ಬೆಳಿಗ್ಗೆ ನೂತನ ಸದಸ್ಯೆ, ಸಂಜೆ ವೇಳೆಗೆ ಭಾವಿ ಅಧ್ಯಕ್ಷೆ: ಕಾಂಗ್ರೆಸ್​ ಮಾಜಿ ಶಾಸಕನ ಕೈಚಳಕ!


Updated:September 4, 2018, 11:30 AM IST
ಬೆಳಿಗ್ಗೆ ನೂತನ ಸದಸ್ಯೆ, ಸಂಜೆ ವೇಳೆಗೆ ಭಾವಿ ಅಧ್ಯಕ್ಷೆ: ಕಾಂಗ್ರೆಸ್​ ಮಾಜಿ ಶಾಸಕನ ಕೈಚಳಕ!

Updated: September 4, 2018, 11:30 AM IST
ಮಹೇಶ ವಿ. ಶಟಗಾರ, ನ್ಯೂಸ್ 18 ಕನ್ನಡ

ವಿಜಯಪುರ(ಸೆ. 04): ಬೆಳಿಗ್ಗೆ ಸದಸ್ಯೆಯಾಗಿ ಆಯ್ಕೆ. ಸಂಜೆ ವೇಳೆಗೆ ಬಯಸದೇ ಬಂದ ಭಾವಿ ಅಧ್ಯಕ್ಷೆ ಸ್ಥಾನ. ಅತಂತ್ರ ಫಲಿತಾಂಶದಲ್ಲೂ ಮೀಸಲಾತಿಯ ಪರಿಣಾಮ ದಲಿತ ಮಹಿಳೆಗೆ ಒಲಿದು ಬಂದ ಅಧ್ಯಕ್ಷೆ ಸ್ಥಾನ. ಇದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪುರಸಭೆಯ ಕಾಂಗ್ರೆಸ್ ನೂತನ ಸದಸ್ಯೆ ಸೋನಾಬಾಯಿ ನಾನಪ್ಪ ನಾಯಕ ಅವರಿಗೆ ಬಯಸದೇ ಬಂದ ಭಾಗ್ಯ.

ನಿನ್ನೆ ಪ್ರಕಟವಾದ ಫಲಿತಾಂಶದಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪುರಸಭೆಯ ಒಟ್ಟು 23ರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 8 ಸ್ಥಾನ ಗಳಿಸಿ ಸಮಬಲ ಸಾಧಿಸಿದ್ದವು. 2 ರಲ್ಲಿ ಜೆಡಿಎಸ್ ಮತ್ತು 5ರಲ್ಲಿ ಪಕ್ಶೇತರ ಅಭ್ಯರ್ಥಿಗಳು ಗೆದ್ದಿದ್ದರು. ಪುರಸಭೆ ಅಧಿಕಾರ ಹಿಡಿಯಲು ಮುದ್ದೇಬಿಹಾಳ ಬಿಜೆಪಿ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಜೆಡಿಎಸ್ ಮತ್ತು ಪಕ್ಶೇತರರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ಭರವಸೆ ನೀಡಿದ್ದರು. ಆದರೆ, ಸಂಜೆ ಪ್ರಕಟವಾದ ಮೀಸಲು ಪಟ್ಟಿ ಇವರ ಆಲೋಚನೆಯನ್ನು ಬುಡಮೇಲು ಮಾಡಿದ್ದು, ಅಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

ಇದರ ಪರಿಣಾಮ ಮುದ್ದೇಬಿಹಾಳ ವಾರ್ಡ ಸಂಖ್ಯೆ 10 ರಲ್ಲಿ ಆಯ್ಕೆಯಾಗಿರುವ ಪೈಲೆಕಮ್ಮ ನಗರ ನಿವಾಸಿ ಸೋನಾಬಾಯಿ ನಾನಪ್ಪ ನಾಯಕ ಮೀಸಲಾತಿ ಪ್ರಕಾರ ಆಯ್ಕೆಯಾದ ಏಕೈಕ ಮಹಿಳೆಯಾಗಿದ್ದು, ಅತಂತ್ರ ಪುರಸಭೆಯಲ್ಲಿ ಅಧ್ಯಕ್ಷರಾಗಲಿದ್ದಾರೆ. ಇನ್ನು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರು ಹೊಂದಾಣಿಕೆ ಮಾಡಿಕೊಳ್ಳಲಿದ್ದಾರಾ ಅಥವಾ ಬಿಜೆಪಿ ಪಕ್ಶೇತರರು ಹಾಗೂ ಜೆಡಿಎಸ್ ಕೈ ಜೋಡಿಸಲಿದ್ದಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

ಇಲ್ಲಿ ಮತ್ತೋಂದು ಗಮನಿಸಬೇಕಾದ ಅಂಶವೆಂದರೆ, ಸೋನಾಬಾಯಿ ನಾನಪ್ಪ ನಾಯಕ ಮಾಜಿ .ಯೋಧರಾಗಿದ್ದು, ಕಟ್ಟಾ ಕಾಂಗ್ರೆಸ್ಸಿಗ ಹಾಗೂ ಮಾಜಿ ಶಾಸಕ ಸಿ. ಎಸ್. ನಾಡಗೌಡ ಅವರ ಆಪ್ತರಾಗಿದ್ದಾರೆ.  ಅಲ್ಲದೇ, ಸೋನಾಬಾಯಿ ನಾನಪ್ಪ ನಾಯಕ ಅವರ ಇಬ್ಬರು ಗಂಡು ಮಕ್ಕಳಲ್ಲಿ ಓರ್ವ ಪೊಲೀಸ್ ಅಧಿಕಾರಿಯಾಗಿದ್ದಾರೆ.

ವಿಧಾನ ಸಭೆ ಚುನಾವಣೆಯಲ್ಲಿ ಸೋತರು, ತಮ್ಮ ಪ್ರಭಾವ ಬಳಸಿ ಮೀಸಲಾತಿ ಮೂಲಕ ಅಧಿಕಾರ ಹಿಡಿಯಲು ಕಾಂಗ್ರೆಸ್ಸಿನ ಮಾದಿ ಶಾಸಕ ಸಿ. ಎಸ್. ನಾಡಗೌಡ ಚಾಣಾಕ್ಷ ರಣತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ. ಇದು ಈಗ ಮುದ್ದೇಬಿಹಾಳದಲ್ಲಿ ಚರ್ಚೆಗೆ ಗ್ರಾಸವಾಗಿದೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...