆಯಲ್ಪಟ್ಟು, ನಾಯಿಗಳಿಗೆ ತುತ್ತಾಗುತ್ತಿದ್ದ ಮಗುವನ್ನು ಕಲಬುರ್ಗಿಯ ಆರ್.ಟಿ.ನಗರದ ಜಯಶ್ರೀ ಎಂಬ ಮಹಿಳೆ ರಕ್ಷಿಸಿ ತಾನೇ ಸಾಕಿದ್ದಳು. ಮಗುವಿಗೆ 7 ವರ್ಷ ತುಂಬಿದ ಹಂತದಲ್ಲಿ ಅನಾಮಿಕರು ನೀಡಿದ ದೂರಿನ ಮೇರೆಗೆ ಮಕ್ಕಳ ಕಲ್ಯಾಣ ಸಮಿತಿ ಮಗುವನ್ನು ವಶಕ್ಕೆ ಪಡೆದಿದೆ. ಮಗುವನ್ನು ಕಳೆದುಕೊಳ್ಳುವ ಭೀತಿಯಲ್ಲಿ ಕಣ್ಣೀರು ಹಾಕಿರುವ ಸಾಕು ತಾಯಿ, ತನಗೇ ಸಾಕಲು ಅವಕಾಶ ಮಾಡಿಕೊಡುವಂತೆ ಗೋಗರೆದಿದ್ದಾಳೆ.

ನಾಯಿಗಳ ಪಾಲಾಗುತ್ತಿದ್ದ ನವಜಾತ ಶಿಶುವನ್ನು ಕಾಪಾಡಿದ ಮಹಿಳೆ

ಬೇರೆ ಬೇರೆ ಕಾರಣಗಳಿಂದಾಗಿ ಕೆಲವೊಮ್ಮೆ ಪೋಷಕರಿಗೆ ಹೆತ್ತ ಕೂಸು ಬೇಡವಾಗುತ್ತದೆ. ಹಾಗೆ ಬೇಡವಾದ ಕೂಸನ್ನು ರಸ್ತೆಯ ಪಕ್ಕದಲ್ಲಿಯೋ, ಗಟಾರದಲ್ಲಿಯೋ, ಮುಳ್ಳ ಕಂಟಿಯಲ್ಲಿಯೋ ಎಸೆದು ಹೋಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಹೀಗೆ ಹೆತ್ತಮ್ಮಳಿಗೆ ಬೇಡವಾಗಿ ಕಂಟಿಯಲ್ಲಿ ಎಸೆಯಲ್ಪಟ್ಟು, ನಾಯಿಗಳ ಪಾಲಾಗುತ್ತಿದ್ದ ನವಜಾತ ಶಿಶುವನ್ನು ಕಲಬುರ್ಗಿಯ ಆರ್.ಟಿ. ನಗರದ ಜಯಶ್ರೀ ಎಂಬ ಮಹಿಳೆ ರಕ್ಷಿಸಿದ್ದಳು. ಹಾಗೆ ರಕ್ಷಿಸಿದ ಹೆಣ್ಣು ಕೂಸನ್ನು ತನ್ನ ಮೂವರು ಮಕ್ಕಳ ಜೊತೆ ನಾಲ್ಕನೆಯ ಮಗುವಾಗಿ ಸಾಕಿದ್ದಳು.

ಅನಾಥವಾಗಿ ಬಿಟ್ಟುಹೋಗಿದ್ದ ನವಜಾತ ಹೆಣ್ಣು ಶಿಶುವನ್ನು ಸಾಕಿದ್ದ ತಾಯಿ!

ಅನಾಥ ಶಿಶುವನ್ನು ಜೋಪಾನ ಮಾಡಿರುವುದೇ ಈಗ ಜಯಶ್ರೀಗೆ ಕಂಟಕವಾಗಿ ಮಾರ್ಪಟ್ಟಿದೆ. ಅನಾಮಧೇಯ ಕರೆಯನ್ನು ಆಧರಿಸಿ ಚೈಲ್ಡ್ ಲೈನ್, ಮಕ್ಕಳ ಕಲ್ಯಾಣ ಸಮಿತಿ, ಶಿಶು ಅಭಿವೃದ್ಧಿ ಅಧಿಕಾರಿಗಳು ಜಯಶ್ರೀ ವಶದಲ್ಲಿದ್ದ ಮಗುವನ್ನು ವಶಕ್ಕೆ ಪಡೆದಿವೆ. ಹುಟ್ಟಿದಂದಿನಿಂದ ಮನೆ ಮಗಳಾಗಿ ಬೆಳೆದ ಬಾಲಕಿ ವೈಷ್ಣವಿ ಇದೀಗ ತಬ್ಬಲಿಯಾಗಬೇಕಾದ ಸ್ಥಿತಿಯಲ್ಲಿದ್ದಾಳೆ. ಕಾನೂನಿನ ಪ್ರಕಾರ ಸರ್ಕಾರದ ಗಮನಕ್ಕೆ ತಾರದೆ ಮಕ್ಕಳನ್ನು ಸಾಕಲು ಬರುವುದಿಲ್ಲ ಎಂದಿರುವ ಮಕ್ಕಳ ಕಲ್ಯಾಣ ಸಮಿತಿ, ಮಗುವನ್ನು ವಶಕ್ಕೆ ತೆಗುದುಕೊಳ್ಳಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಮಗುವನ್ನು ವಶಕ್ಕೆ ಪಡೆಯಲು ಬಂದಾಗ ಸಾಕು ತಾಯಿ ಜಯಶ್ರೀ ಮತ್ತು ಆಕೆಯ ಮುವ್ವರು ಮಕ್ಕಳು ಕಣ್ಣೀರು ಹಾಕಿದ್ದಾರೆ. ಮಗುವನ್ನು ತಮ್ಮಲ್ಲಿಯೇ ಸಾಕಲು ಅವಕಾಶ ಮಾಡಿಕೊಡುವಂತೆ ಸಾಕುತಾಯಿ ಜಯಶ್ರೀ ಗೋಗರೆದಿದ್ದಾಳೆ. 

ಚೈಲ್ಡ್ ಲೈನ್ ದೂರಿನ ಹಿನ್ನೆಲೆಯಲ್ಲಿ ರಕ್ಷಣೆ ಮಾಡಿದ ಅಧಿಕಾರಿಗಳು

ಚೈಲ್ಡ್ ಲೈನ್ ಗೆ ಬಂದ ದೂರಿನ ಹಿನ್ನೆಲೆಯಲ್ಲಿ ನಾವು ಮಗುವನ್ನು ರಕ್ಷಿಸಿದ್ದೇವೆ. ಯಾರೂ ಕಾನೂನು ಮೀರುವಂತಿಲ್ಲ. ಮುಳ್ಳ ಕಂಟಿಯಲ್ಲಿ ಬಿದ್ದ ಮಗುವನ್ನು ರಕ್ಷಿಸಿರುವುದು ಒಳ್ಳೆಯದ್ದೇ ಆದರೂ ಅದನ್ನು ಅಧಿಕಾರಿಗಳ ಗಮನಕ್ಕೆ ತರಬೇಕಿತ್ತು. ಹಾಗೆಯೇ ಮನೆಯಲ್ಲಿಟ್ಟುಕೊಂಡು ಸಾಕೋದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ ಎನ್ನುತ್ತಾರೆ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು.

ಅನಾಥ ಮಕ್ಕಳನ್ನು ಸಾಕಿ, ನಂತರ ಅವರನ್ನು ಬೇರೆಡೆಗೆ ಸಾಗಿಸುವ, ವೇಶ್ಯಾವಾಟಿಕೆಗೆ ತಳ್ಳುವ ಇತ್ಯಾದಿ ಕೃತ್ಯಗಳು ನಡೆಯುತ್ತಿರುವುದರಿಂದ ಮಗುವನ್ನು ವಶಕ್ಕೆ ಪಡೆಯಲೇಬೇಕಿದೆ. ಹಾಗೊಂದು ವೇಳೆ ಸಾಕುವುದಾದರೂ ಸರ್ಕಾರದ ನಿರ್ದೇಶನದ ಅನ್ವಯವೇ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಿಡಿಪಿಒ ಸಿ.ವಿ.ರಾಮನ್ ಸ್ಪಷ್ಟಪಡಿಸಿದ್ದಾರೆ.

ವೈಷ್ಣವಿಯನ್ನು ತನ್ನ ಮಗಳಂತೆ ಸಾಕಲು ಅವಕಾಶ ಮಾಡಿಕೊಡುವಂತೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದ ಸಾಕು ತಾಯಿ ಜಯಶ್ರೀ, ಮಗುವನ್ನು ತಮಗೆ ಕೊಡಿಸುವಂತೆ ಮನವಿ ಮಾಡಿದರು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದಾರೆ.

ಒಟ್ಟಾರೆ ಮುಳ್ಳ ಕಂಟಿಯಲ್ಲಿ ಬಿದ್ದ ಅನಾಥ ಮಗುವನ್ನು ಸಾಕಿರುವ ಜಯಶ್ರೀ ಈಗ ಕಣ್ಣೀರು ಹಾಕುತ್ತಿದ್ದಾಳೆ. ಯಾವುದೇ ಕಾರಣಕ್ಕೂ ತನ್ನ ಮಗುವನ್ನು ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ. ಆದರೆ ಅಧಿಕಾರಿಗಳು ಮಾತ್ರ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಮಗುವನ್ನು ವಶಕ್ಕೆ ಪಡೆದಿದ್ದು, ವೈಷ್ಣವಿಗೆ ಮತ್ತೊಮ್ಮೆ ಅನಾಥ ಪ್ರಜ್ಞೆ ಕಾಡಲಾರಂಭಿಸಿದೆ.

ಇದನ್ನು ಓದಿ : ಅಮ್ಮನ ದಾರಿಯನ್ನೇ ಕಾಯುತ್ತಿವೆ ಮುಗ್ಧ ಮಕ್ಕಳು: ಕ್ಯಾನ್ಸರ್​ ಚಿಕಿತ್ಸೆಗೆ ಈ ಬಡ ಕುಟುಂಬಕ್ಕೆ ಬೇಕಿದೆ ನಿಮ್ಮ ನೆರವು

 

 
First published:October 3, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading