news18-kannada Updated:January 17, 2021, 9:35 PM IST
Amit Shah
ಬೆಳಗಾವಿ(ಜ.17)- ಕುಟುಂಬ ರಾಜಕಾರಣ ಕಾರಣದಿಂದಲೇ ದೇಶದ ಜನ ಕಾಂಗ್ರೆಸ್ ತಿರಸ್ಕಾರ ಮಾಡಿದ್ದಾರೆ. ನಮ್ಮ ಪಕ್ಷದ ಸಚಿವರು, ಶಾಸಕರು ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು. ಅಧಿಕಾರದ ವ್ಯಾಮೋಹ ಬಿಟ್ಟು ಪಕ್ಷದ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು ಎಂದು ಕಾರ್ಯಕರ್ತರಿಗೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ಸೂಚನೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಜನಸೇವಕ ಸಮಾರಂಭದ ಬಳಿಕ ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ ಹಾಗೂ ಚಿಕ್ಕೋಡಿ ಬಿಜೆಪಿ ಸಂಘಟನಾತ್ಮಕ ಜಿಲ್ಲೆ ಕಾರ್ಯಕರ್ತರ ಸಭೆ ನಡೆಯಿತು. ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಎಲ್ಲಾ ಕಾರ್ಯಕರ್ತರಿಗೆ ಮಾತನಾಡಲು ಮುಕ್ತ ಅವಕಾಶ ನೀಡಲಾಗಿತ್ತು. ಈ ವೇಳೆ ಅನೇಕ ಪ್ರಮುಖ ಕಾರ್ಯಕರ್ತರು ತಮ್ಮ ಅಭಿಪ್ರಾಯ ಹೇಳಿದರು. ಈ ವೇಳೆಯಲ್ಲಿ ದೂರು ನೀಡಲು ಮುಂದಾದ ಶಾಸಕರಿಗೆ ತಮ್ಮ ಸಮಸ್ಯೆ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಇತ್ಯರ್ಥ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.
ಸಮಾವೇಶಕ್ಕೂ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಇತ್ತೀಚೆಗೆ ನಿಧನರಾದ ದಿ. ಸುರೇಶ ಅಂಗಡಿ ನಿವಾಸಕ್ಕೆ ಭೇಟಿ ನೀಡಿದರು. ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿ ಇರುವ ನಿವಾಸಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. 15 ನಿಮಿಷಕ್ಕೂ ಅಂಗಡಿ ನಿವಾಸದಲ್ಲಿ ಇದ್ದ ಷಾ, ಅಂಗಡಿ ಅನಾರೋಗ್ಯದ ಮಾಹಿತಿ ಪಡೆದರು. ಈ ವೇಳೆಯಲ್ಲಿ ದಿ. ಸುರೇಶ ಅಂಗಡಿ ಪತ್ನಿ ಮಂಗಳಾ, ಡಾ ಸ್ಪೂರ್ತಿ ಪಾಟೀಲ್, ರಾಹುಲ್ ಪಾಟೀಲ್, ಶ್ರದ್ಧಾ ಶೆಟ್ಟರ್, ಸಂಕಲ್ಪ ಶೆಟ್ಟರ್ ಇದ್ದರು. ಲೋಕಸಭಾ ಉಪಚುನಾವಣೆ ಟಿಕೆಟ್ ಬಗ್ಗೆ ಎಲ್ಲವೂ ಚರ್ಚೆ ಆಗಲಿಲ್ಲ.
ನಂತರ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಬೆಳಗಾವಿ ಗ್ರಾಮೀಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ ಮನೆಗೆ ಭೇಟಿ ನೀಡಿದರು. ರಾಜು ಚಿಕ್ಕನಗೌಡರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಕೇಂದ್ರ ಸಚಿವ ಅಮಿತ್ ಶಾಗೆ ಸಿಎಂ ಬಿ ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿಲ್ ಕುಮಾರ ಕಟಿಲ್ ಇದ್ದರು.
ಬೆಳಗಾವಿಗೆ ಅಮಿತ್ ಷಾ ಭೇಟಿ ಸಂದರ್ಭದಲ್ಲಿ ಉಪಚುನಾವಣೆ ಟಿಕೆಟ್ ಬಗ್ಗೆ ಚರ್ಚೆ ಆಗಲಿದೆ ಎಂದು ಹೇಳಲಾಗಿತ್ತು. ಇದೇ ನಿರೀಕ್ಷೆಯಲ್ಲಿ ಅನೇಕ ಆಕಾಂಕ್ಷಿಗಳು ಇದ್ದರು. ಆದರೇ ಕೇಂದ್ರ ಸಚಿವ ಅಮಿತ್ ಷಾ ಎಲ್ಲಿಯೂ ಈ ಬಗ್ಗೆ ಚರ್ಚೆ ಮಾಡಲೇ ಇಲ್ಲ. ಈ ಮೂಲಕ ಕೇಂದ್ರದ ನಿರ್ಧಾರಕ್ಕೆ ಎಲ್ಲರೂ ಬದ್ಧವಾಗಿ ಇರಬೇಕು ಎನ್ನುವ ಸೂಚನೆ ನೀಡಿದ್ದಾರೆ.
Published by:
zahir
First published:
January 17, 2021, 9:29 PM IST