ಬಾಗಲಕೋಟೆ ಯುಕೆಪಿ ಕಚೇರಿಯಲ್ಲಿ ಭಾರೀ ಮೊತ್ತದ ಚೆಕ್​ ಪತ್ತೆ; ಲಂಚದ ಆಸೆಗಾಗಿ ಅಧಿಕಾರಗಳ ಬಳಿಯಿದ್ದ ಸಂತ್ರಸ್ತರ ಚೆಕ್​ಗಳು

ಲಂಚದ ಆಸೆಗೆ ಬಿದ್ದ ಪ್ರಥಮ ದರ್ಜೆ ಸಹಾಯಕರೊಬ್ಬರು ಈ ಪರಿಹಾರದ ಚೆಕ್​ ವಿತರಿಸದೆ ತಮ್ಮ ಬಳಿಯೇ ಇಟ್ಟುಕೊಂಡಿರುವುದು ಬಯಲಾಗಿದೆ.

ಕಚೇರಿ ಚಿತ್ರಣ

ಕಚೇರಿ ಚಿತ್ರಣ

  • Share this:
ಬಾಗಲಕೋಟೆ (ಜ. 29): ಕೃಷ್ಣಾ ಮೇಲ್ಡಂಡೆ ಯೋಜನೆಗಾಗಿ ಭೂಮಿ ನೀಡಿದ್ದ ರೈತರಿಗೆ ಸರ್ಕಾರದಿಂದ ಪರಿಹಾರ ಬಿಡುಗಡೆಯಾಗಿದೆ. ಆದರೆ, ಈ ಪರಿಹಾರ ರೈತರಿಗೆ ಸೇರುವಲ್ಲಿ ಮಾತ್ರ ವಿಫಲವಾಗಿದೆ. ಇದಕ್ಕೆ ಕಾರಣ ಅಧಿಕಾರಿಗಳ ಹಣದ ದುರಾಸೆ. ಸರ್ಕಾರದಿಂದ ಸಂತ್ರಸ್ತರಿಗೆ ಬರಬೇಕಿದ್ದ 4ಕೋಟಿ, 61ಲಕ್ಷ, 46ಸಾವಿರದ ಚೆಕ್​ಗಳು ಫಲಾನುಭವಿಗಳಿಗೆ ತಲುಪದೇ, ಅಧಿಕಾರಿಗಳ ಬಳಿಯೇ ಇರುವುದು ಎಸಿಬಿ ದಾಳಿ ಬಳಿಕ ಹೊರ ಬಂದಿದೆ. ಲಂಚದ ಆಸೆಗೆ ಬಿದ್ದ ಪ್ರಥಮ ದರ್ಜೆ ಸಹಾಯಕರೊಬ್ಬರು ಈ ಪರಿಹಾರದ ಚೆಕ್​ ವಿತರಿಸದೆ ತಮ್ಮ ಬಳಿಯೇ ಇಟ್ಟುಕೊಂಡಿರುವುದು ಬಯಲಾಗಿದೆ. ಯೋಜನೆಗಾಗಿ ಭೂಮಿ ನೀಡಿದ್ದ ರೈತ ಕಮತಗಿ ಪರಿಹಾರದ ಚೆಕ್​ಗಾಗಿ ಹಲವು ಬಾರಿ ಯುಕೆಪಿ ಕಚೇರಿ ಅಲೆದಿದ್ದಾರೆ. ಆದರೆ, ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಥಮ ದರ್ಜೆ ಸಹಾಯಕಿ ಸುನಂದಾಬಾಯಿ ಮಾತ್ರ ಲಂಚ ನೀಡದೇ ಚೆಕ್​ ನೀಡಲು ಸುತರಾಂ ಒಪ್ಪಿಲ್ಲ. ಇದರಿಂದ ರೋಸಿದ ಕಮತಗಿ ಈ ಕುರಿತು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. 

ರೈತರ ದೂರು ಆಧಾರಿಸಿ ಎಸಿಬಿ ಅಧಿಕಾರಿಗಳು ಜ. 15ರಂದು ದಾಳಿ ನಡೆಸಿದಾಗ ಸುಮಾರು 50ಕ್ಕೂ ಹೆಚ್ಚು ರೈತರಿಗೆ ಬರಬೇಕಿದ್ದ ಬರೋಬ್ಬರಿ 4ಕೋಟಿ, 61ಲಕ್ಷ, 46ಸಾವಿರದ ಚೆಕ್ ಗಳು  ಪತ್ತೆಯಾಗಿರುವುದು ಕಂಡುಬಂದಿದೆ. ಲಂಚದ ಆಸೆಗಾಗಿ ಅಧಿಕಾರಿಗಳು ಚೆಕ್ ಗಳನ್ನು  ಇಟ್ಟುಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಈ ವೇಳೆ ಅನುಮಾನಗೊಂಡು ಎಸಿಬಿ ಅಧಿಕಾರಿಗಳು ಮುಖ್ಯ ಲೆಕ್ಕಾಧಿಕಾರಿ ಕಚೇರಿಯಲ್ಲಿ ಶೋಧನೆ ನಡೆಸಿದಾಗ ರೈತರ ಖಾತೆಗೆ ಆರ್ ಟಿಜಿಎಸ್ ಮಾಡಬೇಕಿದ್ದ 4ಕೋಟಿ 61ಲಕ್ಷ, 46ಸಾವಿರದ 310ರೂಪಾಯಿ 50ಕ್ಕೂ ಅಧಿಕದ ಪರಿಹಾರದ ಚೆಕ್ ಗಳು ಪತ್ತೆಯಾಗಿವೆ. 70ಜನ ಸಂತ್ರಸ್ತರ ವೈಯಕ್ತಿಕ  ಖಾತೆಗೆ ಜಮಾ ಮಾಡುದಕ್ಕೆ ಬಾಕಿ ಇಟ್ಟುಕೊಂಡಿದ್ದು ಕಂಡುಬಂದಿದೆ.

ಇದಾದ ಬಳಿಕ ಎಸಿಬಿ ಅಧಿಕಾರಿಗಳು ಸಂತ್ರಸ್ತರಿಗೆ ಚೆಕ್​ ವಿತರಣೆಗೆ ಮುಂದಾಗಿದ್ದು,  ಆರ್ ಟಿ ಜಿಎಸ್ ಮಾಡಿ ಮಾಹಿತಿ ಸಲ್ಲಿಸಲು ಎಸಿಬಿ ಅಧಿಕಾರಿಗಳು ಸೂಚಿಸಿದ್ದರು. ಅದರಂತೆ ರೈತರ ಖಾತೆಗೆ ಪರಿಹಾರ ಹಣ ಜಮಾ ಮಾಡಿ ಕಡೆಗೂ ಅವರಿಗೆ ಸಿಗಬೇಕಾದ ಹಣ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿ ಉತ್ತರ ವಲಯ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧೀಕ್ಷಕ ಬಿ ಎಸ್ ನೇಮಗೌಡ ಮಾರ್ಗದರ್ಶನದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿ, ಸಂತ್ರಸ್ತರಿಗೆ ಪರಿಹಾರ ಚೆಕ್ ತಲುಪಲು ಶ್ರಮಿಸಿದ್ದಕ್ಕೆ ರೈತರು  ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನು ಓದಿ: ರಾಜ್ಯದ ಐವರು ಕುಸ್ತಿಪಟುಗಳಿಗೆ ಅವಮಾನ; ತವರಿಗೆ ಮರಳಿ ಬರಲು ಹಣವಿಲ್ಲದೆ ಫುಟ್​ಪಾತ್ ನಲ್ಲಿ ಎರಡು ದಿನ ವಾಸ!

ಭ್ರಷ್ಟಾಚಾರದ ಕೂಪವಾಗುತ್ತಿದೆಯಾ ಯುಕೆಪಿ ಕಚೇರಿ!?

ಕೃಷ್ಣಾ ಮೇಲ್ದಂಡೆ ಯೋಜನೆ ಪ್ರಮುಖ ನೀರಾವರಿ ಯೋಜನೆಗಳಲ್ಲೊಂದಾಗಿದೆ. ಈ ಯೋಜನೆ ಸಾಕಾರಕ್ಕಾಗಿ ಸಾವಿರಾರು ರೈತರು ಭೂಮಿ,ಮನೆ ಕಳೆದುಕೊಂಡಿದ್ದಾರೆ. ಆದರೆ ಭೂಮಿ ಕಳೆದುಕೊಂಡವರಿಗೆ ನ್ಯಾಯಯುತವಾದ ಪರಿಹಾರ ಸಿಕ್ಕಿಲ್ಲ ಎನ್ನುವ ಕೂಗು ಒಂದೆಡೆಯಾದರೆ. ಇನ್ನೊಂದೆಡೆ ಬಂದಂತಹ ಪರಿಹಾರಕ್ಕಾಗಿ ಸಂತ್ರಸ್ತರು ಅಧಿಕಾರಿಗಳಿಗೆ ಲಂಚ ಕೊಡಬೇಕು ಎನ್ನುವ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಯುಕೆಪಿ ಕಚೇರಿ ಭ್ರಷ್ಟಾಚಾರ ಕೂಪವಾಗಿದೆ ಎನ್ನುವ ಅನುಮಾನಗಳು ಕಾಡುತ್ತಿವೆ. ಸಂತ್ರಸ್ತರ ಪರಿಹಾರ ಹೆಸರಲ್ಲಿ ಅಧಿಕಾರಿಗಳು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸರಕಾರ  ಕಡಿವಾಣ ಹಾಕಬೇಕು ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಲು ಎರಡನೇ ಹಂತ  ಕಾರ್ಯ ಮುಗಿದಿದೆ. ಇದೀಗ ಮೂರನೇ ಹಂತಕ್ಕೆ 51ಸಾವಿರ ಕೋಟಿ ಅನುದಾನ ಬೇಕಿದೆ. ರಾಜ್ಯ ಸರ್ಕಾರ ಬಜೆಟ್ ನಲ್ಲಿ ಸಮರ್ಪಕವಾಗಿ ಅನುದಾನ ಕೊಡುತ್ತಿಲ್ಲ. ಹೀಗಾಗಿ  ಯುಕೆಪಿ ಯೋಜನೆ ಕಾಮಗಾರಿಗಳು ಕುಂಟುತ್ತಾ ನಡೆಯುತ್ತಿವೆ. ಕಚೇರಿಯೊಳಗೆ ಅಧಿಕಾರಿಗಳ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಬಂದಂತಹ ಹಣಕ್ಕೆ ಅಧಿಕಾರಿಗಳು ಲಂಚಪಡೆಯದೇ ಸಂತ್ರಸ್ತರಿಗೆ ಪರಿಹಾರ ಕೊಡುತ್ತಿಲ್ಲ.ಇದಕ್ಕೆ ಕೊನೆ ಯಾವಾಗ ಎನ್ನುತ್ತಿದ್ದಾರೆ ಸಂತ್ರಸ್ತರು.
Published by:Seema R
First published: