Kodagu Rains: ಬೆಟ್ಟ ಕುಸಿಯುತ್ತಿದೆ ರಾಷ್ಟ್ರೀಯ ಹೆದ್ದಾರಿ 275ರಲ್ಲಿ, ಹಲವು ಮನೆಗಳಿಗೆ ಹಾನಿ, ಗೋಡೆ ಕುಸಿದು ವೃದ್ಧೆಗೆ ಗಾಯ

ಸುಂಟಿಕೊಪ್ಪ ಮತ್ತು ಹಟ್ಟಿಹೊಳೆ ಸಮೀಪ ಹತ್ತಾರು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಇದರಿಂದ ಮಡಿಕೇರಿ, ಮಾದಾಪುರ, ಹಟ್ಟಿಹೊಳೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮಂಗಳವಾರ ಸಂಜೆವರೆಗೂ ವಿದ್ಯುತ್ ಪೂರೈಕೆ ಸ್ಥಗಿತವಾಗಿತ್ತು.

ಭೂಕುಸಿತ

ಭೂಕುಸಿತ

  • Share this:
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ  (Kodagu Rainfall) ಮಂಗಳವಾರ ದಿನವಿಡೀ ಬಿಟ್ಟು ಬಿಟ್ಟು ತೀವ್ರ ಮಳೆ ಸುರಿದಿದೆ. ಮಳೆ ಪ್ರಮಾಣ ಸ್ವಲ್ಪವೇ ತಗ್ಗಿದ್ದರೂ ಮೂರು ದಿನಗಳ ಕಾಲ ಸುರಿದ ಮಳೆಗೆ ಜಿಲ್ಲೆಯ ಹಲವೆಡೆ ಅವಾಂತರಗಳು ನಡೆದಿವೆ. ಜಿಲ್ಲೆಯಲ್ಲಿ ಮಂಗಳವಾರ ಸಂಜೆಯಿಂದ ಬುಧವಾರ ಬೆಳಿಗ್ಗೆ 8.30 ವರೆಗೆ ಆರೆಂಜ್ ಅಲರ್ಟ್  (Orange Alert) ಘೋಷಣೆಯಾಗಿದ್ದು, ಬುಧವಾರ ಶಾಲಾ ಕಾಲೇಜುಗಳಿಗೆ ರಜೆ (School And College Holiday) ಘೋಷಿಸಲಾಗಿದೆ. ಜಿಲ್ಲೆಯಲ್ಲಿ ತೀವ್ರ ಮಳೆ ಸುರಿಯುತ್ತಿದ್ದು ಮಂಗಳವಾರ ಸಂಜೆಯಿಂದ ಬುಧವಾರ ಬೆಳಿಗ್ಗೆ 8.30 ರವರೆಗೆ 115.6 ಮಿಲಿ ಮೀಟರ್ ನಿಂದ 204.4 ಮಿಲಿ ಮೀಟರ್ ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ್ ಅವರು ಬುಧವಾರ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿತ್ತು.

ಗೋಡೆ ಕುಸಿತ, ವೃದ್ಧೆಗೆ ಗಾಯ

ಪರಿಣಾಮವಾಗಿ ಶನಿವಾರಸಂತೆ ಸಮೀಪದ ಸುಳುಗಳಲೆಯಲ್ಲಿ ಗೋಡೆ ಕುಸಿದು 69 ವರ್ಷದ ವೃದ್ಧೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಕಾಲು ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದು, ವೃದ್ಧೆಗೆ ಶನಿವಾರಸಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: Karnataka Weather Report: ರಾಜ್ಯದಲ್ಲಿ ಇನ್ನೈದು ದಿನ ಮಳೆ; ಈ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಬೆಟ್ಟ ಕುಸಿಯುತ್ತಿದೆ ರಾಷ್ಟ್ರೀಯ ಹೆದ್ದಾರಿಯಲ್ಲಿ

ಇನ್ನು ಮಡಿಕೇರಿ ತಾಲ್ಲೂಕಿನ ಮದೆನಾಡು ಸಮೀಪದ ಕರ್ತೋಜಿಯಲ್ಲಿ ಬೆಟ್ಟ ಕುಸಿಯುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ 275 ಸಂಪೂರ್ಣ ಉಬ್ಬುತ್ತಿದೆ. ಹೆದ್ದಾರಿಯಲ್ಲಿ ಉಬ್ಬುತ್ತಿರುವ ಮಣ್ಣನ್ನು ಎರಡು ಹಿಟಾಚಿ ಬಳಸಿ ಟಿಪ್ಪರ್ ಲಾರಿ ಮೂಲಕ ಬೇರೆಡೆಗೆ ಸಾಗಿಸಲಾಗುತ್ತಿದೆ. ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಕಾರ್ಯಪಾಲಕ ಎಂಜಿನಿಯರ್ ಜಿ.ಆರ್ ಹೆಗ್ಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

NDRF ತಂಡದಿಂದ ಪರಿಶೀಲನೆ

ತಾತ್ಕಾಲಿಕವಾಗಿ ಮಣ್ಣು ತೆಗೆದು ವಾಹನಗಳ ಸಂಚಾರಕ್ಕೆ ಸುಗಮ ವ್ಯವಸ್ಥೆ ಮಾಡಲಾಗುವುದು. ಮಳೆಗಾಲದ ನಂತರ ಶಾಶ್ವತ ಕಾಮಗಾರಿ ಮಾಡುವುದಾಗಿ ಹೇಳಿದರು. ಇದೇ ಸ್ಥಳಕ್ಕೆ ಎನ್‍ಡಿಆರ್ ಎಫ್  ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜನರಿಗೆ ಯಾವುದಾದರೂ ತೊಂದರ ಇದ್ದರೆ ಅವರನ್ನು ರಕ್ಷಿಸಲು ಮುಂದಾಗಿದೆ. ಆದರೆ ಜನರಿಗೆ ಯಾವುದೇ ತೊಂದರೆ ಇಲ್ಲದ ಕಾರಣ, ಎನ್‍ಡಿಆರ್‍ಎಫ್ ತಂಡ ಅಲ್ಲಿಂದ ಬೇರೆಡೆ ತೆರಳಿತು.

Landslide in National highway 275 kodagu rsk mrq
ಮರ ತೆರವು ಕಾರ್ಯಾಚರಣೆ


ನಿರಂತರ ಮಳೆಯಿಂದ ಹಲವು ಮನೆಗಳಿಗೆ ಹಾನಿ

ಇನ್ನು ಜಿಲ್ಲೆಯ ಅಲ್ಲಲ್ಲಿ ಹಲವು ಮನೆಗಳ ಮೇಲೆ ಸಣ್ಣ ಪ್ರಮಾಣದ ಗುಡ್ಡಗಳು ಕುಸಿದು ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಜೊತೆಗೆ ಮರಗಳು ಬಿದ್ದು ಹಾನಿಯಾಗಿವೆ. ಕೊಡ್ಲಿಪೇಟೆ ಸಮೀಪದ ಶಿವರಳ್ಳಿಯಲ್ಲಿ ಜಯಂತಿ ಶಿವಣ್ಣ ಎಂಬುವರ ಮನೆ ಮೇಲೆ ಭಾರೀ ಘಾತ್ರದ ಮರವೊಂದು ಬಿದ್ದಿದ್ದು, ಮನೆ ಸಂಪೂರ್ಣ ಜಖಂಗೊಂಡಿದೆ.

ವಿದ್ಯುತ್ ಪೂರೈಕೆಯಲ್ಲಿ ಸ್ಥಗಿತ

ಸುಂಟಿಕೊಪ್ಪ ಮತ್ತು ಹಟ್ಟಿಹೊಳೆ ಸಮೀಪ ಹತ್ತಾರು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಇದರಿಂದ ಮಡಿಕೇರಿ, ಮಾದಾಪುರ, ಹಟ್ಟಿಹೊಳೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮಂಗಳವಾರ ಸಂಜೆವರೆಗೂ ವಿದ್ಯುತ್ ಪೂರೈಕೆ ಸ್ಥಗಿತವಾಗಿತ್ತು.

ಇದನ್ನೂ ಓದಿ:  Yadagiri: ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್; ಬುಡ್ಗ ಜನಾಂಗದ ಸಮುದಾಯದ ಮಕ್ಕಳಿಗೆ ಶಿಕ್ಷಣ ಮರೀಚಿಕೆ

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಇನ್ನೂ ನಾಲ್ಕು ದಿನಗಳ ಕಾಲ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಶಿವಮೊಗ್ಗದ ಮೂರು ತಾಲೂಕು, ದಕ್ಷಿಣ ಕನ್ನಡ, ಕೊಡಗು, ಉಡುಪಿ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
Published by:Mahmadrafik K
First published: