ಬೆಂಗಳೂರು(ಸೆ.15): ಇಂದು ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ನಡೆಯಿತು. ಮುಂದಿನ ವಾರ ಮಳೆಗಾಲದ ಅಧಿವೇಶನ ಆರಂಭವಾಗುವ ಕಾರಣ ಈ ಸಂಪುಟ ಸಭೆ ಭಾರೀ ಮಹತ್ವ ಪಡೆದುಕೊಂಡಿತ್ತು. ಈ ಬಾರಿ ಕೊರೋನಾ ವೈರಸ್ ಹಾವಳಿಯಿಂದಾಗಿ ಸಚಿವ ಸಂಪುಟದ ಸಭಾಂಗಣದ ಬದಲಿಗೆ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಈ ಸಂಪುಟ ಸಭೆ ನಡೆಸಲಾಯ್ತು. ಇಂದಿನ ಇಡೀ ಮೈಸೂರು ನಗರದಲ್ಲಿ ಎಲ್ಇಡಿ ಬಲ್ಬ್ಗಳ ಅಳವಡಿಕೆ, ಬೆಳಗಾವಿ ತಾಲ್ಲೂಕಿನಲ್ಲಿ ರಾಣಿಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ 87.31 ಎಕರೆ ಜಮೀನು ಮಂಜೂರು ಮಾಡುವುದು ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಯ್ತು. ಸಭೆ ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತಾಡಿದ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ಬೆಳಗಾವಿಯಲ್ಲಿ ರಾಣಿ ಚೆನ್ನಮ್ಮ ವಿವಿಗೆ 87.31 ಎಕರೆ ಜಮೀನು ಮಂಜೂರು ಮಾಡಲು ತೀರ್ಮಾನಿಸಲಾಗಿದೆ. ನೆಲಂಮಗಲದಲ್ಲಿ ಮೂರು ಎಕರೆ ಜಮೀನು ಶ್ರೀ ಗುರುದೇವ ಸಂಸ್ಥೆಗೆ ಆಶ್ರಮ ನಿರ್ಮಿಸಲು ಮಂಜೂರು ಮಾಡಲು ಲಕ್ಕುಂಡಿ ಪ್ರಾಧಿಕಾರ ರಚನೆಗೆ ಅನುಮತಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು ಎಂದರು.
ಮೈಸೂರು ಡಿಸಿ ಕಚೇರಿ ನಿರ್ಮಾಣಕ್ಕೆ 84.69 ಕೋಟಿ ರೂ ಹೆಚ್ಚುವರಿ ಅಂದಾಜು ಮೊತ್ತ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ನೆಲಮಂಗಲದ ಯಲಚಗೇರಿಯಲ್ಲಿ ಸಿದ್ದಗಂಗಾ ಮಠಕ್ಕೆ 9.70 ಸರ್ಕಾರಿ ಗೋಮಾಳ ಭೂಮಿ ಮಂಜೂರು ಮಾಡಲಾಗಿದೆ. ಸಾದಿಲ್ವಾರು ನಿಧಿ 80 ರಿಂದ 500 ಕೋಟಿ ರೂ.ಗೆ ಏರಿಕೆ; ಹಾಸನ ನಗರಾಭಿವೃದ್ಧಿಗೆ ಬಡಾವಣೆ ನಿರ್ಮಿಸಲು 15.31 ಕೋಟಿ ರೂ ಮಂಜೂರು; ಕೈಗಾರಿಕಾ ತಿದ್ದುಪಡಿ ಕಾಯ್ದೆಗೆ ಒಪ್ಪಿಗೆ ನೀಡಲಾಯ್ತು ಎಂದರು.
ಹೀಗೆ ಮುಂದುವರಿದ ಜೆ.ಸಿ ಮಾಧುಸ್ವಾಮಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಎಇಆರ್ಟಿ ಸುರಕ್ಷತಾ ಘಟಕ ಅಳವಡಿಸಲು ತೀರ್ಮಾನ ಮಾಡಲಾಗಿದೆ. 583 ಎಕ್ಸ್ ರೇ ಘಟಕಗಳಿಗೆ ಸುರಕ್ಷತಾ ಕ್ರಮಕ್ಕಾಗಿ 11ಕೋಟಿ ಅನುದಾನ ನೀಡಲಾಗುತ್ತದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಔಷಧ ಖರೀದಿಗೆ 24.90 ಕೋಟಿ ರೂ ಮಂಜೂರು ಮಾಡಲಿದ್ದೇವೆ. ಅಗರ ಕೆರೆಯಿಂದ ಆನೇಕಲ್ಗೆ 50 ಎಂಎಲ್ಡಿ ನೀರು ಪೂರೈಕೆಗೆ ನಿರ್ಧಾರ ಮಾಡಿದ್ದು, 30 ಕೋಟಿ ರೂ. ನೀಡಲು ಒಪ್ಪಿಗೆ ಸೂಚನೆ ನೀಡಿದ್ದೇವೆ ಎಂದರು.
ಇದೇ ಸೆಪ್ಟೆಂಬರ್ 18ನೇ ತಾರೀಕಿನಂದು ದೆಹಲಿ ಕರ್ನಾಟಕ ಭವನಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಎನ್ಎಂಡಿಸಿ ಗಣಿ ಗುತ್ತಿಗೆ ತೊಡಕು ನಿವಾರಣೆ, ಸಂಡೂರಿನ ಡೋಣಿಮಲೈಯಲ್ಲಿ ಗಣಿಗಾರಿಕೆಗೆ ಒಪ್ಪಿಗೆ ನೀಡಲಾಗಿದೆ ಎಂದರು.
ಇನ್ನು, ಇದು ವಾರ್ಷಿಕ 600 ಕೋಟಿ ರೂ ಆದಾಯ ಹೆಚ್ಚಿಸಲಿದೆ. ಜಿಎಸ್ಡಿಪಿಗೆ ಕೇಂದ್ರ ಸರ್ಕಾರ ಶೇ.5 ರಷ್ಟು ಹೆಚ್ಚಳ ಮಾಡಿದೆ. ಹಾಗಾಗಿ ರಾಜ್ಯ ಸರ್ಕಾರ 33 ಸಾವಿರ ಕೋಟಿ ರೂ ಸಾಲ ಮಾಡಲು ನಿರ್ಧರಿಸಿದೆ ಎಂದರು ಸಚಿವ ಜೆ.ಸಿ ಮಾಧುಸ್ವಾಮಿ.
ಇದನ್ನೂ ಓದಿ: ಐಎಸಿ ಹುಟ್ಟುಹಾಕಿದ್ದೇ ಬಿಜೆಪಿ, ಆರೆಸ್ಸೆಸ್ ಎಂದ ಪ್ರಶಾಂತ್ ಭೂಷಣ್; ಐಎಸಿ, ಎಎಪಿಯ ಬಣ್ಣ ಬಯಲಾಯಿತೆಂದ ರಾಹುಲ್
ಇದೇ ವೇಳೆ ಸರ್ಕಾರದಲ್ಲಿ ದುಡ್ಡಿನ ಕೊರತೆ ಇಲ್ಲ ಎಂದ ಮಾಧುಸ್ವಾಮಿ, ಕೊರೋನಾ ವೈರಸ್ ಹಾವಳಿಯಿಂದ ಆದಾಯದ ಕೊರತೆ ಆಗಿದೆ. ಹೀಗೆ ಹೇಳುವುದಕ್ಕೆ ಸರ್ಕಾರಕ್ಕೆ ಯಾವುದೇ ಮುಚ್ಚುಮರೆಯಿಲ್ಲ. ನಾವು ಬೆಂಗಳೂರು ವಿಭಜನೆ ಮಾಡುತ್ತಿಲ್ಲ. ಬದಲಿಗೆ ಜೋನ್ಗಳನ್ನು ಹೆಚ್ಚಿಸಲಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ