ಉಡುಪಿ: ಕರಾವಳಿಯನ್ನೇ ಬೆಚ್ಚಿ ಬೀಳುವಂತೆ ಮಾಡಿದ್ದ, ಕುರುಪ್ ಸಿನಿಮಾ (Kurup Cinema) ಸ್ಟೈಲ್ನಲ್ಲಿ ಕೊಲೆ ಮಾಡಿ ತಾನೇ ಸಾವನ್ನಪ್ಪಿರೋದಾಗಿ ಬಿಂಬಿಸಲು ಹೊರಟು ಪೊಲೀಸರ ಅತಿಥಿಯಾಗಿದ್ದ ಆರೋಪಿ, ಜೈಲಿಯಲ್ಲೇ ನೇಣಿಗೆ ಶರಣಾಗಿದ್ದಾನೆ. ಸದಾನಂದ ಸೇರಿಗಾರ್ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರಣಾದೀನ ಕೈದಿಯಾಗಿದ್ದು (Undertrial Prisoner), ಉಡುಪಿ ಸಬ್ ಜೈಲಿನಲ್ಲಿ (Udupi Sub Jail) ಘಟನೆ ನಡೆದಿದೆ. ಇಂದು ಮುಂಜಾನೆ 5 ಗಂಟೆ ಸಮಯದಲ್ಲಿ ಆರೋಪಿ ಸದಾನಂದ, ಪಂಚೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಜೈಲಿನಲ್ಲಿದ್ದ ಸಹ ಕೈದಿಗಳು ಆತನನ್ನು ರಕ್ಷಣೆ ಮಾಡಿದ್ದಾರೆ. ಕೂಡಲೇ ಜೈಲಿನ ಸಿಬ್ಬಂದಿ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಯತ್ನಿಸಿದ್ದು, ಆದರೆ ದಾರಿ ನಡುವೆಯೇ ಆತನ ಸಾವನ್ನಪ್ಪಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಉಡುಪಿ ಸಬ್ ಜೈಲಿನಲ್ಲಿದ್ದ ಕೊಠಡಿಯಲ್ಲಿ ಆರೋಪಿ ಜೊತೆಗೆ ಸುಮಾರು 20 ಕೈದಿಗಳಿದ್ದರು. ಆದರೆ ಮುಂಜಾನೆ ಸಮಯದಲ್ಲಿ ಎಲ್ಲರೂ ನಿದ್ದೆಯಲ್ಲಿದ್ದಾಗ ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದನಂತೆ. ಕೂಡಲೇ ಸಹ ಕೈದಿಗಳು ಗಮನಿಸಿ ಕುಣಿಕೆಯಿಂದ ಬಿಡಿಸಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಆರೋಪಿ ಸಾವನ್ನಪ್ಪಿದ್ದ ಎನ್ನಲಾಗಿದೆ.
ಏನಿದು ಪ್ರಕರಣ?
ಜುಲೈ 13 ರಂದು ಬೈಂದೂರಿನ ಹೆನುಬೇರು ಬಳಿ ಕಾರಿನೊಳಗೆ ಸುಟ್ಟು ಕರಕಲಾಗಿರುವ ಶವ ಪತ್ತೆಯಾಗಿತ್ತು. ಕಾರಿನ ಹಿಂಬದಿಯ ಆಸನದಲ್ಲಿದ್ದ ಶವ ಗುರುತು ಸಿಗದಷ್ಟು ಸುಟ್ಟು ಕರಕಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದ ಉಡುಪಿ ಪೊಲೀಸರು ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.
ಇದನ್ನೂ ಓದಿ: JDS Pancharatna Yatra: ಸೈಕ್ಲೋನ್ ಎಫೆಕ್ಟ್, ಜೆಡಿಎಸ್ ರಥಯಾತ್ರೆ; ಹೊಸ ವೇಳಾಪಟ್ಟಿ ಹೀಗಿದೆ
ನಕಲಿ ದಾಖಲೆ ಸೃಷ್ಟಿಸಿದ್ದ ಸದಾನಂದ್
ಆರೋಪಿ ಸದಾನಂದ್ ಪರವಾನಗಿ ಪಡೆದ ಭೂಮಾಪಕನಾಗಿ (Licensed land Surveyor) ಕೆಲಸ ಮಾಡಿಕೊಂಡಿದ್ದನು. ಸದಾನಂದ್ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಆಸ್ತಿಗೆ ಸಂಬಂಧಿಸಿದಂತೆ ನಕಲಿ ಸ್ಕೆಚ್ ಸಿದ್ಧಪಡಿಸಿದ್ದನು. ಸ್ಕೆಚ್ ನಲ್ಲಿ ಇಲ್ಲದ ರಸ್ತೆಯನ್ನು ಸಹ ಸದಾನಂದ್ ತೋರಿಸಿ ಮೋಸ ಮಾಡಿದ್ದನು. ಈ ಸಂಬಂಧ ಸದಾನಂದ್ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಹ ಸಲ್ಲಿಕೆ ಮಾಡಿದ್ದರು. ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆರೋಪಿ ಸದಾನಂದನನಿಗೆ ಸಮನ್ಸ್ ಸಹ ನೀಡಲಾಗಿತ್ತು.
ಇದನ್ನೂ ಓದಿ: Moral Policing: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ; ಭಜರಂಗದಳ ಕಾರ್ಯಕರ್ತರು ಅರೆಸ್ಟ್
ಪೊಲೀಸರಿಂದ ತಪ್ಪಿಸಿಕೊಳ್ಳಲು ಕೊಲೆಯ ನಾಟಕ
ಸಮನ್ಸ್ ಬಂದ ಹಿನ್ನೆಲೆ ಆರೋಪಿ ಸದಾನಂದನಿಗೆ ಬಂಧನದ ಭೀತಿ ಎದುರಾಗಿತ್ತು. ಬಂಧನದಿಂದ ತಪ್ಪಿಸಿಕೊಳ್ಳಲು ತನ್ನ ಕೊಲೆ ನಡೆದಿದೆ ಎಂದು ಬಿಂಬಿಸಲು ಕುರುಪ್ ಸಿನಿಮಾದಂತೆ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದನು. ಇದಕ್ಕೆ ತನ್ನ ಸಹವರ್ತಿಯಾಗಿದ್ದ ಶಿಲ್ಪಾ ಸಹಾಯ ಪಡೆದುಕೊಂಡಿದ್ದನು. ಶಿಲ್ಪಾ ಈ ಮೊದಲು ಗುತ್ತಿಗೆ ಆಧಾರದ ಮೇಲೆ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಅಲ್ಲಿ ಸದಾನಂದ್ ಮತ್ತು ಶಿಲ್ಪಾಳ ಪರಿಚಯವಾಗಿತ್ತು.
ನಿದ್ದೆ ಮಾತ್ರೆ ಮಿಶ್ರಿತ ಮದ್ಯ ಕುಡಿಸಿದ್ದರು
ತನ್ನ ಕೊಲೆ ನಡೆದಿದೆ ಎಂದು ಬಿಂಬಿಸಲು ಸದನಾಂದ್ ತನ್ನ ವಯೋಮಾನದ ವ್ಯಕ್ತಿಯೊಬ್ಬನನ್ನು ಹುಡುಕಿಕೊಂಡಿದ್ದ. ಆತನಿಗೆ ನಿದ್ದೆ ಮಾತ್ರೆ ಮಿಶ್ರಿತ ಮದ್ಯ ಕುಡಿಸಿ, ಆತ ನಿದ್ದೆಗೆ ಜಾರುತ್ತಿದ್ದಂತೆ ಕಾರ್ ಗೆ ಬೆಂಕಿ ಹಚ್ಚಿ ಸ್ಥಳದಿಂದ ಎಸ್ಕೇಪ್ ಆಗಿದ್ದರು ಎಂಬ ಮಾಹಿತಿ ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಸದನಾಂದ್ನನ್ನು ಬಂಧಿಸಿದ್ದ ಪೊಲೀಸರು, ನ್ಯಾಯಾಲಯಕ್ಕೆ ಹಾಜರು ಪಡಿಸಿ ಜೈಲಿಗೆ ಕಳುಹಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ