ತುಮಕೂರು (ಜನವರಿ 28); ಸಂಪುಟ ವಿಸ್ತರಣೆ ವೇಳೆ ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಸೇರಿದ ಮುರುಗೇಶ್ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸುವ ಮೂಲಕ ಪಂಚಮಸಾಲಿ ಮಠದ ವಚನಾನಂದ ಶ್ರೀ ಇತ್ತೀಚೆಗೆ ಪೇಚಿಗೆ ಸಿಲುಕಿದ್ದರು. ಇದರ ಬೆನ್ನಿಗೆ ಇಂದು ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಕುರುಬ ಸಮಾಜದ ನಾಯಕರು ತಮ್ಮ ಸಮುದಾಯಕ್ಕೂ ಸಚಿವ ಸ್ಥಾನ ನೀಡುವಂತೆ ಆಗ್ರಹಿಸುವ ಮೂಲಕ ಲಾಬಿ ಶುರು ಮಾಡಿದ್ದಾರೆ.
ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಜಿಲ್ಲಾ ಕುರುಬರ ಸಂಘ, "ಇಂದು ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದ ಗದ್ದುಗೆಗೆ ಏರಲು ಕುರುಬ ಸಮಾಜದ ಪಾತ್ರ ಮಹತ್ವವಾದದ್ದು. ಹೀಗಾಗಿ ಕುರುಬ ಸಮಾಜಕ್ಕೆ ಸೇರಿದ ಎಂಟಿಬಿ ನಾಗರಾಜು, ಹೆಚ್. ವಿಶ್ವನಾಥ್, ಆರ್.ಶಂಕರ್ ಹಾಗೂ ಬೈರತಿ ಬಸವರಾಜು ಗೆ ಸಚಿವ ಸ್ಥಾನ ನೀಡುವ ಮೂಲಕ ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು" ಎಂದು ಒತ್ತಾಯಿಸಿದೆ.
"ಬಿಜೆಪಿ ಪಕ್ಷಕ್ಕೆ ವಲಸೆ ಬಂದು ಸೋಲನುಭವಿಸಿರುವ ಕುರುಬ ಶಾಸಕರಿಗೂ ಸಹ ಸಚಿವ ಸ್ಥಾನವನ್ನು ಖಡ್ಡಾಯವಾಗಿ ನೀಡಬೇಕು. ಜಿಲ್ಲಾ ಕುರುಬ ಮುಖಂಡರಿಗೆ ನಿಗಮ ಮಂಡಳಿ ಸ್ಥಾನಮಾನ ನೀಡಬೇಕು. ಅಕಸ್ಮಾತ್ ಕುರುಬ ಸಮಾಜಕ್ಕೆ ಬಿಜೆಪಿ ಸರ್ಕಾರ ದ್ರೋಹವೆಸಗಿದರೆ ಇಡೀ ಸಮಾಜದ ಜನ ಬೀದಿಗೆ ಇಳಿದು ಹೋರಾಟ ರೂಪಿಸಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಸಂಪುಟ ವಿಸ್ತರಣೆ ಕಸರತ್ತು ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಒಂದೆಡೆ ವಲಸಿಗರು ಮತ್ತೊಂದೆಡೆ ಮೂಲ ಬಿಜೆಪಿ ನಾಯಕರು ಇಬ್ಬರನ್ನೂ ಸಂತೃಪ್ತಿಪಡಿಸುವ ಹೊಣೆ ಅವರ ಮೇಲಿದೆ. ಈ ನಡುವೆ ರಾಜ್ಯದ ಪ್ರಬಲ ಸಮುದಾಯದ ಮುಖಂಡರು ಸಚಿವ ಸ್ಥಾನಕ್ಕಾಗಿ ಲಾಬಿ ಶುರು ಮಾಡಿರುವುದು ಬಿಎಸ್ವೈ ಅವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಸಂಪುಟ ವಿಸ್ತರಣೆ ಪದೇ ಪದೇ ವಿಳಂಬ: ಆರ್. ಶಂಕರ್, ಎಸ್.ಟಿ. ಸೋಮಶೇಖರ್ ಏನಂತಾರೆ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ