ಬೆಂಗಳೂರು(ಫೆ.04): ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ರಾಜೀನಾಮೆಯಿಂದ ತೆರವಾದ ಒಂದು ವಿಧಾನ ಪರಿಷತ್ ಸ್ಥಾನಕ್ಕೆ ಫೆ.17ನೇ ತಾರೀಕಿನಂದು ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ವಿಧಾನಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರನ್ನು ಹೊಂದಿರುವ ಬಿಜೆಪಿಯೇ ಗೆಲ್ಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ. ಈ ಮಧ್ಯೆ ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆಯ ದಿನಾಂಕ ಎಂದು ರಾಜ್ಯ ಚುನಾವಣೆ ಆಯೋಗ ಘೋಷಿಸಿದೆ. ಹಾಗಾಗಿಯೇ ವಿಧಾನ ಪರಿಷತ್ನ ಒಂದು ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ನಾಳೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಡಿಸಿಎಂ ಲಕ್ಷ್ಮಣ ಸವದಿ ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿ ಮುಖಂಡರ ಸಮ್ಮುಖದಲ್ಲೇ ಸವದಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಬಳಿಕ ಶುಕ್ರವಾರ ನಾಮಪತ್ರ ಪರಿಶೀಲನೆ ನಡೆಯಲಿದೆ. ಇದಾದ ನಂತರ ಸೋಮವಾರ ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದರ ಬೆನ್ನಲ್ಲೇ ಒಂದು ವೇಳೆ ಅಗತ್ಯವಿದ್ದರೆ 17ನೇ ತಾರೀಕು ಚುನಾವಣೆ ನಡೆಯಲಿದೆ ಎನ್ನಲಾಗುತ್ತಿದೆ.
ಇನ್ನು ಒಂದು ವಿಧಾನ ಪರಿಷತ್ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಗೆಲ್ಲುವುದು ಖಚಿತ. ಬಿಜೆಪಿ ಅಭ್ಯರ್ಥಿ ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಲು ಬೇಕಾದ 112 ಮತಗಳನ್ನು ಬಿಜೆಪಿ ಹೊಂದಿದೆ. ಸದ್ಯ ಬಿಜೆಪಿ 117 ಜತೆಗೆ ಒಬ್ಬ ಪಕ್ಷೇತರ ಶಾಸಕರ ಬೆಂಬಲವೂ ಇದೆ. ಕಾಂಗ್ರೆಸ್ 65, ಜೆಡಿಎಸ್ 35 ಶಾಸಕರು ಹೊಂದಿದೆ. ಹಾಗಾಗಿ ಬಿಜೆಪಿಗೇ ಈ ಸ್ಥಾನ ಒಲಿಯಲಿದೆ.
ಈ ಹಿಂದೆಯೇ ಈ ವಿಧಾನ ಪರಿಷತ್ ಸ್ಥಾನಕ್ಕೆ ಉಪಚುನಾವಣೆಯ ದಿನ ನಿಗದಿಯಾಗಿತ್ತು. ಫೆ. 17ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿತ್ತು. ಅಂದೇ ಹೆಚ್ಚಿನ ಶಾಸಕ ಬಲ ಇರುವ ಬಿಜೆಪಿ ಈ ಉಪಚುನಾವಣೆಯಲ್ಲಿ ಗೆಲ್ಲುವುದು ಖಚಿತ ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೆ, ಯಾರನ್ನು ಕಣಕ್ಕಿಳಿಸಬೇಕೆಂಬ ಗೊಂದಲ ಮಾತ್ರ ಪಕ್ಷದೊಳಗೆ ನಿವಾರಣೆಯಾಗಿರಲಿಲ್ಲ. ಉಪ ಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿಗೆ ಟಿಕೆಟ್ ಕೊಡುವುದೋ ಅಥವಾ ರಾಣೆಬೆನ್ನೂರು ಕ್ಷೇತ್ರದ ಟಿಕೆಟ್ ತ್ಯಾಗ ಮಾಡಿದ ಆರ್. ಶಂಕರ್ಗೆ ಟಿಕೆಟ್ ಕೊಡುವುದೋ ಎಂಬ ಧರ್ಮಸಂಕಟದಲ್ಲಿ ಯಡಿಯೂರಪ್ಪ ಇದ್ದರು.
ಇದನ್ನೂ ಓದಿ: ಫೆ. 17ಕ್ಕೆ ಒಂದು ವಿಧಾನ ಪರಿಷತ್ ಸ್ಥಾನಕ್ಕೆ ಉಪ ಚುನಾವಣೆ; ಸವದಿ, ಶಂಕರ್ಗೆ ಶುರುವಾಯ್ತು ಟೆನ್ಷನ್
ಬಿಜೆಪಿ ಹೈಕಮಾಂಡ್ ಲಕ್ಷ್ಮಣ ಸವದಿಯ ಬೆನ್ನಿಗೆ ನಿಂತಿದೆ. ಆದರೆ,
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನಸು ಆರ್. ಶಂಕರ್ ಮೇಲಿದೆ. ರಾಣೆಬೆನ್ನೂರು ಟಿಕೆಟ್ ತ್ಯಾಗ ಮಾಡಿದರೆ ಸಚಿವ ಸ್ಥಾನ ಮತ್ತು ಪರಿಷತ್ ಸ್ಥಾನ ಕೊಡಿಸುವುದಾಗಿ ಆರ್. ಶಂಕರ್ಗೆ ವಾಗ್ದಾನ ನೀಡಿದ್ದ ಯಡಿಯೂರಪ್ಪಗೆ ಈಗ ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿದ್ದರು. ಈಗಾಗಲೇ ಡಿಸಿಎಂ ಆಗಿರುವ ಲಕ್ಷ್ಮಣ ಸವದಿ ಅವರನ್ನು ಯಾವುದೇ ಕಾರಣಕ್ಕೂ ಕೆಳಗಿಳಿಸಬಾರದು, ಅವಮಾನ ಮಾಡಬಾರದು ಎಂದು ಹೈಕಮಾಂಡ್ನಿಂದಲೂ ರಾಜ್ಯದ ನಾಯಕರಿಗೆ ಸ್ಪಷ್ಟ ಸಂದೇಶ ರವಾನೆಯಾಗಿತ್ತು. ಹೀಗಾಗಿ, ಯಡಿಯೂರಪ್ಪ ಸಂದಿಗ್ಧತೆಯಲ್ಲಿ ಸಿಲುಕಿಕೊಂಡಿದ್ದರು.
ಈ ಹಿಂದೆ ವಿಧಾನಪರಿಷತ್ ಸದಸ್ಯರಾಗಿದ್ದ ರಿಜ್ವಾನ್ ಅರ್ಷದ್ ಅವರು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದ ನಿಂತು ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಸ್ಥಾನ ಖಾಲಿ ಉಳಿದಿದೆ. ಈ ಉಪಚುನಾವಣೆಯಲ್ಲಿ ಗೆದ್ದವರು 2022, ಜೂನ್ 14ರವರೆಗೆ ಮೇಲ್ಮನೆ ಸದಸ್ಯರಾಗಿ ಉಳಿಯಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ