ಸುಮಾರು ವರ್ಷಗಳಿಂದ ಹೂಳು ತುಂಬಿಕೊಂಡಿದ್ದ ಚಿಕ್ಕೋಡಿ ವಿಭಾಗದ ಬಯಲು ಭಾಗದ ಕೆರೆಗಳಲ್ಲಿ ಕೊರೋನಾ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಹೂಳು ತೆಗೆಯಲಾಗಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ 30 ಕ್ಕೂ ಹೆಚ್ಚು ಕೆರೆಗಳು ತುಂಬಿ ಬರದ ನಾಡಿನಲ್ಲಿ ಹಸಿರೀಕಣ ಕಂಗೊಳಿಸಿ ಜೀವ ಸಂಕುಲಕ್ಕೆ ಆಸರೆಯಾಗಿವೆ. ಹೌದು, ಚಿಕ್ಕೋಡಿ ವಿಭಾಗದ ಒಂದೆಡೆ ಕೃಷ್ಣಾ ತೀರದಲ್ಲಿ ಪ್ರವಾಹದತಂಹ ಪರಿಸ್ಥಿತಿ ನಿರ್ಮಾಣವಾದರೆ, ಇನ್ನೊಂದೆಡೆ ರಾಯಭಾಗ ಹಾಗೂ ಚಿಕ್ಕೋಡಿ ತಾಲೂಕಿನ ದಕ್ಷಿಣ ಭಾಗದ ಗ್ರಾಮಗಳಲ್ಲಿ ಸದಾ ನೀರಿನ ಸಮಸ್ಯೆ ಕಾಡುತ್ತಿದೆ. ಪ್ರವಾದ ಸಂದರ್ಭದಲ್ಲೂ ಸಹ ಇಲ್ಲಿನ ಜನ ನೀರಿಗಾಗಿ ಕ್ಯೂ ನಿಲ್ಲಬೇಕು. ಇವತ್ತಿಗೂ ಸಹ 100 ಕ್ಕೂ ಹೆಚ್ಚು ಗ್ರಾಮಗಳಿಗೆ ಟ್ಯಾಂಕರ್ ಮೂಲಕವೇ ನೀರು ಸರಬರಾಜು ಮಾಡುವಂತಹ ಪರಿಸ್ಥಿತಿ ಇಲ್ಲಿಯದಾಗಿದೆ. ಆದ್ರೆ ಈ ಬಾರಿಯ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಯಾವತ್ತೂ ಬರಡು ಭೂಮಿಯಂತಿದ್ದ ಜಮೀನು ಈಗ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ ಅದಕ್ಕೆ ಕಾರಣ ಕೊರೋನಾ ಅಂದ್ರೆ ನಂಬುತ್ತೀರಾ..? ಹೌದು, ನಂಬಲೇಬೇಕು.
ಚಿಕ್ಕೋಡಿ ರಾಯಭಾಗ ತಾಲೂಕಿನಲ್ಲಿ 30 ಕ್ಕೂ ಹೆಚ್ಚು ಪ್ರಮುಖ ಕೆರೆಗಳು ಇವೆ. ಆದ್ರೆ ಕಳೆದ 10 ವರ್ಷಗಳಿಂದ ಕೆರೆಗಳ ಹೂಳು ತೆಗೆಯದೆ ಸದಾ ಒಣಗಿದ ಸ್ಥಿತಿಯಲ್ಲೆ ಇರುತ್ತಿದ್ದವು. ಮಳೆ ಬಂದರೂ ಸಹ ನೀರಿನ ಸಂಗ್ರಹದ ಸಾಮರ್ಥ್ಯ ಕೂಡ ತೀರಾ ಕಡಿಮೆಯಾಗಿತ್ತು. ಕಳೆದ ಬೇಸಿಗೆಯಲ್ಲಿ ಕೊರೋನಾದಿಂದಾಗಿ ಇಡೀ ದೇಶವೆ ಲಾಕಡೌನ್ ಆಗಿತ್ತು. ಜನ ಕೆಲಸಗಳಿಲ್ಲದೆ ಮನೆಯಲ್ಲಿ ಕೂಡುವ ಸ್ಥಿತಿ ನಿರ್ಮಾಣವಾಗಿತ್ತು. ಆಗ ಕೇಂದ್ರ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಲು ಉದ್ಯೋಗ ಖಾತ್ರಿ ಯೋಜನೆಗೆ ಒತ್ತು ನೀಡಿದ ಪರಿಣಾಮ ಗ್ರಾಮೀಣ ಭಾಗದಲ್ಲಿ ಜನರಿಗೆ ಹೆಚ್ಚಿನ ಕೆಲಸ ಸಿಕ್ಕಿದೆ. ಕೊರೋನಾ ಸಂದರ್ಭದಲ್ಲಿ ಜನರು ಮಹಾತ್ಮಾ ಗಾಂಧೀ ಉದ್ಯೋಗ ಖಾತ್ರಿ ಯೋಜನೆ ಮೂಲಕ ಕೆಲಸ ಪಡೆದುಕೊಂಡು ಚಿಕ್ಕೋಡಿ ರಾಯಭಾಗ ತಾಲೂಕಿನ ಕೆರೆ, ಹಳ್ಳ, ಬಾಂದಾರ ಹಾಗೂ ಕಾಲುವೆ ಸೇರಿ ಒಟ್ಟು 110 ಕ್ಕೂ ಹೆಚ್ವು ಹೂಳು ತೆಯುವ ಕಾಮಗಾರಿಯನ್ನು ಮಾಡಿದ್ದಾರೆ. ಅದರ ಪರಿಣಾಮವಾಗಿ ಇಂದು ಬರಗಾಲದಿಂದ ಕೂಡಿದ ಹಳ್ಳಿಗಳು ಹಚ್ಚ ಹಸಿರಿನಿಂದ ಕಂಗೊಳಿಸುವಂತಾಗಿವೆ.
ಕೊಡಗಿನಲ್ಲಿ ಸುರಿದ ಭಾರೀ ಮಳೆಗೆ ಕೋಳಿಕಾಡಿನಲ್ಲಿ ಭೂ ಕುಸಿತದ ಆತಂಕ, ಹಲವು ಮನೆಗಳು ಜಲಾವೃತ
ಕಳೆದ ತಿಂಗಳು ಹಾಗೂ ಹಾಗೂ ಕಳೆದ ಒಂದು ವಾರದಿಂದ ಸತತವಾಗಿ ಸುರಿದ ಮಳೆಯ ಪರಿಣಾಮ ಬಹುತೇಕ ಎಲ್ಲಾ ಕೆರೆ, ಕಟ್ಟೆ, ಹಾಗೂ ಕಾಲುವೆಗಳು ಸಂಪೂರ್ಣ ತುಂಬಿ ಇಡೀ ಪರಿಸರವೇ ಹಸಿರು ಮಯವಾಗಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ನೀರು ಇಲ್ಲದೆ ಬಣಗುಡುತ್ತಿದ್ದ ಕೆರೆಗಳು ಜಾನುವಾರಗಳು ನೀರಿಗಾಗಿ ಪರಿತಪಿಸಬೇಕಾಗಿತ್ತು. ಆದರೆ ಈಗ ಕೆರೆ ಪುನಶ್ಚೇತನಗೊಂಡು ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.
ಬರದ ನಾಡಿನಲ್ಲಿ ಹಸಿರೀಕರಣ:
ಚಿಕ್ಕೋಡಿ ರಾಯಭಾಗ ತಾಲೂಕಿನ ಕೆರೆಗಳು ಭರ್ತಿಯಾಗಿದ್ದು ರೈತರಿಗೆ ದೊಡ್ಡ ಶಕ್ತಿ ಬಂದಂತಾಗಿದೆ. ಕೆರೆಗಳು ಭರ್ತಿಯಾಗಿದ್ದರಿಂದ ಜಲಮೂಲಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ. ಕೆರೆ ಕಟ್ಟೆಗಳಿಂದ ಬಾವಿ, ಕೊಳವೆ ಬಾವಿಯಲ್ಲಿ ನೀರಿನ ಅಂತರ ಜಲಮಟ್ಟ ಹೆಚ್ಚಾಗಿ ರೈತರಿಗೆ ನೀರಿನ ಕೊರತೆ ಉಂಟಾಗುವುದಿಲ್ಲ. ವರ್ಷದಲ್ಲಿ ಎರಡು ಬೆಳೆಗಳು ರೈತನ ಕೈಸೇರಲಿವೆ. ಹೂಳು ತುಂಬಿದ ಕೆರೆಗಳನ್ನು ಪುನಶ್ಚೇತನಗೊಳಿಸಿದ ಪರಿಣಾಮ ಮುಗಳಿ, ಮಜಲಟ್ಟಿ, ವಡ್ರಾಳ ಮುಂತಾದ ಬರಗಾಲದ ಪ್ರದೇಶದಲ್ಲಿ ಈಗ ಕೆರೆಗಳು ಭರ್ತಿಯಾಗಿವೆ. ರೈತಾಪಿ ವರ್ಗದ ಜನರ ಬಾವಿ, ಕೊಳವೆ ಬಾವಿಯಲ್ಲಿ ನೀರಿನ ಮೂಲ ಹೆಚ್ಚಳವಾಗಿವೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ.
ಒಟ್ಟಿನಲ್ಲಿ ಸದಾಕಾಲವೂ ಒಣಗಿ ಬಣಗುಡುತ್ತಿದ್ದ ಕೆರೆಗಳಿಗೆ ಈಗ ಜೀವ ಕಳೆದ ಬಂದಿದೆ. ಇದಕ್ಕೆ ಕಾರಣವಾಗಿದ್ದು ಕೊರೋನಾ. ಕೊರೋನಾ ನಗರ ಪ್ರದೇಶದ ಎಷ್ಟೋ ಜನರ ಬದುಕು ಕಿತ್ತುಕೊಂಡಿದೆ. ಆದರೆ ಇಲ್ಲಿನ ಗ್ರಾಮಗಳಿಗೆ ಜೀವ ತಂದು ಕೊಟ್ಟಿದೆ ಅಂತಾನೆ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ