ದಾನ ನೀಡಿದ 70 ವರ್ಷದ ಬಳಿಕ ಶಾಲೆ ಜಾಗ ಬಿಡುವಂತೆ ಕೋರ್ಟ್ ಮೊರೆ ಹೋದ ದಾನಿಯ ಸೊಸೆಯಂದಿರು

1950 ರಲ್ಲಿ ತಮ್ಮೂರಿಗೂ ಒಂದು ಶಾಲೆ ಬೇಕೆಂದು ಅಂದು ಮೂರು ಸಾವಿರ ಬೆಲೆ ಬಾಳುತ್ತಿದ್ದ 2 ಎಕರೆ 49 ಸೆಂಟ್ ಜಾಗವನ್ನು ದಾನವಾಗಿ ಬಿಟ್ಟುಕೊಟ್ಟಿದ್ದರು. ಜೊತೆಗೆ ಐದು ಸಾವಿರ ರೂಪಾಯಿಯಲ್ಲಿ 3 ಕೊಠಡಿಗಳನ್ನು ನಿರ್ಮಿಸಲು ಹಣ ನೀಡಿದ್ದರು.

ವಲ್ನೂರು ಸರ್ಕಾರಿ ಶಾಲೆ

ವಲ್ನೂರು ಸರ್ಕಾರಿ ಶಾಲೆ

  • Share this:
ಕೊಡಗು : ಆ ಪುಣ್ಯಾತ್ಮ 70 ವರ್ಷಗಳ ಹಿಂದೆ ತನ್ನೂರಿಗೆ ಶಾಲೆ (School) ಬೇಕೆಂದು ತನ್ನ ಎರಡು ಎಕರೆ 49 ಸೆಂಟ್ ಜಾಗವನ್ನೇ ದಾನವನ್ನಾಗಿ (Land Donate) ಕೊಟ್ಟಿದ್ದ. ಅಷ್ಟೇ ಅಲ್ಲ ಸಾಕಷ್ಟು ಸ್ಥಿತಿವಂತರಾಗಿದ್ದ ಅವರು  ಅವತ್ತಿಗೆ ಐದು ಸಾವಿರ ರೂಪಾಯಿ ವೆಚ್ಚದಲ್ಲಿ ಶಾಲೆಯ ಮೂರು ಕೊಠಡಿಗಳನ್ನು (Three Classrooms) ನಿರ್ಮಿಸಿ ಕೊಟ್ಟಿದ್ದರು. ಆದರೆ ಇಂದು ಆ ಜಾಗಕ್ಕೆ ಕೋಟಿ ಬೆಲೆ ಬಂದಿರುವ ಹಿನ್ನೆಲೆಯಲ್ಲಿ ಆ ಜಾಗ ನಮ್ಮದು ಅದನ್ನು ಬಿಟ್ಟು ಕೊಡಿ ಎಂದು ಆ ದಾನಿಯ ಸೊಸೆಯಂದಿರು (Daughter in Law) ಕೋರ್ಟ್ (Court) ಮೆಟ್ಟಿಲೇರಿದ್ದಾರೆ. ಪರಿಣಾಮ ಆ ಶಾಲೆ(School)ಯಲ್ಲಿರುವ ನೂರಾರು ವಿದ್ಯಾರ್ಥಿಗಳು (Students) ಬೀದಿಗೆ ಬರುವ ಆತಂಕ ಎದುರಾಗಿದೆ.

ಹೌದು, ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ವಾಲ್ನೂರಿನ (Valnuru, kodagu) ಹೆಚ್ ಲಿಂಗಪ್ಪ ಅವರು 1950 ರಲ್ಲಿ ತಮ್ಮೂರಿಗೂ ಒಂದು ಶಾಲೆ ಬೇಕೆಂದು ಅಂದು ಮೂರು ಸಾವಿರ ಬೆಲೆ ಬಾಳುತ್ತಿದ್ದ 2 ಎಕರೆ 49 ಸೆಂಟ್ ಜಾಗವನ್ನು ದಾನವಾಗಿ ಬಿಟ್ಟುಕೊಟ್ಟಿದ್ದರು. ಜೊತೆಗೆ ಐದು ಸಾವಿರ ರೂಪಾಯಿಯಲ್ಲಿ 3 ಕೊಠಡಿಗಳನ್ನು ನಿರ್ಮಿಸಲು ಹಣ ನೀಡಿದ್ದರು.

ಸಾವಿರಾರು ವಿದ್ಯಾರ್ಥಿಗಳು ಕಲಿತಿರುವ ಶಾಲೆ

ಅದನ್ನು ಆ ಶಾಲೆಯ ಗೋಡೆ ಮೇಲೆ ಅಮೃತಶಿಲೆಯಲ್ಲಿ ಬರೆದಿರುವ ಮಾಹಿತಿ ಸಾಕ್ಷೀಕರಿಸುತ್ತಿದೆ. ಅಂದಿನಿಂದ ಇದುವರೆಗೆ ಶಾಲೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದೆ. ಈ ಶಾಲೆಯಲ್ಲಿ 1956 ರಲ್ಲಿ ಕಲಿತ ಬಸಪ್ಪ ಎನ್ನುವವರು ಪಿಡಬ್ಲೂಡಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಸಿದ್ದಬಸಪ್ಪ ಎನ್ನುವವರು ಜಿಲ್ಲಾಧಿಕಾರಿಯಾಗಿ ನಿವೃತ್ತಿ ಹೊಂದಿದ್ದಾರೆ. ಹತ್ತಾರು ಜನರು ಹೈಕೋರ್ಟ್ ಮತ್ತು ಬೇರೆ ಕೋರ್ಟ್ ಗಳಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:  Kodagu Teacher: ವಿದ್ಯಾರ್ಥಿಗಳಿಗಾಗಿ ತಮ್ಮ ಸಂಬಳದ 1 ಲಕ್ಷ ರೂಪಾಯಿ ಮೀಸಲಿರಿಸುವ ಶಿಕ್ಷಕ

ಅದು ನಮ್ಮ ಜಾಗ ಬಿಟ್ಟುಕೊಡಿ

ಶಾಲೆಗಾಗಿ ಜಾಗವನ್ನು ದಾನವಾಗಿ ನೀಡಿದ ಬಳಿಕ ಆ ಜಾಗವನ್ನು ಇಲಾಖೆಯ ಹೆಸರಿಗೆ ಖಾತೆ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದೇ ಇಂದಿನ ಈ ಸ್ಥಿತಿಗೆ ಕಾರಣ ಎನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಶಾಲೆ ಆರಂಭವಾದ ಇತಿಹಾಸದ ಮಹತ್ವ ತಿಳಿದೋ ತಿಳಿಯದೆಯೋ ಇದೀಗ ಲಿಂಗಪ್ಪ ಅವರ ಸೊಸೆಯಂದಿರಾದ ಬೋಜಮ್ಮ , ದಮಯಂತಿ ಮತ್ತು ಕಮಲಮ್ಮ ಇವರೆಲ್ಲಾ ಇದು ತಮ್ಮ ಭೂಮಿ ಅದನ್ನು ಬಿಟ್ಟುಕೊಡಿ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ.

Land donor daughter in law send notice to school in kodagu
ವಲ್ನೂರು ಸರ್ಕಾರಿ ಶಾಲೆ


ಕೊಡಗಿನಲ್ಲಿ ಭೂಮಿಗೆ ಚಿನ್ನದ ಬೆಲೆ ಬಂದಿರೋದೆ ಇವರು ಶಾಲೆಯ ಜಾಗಕ್ಕೆ ತಮ್ಮ ವಕ್ರದೃಷ್ಟಿ ಬೀರೋದಕ್ಕೆ ಕಾರಣ ಎನ್ನೋದು ಇದೇ ಶಾಲೆಯಲ್ಲಿ 60 ವರ್ಷಗಳ ಹಿಂದೆ ಕಲಿತಿರುವ ಶಾಂತಕುಮಾರ್ ಅವರ ಅಭಿಪ್ರಾಯ. ಸದ್ಯ ಈ ಭಾಗದಲ್ಲಿ ಒಂದು ಎಕರೆಗೆ 25 ರಿಂದ 30 ಲಕ್ಷ ರೂಪಾಯಿ ಬೆಲೆ ಇದೆ. ಅಂದರೆ 2.49 ಎಕರೆಗೆ ಕನಿಷ್ಠ 70 ರಿಂದ 80 ಲಕ್ಷ ಮೌಲ್ಯವಿದೆ. ಹೀಗಾಗಿಯೇ ಹೇಗಾದರೂ ಮಾಡಿ ಜಾಗವನ್ನು ತಮ್ಮದಾಗಿಸಿಕೊಳ್ಳಬೇಕು ಎನ್ನೋ ದುರಾಸೆಗೆ ಬಿದ್ದಿದ್ದಾರೆ.

172 ವಿದ್ಯಾರ್ಥಿಗಳು ಓದುತ್ತಿರುವ ಶಾಲೆ

ಶಾಲೆಯಲ್ಲಿ ಒಟ್ಟು 172 ವಿದ್ಯಾರ್ಥಿಗಳಿದ್ದು ಅವರಲ್ಲಿ 106 ವಿದ್ಯಾರ್ಥಿಗಳು ಆದಿವಾಸಿ ಬುಡಕಟ್ಟು  ಸಮುದಾಯಕ್ಕೆ ಸೇರಿದವರು. ಶಾಲೆ ಮುಚ್ಚಿತ್ತೆಂದರೆ ಈ ವಿದ್ಯಾರ್ಥಿಗಳೆಲ್ಲರೂ ಶಿಕ್ಷಣದಿಂದ ವಂಚಿತರಾಗಬೇಕಾಗುವುದು. ಈ ಶಾಲೆಯನ್ನು ನಮ್ಮ ಇಡೀ ಶಿಕ್ಷಕರ ವರ್ಗ ತಮ್ಮ ಸ್ವಂತ ಖರ್ಚಿನಿಂದ ಸುಣ್ಣ ಬಣ್ಣ ಬಳಿದು ಶಾಲಾ ಕಟ್ಟಡವನ್ನು ಸುಂದರವಾಗಿಟ್ಟುಕೊಂಡಿದೆ. ಆದರೆ ಫೆಬ್ರವರಿಯಲ್ಲಿ ಶಾಲೆಯ ಕಟ್ಟಡದ ಜಾಗಕ್ಕೆ ಸಂಬಂಧಿಸಿದಂತೆ ಕೋರ್ಟಿನಿಂದ ನೋಟಿಸ್ ಬಂದಿದೆ.

ಇದನ್ನೂ ಓದಿ:  Kodagu Teacher: ವಿದ್ಯಾರ್ಥಿಗಳಿಗಾಗಿ ತಮ್ಮ ಸಂಬಳದ 1 ಲಕ್ಷ ರೂಪಾಯಿ ಮೀಸಲಿರಿಸುವ ಶಿಕ್ಷಕ

ಸದ್ಯ ಗ್ರಾಮದವರೆಲ್ಲಾ ಸೇರಿ ಶಾಲೆಯ ಉಳಿವಿಗಾಗಿ ಕಾನೂನು ಹೋರಾಟ ಆರಂಭಿಸಿದ್ದೇವೆ ಎಂದು ಮುಖ್ಯಶಿಕ್ಷಕ ಕುಮಾರ್ ಹೇಳಿದ್ದಾರೆ. ವಿದ್ಯಾರ್ಥಿನಿ ಸರಿತಾ ನನ್ನ ತಂದೆ ತಾಯಿ  ಇದೇ ಶಾಲೆಯಲ್ಲಿ ಓದಿದ್ದು ನಾನು ಕೂಡ ಇಲ್ಲಿಯೇ ಓದುತ್ತಿದ್ದೇನೆ. ಹೀಗಾಗಿ ಈ ಶಾಲೆ ಅಂದ್ರೆ ನನಗೆ ಅಪಾರ ಪ್ರೀತಿ ಇದೆ. ಇದು ಮುಚ್ಚಿ ಹೋದಲ್ಲಿ ಬಡವರಾಗಿರುವ ನಮಗೆ ಬೇರೆ ಶಾಲೆಗಳಿಗೆ ಹೋಗಿ ಕಲಿಯುವಷ್ಟು ಹಣವಿಲ್ಲ. ಈ ಶಾಲೆ ಉಳಿಯಬೇಕು ಎನ್ನೋದು ಆಕೆ ಮಹದಾಶೆಯ.

ಒಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯ ಟ್ರೈಬಲ್ಸ್ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಈ ಶಾಲೆಯನ್ನು ಉಳಿಸಬೇಕಾಗಿರೋದು ಎಲ್ಲರ ಕರ್ತವ್ಯ. ಇದಕ್ಕಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಶ್ರಮ ವಹಿಸಬೇಕಾಗಿದೆ. ಇಲ್ಲದಿದ್ದರೆ ಶಾಲೆಯ ಜಾಗ ಕೈಬಿಟ್ಟು ಹೋಗಿ ಇಲ್ಲಿ ಕಲಿಯುತ್ತಿರುವ ಬಡ ಕುಟುಂಬಗಳ ಮಕ್ಕಳು ಬೀದಿಗೆ ಬರುವುದರಲ್ಲಿ ಅಚ್ಚರಿಯಿಲ್ಲ.
Published by:Mahmadrafik K
First published: