ಇಂದು ಕಡೆ ಆಷಾಢ ಶುಕ್ರವಾರ; ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ

news18
Updated:August 10, 2018, 1:43 PM IST
ಇಂದು ಕಡೆ ಆಷಾಢ ಶುಕ್ರವಾರ; ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ
news18
Updated: August 10, 2018, 1:43 PM IST
-ಪುಟ್ಟಪ್ಪ, ನ್ಯೂಸ್​ 18 ಕನ್ನಡ

ಮೈಸೂರು,(ಆ.10): ಆಷಾಢ ಮಾಸದ ಕೊನೆಯ ಶುಕ್ರವಾರ ಹಿನ್ನೆಲೆ ಚಾಮುಂಡಿ ಬೆಟ್ಟದಲ್ಲಿ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ, ಪುನಸ್ಕಾರ ನಡೆಯುತ್ತಿದೆ.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಡಗರ, ಸಂಭ್ರಮ ಮನೆಮಾಡಿದ್ದು, ಇಂದು ಮುಂಜಾನೆ 3.30 ರಿಂದ ಪೂಜೆ ಶುರುವಾಗಿದೆ. ದೇವಿ ದರ್ಶನಕ್ಕಾಗಿ ಮುಂಜಾನೆಯಿಂದಲೇ ಸರತಿ ಸಾಲು ನಿಂತಿದೆ. ಧರ್ಮ ದರ್ಶನದ ಕ್ಯೂಗಳಲ್ಲಿ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. ದೇವಾಲಯದ ಒಳ ಮತ್ತು ಹೊರ ಆವರಣ ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದೆ. ಪ್ರತಿವಾರದಂತೆ ಕಡೆಯ ಶುಕ್ರವಾರಕ್ಕೂ ಕೆ.ಎಸ್.ಆರ್.ಟಿ.ಸಿ. ಉಚಿತ ಸೇವೆ ಒದಗಿಸಲಾಗಿದೆ. ಲಲಿತ ಮಹಲ್ ಹೆಲಿಪ್ಯಾಡ್​ನಿಂದ ಚಾಮುಂಡಿ ಬೆಟ್ಟ - ಚಾಮುಂಡಿ ಬೆಟ್ಟದಿಂದ ಹೆಲಿಪ್ಯಾಡ್​ವರೆಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ವಾಹನಗಳಿಗೆ ಹ್ಯಾಲಿಪ್ಯಾಡ್​​ನಲ್ಲೇ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.

ಕಡೆ ಆಷಾಡ ಶುಕ್ರವಾರದ ಪ್ರಯುಕ್ತ ದೇವಿಗೆ ವಿಶೇಷ ಸಿಂಹ ವಾಹಿನಿ ಅಲಂಕಾರ ಮಾಡಲಾಗಿದೆ. ಗರ್ಭಗುಡಿಯಿಂದ ಮುಖ್ಯದ್ವಾರದವರೆಗೆ ಹೂವಿನ ಅಲಂಕಾರ ಮಾಡಲಾಗಿದ್ದು, ದೇವಾಲಯವು ಕಂಗೊಳಿಸುತ್ತಿದೆ. ಇಂದು ಮುಂಜಾನೆ 3.30 ರಿಂದಲೇ ಪೂಜೆ ಶುರುವಾಗಿದ್ದು,ರಾತ್ರಿ 10 ಗಂಟೆಯವರೆಗೆ ದರ್ಶನದ ವ್ಯವಸ್ಥೆ ಇರುತ್ತದೆ. ನಾಳಿನ ಅಮಾವಾಸ್ಯೆ ಪೂಜೆ ಹಿನ್ನೆಲೆ ಎಂದಿನಂತೆ ವಿಶೇಷ ಪೂಜೆಗೆ ಸಕಲ ಸಿದ್ದತೆ ಮಾಡಿಕೊಂಡಿದ್ದೇವೆ. ಭಕ್ತರು ಇಂದು ಮತ್ತು ನಾಳೆಯು ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಸಿಕೊಂಡು ಹೊಗುತ್ತಾರೆ ಎಂದು ದೇವಾಲಯದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್ ದೀಕ್ಷಿತ್ ತಿಳಿಸಿದ್ದಾರೆ.

ವಿಜಯೇಂದ್ರ ಭೇಟಿ:

ಇನ್ನೂ ಆಷಾಢ ಮಾಸ 4 ನೇ ಶುಕ್ರವಾರ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ‌ ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕೆಂದು ಹರಕೆ ಹೊತ್ತು, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಚಾಮುಂಡಿ ಬೆಟ್ಟ ಹತ್ತಿ ದೇವಿಯ ದರ್ಶನ ಪಡೆದಿದ್ದಾರೆ.

ಹೆಚ್​.ಡಿ.ರೇವಣ್ಣ ಭೇಟಿ:

ಸಚಿವ ಹೆಚ್​.ಡಿ. ರೇವಣ್ಣ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಡಿ.ಕೆ.ಶಿವಕುಮಾರ್​ ಭೇಟಿ:

ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವಿಯ ದರ್ಶನ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ನಾಡ ಅಧಿದೇವತೆ ಚಾಮುಂಡೇಶ್ವರಿ ಎಲ್ಲರಿಗೂ ಆಶೀರ್ವಾದ ಮಾಡಿದ್ದಾಳೆ. ಕಬಿನಿ ಜಲಾಶಯ ಸೇರಿದಂತೆ ಎಲ್ಲಾ ಜಲಾಶಯಗಳು ತುಂಬಿವೆ. ನದಿಪಾತ್ರದ ಜನರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ ಎಂದರು.

ಸುದ್ದಿಗಾರರು ರಾಜಕೀಯ ಪ್ರಶ್ನೇ ಕೇಳಿದ್ದಕ್ಕೆ ಗರಂ ಆದ ಡಿಕೆಶಿ, ನಾನು ಇಲ್ಲಿ ರಾಜಕೀಯ ಮಾಡಲು ಬಂದಿಲ್ಲ. ದೇವಿಯ ದರ್ಶನ ಪಡೆಯಲು ಬಂದಿದ್ದೇನೆ. ದೇವಿ ಮತ್ತು ಭಕ್ತನ ನಡುವಿನ ಸಂಬಂಧ ಅಷ್ಟೆ ಎಂದರು. ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮುತ್ತಪ್ಪ ರೈ ಭೇಟಿ:

ಜಯಕರ್ನಾಟಕ ಸಂಘಟನೆಯ ಮುಖ್ಯಸ್ಥ ಮುತ್ತಪ್ಪ ರೈ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
First published:August 10, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ