ಬೆಂಗಳೂರು (ಫೆ. 7): ಬೆಂಗಳೂರಿನಲ್ಲಿ ಇಂದು 'ಎಸ್ಟಿ ನಮ್ಮ ಹಕ್ಕು' ಕುರುಬರ ಬೃಹತ್ ಸಮಾವೇಶ ನಡೆಯಲಿದೆ. ಮಾದಾವರದ BIEC ಆವರಣದಲ್ಲಿ ಈ ಬೃಹತ್ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಕುರುಬ ಸಮುದಾಯವನ್ನ ಪರಿಶಿಷ್ಟ ಪಂಗಡಕ್ಕೆ ಒಳಪಡಿಸುವಂತೆ ಕುರುಬರು ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಲಿದ್ದು, ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಕೆಲವು ಮುಖ್ಯ ರಸ್ತೆಗಳಲ್ಲಿ ಬದಲಿ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ. ವಾರಾಂತ್ಯವಾಗಿರುವುದರಿಂದ ಇಂದು ನೀವೇನಾದರೂ ಮನೆಯಿಂದ ಹೊರಗೆ ಹೋಗುವುದಾದರೆ ಟ್ರಾಫಿಕ್ನಿಂದ ಪಾರಾಗಲು ಬದಲಿ ಮಾರ್ಗದ ಮಾಹಿತಿ ಇಲ್ಲಿದೆ...
ಈ ಬೃಹತ್ ಸಮಾವೇಶದಲ್ಲಿ ಊಟಕ್ಕಾಗಿ 15 ಲಕ್ಷ ರೊಟ್ಟಿ ತಯಾರಿ ಮಾಡಲಾಗಿದೆ. 60 ಲೀಟರ್ ಮೊಸರು ಸೇರಿದಂತೆ ವಿವಿಧ ಖಾದ್ಯಗಳ ತಯಾರಿ ನಡೆಸಲಾಗಿದೆ. ಸಮಾವೇಶದ ಭದ್ರತೆಗಾಗಿ 2000 ಪೊಲೀಸರ ನಿಯೋಜನೆ ಮಾಡಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಭಾರೀ ವಾಹನಗಳಿಗೆ ಮಾರ್ಗ ಬದಲಾಯಿಸಲಾಗಿದೆ.
ಇಂದು ಮಾದಾವರದಲ್ಲಿ ನಡೆಯುವ ಬೃಹತ್ ಎಸ್ಟಿ ಮೀಸಲಾತಿ ಸಮಾವೇಶದಿಂದ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಈ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಬದಲಿ ಮಾರ್ಗ ಕಲ್ಪಿಸಿದ್ದಾರೆ. ಭಾರೀ ವಾಹನಗಳಿಗೆ ಬದಲಿ ಮಾರ್ಗದ ವ್ಯವಸ್ಥೆ ಕಲ್ಪಿಸಿದ್ದಾರೆ. ತುಮಕೂರು ಮೂಲಕ ಬರುವ ವಾಹನಗಳು ಹೈದರಾಬಾದ್ ರಸ್ತೆ ತಲುಪಬೇಕಾದರೆ ಡಾಬಸ್ಪೇಟೆ - ದೊಡ್ಡಬಳ್ಳಾಪುರ - ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೂಲಕ ತಲುಪಬೇಕಿದೆ.
ಇದನ್ನೂ ಓದಿ: Kuruba ST Reservation: ಎಸ್ಟಿ ಮೀಸಲಾತಿ; ಇಂದು ಕುರುಬ ಸಮುದಾಯದಿಂದ ಬೃಹತ್ ಸಮಾವೇಶ
ಇಂದು ಹೈದರಾಬಾದ್ ರಸ್ತೆಯಿಂದ ತುಮಕೂರು ರಸ್ತೆ ಪ್ರವೇಶಿಸುವವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ - ದೊಡ್ಡಬಳ್ಳಾಪುರ - ಡಾಬಸ್ಪೇಟೆ ಮಾರ್ಗವಾಗಿ ತುಮಕೂರು ರಸ್ತೆಯನ್ನು ತಲುಪಬೇಕು. ತುಮಕೂರು ರಸ್ತೆಯಿಂದ ಹೊಸೂರು ಹಾಗೂ ಮೈಸೂರು ರಸ್ತೆ ಮಾರ್ಗ ಪ್ರವೇಶಿಸಬೇಕಾದಲ್ಲಿ ಡಾಬಸ್ಪೇಟೆ - ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್, ಮಾಗಡಿ - ಮಾಗಡಿ ರಸ್ತೆ ನೈಸ್ ರೋಡ್ ಮೂಲಕ ಹೊಸೂರು, ಮೈಸೂರು ರಸ್ತೆಯನ್ನು ಸಂಪರ್ಕಿಸಬಹುದು.
ಮೈಸೂರು ಹಾಗೂ ಹೊಸೂರು ರಸ್ತೆಯಿಂದ ತುಮಕೂರು ರಸ್ತೆ ಪ್ರವೇಶಿಸಬೇಕಾದವರು ನೈಸ್ ಜಂಕ್ಷನ್ - ಮಾಗಡಿ ರಸ್ತೆ ನೈಸ್ ರೋಡ್ - ಮಾಗಡಿ - ಗುಡೆಮಾರನಹಳ್ಳಿ ಹ್ಯಾಂಡ್ ಪೋಸ್ಟ್ - ಡಾಬಸ್ಪೇಟೆ ಮಾರ್ಗವಾಗಿ ತುಮಕೂರು ತಲುಪಬೇಕು. ಹಾಗೇ, ನೇರ ಬೆಂಗಳೂರಿಗೆ ತಲುಪಬೇಕಾದ ಭಾರೀ ವಾಹನಗಳು ಸಂಜೆಯವರೆಗೂ ಡಾಬಸ್ಪೇಟೆ ಪಾರ್ಕಿಂಗ್ ಸ್ಥಳದಲ್ಲಿ ಕಾಯಬೇಕು. ಕುರುಬರ ಸಮಾವೇಶ ಮುಗಿದು ಪೊಲೀಸರ ಸೂಚನೆ ನಂತರವಷ್ಟೆ ಬೆಂಗಳೂರನ್ನು ಪ್ರವೇಶಿಸಲು ಅವಕಾಶ ನೀಡಲಾಗುವುದು.
ಬೆಂಗಳೂರು ನಗರದಿಂದ ತುಮಕೂರು ರಸ್ತೆ ಹಾಗೂ ಹಾಸನ ರಸ್ತೆ ಸಂಪರ್ಕಿಸಬೇಕಾದವರು ಮಾಗಡಿ ರಸ್ತೆ ಬಳಸುವುದು ಸೂಕ್ತ. ಬೆಂಗಳೂರು ನಗರ -ಮಾಗಡಿ ರಸ್ತೆ - ಮಾಗಡಿ - ಗುಡೆಮಾರನಹಳ್ಳಿ ಹ್ಯಾಂಡ್ ಪೋಸ್ಟ್ನಿಂದ ಹಾಸನ ರಸ್ತೆ ತಲುಪಬಹುದು. ಅಥವಾ ಬೆಂಗಳೂರು ನಗರ -ಮಾಗಡಿ ರಸ್ತೆ - ಮಾಗಡಿ - ಗುಡೆಮಾರನಹಳ್ಳಿ ಹ್ಯಾಂಡ್ - ಡಾಬಸ್ಪೇಟೆ ಮುಖಾಂತರ ತುಮಕೂರು ರಸ್ತೆ ತಲುಪಬಹುದಾಗಿದೆ.
ಮನೆಗೊಬ್ಬ ಕುರುಬಣ್ಣ ಸಮಾವೇಶಕ್ಕೆ ಬಾರಣ್ಣ ಎಂದು ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳು ಸಮಾವೇಶಕ್ಕೆ ಬರುವಂತೆ ಕುರುಬರಿಗೆ ಕರೆ ನೀಡಿದ್ದಾರೆ. ಇಂದಿನ ಸಮಾವೇಶದಲ್ಲಿ 10 ಲಕ್ಷ ಕುರುಬ ಸಮುದಾಯದವರು ಭಾಗಿಯಾಗುವ ಸಾಧ್ಯತೆಯಿದೆ. ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದ ಶ್ರೀಗಳು, ಕುರುಬ ಸಮುದಾಯದ ಸಚಿವರು, ಶಾಸಕರು, ರಾಜಕೀಯ ನಾಯಕರು ಭಾಗಿಯಾಗಲಿದ್ದಾರೆ. ಇಂದು ಬೆಳಗ್ಗೆ 11ಕ್ಕೆ ವೇದಿಕೆ ಕಾರ್ಯಕ್ರಮ ಶುರುವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ