ಬೆಂಗಳೂರು (ಫೆ. 4): ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ಪ್ರಕರಣದಲ್ಲಿ ಜಾಮೀನು ಪಡೆದ ಸಾಹಿತಿ ಕೆ ಎಸ್ ಭಗವಾನ್ ಅವರ ಮುಖಕ್ಕೆ ನ್ಯಾಯಾಲಯದ ಆವರಣದಲ್ಲೇ ವಕೀಲೆಯೊಬ್ಬರು ಮಸಿ ಬಳಿದಿದ್ದಾರೆ. ಮೀರಾ ರಾಘವೇಂದ್ರ ಮಸಿ ಬಳಿದ ವಕೀಲೆ. ಎರಡನೇ ಎಸಿಎಂಎಂ ಕೋರ್ಟ್ ಆವರಣದಲ್ಲಿ ಈ ಘಟನೆ ನಡೆದಿದೆ. ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನಲೆ ಸಾಹಿತಿ ಭಗವಾನ್ ವಿರುದ್ಧ ವಕೀಲೆ ಮೀರಾ ರಾಘವೇಂದ್ರ ಖಾಸಗಿ ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ಇಂದು ನ್ಯಾಯಾಲಯ ನಡೆಸಿ, ಸಾಹಿತಿಗಳಿಗೆ ಜಾಮೀನು ನೀಡಿತು. ಈ ವೇಳೆ ಪ್ರಕರಣ ಮುಗಿಸಿ ಹೊರ ಬಂದ ಸಾಹಿತಿ ಭಗವಾನ್ ಅವರಿಗೆ ವಕೀಲೆ ಮೀರಾ ಮಸಿ ಬಳೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೂಡ ಬರೆದು ಕೊಂಡಿರುವ ವಕೀಲೆ. ಧರ್ಮವಿರೋಧಿ ಪ್ರೋ ಭಗವಾನ್ ಇಂದು ಕೋರ್ಟ್ ಕಟಕಟೆಗೆ ಹಾಜರಾಗಿ ಜಾಮೀನು ಪಡೆದುಕೊಂಡರು. ಅವರಿಗೆ ಮಸಿ ಬಳಿದು ತಕ್ಕ ಶಾಸ್ತಿ ಮಾಡಿದ್ದೇನೆ ಎಂದು ಫೇಸ್ಬುಕ್ನಲ್ಲಿ ತಿಳಿಸಿದ್ದಾರೆ. ಅಲ್ಲದೇ, ತಾವು ಮಸಿ ಬಳಿದಿರುವ ವಿಡಿಯೋವನ್ನು ಕೂಡ ಹಾಕಿಕೊಂಡಿದ್ದಾರೆ.
ಮುಂದೆ ಎಲ್ಲರಿಗೂ ಇದೇ ಶಾಸ್ತಿ.....ಜೈ ಶ್ರೀರಾಮ್ 🚩🚩
Posted by Meera Raghavendra on Thursday, 4 February 2021
ವಕೀಲೆ ಈ ಕಾರ್ಯ ಖಂಡಿಸಿ ಮಾತನಾಡಿರುವ ಭಗವಾನ್ ಪರ ವಕೀಲ ಸೂರ್ಯ ಮುಕುಂದರಾಜ್, ನ್ಯಾಯಾಲಯದ ಆವರಣದಲ್ಲಿ ಈ ರೀತಿಯ ಘಟನೆ ನಡೆಯಬಾರದಿತ್ತು. ಭಗವಾನ್ ರವರು ಕಾನೂನಿಗೆ ಬೆಲೆ ಕೊಟ್ಟು ಮೈಸೂರಿಂದ ಬೆಂಗಳೂರಿಗೆ ಹಾಜರಾಗಿದ್ದಾರೆ. ಕರಿ ಕೋಟ್ ಹಾಕಿರುವ ವಕೀಲೆ ಈ ರೀತಿ ಮಾಡುವುದು ಸರಿಯಲ್ಲ. ನ್ಯಾಯ ಕೊಡಿಸುವ ವಕೀಲರು ಈ ರೀತಿ ಸಮಾಜಕ್ಕೆ ಕೆಟ್ಟ ಉದ್ದೇಶ ಕೊಡಬಾರದು. ಇವತ್ತಿನ ದಿನಾಂಕ ನಿಗದಿ ಯಂತೆ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ಬರಬೇಕಾದರೆ ಈ ರೀತಿಯ ಕೃತ್ಯ ಜರುಗಿದೆ. ಅವಾಚ್ಯ ಶಬ್ದಗಳಿಂದ ಬೈದು ಮುಖಕ್ಕೆ ಮಸಿ ಬಳಿದು ಹಲ್ಲೆ ಮಾಡಿದ್ದಾರೆ. ಇದು ನ್ಯಾಯಲಯ ಮತ್ತು ವಕೀಲ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅವರು ಪ್ರತಿಭಟನೆ ಮಾಡುವುದಿದ್ದರೆ, ಹೊರಗಡೆ ಮಾಡಲಿ. ಈ ಕೃತ್ಯ ಎಸಗಿದ ವಕೀಲೆಗೆ ನ್ಯಾಯಾಲಯದಿಂದ ನಿರ್ಬಂಧ ಹೇರಬೇಕು. ಹಲ್ಲೆ ಅವಾಚ್ಯ ಶಬ್ದದಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಅಂಗರಕ್ಷಕ ಇರಬೇಕಾದರೆ ಹಲ್ಲೆ ಮಾಡಿದರೆಂದರೆ ಇಲ್ಲದಿದ್ದಾಗ ಕೊಲೆ ಮಾಡಲು ಹೆದರುವುದಿಲ್ಲ . ಈ ಸಂಬಂಧ ವಕೀಲರ ಸಂಘಕ್ಕೆ ದೂರು ನೀಡಲಾಗುವುದು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮನವಿ ಮಾಡುವೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ