ಪುತ್ತೂರು, ದಕ್ಷಿಣ ಕನ್ನಡ: ಪ್ರವಾದಿ ಮಹಮ್ಮದ್ ವಿರುದ್ಧ (Prophet Muhammad Paigamber) ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಬಿಜೆಪಿ (BJP) ಮಾಜಿ ವಕ್ತಾರೆ ನೂಪುರ್ ಶರ್ಮಾ (Nupur Sharma) ವಿರುದ್ಧ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರೀ ಪ್ರತಿಭಟನೆ, ಧರಣಿಗಳು ನಡೆದಿವೆ. ಇದೀಗ ಇದೇ ರೀತಿಯ ಆಕ್ಷೇಪಾರ್ಹ ಹೇಳಿಕೆ (Controversial Statement) ನೀಡುವ ಮೂಲಕ ಕಾಂಗ್ರೆಸ್ (Congress) ಪಕ್ಷದ ಮಹಿಳಾ ಮುಖಂಡೆಯೋರ್ವರು ಶ್ರೀರಾಮ (Sri Rama), ಸೀತಾದೇವಿ (Seetha Devi) ಮತ್ತು ಆಂಜನೇಯನ (Anjaneya) ವಿರುದ್ಧ ಅಸಹ್ಯ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶೈಲಜಾ ಅಮರನಾಥ್ ಈ ರೀತಿಯ ಆರೋಪವನ್ನು ಎದುರಿಸುತ್ತಿದ್ದು, ಶೈಲಜಾ ಸಾಮಾಜಿಕ ಜಾಲತಾಣವಾದ ಕ್ಲಬ್ ಹೌಸ್ ನಲ್ಲಿ (Club House) ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಆರೋಪಿಸಿ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ಶೈಲಜಾ ವಿರುದ್ಧ ಪ್ರಕರಣವೂ (Case) ದಾಖಲಾಗಿದೆ.
ಕ್ಲಬ್ ಹೌಸ್ ಚರ್ಚೆಯಲ್ಲಿ ವಿವಾದಾತ್ಮಕ ಹೇಳಿಕೆ?
ಜೂನ್ 16 ರಂದು ಸಂಡೆ ಅಂಕಲ್ಸ್ ಆರ್ ಮಂಡೇ ಸನ್ಸ್ ಎನ್ನುವ ಕಾರ್ಯಕ್ರಮದಲ್ಲಿ ಶೈಲಜಾ ಈ ರೀತಿಯ ಹೇಳಿಕೆ ನೀಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಸ್ವತಹ ಶೈಲಜಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕ್ಲಬ್ ಹೌಸ್ ನಲ್ಲಿ ನಡೆದ ಕೆಲವು ಚರ್ಚೆಯ ಸಂದರ್ಬದಲ್ಲಿ ಕೆಲವು ಹೇಳಿಕೆಗಳನ್ನು ನೀಡಿದ್ದು, ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಹೇಳಿಕೆಗಳನ್ನು ತಿರುಚಿ ಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
“ನನ್ನ ವಿರುದ್ಧ ಸುಳ್ಳು ಆರೋಪ”
ರಾಜ್ಯ ಬಿಜೆಪಿ ಸರಕಾರ ಈ ರೀತಿಯ ಕೃತ್ಯವನ್ನು ನಡೆಸುತ್ತಿದೆ ಎಂದು ಆರೋಪಿಸಿದ ಅವರು ಬಿಜೆಪಿಯ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಎಡಿಟ್ ಮಾಡಿದ ಆಡಿಯೋವನ್ನು ಪ್ರಸಾರ ಮಾಡಿ ತನ್ನ ತೇಜೋವಧೆ ಹಾಗೂ ತನ್ನ ಮೇಲೆ ಹಲ್ಲೆಗೆ ಪ್ರಚೋದಿಸಲಾಗುತ್ತಿದೆ. ಇದೇ ಕಾರಣಕ್ಕಾಗಿ ಕೆಲವು ದುಷ್ಕರ್ಮಿಗಳು ಮನೆ ಮೇಲೆಯೂ ದಾಳಿ ಮಾಡಿದ್ದಾರೆ. ಬಿಜೆಪಿ ಸರಕಾರ ಓರ್ವ ಮಹಿಳೆಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ನಾನೊಬ್ಬಳು ಹಿಂದೂ ಮತ್ತು ಅಪ್ಪಟ ದೈವ ಭಕ್ತೆಯಾಗಿದ್ದೇನೆ. ಬಿಜೆಪಿ ಸರಕಾರ ಹಿಂದೂವಾದ ನನ್ನ ಮೇಲೆ ಹಿಂದೂಗಳನ್ನು ಎತ್ತಿಕಟ್ಟುವ ಮೂಲಕ ಮುಂದಿನ ಚುನಾವಣೆಯಲ್ಲಿ ಮತಪಡೆಯುವ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Explained: ಪ್ರವಾದಿ ಅವಹೇಳನ ಮಾಡಿದ ನೂಪುರ್ ಶರ್ಮಾ ಯಾರು? ಅವರು ಮಾಡಿರುವ ವಿವಾದವೇನು?
“ಪುತ್ತೂರು ಶಾಸಕರೇ ಕ್ಷಮೆ ಕೇಳಬೇಕು”
ಪುತ್ತೂರು ಶಾಸಕ ಸಂಜೀವ ಮಠಂದೂರು ತನ್ನ ಹೇಳಿಕೆಗೆ ಹಿಂದೂಗಳ ಕ್ಷಮೆಯಾಚಿಸಬೇಕು ಎಂದು ಹೇಳಿದ್ದು, ಕ್ಷಮೆಯನ್ನು ಶಾಸಕರೇ ಕೇಳಬೇಕು. ಶಾಸಕರ ಕ್ಷೇತ್ರದ ನಿವಾಸಿಯಾಗಿರುವ ಹೆಣ್ಣು ಮಗಳಿಗೆ ಸೂಕ್ತ ಭದ್ರತೆ ಒದಗಿಸದ ಶಾಸಕರು ಮೊದಲು ಕ್ಷಮೆ ಕೋರಬೇಕು ಅಂತ ಆಗ್ರಹಿಸಿದ್ದಾರೆ.
ನ್ಯಾಯ ಸಿಗದಿದ್ದರೆ ಹೋರಾಟದ ಎಚ್ಚರಿಕೆ
ಮುಂದಿನ 48 ಗಂಟೆಗಳಲ್ಲಿ ಪೋಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಬೇಕು. ಕ್ಲಬ್ ಹೌಸ್ ನಲ್ಲಿ ನಡೆದ ಅಸಲಿ ಆಡಿಯೋವನ್ನು ಪೋಲೀಸರು ಪರಿಶೀಲನೆ ನಡೆಸಬೇಕು. ಎಡಿಟೆಡ್ ಆಡಿಯೋ ವನ್ನು ಪ್ರಸಾರ ಮಾಡಿದ ಯೂಟ್ಯೂಬ್ ಚಾನಲ್ ನ ಸಿಬ್ಬಂದಿಗಳನ್ನು ತನಿಖೆ ನಡೆಸಬೇಕು. ಇಲ್ಲದೇ ಹೋದಲ್ಲಿ ಪೋಲೀಸ್ ಠಾಣೆಯ ಮುಂದೆ ನನ್ನನ್ನು ಎರೆಸ್ಟ್ ಮಾಡಿ ಎನ್ನುವ ಬೋರ್ಡ್ ಹಿಡಿದು ಧರಣಿ ನಡೆಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.
ಶೈಲಜಾ ವಿರುದ್ದ ಭುಗಿಲೆದ್ದ ಆಕ್ರೋಶ
ಶೈಲಜಾ ಅಮರನಾಥ ಹೇಳಿದ್ದರೆನ್ನಲಾದ ಆಡಿಯೋಕ್ಕೆ ಸಂಬಂಧಪಟ್ಟಂತೆ ಇದೀಗ ಶೈಲಜಾ ವಿರುದ್ಧ ಭಾರೀ ಆಕ್ರೋಶಗಳು ಕೇಳಿ ಬರಲಾರಂಭಿಸಿದೆ. ಪ್ರವಾದಿ ಬಗ್ಗೆ ಮಾತನಾಡಿದ ನೂಪುರ್ ಶರ್ಮಾ ವಿರುದ್ಧ ಯಾವ ರೀತಿಯ ಪ್ರತಿಭಟನೆ ನಡೆಯಿತೋ , ಅದೇ ರೀತಿಯ ಪ್ರತಿಭಟನೆಯನ್ನು ಹಿಂದೂ ಸಮಾಜವೂ ನಡೆಸಲಿದೆ ಎನ್ನುವ ಎಚ್ಚರಿಕೆಯನ್ನು ಹಿಂದೂಪರ ಸಂಘಟನೆಗಳು ನೀಡಿವೆ. ಹಿಂದೂಗಳ ಆರಾಧ್ಯಮೂರ್ತಿಯಾದ ಶ್ರೀರಾಮನ ಕುರಿತು ಅಸಹ್ಯವಾಗಿ ಮಾತನಾಡಿದ ಶೈಲಜಾ ಅಮರನಾಥ್ ಕೂಡಲೇ ಸಾರ್ವಜನಿಕವಾಗಿ ತನ್ನ ಕೃತ್ಯಗಳಿಗೆ ಕ್ಷಮೆಯಾಚಿಸದೇ ಹೋದಲ್ಲಿ , ಆಕೆಯ ವಿರುದ್ಧ ಕ್ರಮ ಜರುಗಿಸುವವರೆಗೂ, ಪ್ರತೀ ದಿನ ಹೋರಾಟಗಳನ್ನು ನಡೆಸಲು ಹಿಂದೂಪರ ಸಂಘಟನೆಗಳು ತೀರ್ಮಾನಿಸಿವೆ.
ಇದನ್ನೂ ಓದಿ: Instagramನಲ್ಲಿ ಮುತಾಲಿಕ್, ಯಶ್ಪಾಲ್ ಸುವರ್ಣಗೆ ಬೆದರಿಕೆ ಹಾಕಿದ್ದ ಆರೋಪಿ ಅರೆಸ್ಟ್
ಶೈಲಜಾ ಅಮರನಾಥ ಹೇಳಿಕೆಗೆ ಸಂಬಂಧಿಸಿದಂತೆ ಇದೀಗ ಭಾರೀ ಪರ-ವಿರೋಧ ಚರ್ಚೆಗಳು ಆರಂಭಗೊಂಡಿದ್ದು, ಈ ವಿವಾದ ಯಾವ ಹಂತಕ್ಕೆ ತಲುಪಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ