ಹಂಚೋದು ನಿಮ್ಮ ದುಡ್ಡಾ? ಬಿಜೆಪಿಯದ್ದಾ?; ರಮೇಶ್ ಜಾರಕಿಹೊಳಿಯ 5 ಕೋಟಿ ರೂ. ಆಫರ್​ಗೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು

ರಮೇಶ್ ಜಾರಕಿಹೊಳಿ ಹಂಚುವುದು ಬಿಜೆಪಿ ದುಡ್ಡಾ ಅಥವಾ ಅವರ ಸ್ವಂತದ್ದಾ? ಮತದಾರರಿಗೆ ಅಕೌಂಟ್ ಮೂಲಕ ಹಂಚುತ್ತಾರಾ? ಆರ್.ಟಿ.ಜಿ.ಎಸ್. ಮಾಡುತ್ತಾರಾ ಅಥವಾ ನಗದು ರೂಪದಲ್ಲಿ ಕೊಡುತ್ತಾರಾ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ.

Sushma Chakre | news18-kannada
Updated:December 31, 2019, 11:59 AM IST
ಹಂಚೋದು ನಿಮ್ಮ ದುಡ್ಡಾ? ಬಿಜೆಪಿಯದ್ದಾ?; ರಮೇಶ್ ಜಾರಕಿಹೊಳಿಯ 5 ಕೋಟಿ ರೂ. ಆಫರ್​ಗೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು
ಲಕ್ಷ್ಮೀ ಹೆಬ್ಬಾಳ್ಕರ್- ರಮೇಶ್ ಜಾರಕಿಹೊಳಿ
  • Share this:
ಬೆಂಗಳೂರು (ಡಿ. 31): ಲಕ್ಷ್ಮೀ ಹೆಬ್ಬಾಳ್ಕರ್ ಎದುರು ಸ್ಪರ್ಧಿಸುವುದಾದರೆ ಚುನಾವಣೆಗೆ ನಾನು 5 ಕೋಟಿ‌  ನೀಡುತ್ತೇನೆ  ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದ ಶಾಸಕ ರಮೇಶ್ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ. 

ರಮೇಶ್ ಜಾರಕಿಹೊಳಿ ವಿರುದ್ಧ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿರುವ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ರಮೇಶ ಜಾರಕಿಹೊಳಿ ನಿನ್ನೆ ನೀಡಿರುವ ಹೇಳಿಕೆಯಲ್ಲಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ವಿರುದ್ಧ ನಿಂತವರ ಪರವಾಗಿ 5 ಕೋಟಿ ರೂ. ಹಂಚುವುದಾಗಿ ಆಫರ್ ನೀಡಿದ್ದಾರೆ. ಬಿಜೆಪಿ ಸೇರಿದ ತಕ್ಷಣ 5 ಕೋಟಿ ರೂ. ಮತದಾರರಿಗೆ ಹಂಚಲು ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಹಾಗೂ ಚುನಾವಣಾ ಆಯೋಗ ಅನುಮತಿ ನೀಡಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಒಂದು ಕಡೆ ಲಕ್ಷ್ಮಿ ಹೆಬ್ಬಾಳಕರ್ ದುಡ್ಡು ಹಂಚಿ ಆರಿಸಿ ಬಂದಿದ್ದಾರೆ ಎನ್ನುವ ರಮೇಶ ಜಾರಕಿಹೊಳಿ, ಮತ್ತೊಂದು ಕಡೆ ತಾವು 5 ಕೋಟಿ ರೂ. ಹಂಚುವುದಾಗಿ ಹೇಳುವ ಮೂಲಕ ದ್ವಂದ್ವದ ಹೇಳಿಕೆ ನೀಡಿದ್ದಾರೆ. ಇದನ್ನು ಸ್ವಾಭಿಮಾನಿ ಮತದಾರರು ಅರ್ಥ ಮಾಡಿಕೊಳ್ಳುತ್ತಾರೆ. ರಮೇಶ್ ಜಾರಕಿಹೊಳಿ ಹಂಚುವುದು ಬಿಜೆಪಿ ದುಡ್ಡಾ ಅಥವಾ ಅವರ ಸ್ವಂತದ್ದಾ? ಮತದಾರರಿಗೆ ಅಕೌಂಟ್ ಮೂಲಕ ಹಂಚುತ್ತಾರಾ? ಆರ್.ಟಿ.ಜಿ.ಎಸ್. ಮಾಡುತ್ತಾರಾ ಅಥವಾ ನಗದು ರೂಪದಲ್ಲಿ ಕೊಡುತ್ತಾರಾ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಕನಕಪುರದಲ್ಲಿ ಏಸು ಪ್ರತಿಮೆ ನಿರ್ಮಾಣ ವಿವಾದ; ಡಿಕೆಶಿ ಆಪ್ತ ತಹಶೀಲ್ದಾರ್ ರಾತ್ರೋರಾತ್ರಿ ವರ್ಗಾವಣೆ

ನಾನು ವೈಯಕ್ತಿಕವಾಗಿ ಯಾವುದೇ ಭಾಷಾ ರಾಜಕಾರಣ, ಜಾತಿ ರಾಜಕಾರಣ ಹಾಗೂ ದ್ವೇಷದ ರಾಜಕಾರಣ ಮಾಡಿಲ್ಲ. ಬೆಳಗಾವಿ ಕ್ಷೇತ್ರದ ಜನರು ನನ್ನನ್ನು ಮನೆ ಮಗಳು ಎಂದು ಸ್ವೀಕಾರ ಮಾಡಿದ್ದಾರೆ. ಎಲ್ಲ ಸಮಾಜದ ಬಾಂಧವರು, ಎಲ್ಲ ಭಾಷೆಯ ಜನರು ಈ ಕ್ಷೇತ್ರದಲ್ಲಿ ಅನ್ಯೋನ್ಯವಾಗಿದ್ದೇವೆ. ನನ್ನನ್ನು ಆರಿಸಿ ಕಳಿಸಿದ್ದು ಅತ್ಯಂತ ಹಿಂದುಳಿದ ಕ್ಷೇತ್ರ ಅಭಿವೃದ್ಧಿಯಾಗಲಿ ಎನ್ನುವ ಅಪೇಕ್ಷೆ ಮತ್ತು ವಿಶ್ವಾಸದ ಮೇಲೆಯೇ ಹೊರತು ಯಾವುದೇ ಆಸೆ, ಆಮಿಷಕ್ಕೆ ಮತ ಹಾಕಿಲ್ಲ. ಜನರು ಹಣಕ್ಕಾಗಿ ಮತ ಹಾಕಿದ್ದಾರೆ ಎಂದು ಹೇಳುವ ಮೂಲಕ ರಮೇಶ ಜಾರಕಿಹೊಳಿ ಸ್ವಾಭಿಮಾನಿ ಮತದಾರರಿಗೆ ಅಪಮಾನ ಮಾಡಿದ್ದಾರೆ. ಅವರು ಕೂಡಲೇ ಜನರ ಕ್ಷಮೆ ಕೇಳಬೇಕು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಒತ್ತಾಯಿಸಿದ್ದಾರೆ.ಬೆಳಗಾವಿ ತಾಲೂಕಿನಲ್ಲಿ ಮೂವರು ಶಾಸಕರಿದ್ದೇವೆ. ಒಬ್ಬರು ಜೈನ್, ಮತ್ತೊಬ್ಬರು ಮರಾಠಾ ಹಾಗೂ ಇನ್ನೊಬ್ಬರು ಲಿಂಗಾಯತ. ಹಿಂದೆ ಇಬ್ಬರು ಜೈನ್ ಹಾಗೂ ಓರ್ವ ಮುಸ್ಲಿಂ ಸಮಾಜದವರಿದ್ದರು. ಅದಕ್ಕೂ ಹಿಂದೆ ಒಬ್ಬ ಮರಾಠ, ಒಬ್ಬ ಜೈನ್ ಹಾಗೂ ಮತ್ತೊಬ್ಬರು ಮುಸ್ಲಿಂ ಶಾಸಕರಿದ್ದರು. ಇದು ಇಲ್ಲಿಯ ಜನರು ಸೌಹಾರ್ದಯುತ ರಾಜಕಾರಣಕ್ಕೆ ಮನ್ನಣೆ ನೀಡುವುದನ್ನು ತೋರಿಸುತ್ತದೆ ಎಂದು ಹೆಬ್ಬಾಳ್ಕರ್ ವಿವರಿಸಿದ್ದಾರೆ.ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ಸ್ಪರ್ಧಿಸುವವರಿಗೆ 5 ಕೋಟಿ ಕೊಡ್ತೇನೆ; ಶಾಸಕ ರಮೇಶ್​ ಜಾರಕಿಹೊಳಿ ಆಫರ್​​

ಮಹಾರಾಷ್ಟ್ರದ ಚಂದಗಡದಲ್ಲಿ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರಾ? ಅಥವಾ ವಾಲ್ಮೀಕಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರಾ? ಚಂದಗಡದಲ್ಲಿ ಮರಾಠಿ ಸಮಾಜದ ಹಕ್ಕಿನಲ್ಲಿ ತಮ್ಮ ಅಳಿಯ, ವಾಲ್ಮೀಕಿ ಸಮಾಜದ ಅಪ್ಪಿರಾವ್ ಪಾಟೀಲ ಅವರನ್ನು ಆಯ್ಕೆಮಾಡಿಸಿಕೊಳ್ಳುವಾಗ ಮರಾಠಿ ಭಾಷಿಕರ ಹಕ್ಕಿನ ಚ್ಯುತಿ ಆಗಲಿಲ್ಲವೇ? ಈ ಬಗ್ಗೆ ಸ್ಪಷ್ಟೀಕರಣ ನೀಡಿದ ನಂತರ ಮರಾಠಿ ಭಾಷಿಕರ ಬಗ್ಗೆ ರಮೇಶ ಜಾರಕಿಹೊಳಿ ಮಾತನಾಡಲಿ ಎಂದು ಲಕ್ಷ್ಮಿ ಹೆಬ್ಬಾಳಕರ್ ಸವಾಲೆಸೆದಿದ್ದಾರೆ.

ನಾನು ಬೆಳಗಾವಿ ತಾಲೂಕನ್ನು ಯಾವುದೇ ಕಾರಣಕ್ಕೂ ರಿಪಬ್ಲಿಕ್ ಆಫ್ ಗೋಕಾಕ್ ಮಾಡಲು ಬಿಡುವುದಿಲ್ಲ. ಜನರು ಇವರ ಷಡ್ಯಂತ್ರಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಕೊಡುತ್ತಾರೆ. ರಮೇಶ ಜಾರಕಿಹೊಳಿ ಇಂತಹ ಕೀಳು ರಾಜಕಾರಣ ಬಿಟ್ಟು ಹಾಗೂ ಜನರ ಮಧ್ಯೆ ವಿಷಬೀಜ ಬಿತ್ತುವುದನ್ನು ಬಿಟ್ಟು ಅಭಿವೃದ್ಧಿಯತ್ತ ಗಮನ ನೀಡಲಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸಲಹೆ ನೀಡಿದ್ದಾರೆ.
First published:December 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ