• Home
  • »
  • News
  • »
  • state
  • »
  • ಕೊರೋನಾ ಸಂದಿಗ್ಧತೆಯ ನಡುವೆ ಪರೀಕ್ಷಾ ಶುಲ್ಕ ಬೇಕೆ?; ವಿದ್ಯಾರ್ಥಿಗಳ ಉಚಿತ ಪ್ರವೇಶಕ್ಕೆ ಕೆವಿಎಸ್‌ ಆಗ್ರಹ

ಕೊರೋನಾ ಸಂದಿಗ್ಧತೆಯ ನಡುವೆ ಪರೀಕ್ಷಾ ಶುಲ್ಕ ಬೇಕೆ?; ವಿದ್ಯಾರ್ಥಿಗಳ ಉಚಿತ ಪ್ರವೇಶಕ್ಕೆ ಕೆವಿಎಸ್‌ ಆಗ್ರಹ

ಬೆಂಗಳೂರು ವಿಶ್ವವಿದ್ಯಾಲಯ.

ಬೆಂಗಳೂರು ವಿಶ್ವವಿದ್ಯಾಲಯ.

ರಾಜ್ಯದ ಹಾಗೂ ದೇಶದ ನಾನಾ ಭಾಗಗಳಿಂದ ಬಂದು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಲಾಕ್‌ಡೌನ್‌ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಹಾಸ್ಟಲ್‌ಗಳೂ ಇನ್ನೂ ತೆರೆಯದೇ ಇರುವುದರಿಂದ ಪರೀಕ್ಷೆ ಬರೆಯಲು ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳು ಬಾಡಿಗೆ ಮನೆಗಳನ್ನೋ, ಪಿಜಿಗಳಲ್ಲೋಉಳಿದುಕೊಂಡು ಪರೀಕ್ಷೆ ಎದುರಿಸಬೇಕಾಗಿದೆ. ಅದಕ್ಕೂ ಅವರು ಹಣ ವ್ಯಯಿಸಬೇಕಾಗಿದೆ.

ಮುಂದೆ ಓದಿ ...
  • Share this:

    ಬೆಂಗಳೂರು (ಆಗಸ್ಟ್‌ 09); ವಿದ್ಯಾರ್ಥಿಗಳಿಗೆ ಈ ಬಾರಿಯ ಶೈಕ್ಷಣಿಕ ಪರೀಕ್ಷೆಗಳು ಆರ್ಥಿಕ ಸಂದ್ಥಗ್ದತೆಯನ್ನು ಸೃಷ್ಟಿ ಮಾಡಿದ್ದು, ವಿದ್ಯಾರ್ಥಿಗಳು ಪರೀಕ್ಷ ಶುಲ್ಕವನ್ನು ಪಾವತಿಸುವುದು ಕಷ್ಟವಾಗಿದೆ. ಹಾಗಾಗಿ ಈ ಬಾರಿ ಪರೀಕ್ಷಾ ಶುಲ್ಕ ಹಾಗೂ ಮುಂದಿನ ಶೈಕ್ಷಣಿಕ ವರ್ಷದ ದಾಖಲಾತಿ ಶುಲ್ಕವನ್ನು ರದ್ದುಗೊಳಿಸಿ, ಉಚಿತ ಪ್ರವೇಶ ನೀಡಬೇಕು ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್)‌ ಆಗ್ರಹಿಸಿದೆ.


    ಕೊರೋನಾ ಲಾಕ್‌ಡೌನ್‌ನಿಂದಾಗಿ ಎದುರಾಗಿರುವ ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟದಿಂದಾಗಿ ಜನ ಜೀವನವೇ ಅಸ್ಥವ್ಯಸ್ಥವಾಗಿದೆ. ವಿದ್ಯಾರ್ಥಿಗಳಿಗೂ ಇದು ಗಂಭೀರ ಸವಾಲಾಗಿ ಎದುರಾಗಿದೆ. ಹಲವಾರು ಸಮುದಾಯಗಳ ಬಡ ವಿದ್ಯಾರ್ಥಿಗಳು ಕಾಲೇಜು ಶುಲ್ಕಗಳನ್ನು ಭರಿಸಲಾಗದೆ ಪರಿತಪಿಸುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಉದ್ಯೋಗಗಳೆದುಕೊಂಡ ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಲದ ಹೊರೆ ಹೊರಬೇಕಾದಂತಹ ಸಂದಿಗ್ಧತೆ ಎದುರಾಗಿದೆ.


    ಇಂತಹ ಸಂದರ್ಭದಲ್ಲಿಯೂ, ಬೆಂಗಳೂರು ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳ ಮೇಲೆ ಪರೀಕ್ಷಾ ಶುಲ್ಕದ ಹೊರೆ ಹೊರಿಸಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲು ಯುಜಿಸಿ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ನಡೆಸಲು ಮುಂದಾಗಿರುವ ಬೆಂಗಳೂರು ವಿವಿ ಆಗಸ್ಟ್‌ 15 ರೊಳಗೆ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು ಎಂದು ಕಡೆ ದಿನಾಂಕವನ್ನು ನಿಗದಿ ಮಾಡಿದೆ ಎಂದು ಕೆವಿಎಸ್‌ ಆರೋಪಿಸಿದೆ.


    ಇದರಿಂದಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಬರೆಯುವುದೇ ದೊಡ್ಡ ಸವಾಲಾಗಿ ಎದುರಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಬಂದು ಬೆಂಗಳೂರು ವಿವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಪಾವತಿಸಲು ಹಣವಿಲ್ಲದೆ ಪರದಾಡುತ್ತಿದ್ದಾರೆ.


    “ವಿವಿಗೆ ದಾಖಲಾದ ಸಂದರ್ಭದಲ್ಲಿಯೇ ದಾಖಲಾತಿ ಶುಲ್ಕವನ್ನು ಪಾವತಿಸಲು ಸಾಲ ಮಾಡಿದ್ದೆವು. ದುಡಿದು ಸಾಲ ತೀರಿಸಿದೆವು. ಲಾಕ್‌ಡೌನ್‌ನಿಂದಾಗಿ ಈಗ ಪೋಷಕರ ಉದ್ಯೋಗಗಳೂ ಕಳಚಿ ಬಿದ್ದಿವೆ. ದಿನನಿತ್ಯದ ಜೀವನವೇ ಕಷ್ಟವಾಗಿರುವ ಸಂದರ್ಭದಲ್ಲಿ ಪರೀಕ್ಷಾ ಶುಲ್ಕ ಪಾವತಿಸಲು ವಿವಿ ಆದೇಶಿಸಿದೆ. ಪರೀಕ್ಷಾ ಶುಲ್ಕ ಪಾವತಿಸಲು ತೊಂದರೆಯಾಗಿದೆ. ಪರೀಕ್ಷೆ ಬರೆಯಲು ಸಾಧ್ಯವಾಗುತ್ತೋ, ಇಲ್ಲವೋ ಎಂಬ ಆತಂಕ ಎದುರಾಗಿದೆ” ಎಂದು ವಿವಿಯ ವಿದ್ಯಾರ್ಥಿಗಳು ಹೇಳಿದ್ದಾರೆ.


    ಪೋಷಕರು ಕೃಷಿ ಅಥವಾ ಕಟ್ಟಡ ಕೆಲಸ ಮಾಡುತ್ತಿದ್ದು, ಕಾಲೇಜ್ ಶುಲ್ಕ ಪಾವತಿಗೆ ತುಂಬಾ ಕಷ್ಟವಾಗಿತ್ತು. ಇದೀಗ ಮತ್ತೆ ಪರೀಕ್ಷಾ ಶುಲ್ಕ ಹೇಗೆ ಕಟ್ಟಲಿ ಎಂಬುದು ತೋಚುತ್ತಿಲ್ಲ. ನಮ್ಮ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಆದರೆ, ಸಹಜ ಪರಿಸ್ಥಿತಿ ಏರ್ಪಟ್ಟಿದೆ ಎಂಬಂತ ರೀತಿಯಲ್ಲಿ ವಿಶ್ವವಿದ್ಯಾಲಯ ಚಟುವಟಿಕೆಗಳನ್ನು ಆರಂಭಿಸಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.


    ಕೊರೋನಾ ವೈರಸ್ ಇಡೀ ಪ್ರಪಂಚವನ್ನೇ ಭಯಾನಕವಾಗಿ ಕಾಡಿಸುತ್ತಿದೆ. ಭಾರತ ಕರೋನಾದಲ್ಲಿ ಸೋಂಕಿತರ ಪಟ್ಟಿಯಲ್ಲಿ ವಿಶ್ವಗುರು ಆಗುವತ್ತ ಸಾಗಿದೆ. ಇನ್ನು ಯಾವುದೇ ತಯಾರಿ ಇಲ್ಲದೆ ಮೇಲಿಂದ ಮೇಲೆ ಹೇರಿದ ಲಾಕ್‌ಡೌನ್‌ನಿಂದಾಗಿ ಬಡವರು, ದಿನಗೂಲಿ ಕಾರ್ಮಿಕರು, ರೈತರು, ಬೀದಿ ವ್ಯಾಪಾರಿಗಳ ಕುಟುಂಬಗಳು ಆರ್ಥಿಕವಾಗಿ ಇನ್ನೂ ಚೇತರಿಸಿಕೊಂಡಿಲ್ಲ.


    ಇಂತಹ ಸಂದರ್ಭವನ್ನು ಅವಕಾಶ ಎಂಬಂತೆ ಖಾಸಗೀ ಸಂಸ್ಥೆಗಳು ಬಳಸಿಕೊಳ್ಳುತ್ತಿರುವುದು ವಿಷಾಧನೀಯ. ಇದೇ ದಾರಿಯನ್ನು ಸರ್ಕಾರಿ ಶಿಕ್ಷಣ ಸಂಸ್ಥೆಗಳು ಅನುಸರಿಸುವುದು ಎಂದರೆ ಏನರ್ಥ? ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವು ಈ ಸಮಯದಲ್ಲಿ ಶುಲ್ಕ ಸಂಗ್ರಹಿಸಬಾರದು ಎಂದು ಎಂದು ಕೆವಿಎಸ್ ರಾಜ್ಯ ಸಂಚಾಲಕರಾದ ಸರೋವರ್ ಬೆಂಕಿಕೆರೆ ಆಗ್ರಹಿಸಿದ್ದಾರೆ.


    ರಾಜ್ಯದ ಹಾಗೂ ದೇಶದ ನಾನಾ ಭಾಗಗಳಿಂದ ಬಂದು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಲಾಕ್‌ಡೌನ್‌ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಹಾಸ್ಟಲ್‌ಗಳೂ ಇನ್ನೂ ತೆರೆಯದೇ ಇರುವುದರಿಂದ ಪರೀಕ್ಷೆ ಬರೆಯಲು ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳು ಬಾಡಿಗೆ ಮನೆಗಳನ್ನೋ, ಪಿಜಿಗಳಲ್ಲೋಉಳಿದುಕೊಂಡು ಪರೀಕ್ಷೆ ಎದುರಿಸಬೇಕಾಗಿದೆ. ಅದಕ್ಕೂ ಅವರು ಹಣ ವ್ಯಯಿಸಬೇಕಾಗಿದೆ.


    ಇಂತಹ ಸಂದರ್ಭದಲ್ಲಿ ಮತ್ತೂ ಪರೀಕ್ಷಾ ಶುಲ್ಕ ಕಟ್ಟವುದು ವಿದ್ಯಾರ್ಥಿಗಳಿಗೆ ಹೊರೆಯಾಗಿದೆ. ಇದರಿಂದಾಗಿ ಹಲವು ವಿದ್ಯಾರ್ಥಿಗಳು ಪರೀಕ್ಷೆಯಿಂದಲೇ ಹೊರಗುಳಿಯುವ ಸಾಧ್ಯತೆ ಇದೆ. ಹಾಗಾಗಿ, ಈ ಬಾರಿ ಪರೀಕ್ಷಾ ಶುಲ್ಕ ಹಾಗೂ ಮುಂದಿನ ಶೈಕ್ಷಣಿಕ ವರ್ಷದ ದಾಖಲಾತಿ ಶುಲ್ಕವನ್ನು ರದ್ದುಗೊಳಿಸಿ, ಎಲ್ಲಾ ವಿದ್ಯಾರ್ಥಿಗಳಿಗೂ ಸರ್ಕಾರ ಉಚಿತ ಪ್ರವೇಶ ನೀಡಬೇಕು” ಎಂದು ಕೆವಿಎಸ್‌ನ ರಾಜ್ಯ ಸಂಚಾಲಕ ಸರೋವರ್ ಬೆಂಕಿಕೆರೆಯವರು ಒತ್ತಾಯಿಸಿದ್ದಾರೆ.


    ಸ್ನಾತಕೋತ್ತರ ಪದವಿಯ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 1-14ರ ನಡುವೆ ಲಿಖಿತ ಪರೀಕ್ಷೆಗಳು ನಡೆಯಲಿದ್ದು, ಸೆಪ್ಟೆಂಬರ್ 15 ಮತ್ತು 21ರ ನಡುವೆ ಪ್ರಾಯೋಗಿಕ ಪರೀಕ್ಷೆ ಮತ್ತು ಸಂದರ್ಶನ ಪರೀಕ್ಷೆಗಳು ನಡೆಯಲಿವೆ ಎಂದು ವಿಶ್ವವಿದ್ಯಾಲಯದ ವೆಬ್ ಸೈಟ್ ನಲ್ಲಿ ಘೋಷಿಸಲಾಗಿದೆ.

    Published by:MAshok Kumar
    First published: