ಹೆಬ್ಬಾಳ್ಕರ್ - ಜಾರಕಿಹೊಳಿ ಸಂಧಾನ ಯಶಸ್ವಿ; ಸದ್ಯಕ್ಕೆ ಕುಮಾರಸ್ವಾಮಿ ಸರ್ಕಾರ ಬಚಾವ್!

news18
Updated:September 7, 2018, 1:01 PM IST
ಹೆಬ್ಬಾಳ್ಕರ್ - ಜಾರಕಿಹೊಳಿ ಸಂಧಾನ ಯಶಸ್ವಿ; ಸದ್ಯಕ್ಕೆ ಕುಮಾರಸ್ವಾಮಿ ಸರ್ಕಾರ ಬಚಾವ್!
news18
Updated: September 7, 2018, 1:01 PM IST
ನ್ಯೂಸ್ 18 ಕನ್ನಡ

ಬೆಳಗಾವಿ (ಸೆ.7) : ಕಳೆದೊಂದು ವಾರದಿಂದ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಬ್ರದರ್ಸ್​ ನಡುವಿನ ಭಿನ್ನಮತ ಕೆಪಿಸಿಸಿ ಕಾರ್ಯಾಧ್ಯಕ್ಷರ ಸಂಧಾನ ಸಭೆಯೊಂದಿಗೆ ಸುಖಾಂತ್ಯ ಕಂಡಿದೆ. ಈ ಮೂಲದ ಜಿಲ್ಲೆಯ ರಾಜಕಾರಣದ ವಿಷಯವೊಂದು ಕಾಂಗ್ರೆಸ್​ ಹೈಕಮಾಂಡ್​ವರೆಗೂ ಮುಟ್ಟಿ, ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೆ ಸಂಚಕಾರ ತಂದಿದ್ದ ಪ್ರಕರಣ ಶುಕ್ರವಾರ ಒಂದು ಹಂತಕ್ಕೆ ತಹಬದಿಗೆ ಬಂದತಾಗಿದೆ.

ಶುಕ್ರವಾರ ಬೆಳಗಾವಿಯಲ್ಲಿ ಜಾರಕಿಹೊಳಿ ಬ್ರದರ್ಸ್​ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಂಧಾನ ನಡೆಸಿದರು. ವೈಯಕ್ತಿಕ ವಿಚಾರವಾಗಿ ಮನಸ್ತಾಪ ಮಾಡಿಕೊಂಡು, ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಮುಜುಗರ ಉಂಟು ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಇಬ್ಬರು ಎರಡು ಬಣದ ಮುಖಂಡರು ಬಂದರು.

ನಂತರ ಈಶ್ವರ್ ಖಂಡ್ರೆ, ಸತೀಶ್​ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್​ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಎರಡೂ ಬಣಗಳ ನಡುವೆ ಸಂವಹನ ಕೊರತೆಯಿಂದ ಸಮಸ್ಯೆಯಾಗಿತ್ತು. ರಮೇಶ್​ ಜಾರಕಿಹೊಳಿ ಕೂಡ ನಮ್ಮ ಸಂಪರ್ಕದಲ್ಲಿ ಇದ್ದಾರೆ. ಎಲ್ಲರೂ ಪಕ್ಷದ ಅಡಿಯಲ್ಲಿ ಸೇವೆ ಮಾಡುತ್ತಿದ್ದಾರೆ ಎಂದು ಖಂಡ್ರೆ ಹೇಳಿಕೆ ನೀಡಿದರು. ನಂತರ ಮಾತನಾಡಿದ ಸತೀಶ್​ ಜಾರಕಿಹೊಳಿ, ಸಂವಹನದ ಕೊರತೆಯಿಂದ ಸಮಸ್ಯೆ ಉಲ್ಬಣಗೊಂಡಿತ್ತು. ಸ್ಥಳೀಯವಾಗಿ ಸಮಸ್ಯೆ ಇತ್ತೆಂದು ಮೊದಲಿನಿಂದಲೇ ಹೇಳಿದ್ದೇವೆ. ಇದೀಗ ಕೆಪಿಸಿಸಿ ಕಾರ್ಯಾಧ್ಯಕ್ಷರು ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯನ್ನು ಎಲ್ಲರೂ ಒಗ್ಗಟ್ಟಿನಿಂದ ಎದುರಿಸಲಿದ್ದೇವೆ ಎಂದು ಹೇಳಿಕೆ ನೀಡಿದರು.

ಇದೇ ವೇಳೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಇಷ್ಟು ದಿನ ನಮ್ಮ ನಡುವೆ ಎದ್ದಿದ್ದ ಸಮಸ್ಯೆ ಸುಖಾಂತ್ಯ ಕಂಡಿದೆ. ವೈಯಕ್ತಿಕ ಟೀಕೆಗಳಿಗೆ ನಾನು ಉತ್ತರಿಸುವುದಿಲ್ಲ. ಎಲ್ಲವನ್ನು ದೇವರು ನೋಡಿಕೊಳ್ಳುತ್ತಾನೆ ಎಂದು ಹೇಳಿಕೆ ನೀಡಿದರು.

ಇನ್ನು ಇಬ್ಬರು ನಾಯಕರ ನಡುವೆ ಮುನಿಸಿಗೆ ಕಾರಣವಾಗಿದ್ದ ಪಿಎಲ್​ಡಿ ಬ್ಯಾಂಕ್​ ಚುನಾವಣೆ ವಿಚಾರದ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ಬ್ಯಾಂಕಿನ ಅಧ್ಯಕ್ಷರಾಗಿ ಮಹಾದೇವ್ ಪಾಟೀಲ್​ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇವರು ಯಾವ ಬಣಕ್ಕೂ ಸೇರಿದವರಲ್ಲ, ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...