• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Kuruba Protest - ಬೆಂಗಳೂರಿನಲ್ಲಿ ಕುರುಬರಿಂದ ಪ್ರತಿಭಟನೆ; ಮೊಳಗಿತು ಸಿದ್ದು ಮಹಾರಾಜ್ ಕಿ ಜೈ ಘೋಷಣೆ

Kuruba Protest - ಬೆಂಗಳೂರಿನಲ್ಲಿ ಕುರುಬರಿಂದ ಪ್ರತಿಭಟನೆ; ಮೊಳಗಿತು ಸಿದ್ದು ಮಹಾರಾಜ್ ಕಿ ಜೈ ಘೋಷಣೆ

ಕುರುಬರ ಪ್ರತಿಭಟನೆ

ಕುರುಬರ ಪ್ರತಿಭಟನೆ

ಐದು ಪ್ರಮುಖ ಬೇಡಿಕೆಗಳನ್ನ ಮುಂದಿಟ್ಟುಕೊಂಡು ನೂರಾರು ಕುರುಬರು ಇಂದು ಬೆಂಗಳೂರಿನ ಮೌರ್ಯ ಸರ್ಕಲ್​ನಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಸಿದ್ದರಾಮಯ್ಯ ಅವರನ್ನ ಪ್ರಶ್ನಾತೀತ ಕುರುಬ ನಾಯಕ ಎಂದು ಹೇಳಿ ಈಶ್ವರಪ್ಪ ಅವರನ್ನ ನಾಯಕತ್ವಕ್ಕೆ ಟಕ್ಕರ್ ಕೊಡಲಾಯಿತು.

  • Share this:

ಬೆಂಗಳೂರು(ಫೆ. 19): ರಾಜ್ಯದಲ್ಲಿ ಮೀಸಲಾತಿ ಮತ್ತು ಜಾತಿ ಹೋರಾಟಗಳ ಕಿಡಿ ತೀವ್ರ ಸ್ವರೂಪದ ಜ್ವಾಲೆಗೆ ನಾಂದಿ ಹಾಡಿದಂತಿದೆ. ಕುರುಬ ಸಮುದಾಯವನ್ನ ಪರಿಶಿಷ್ಟ ಪಂಗಡಕ್ಕೆ (ಎಸ್​ಟಿ) ಸೇರಿಸಬೇಕೆಂಬ ಒತ್ತಾಯ ಸೇರಿದಂತೆ ವಿವಿಧ ಬೇಡಿಕೆಗಳನ್ನ ಮುಂದಿಟ್ಟು ಕುರುಬರು ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ ಪ್ರದೇಶ ಕುರುಬರ ಸಂಘದ ನೇತೃತ್ವದಲ್ಲಿ ಮೌರ್ಯ ಸರ್ಕಲ್​ನಲ್ಲಿ ಈ ಪ್ರತಿಭಟನೆ ನಡೆದಿದೆ. ಕುರುಬರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮೂರ್ತಿ, ಮಾಜಿ ಮೇಯರ್​ಗಳಾದ ರಾಮಚಂದ್ರಪ್ಪ, ಹುಚ್ಚಪ್ಪ, ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಹೀಗೆ ನೂರಾರು ಜನರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.


ಸರ್ಕಾರ ಕುರುಬ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದ ಕುರುಬ ಮುಖಂಡರು, ಯಡಿಯೂರಪ್ಪನವರೇ ಕುರುಬರನ್ನ ಹಗುರವಾಗಿ ತೆಗೆದುಕೊಳ್ಳಬೇಡಿ. ಹಲವು ಕ್ಷೇತ್ರಗಳಲ್ಲಿ ಕುರುಬರೇ ನಿರ್ಣಾಯಕ ಮತದಾರರು ಎಂದು ಎಚ್ಚರಿಕೆ ನೀಡಿದರು. ಯಡಿಯೂರಪ್ಪನವರೆ ನೀವು ಮುಖ್ಯಮಂತ್ರಿ ಆದ ಮೇಲೆ ಕುರುಬರನ್ನ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ನಾವು ಅಲೆಮಾರಿ ಜನಾಂಗದವರು. ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದವರು. ರಾಜ್ಯದಲ್ಲಿರುವ 60 ಲಕ್ಷ ಕುರುಬರ ಪರವಾಗಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಒಂದು ವೇಳೆ ನಮ್ಮ ಬೇಡಿಕೆಗಳನ್ನ ಈಡೇರಿಸದಿದ್ದರೆ ಮುಂದೆ ನಮ್ಮ ಕೋಪವನ್ನ ಎದುರಿಸಬೇಕಾಗುತ್ತದೆ ಎಂದು ಕುರುಬ ಮುಖಂಡರು ಈ ವೇಳೆ ಕೆಂಡಕಾರಿದರು.


ಇದನ್ನೂ ಓದಿ: Tumkur: ಶಿರಾ ಬಳಿ ಭೀಕರ ಅಪಘಾತ; ಮದುವೆ ದಿಬ್ಬಣದ ಬಸ್ ಉರುಳಿ ಮೂವರು ಸಾವು


ಕುರುಬರ ಐದು ಪ್ರಮುಖ ಬೇಡಿಕೆಗಳಿವು:  


1) ಕುರುಬ ಸಮುದಾಯವನ್ನ ಎಸ್​ಟಿ ಮೀಸಲಾತಿಗೆ ಸೇರ್ಪಡೆ ಮಾಡಲು ಕುಲಶಾಸ್ತ್ರೀಯ ಅಧ್ಯಯನದ ವರದಿಯನ್ನ ಕೂಡಲೇ ತರಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು.
2) ಜಾತಿಜನಗಣತಿ ವರದಿಯನ್ನ ಕೂಡಲೇ ಬಿಡುಗಡೆ ಮಾಡಬೇಕು.
3) ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರಿದ ಸಮುದಾಯದವರನ್ನ 2ಎ ಮೀಸಲಾತಿಗೆ ಸೇರ್ಪಡೆ ಮಾಡಬಾರದು.
4) ಕುರುಬ ಅಭಿವೃದ್ಧಿ ಪ್ರಾಧಿಕಾರ ರಚಿಸಿ 500 ಕೋಟಿ ರೂ ಮೀಸಲಿಡಬೇಕು.
5) ಜಾತಿ ಸಿಂಧುತ್ವ ಪ್ರಮಾಣಪತ್ರ


ಭಿನ್ನಾಭಿಪ್ರಾಯ: ಕುರುಬರ ಸಂಘದ ಪ್ರತಿಭಟನೆ ವೇಳೆ ಕುರುಬರ ಒಂದು ಬೇಡಿಕೆ ಬಗ್ಗೆ ಭಿನ್ನಾಭಿಪ್ರಾಯಗಳು ಕೇಳಿಬಂದವು. ಲಿಂಗಾಯತರಿಗೆ 2ಎ ಮೀಸಲಾತಿ ನೀಡಬಾರದು ಎಂದು ಕೆಲ ಪದಾಧಿಕಾರಿಗಳು ಆಗ್ರಹಿಸಿದರು. ಆದರೆ, ಬೆಂಗಳೂರಿನ ಮಾಜಿ ಮೇಯರ್ ರಾಮಚಂದ್ರಪ್ಪ ಇದಕ್ಕೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದರು. ತಮ್ಮ ಹೋರಾಟ ಇರುವುದು ಕುರುಬರಿಗೆ  ಎಸ್​ಟಿ ಮೀಸಲಾತಿ ಸಿಗಲಿ ಎಂದು ಮಾತ್ರ. ಲಿಂಗಾಯತ ಸಮುದಾಯ 2ಎ ಮೀಸಲಾತಿಗಾಗಿ ಮಾಡುತ್ತಿರುವ ಹೋರಾಟಕ್ಕೆ ತಮ್ಮ ವಿರೋಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.


ಸಿದ್ದು ಮಹಾರಾಜ್ ಕೀ ಜೈ: ಸಿದ್ದರಾಮಯ್ಯ ಅವರ ಬೆಂಬಲಿಗರಿಂದಲೇ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಈಶ್ವರಪ್ಪ ವಿರುದ್ಧ ಟೀಕಾ ಪ್ರಹಾರದ ಜೊತೆ ಸಿದ್ದರಾಮಯ್ಯ ಅವರ ಹೊಗಳಿಕೆಯ ಮಹಾಪೂರವೇ ಆಯಿತು. ಭಾಷಣ ಮಾಡಿದ ಪ್ರತಿಯೊಬ್ಬರೂ ಕೂಡ ಸಿದ್ದರಾಮಯ್ಯ ಅವರನ್ನ ಹಾಡಿಹೊಗಳಿದರು. ಕಲಬುರ್ಗಿಯ ಗೊಂಡ ಸಮಾಜದ ಜಿಲ್ಲಾಧ್ಯಕ್ಷ ಮಹಾಂತೇಶ್ ಅವರು ಸಿದ್ದು ಮಹಾರಾಜ್ ಕೀ ಜೈ ಎಂದು ಹೇಳಿದರು. ಹಲವು ವರ್ಷಗಳಿಂದ ಸಿದ್ದರಾಮಯ್ಯ ನಮ್ಮ ಗೊಂಡ ಸಮುದಾಯವನ್ನ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಯಡಿಯೂರಪ್ಪ ನಮ್ಮ ಸಮುದಾಯದವರ ಸಹಕಾರ ಪಡೆದುಕೊಂಡರೂ ನಮ್ಮ ಬೇಡಿಕೆ ಈಡೇರಿಸಿಲ್ಲ ಎಂದು ಮಹಾಂತೇಶ್ ತಿಳಿಸಿದರು.


ಇದನ್ನೂ ಓದಿ: Karnataka Budget 2021; ಮಾರ್ಚ್​ 8ರಂದು ರಾಜ್ಯ ಬಜೆಟ್​ ಮಂಡನೆ


ಇನ್ನು, ಕುರುಬ ಮುಖಂಡ ಹಾಗೂ ಮಾಜಿ ಮೇಯರ್ ಹುಚ್ಚಪ್ಪ ಅವರು ಕುರುಬರ ಪ್ರಶ್ನಾತೀತ ನಾಯಕ ಸಿದ್ದರಾಮಯ್ಯ ಎಂದು ಹೇಳಿ ಅದೇ ಉಸಿರಿನಲ್ಲಿ ಈಶ್ವರಪ್ಪ ಅವರನ್ನೂ ತರಾಟೆಗೆ ತೆಗೆದುಕೊಂಡರು. ಕುರುಬರ ಸಮಾವೇಶ ಮಾಡಿದ ಈಶ್ವರಪ್ಪ ಎಲ್ಲಿ ಹೋದರು? ಬರೀ ಮಾಧ್ಯಮಗಳ ಮುಂದೆ ಹೇಳಿಕೆಗೆ ಸೀಮಿತರಾದರಾ? ಎಂದು ಈಶ್ವರಪ್ಪ ಅವರನ್ನ ಪ್ರಶ್ನೆ ಮಾಡಿದ ಹುಚ್ಚಪ್ಪ, ಭಾಷಣ ಸಾಕು, ದೆಹಲಿಗೆ ಹೋಗಿ ಒತ್ತಾಯ ಮಾಡಿ ಎಂದು ಆಗ್ರಹಿಸಿದರು.


ಕುರುಬ ಸಮುದಾಯದ ಪರ ಯಾವಾಗಲೂ ಇರುವುದು ಸಿದ್ದರಾಮಯ್ಯ ಮಾತ್ರ. ಅವರ ಜ್ಞಾನಕ್ಕೆ ಬೇರೆ ಸಮುದಾಯದವರೂ ಹಾಡಿ ಹೊಗಳುತ್ತಾರೆ. ಸಿದ್ದರಾಮಯ್ಯ ನಾಯಕ ಎಂದು ಎಲ್ಲಾ ಅಹಿಂದ ಸಮುದಾಯಗಳೂ ಒಪ್ಪಿಕೊಂಡಿವೆ. ಆ ಎಲ್ಲಾ ಸಮುದಾಯಗಳನ್ನ ನಾವು ಜೊತೆಗೆ ಸೇರಿಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.


ವರದಿ: ಸಂಜಯ್ ಎಂ ಹುಣಸನಹಳ್ಳಿ

top videos
    First published: