ಬೆಳಗಾವಿ(ಡಿ.25): ಕೇಂದ್ರ ಸಚಿವ ಸುರೇಶ ಅಂಗಡಿ ಅಕಾಲಿಕ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರ ತೆರವು ಆಗಿದೆ. ಈ ಕ್ಷೇತ್ರಕ್ಕೆ ಚುನಾವಣೆ ನಡೆಸಲು ಈಗಾಗಲೇ ಆಯೋಗ ಎಲ್ಲಾ ರೀತಿಯ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕಸರತ್ತುಆರಂಭವಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಲ್ಲಿ 20ಕ್ಕೂ ಹೆಚ್ಚು ಆಕಾಂಕ್ಷಿಗಳು ಪೈಪೋಟಿ ನಡೆಸುತ್ತಿದ್ದಾರೆ. ಇದೀಗ ದಿ. ಸುರೇಶ ಅಂಗಡಿ ಪುತ್ರಿ ಹಾಗೂ ಸಚಿವ ಜಗದೀಶ ಶೆಟ್ಟರ್ ಸೊಸೆಯಾಗಿರುವ ಶ್ರದ್ಧಾ ಶೆಟ್ಟರ್ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಈ ಮೂಲಕ ಟಿಕೆಟ್ ಗಾಗಿ ಪ್ರಬಲ ಪೈಪೋಟಿ ನೀಡುವ ಸೂಚನೆಯನ್ನು ನೀಡಿದ್ದಾರೆ. ಈಗಾಗಲೇ ತೆರವಾಗಿರುವ ಕ್ಷೇತ್ರದಲ್ಲಿ ಸ್ಪರ್ಧಿಸಲು ಅನೇಕ ಬಿಜೆಪಿ ನಾಯಕರು, ವರಿಷ್ಠರು ಹಾಗೂ ಕೇಂದ್ರ ಪ್ರಭಾವಿಯ ನಾಯಕ ಬಿ ಎಲ್ ಸಂತೋಷ್ ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಸಿಎಂ ಬಿ ಎಸ್ ಯಡಿಯೂರಪ್ಪ ಸೇರಿ ಅನೇಕರನ್ನು ಬಿಜೆಪಿ ಮುಖಂಡರು ಭೇಟಿ ಮಾಡಿ ನಮಗೆ ಟಿಕೆಟ್ ಕೊಡುವಂತೆ ಲಾಭಿ ಆರಂಭಿಸಿದ್ದಾರೆ.
ಈ ನಡುವೆ ಶ್ರದ್ಧಾ ಶೆಟ್ಟರ್ ಹಾಗೂ ಸ್ಪೂರ್ತಿ ಶೆಟ್ಟರ್ ಇತ್ತೀಚಿಗೆ ರಾಮದುರ್ಗ ಹಾಗೂ ಯರಗಟ್ಟಿಗೆ ಭೇಟಿ ನೀಡಿದ್ದರು. ಶಾಸಕ ಮಹಾದೇವಪ್ಪ ಯಾದವಾಡ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡಿ ಮಾತುಕತೆ ಸಹ ನಡೆಸಿದ್ದಾರೆ. ಇದು ಅಂಗಡಿ ಕುಟುಂಬ ಸಹ ಟಕೆಟ್ ಪಡೆಯಲು ಪ್ರಬಲ ಆಕಾಂಕ್ಷಿ ಎಂಬುದು ಬಹಿರಂಗವಾಗಿದೆ.
ಇಂದು ದಿ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಪ್ರಯುಕ್ತ ಪಿಎಂ ಕಿಸಾನ್ ಸನ್ಮಾನ ಯೋಜನೆ ಕಾರ್ಯಕ್ರಮದಲ್ಲಿ ಶ್ರದ್ಧಾ ಶೆಟ್ಟರ್ ಪಾಲ್ಗೊಂಡಿದ್ದರು. ಬೆಳಗಾವಿ ಎಪಿಎಂಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರದ್ಧಾ ವೇದಿಕೆಯನ್ನು ಹಂಚಿಕೊಂಡರು. ಈ ಮೂಲಕ ಬಹಿರಂಗವಾಗಿ ಇದೇ ಮೊದಲ ಸಹ ಪಕ್ಷದ ವೇದಿಕೆಯಲ್ಲಿ ಶ್ರದ್ಧಾ ಕಾಣಿಸಿಕೊಂಡಿದ್ದರು. ಈ ಮೂಲಕ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಚುನಾವಣೆ ಟಿಕೆಟ್ ಪಡೆಯಲು ಕಸರತ್ತು ಆರಂಭಿಸಿದ್ದಾರೆ. ಆದರೆ ಕುಟುಂಬ ರಾಜಕಾಣರಕ್ಕೆ ಮಣೆ ಹಾಕದ ಬಿಜೆಪಿ ಈ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕಾದನೋಡಬೇಕಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಶ್ರದ್ಧಾ ಶೆಟ್ಟರ್, ಬಿಜೆಪಿ ಮುಖಂಡರು ಹಾಗೂ ರೈತರು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ಅಭಿಮಾನಿಗಳು ಭೇಟಿ ಮಾಡಿ ಮಾತನಾಡುತ್ತಿರುವುದ ಖುಷಿ ತಂದಿದೆ. ಮನೆಗೆ ಸಹ ದಿ. ಸುರೇಶ ಅಂಗಡಿ ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಜನ ಸಂಪರ್ಕವನ್ನು ಬೆಳೆಸಿಕೊಂಡು ಹೋಗುತ್ತೇವೆ. ಲೋಕಸಭೆ ಉಪ ಚುನಾವಣೆ ಬಗ್ಗೆ ಏನು ಮಾತನಾಡುವುದಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಉಪ ಚುನಾವಣೆ ಸಂಬಂಧ ಹಲವು ಚಟುವಟಿಕಗಳು ನಡೆದಿವೆ. ಈಗಾಗಲೇ 2 ಇಬ್ಬರು ಅಭ್ಯರ್ಥಿಗಳ ಹೆಸರು ಫೈನಲ್ ಮಾಡಲಾಗಿದೆ. ಬಿಜೆಪಿ ಯಾರಿಗೆ ಟಿಕೆಟ್ ನೀಡಲಿದೆ ಎನ್ನುವುದರ ಮೇಲೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಲು ಸಿದ್ದತೆಯನ್ನು ಮಾಡಿಕೊಂಡಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಗೆ ಇದು ಪ್ರತಿಷ್ಟೆಯ ಕಣವಾಗಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ