ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಕೋಲಾರದಲ್ಲಿ (Kolar Constituency) ಸ್ಪರ್ಧೆ ಮಾಡಲು ಅಖಾಡ ಸಿದ್ಧ ಮಾಡಿಕೊಂಡಿದ್ದಾರೆ. ಆದರೆ ಕ್ಷೇತ್ರದಲ್ಲಿ ಕುರುಬ ಸಮುದಾಯದ (Kuruba Community) ನಾಯಕರಾಗಿರುವ ಸಿದ್ದರಾಮಯ್ಯ ಅವರಿಗೆ ಮೊದಲ ಶಾಕ್ ಎದುರಾಗಿದ್ದು, ಸಿದ್ದು ಸ್ಪರ್ಧೆಗೆ ಕುರುಬ ಸಂಘದಲ್ಲೇ ಪರ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಕನಸಿನ ಕೋಲಾರ ನನಸಾಗಲ್ವಾ ಎಂಬ ಪ್ರಶ್ನೆ ಕ್ಷೇತ್ರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕುರುಬ ಸಂಘದಲ್ಲೇ ಸಿದ್ದರಾಮಯ್ಯಗೆ ವಿರೋಧ!
ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರವನ್ನ ಈ ಬಾರಿ ಚುನಾವಣಾ ಅಖಾಡವನ್ನಾಗಿ ಮಾಡಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಚಿನ್ನದ ನಾಡಲ್ಲೇ ಸ್ಪರ್ಧಿಸೋದಾಗಿ ಈಗಾಗಲೇ ಸಿದ್ದರಾಮಯ್ಯ ಘೋಷಣೆ ಕೂಡ ಮಾಡಿದ್ದಾರೆ.
ಆದರೆ ಸಿದ್ದರಾಮಯ್ಯರ ಈ ಸ್ಪರ್ಧೆಯನ್ನ ಸ್ವತಃ ಕೋಲಾರದ ಜಿಲ್ಲಾ ಕುರುಬ ಸಂಘವೇ ನೂರಕ್ಕೆ ನೂರು ಸ್ವಾಗತಿಸಿಲ್ಲ. ಕುರುಬ ನಾಯಕ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಕುರುಬ ಸಂಘದಲ್ಲೇ ಭಿನ್ನಾಭಿಪ್ರಾಯ ಇದೆ. ಕೆಲವರು ಸಿದ್ದರಾಮಯ್ಯ ಸ್ಪರ್ಧೆಯನ್ನು ವಿರೋಧಿಸುತ್ತಿದ್ದಾರೆ, ಇನ್ನಷ್ಟು ಮಂದಿ ಸಿದ್ದರಾಮಯ್ಯ ಕೋಲಾರಕ್ಕೆ ಬರಲಿ ಅಂತಿದ್ದಾರೆ.
ಇದನ್ನೂ ಓದಿ: Siddaramaiah: ನಾನು ಒಂದೇ ಕ್ಷೇತ್ರದಿಂದ ಸ್ಪರ್ಧಿಸ್ತೇನೆ! ದೇವರ ಭವಿಷ್ಯದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ
ಹೌದು, ಕೋಲಾರದಲ್ಲಿ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಚಿವ ವರ್ತೂರು ಪ್ರಕಾಶ್ ಕೂಡ ಕುರುಬ ಸಮುದಾಯದ ನಾಯಕ. ಹಾಗೇ ಬಿಜೆಪಿ ಟಿಕೆಟ್ ಅವರಿಗೆ ಬಹುತೇಕ ಖಚಿತ ಎನ್ನಲಾಗಿದೆ. ಹೀಗಾಗಿ ಇಲ್ಲಿಗೆ ಮತ್ತೊಬ್ಬ ಕುರುಬ ನಾಯಕ ಬೇಡ. ವರ್ತೂರು ಪ್ರಕಾಶ್ ಅವರನ್ನೇ ಗೆಲ್ಲಿಸೋಣ ಅಂತ ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಮುನಿಯಪ್ಪ ವರ್ತೂರು ಬೆಂಬಲಕ್ಕೆ ನಿಂತಿದ್ದಾರೆ.
ಸ್ಥಳೀಯವಾಗಿ ನಮಗೆ ಎಲ್ಲಾ ಬೆಂಬಲವನ್ನು ವರ್ತೂರ್ ಅವರು ಇದುವರೆಗೂ ನೀಡಿಕೊಂಡು ಬಂದಿದ್ದಾರೆ. ಬಿಜೆಪಿಯಿಂದ ಇಬ್ಬರು ಟಿಕೆಟ್ ಆಕಾಂಕ್ಷಿಗಳಿದ್ದು, ಇಬ್ಬರು ಕೂಡ ಕುರುಬ ಸಮುದಾಯದ ನಾಯಕರೇ ಆಗಿದ್ದಾರೆ. ಆದ್ದರಿಂದ ಸ್ಥಳೀಯ ನಾಯಕರಿಗೆ ಬೆಂಬಲ ನೀಡುಲು ನಿರ್ಧಾರ ಮಾಡಿದ್ದೇವೆ ಎಂದು ಕುರುಬ ಸಂಘದ ಅಧ್ಯಕ್ಷ ಮುನಿಯಪ್ಪ ಹೇಳಿದ್ದಾರೆ.
ಇನ್ನೊಂದ್ಕಡೆ ಕುರುಬ ಸಂಘದ ಕಾರ್ಯಾಧ್ಯಕ್ಷ ಜಯರಾಮ್ ಸಿದ್ದರಾಮಯ್ಯ ಪರ ನಿಂತಿದ್ದಾರೆ. ನಮ್ಮ ನಾಯಕರು ಸಿದ್ದರಾಮಯ್ಯ ಅವರು, ದೊಡ್ಡ ನಾಯಕರು ಇರುವುದರಿಂದ ಚಿಕ್ಕ ನಾಯಕರಿಗೆ ಬೆಂಬಲ ನೀಡಿದರೆ ಸಮುದಾಯಕ್ಕೆ ನಷ್ಟ ಆಗುತ್ತದೆ. ವೈಯುಕ್ತಿಕವಾಗಿ ನಾವು ಕಾಂಗ್ರೆಸ್, ಅದರಲ್ಲೂ ಸಿದ್ದರಾಮಯ್ಯ ಪರ ಮತಯಾಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ.
10 ಕೋಟಿ ರೂಪಾಯಿ ಅನುದಾನ ಮೂಲಕ ಕ್ಷೇತ್ರದ ಅಭಿವೃದ್ಧಿ
ಇವೆಲ್ಲದರ ನಡುವೆ ವರ್ತೂರು ಪ್ರಕಾಶ್ ಮಾತ್ರ ಕ್ಷೇತ್ರದ ಜನರ ಮನ ಗೆಲ್ಲಲು ಇನ್ನಿಲ್ಲದ ಸರ್ಕಸ್ ಮಾಡ್ತಿದ್ದಾರೆ. ಈ ಹಿಂದೆ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡುವಂತೆ ವರ್ತೂರು ಪ್ರಕಾಶ್ ಸಿಎಂಗೆ ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿರುವ ಸಿಎಂ ಬೊಮ್ಮಾಯಿ, 10 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ವರ್ತೂರು ಪ್ರಕಾಶ್ 10 ಕೋಟಿ ರೂಪಾಯಿ ಅನುದಾನದ ಮೂಲಕ ಅಭಿವೃದ್ಧಿ ಕಾರ್ಯ ಮಾಡ್ತೀನಿ, ನನ್ನದೇ ಜಯ ಅಂತ ವರ್ತೂರು ಪ್ರಕಾಶ್ ಒತ್ತಿ ಒತ್ತಿ ಹೇಳಿದ್ದಾರೆ.
ಕೆಹೆಚ್ ಮುನಿಯಪ್ಪರಿಂದಲೂ ಬಂದಿತ್ತು ವಿರೋಧ
ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಕೆಹೆಚ್ ಮುನಿಯಪ್ಪ ಕೂಡ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಇನ್ನೂ ಹೈಕಮಾಂಡ್ ನಿರ್ಧರಿಸಿದಬಳಿಕ ನೋಡೋಣ ಅಂತ ಮುನಿಯಪ್ಪ ಹೇಳಿದ್ದರು.
ಇನ್ನು ಹೆಚ್ಡಿ ಕುಮಾರಸ್ವಾಮಿ, ಈ ಬಾರಿ ಕೋಲಾರದಿಂದಲೇ ರಣಕಹಳೆ ಮೊಳಗಿಸ್ತೇವೆ ಎಂದಿದ್ದರು. ಇದೀಗ ಕೋಲಾರ 224 ಕ್ಷೇತ್ರಗಳ ಪೈಕಿ ಹೈವೋಲ್ಟೇಜ್ ಇರುವ ಕ್ಷೇತ್ರವಾಗಿದೆ. ಸಿದ್ದರಾಮಯ್ಯ ವಿರುದ್ಧವೇ ಕುರುಬ ಸಂಘ ಕೂಡ ಕೆಲಸ ಮಾಡ್ತಿದೆ. ಇದು ಸಿದ್ದರಾಮಯ್ಯಗೆ ಸಾಕಷ್ಟು ಟೆನ್ಷನ್ ತಂದಿಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ