ಆರ್.ಆರ್. ನಗರದಲ್ಲಿ ಡಿಕೆ ರವಿ ಹೆಂಡತಿಗೆ ಕೈ ಟಿಕೆಟ್ ಸಾಧ್ಯತೆ; ಭಾನುವಾರ ಕುಸುಮಾ ಕಾಂಗ್ರೆಸ್ ಸೇರ್ಪಡೆ

ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಪತ್ನಿ ಕುಸುಮಾ ರವಿ ಅವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಅವರಿಗೆ ಆರ್.ಆರ್. ನಗರ ಕ್ಷೇತ್ರದ ಟಿಕೆಟ್ ನೀಡುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

ದಿವಂಗತ ಡಿಕೆ ರವಿ ಮತ್ತು ಕುಸುಮಾ ರವಿ

ದಿವಂಗತ ಡಿಕೆ ರವಿ ಮತ್ತು ಕುಸುಮಾ ರವಿ

  • Share this:
ಬೆಂಗಳೂರು(ಅ. 03): ಹನುಮಂತರಾಯಪ್ಪ ಅವರ ಮಗಳು ಹಾಗೂ ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಪತ್ನಿ ಕುಸುಮಾ ಅವರಿಗೆ ಆರ್.ಆರ್. ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ದಕ್ಕುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ಹೇಳುತ್ತಿವೆ. ಕುಸುಮಾ ರವಿ ಅವರು ನಾಳೆ ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರಲಿದ್ದಾರೆ. ಕುಸುಮಾ ರವಿ ಕಾಂಗ್ರೆಸ್ ಸೇರ್ಪಡೆ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ತಿಳಿಸಿದರು. ಇಂದು ಹನುಮಂತರಾಯಪ್ಪ ಅವರ ನಿವಾಸಕ್ಕೆ ಡಿಕೆ ಶಿವಕುಮಾರ್, ಸಂಸದ ಡಿಕೆ ಸುರೇಶ್ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಭೇಟಿ ನೀಡಿದ್ದು ಗಮನಾರ್ಹವಾಗಿತ್ತು. ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆ ಶಿವಕುಮಾರ್, ಆರ್.ಆರ್. ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಅಚ್ಚರಿಯ ಅಭ್ಯರ್ಥಿಯನ್ನ ಆಯ್ಕೆ ಮಾಡುತ್ತೇವೆ ಎಂದರು. ಹಾಗೆಯೇ, ಕುಸುಮಾ ಅವರು ಅಚ್ಚರಿ ಅಭ್ಯರ್ಥಿ ಹೌದೋ ಅಲ್ಲವೋ ಎಂದು ಮಾಧ್ಯಮದವರನ್ನ ಕೇಳುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬ ಸುಳಿವನ್ನು ಬಿಟ್ಟುಕೊಟ್ಟಂತಿತ್ತು.

ಆರ್.ಆರ್. ನಗರ ಉಪಚುನಾವಣೆಗೆ ಕಾಂಗ್ರೆಸ್​ನಿಂದ ಹಲವು ಆಕಾಂಕ್ಷಿಗಳಿದ್ದಾರೆ. ರಾಮಲಿಂಗಾ ರೆಡ್ಡಿ ನೇತೃತ್ವದ ಸಮಿತಿ ಸೂಕ್ತ ಅಭ್ಯರ್ಥಿಗಳ ಆಯ್ಕೆ ಮಾಡುತ್ತದೆ. ಸಮಿತಿ ಶಿಫಾರಸು ಮಾಡುವ ಹೆಸರುಗಳನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜೊತೆ ಕುಳಿತು ಚರ್ಚೆ ಮಾಡಿ ಆ ನಂತರ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸುತ್ತೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ಇದನ್ನೂ ಓದಿ: 'ಮೂಳೆ ಇಲ್ಲದ ನಾಲಗೆ...' - ಡಿಕೆ ಶಿವಕುಮಾರ್​ಗೆ ವಸತಿ ಸಚಿವ ವಿ ಸೋಮಣ್ಣ ಟೀಕೆ

ಈ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಮಾತನಾಡಿ, ಆರ್.ಆರ್. ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್​ಗಾಗಿ ಏಳು ಆಕಾಂಕ್ಷಿಗಳಿದ್ದಾರೆ. ಅವರ ಪೈಕಿ ನಾಲ್ವರು ಪ್ರಮುಖರಾದವರು ಇದ್ದಾರೆ. ಕುಸುಮಾ ಅವರ ತಂದೆ ಹನುಮಂತರಾಯಪ್ಪ ಈ ಭಾಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ, ಅಭ್ಯರ್ಥಿ ಯಾರಾಗಬೇಕು ಎಂದು ಹಿರಿಯರು ನಿರ್ಧರಿಸುತ್ತಾರೆ. ಸಿದ್ದರಾಮಯ್ಯ, ಎಸ್.ಆರ್. ಪಾಟೀಲ್, ರಾಮಲಿಂಗಾ ರೆಡ್ಡಿ ಅವರೆಲ್ಲರೂ ಸೇರಿ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ಆರ್.ಆರ್. ನಗರ ಕ್ಷೇತ್ರದಲ್ಲಿ ಯಾರೆಲ್ಲಾ ಪಕ್ಷ ಬಿಟ್ಟಿದ್ದರೋ ಅವರನ್ನೆಲ್ಲಾ ಸೇರಿಸಿಕೊಳ್ಳುತ್ತಿದ್ದೇವೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಹೇಳಿದ ಅವರು, ಮುನಿರತ್ನ ಮತ್ತೆ ಕಾಂಗ್ರೆಸ್ ಸೇರುವ ಬಗ್ಗೆ ಪ್ರತಿಕ್ರಿಯಿಸಿ ತನಗೂ ಅವರಿಗೂ ರಾಜಕೀಯವಾಗಿ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನು, ಆರ್.ಆರ್. ನಗರ ಕ್ಷೇತ್ರದಲ್ಲಿ ಚಿರಪರಿಚಿತವಾಗಿರುವ ಹನುಮಂತರಾಯಪ್ಪ ಅವರು ತಮ್ಮ ಮಗಳು ಕುಸುಮಾ ರವಿ ಅವರನ್ನ ಕಣಕ್ಕಿಳಿಸಲು ಬಹಳ ಪ್ರಯತ್ನ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಒಪ್ಪಂದದಲ್ಲಿ ತಮ್ಮ ಮಗಳನ್ನ ನಿಲ್ಲಿಸುವ ಅವರ ಪ್ರಯತ್ನ ಫಲಗೂಡಿಲ್ಲ. ಜೆಡಿಎಸ್​ನಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ. ಈಗ ಅವರ ಮಗಳಿಗೆ ಕಾಂಗ್ರೆಸ್ ಟಿಕೆಟ್ ಸಿಗುವ ನಿರೀಕ್ಷೆಯಂತೂ ಗರಿಗೆದರಿದೆ.

ಇದನ್ನೂ ಓದಿ: ಶಿರಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ರಾಜೇಶ್ ಗೌಡ ಬಿಜೆಪಿ ಸೇರ್ಪಡೆ; ನಳೀನ್ ಕುಮಾರ್ ಕಟೀಲ್ ಸ್ವಾಗತ

ಹಾಗೆಯೇ, ಕುಸುಮಾ ರವಿ ಅವರಿಗೆ ಜೆಡಿಎಸ್ ಬಾಗಿಲು ಬಂದ್ ಆಗಿರುವುದಂತೂ ಕುಮಾರಸ್ವಾಮಿ ಹೇಳಿಕೆಯಿಂದ ವೇದ್ಯವಾಗಿದೆ. ಹನುಮಂತರಾಯಪ್ಪ ತಮ್ಮ ಪಕ್ಷದ ಕಾರ್ಯಕರ್ತರೇ ಅಲ್ಲ. ಅವರು ನಮ್ಮಲ್ಲಿ ಬಂದರು, ಹಾಗೇ ಹೋದರು. ಅವರು ಸಿಕ್ಕ ಸಿಕ್ಕ ಬಸ್ ಹತ್ತುತ್ತಾರೆ. ನಮ್ಮ ಪಕ್ಷಕ್ಕೆ ಬಂದು ಹಾಳು ಮಾಡಿ ಹೋದರು. ಕಾಂಗ್ರೆಸ್​ನಲ್ಲಿ ಯಾರನ್ನು ಎಳೆಯಬೇಕು ಎಂದು ತಂತ್ರ ಮಾಡುತ್ತಿದ್ದಾರೆ ಎಂದು ಹೇಳಿದ ಕುಮಾರಸ್ವಾಮಿ, ಆರ್.ಆರ್. ನಗರ ಕ್ಷೇತ್ರದಲ್ಲಿ ಜೆಡಿಎಸ್​ಗೆ ಕಾರ್ಯಕರ್ತರ ಶಕ್ತಿ ಇದೆ. ಮೂವರು ಆಕಾಂಕ್ಷಿಗಳಿದ್ದಾರೆ. ಯಾರಿಗೆ ಟಿಕೆಟ್ ನೀಡಬೇಕೆಂದು ಸದ್ಯದಲ್ಲೇ ನಿರ್ಧಾರ ಮಾಡುತ್ತೇವೆ ಎಂದರು.

ಆರ್.ಆರ್. ನಗರ ಮತ್ತು ಶಿರಾ ಕ್ಷೇತ್ರಗಳ ಉಪಚುನಾವಣೆ ನವೆಂಬರ್ 3ಕ್ಕೆ ನಡೆಯಲಿದ್ದು ನ. 10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿಯಿಂದ ಮುನಿರತ್ನ ವರ್ಸಸ್ ತುಳಸಿ ಮುನಿರಾಜು ಮಧ್ಯೆ ತೀವ್ರ ಪೈಪೋಟಿ ಇದೆ. ಕಾಂಗ್ರೆಸ್​ನಿಂದ ವಲಸೆ ಬಂದ ಮುನಿರತ್ನಗೆ ಟಿಕೆಟ್ ಕೊಟ್ಟು ವಾಗ್ದಾನ ಉಳಿಸಿಕೊಳ್ಳುವುದು ಯಡಿಯೂರಪ್ಪ ಅವರ ಇಚ್ಛೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ತುಳಸಿ ಮುನಿರಾಜು ಗೌಡ ಪರ ನಿಂತಿದ್ದಾರೆ. ಹೀಗಾಗಿ, ಈ ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟು ಈಗ ಹೈಕಮಾಂಡ್ ಅಂಗಳದಲ್ಲಿದೆ.

ವರದಿ: ಸಂಜಯ್ ಎಂ ಹುಣಸನಹಳ್ಳಿ
Published by:Vijayasarthy SN
First published: