ಕುರುಬರಿಗೆ ಎಸ್​ಟಿ ಸ್ಥಾನಮಾನಕ್ಕಾಗಿ ಹೋರಾಟ; ಕಾಗಿನೆಲೆ ಶ್ರೀ, ಈಶ್ವರಪ್ಪ ನೇತೃತ್ವ; 11ಕ್ಕೆ ಪೂರ್ವಭಾವಿ ಸಭೆ

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ಪಕ್ಷಾತೀತ ವೇದಿಕೆಯೊಂದು ಸಜ್ಜಾಗಿದೆ. ಕಾಗಿನೆಲೆ ಗುರುಪೀಠದ ಸ್ವಾಮಿಗಳು ಹಾಗೂ ವಿವಿಧ ಪಕ್ಷಗಳಲ್ಲಿರುವ ಸಮುದಾಯದ ಮುಖಂಡರು ಈ ಹೋರಾಟಕ್ಕೆ ಕೈಜೋಡಿಸಿದ್ದಾರೆ.

ಕೆಎಸ್ ಈಶ್ವರಪ್ಪ

ಕೆಎಸ್ ಈಶ್ವರಪ್ಪ

  • Share this:
ಬೆಂಗಳೂರು(ಅ. 06): ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಹೋರಾಟ ರೂಪುಗೊಳ್ಳುತ್ತಿದೆ. ಇದರಲ್ಲಿ ಪಕ್ಷಾತೀತವಾಗಿ ಮುಖಂಡರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದೇ ಅಕ್ಟೋಬರ್ 11ರಂದು ಪೂರ್ವಭಾವಿ ಸಭೆ ನಡೆಯಲಿದೆ. ಇಂದು ಕುರುಬರ ಎಸ್​ಟಿ ಮೀಸಲಾತಿ ಹೋರಾಟ ಸಮಿತಿಯ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಲಾಯಿತು. ಕಾಗಿನೆಲೆ ಪೀಠಾಧ್ಯಕ್ಷ ನಿರಂಜನಾನಂದ ಪುರಿ ಸ್ವಾಮೀಜಿ, ಸಚಿವ ಕೆ.ಎಸ್. ಈಶ್ವರಪ್ಪ, ಕಾಂಗ್ರೆಸ್ ಮುಖಂಡ ಹೆಚ್.ಎಂ. ರೇವಣ್ಣ ಮೊದಲಾದ ಸಮುದಾಯದ ಮುಖಂಡರು, ಸ್ವಾಮಿಗಳು ಈ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಈ ತಿಂಗಳ 11ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ. ಕುರುಬರಿಗೆ ಪರಿಶಿಷ್ಠ ಪಂಗಡದ ಸ್ಥಾನ ಮಾನ ನೀಡುವ ಹೋರಾಟದ ಬಗ್ಗೆ ರೂಪುರೇಷೆ ರಚಿಸಲಾಗುವುದು ಎಂದು ಕಾಗಿನೆಲೆ ಪೀಠದ ಗುರುಗಳು ತಿಳಿಸಿದರು. ಸಚಿವ ಕೆ.ಎಸ್. ಈಶ್ವರಪ್ಪ ಅವರು ಈ ಹೋರಾಟದ ನೇತೃತ್ವ ವಹಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್.ಎಂ. ರೇವಣ್ಣ ತಿಳಿಸಿದರು.

ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳಿವೆ. ಸಮುದಾಯದ ಹಕ್ಕನ್ನು ಪಡೆಯಲು ವೇದಿಕೆ ಮಾಡಿಕೊಂಡಿದ್ದೇವೆ. ಪಕ್ಷಾತೀತವಾಗಿ ಇಲ್ಲಿಯವರೆಗೆ ನಾವು ಸಂಘಟಿತರಾಗಿರಲಿಲ್ಲ. ನಮ್ಮ ಬೇಡಿಕೆಯನ್ನು ಸರ್ಕಾರ ಪರಿಗಣಿಸಬೇಕು. ಇದರಿಂದ ಬೇರೆ ಯಾವುದೇ ಸಮುದಾಯಕ್ಕೆ ತೊಂದರೆ ಆಗುವುದಿಲ್ಲ. ನಮ್ಮ ಹೋರಾಟಕ್ಕೆ ಜಯ ಸಿಕ್ಕೇ ಸಗಲಿದೆ ಎಂದು ಹೆಚ್.ಎಂ. ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಶಿರಾ ಉಪಚುನಾವಣೆ: ಎರಡು ಪಕ್ಷಗಳಿಗೆ ಅನುಕಂಪದ ಬಲ; ಬಿಜೆಪಿಗೆ ವರ್ಚಸ್ಸಿನ ಮೇಲೆ ವಿಶ್ವಾಸ

ಕುರುಬ ಸಮುದಾಯದ ಅತ್ಯುಚ್ಛತಮ ರಾಜಕೀಯ ನಾಯಕರೆನಿಸಿದ ಸಿದ್ದರಾಮಯ್ಯನವರೂ ಈ ಹೋರಾಟಕ್ಕೆ ಬೆಂಬಲ ನೀಡುವ ಸುಳಿವನ್ನು ರೇವಣ್ಣ ಈ ಸಂದರ್ಭದಲ್ಲಿ ನೀಡಿದರು. ನಮ್ಮ ಈ ಹೋರಾಟದ ಬಗ್ಗೆ ಸಿದ್ದರಾಮಯ್ಯ ಅವರ ಗಮನಕ್ಕೂ ತರುತ್ತೇವೆ. ಅವರನ್ನು ಮುಂದಿನ ಸಭೆಗೆ ಕರೆಯುತ್ತೇವೆ. ಪೂರ್ವಭಾವಿ ಸಭೆಗೆ ಅವರು ಖಂಡಿತ ಬರುತ್ತಾರೆ. ಪಕ್ಷಗಳ ನಿಲುವಿಗೂ ನಮ್ಮ ಹೋರಾಟಕ್ಕೂ ಸಂಬಂಧ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಹೇಳಿದರು.

ಅಹಿಂದ ಹೋರಾಟದಿಂದಲೇ ಸಿದ್ದರಾಮಯ್ಯ ರಾಜಕೀಯ ಸ್ಥಿತ್ಯಂತರ ಆದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಹೆಚ್.ಎಂ. ರೇವಣ್ಣ, ಎಲ್ಲಾ ಸಂದರ್ಭದಲ್ಲೂ ರಾಜಕೀಯ ಸ್ಥಿತ್ಯಂತರ ಆಗುತ್ತದೆ. ನಮ್ಮದು ನಮ್ಮ ಸಮುದಾಯದ ಪರ ಹೋರಾಟ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಡ್ರಗ್​ ಪೆಡ್ಲರ್​​ ಜೊತೆ 78 ಸಲ ಫೋನ್​ ಕಾಲ್, 50 ಲಕ್ಷ ಹಣ ವರ್ಗಾವಣೆ; ಕೇರಳದ ಮಾಜಿ ಸಚಿವರ ಮಗನಿಗೆ ಇಡಿ ಡ್ರಿಲ್

ಇದಕ್ಕೂ ಮುನ್ನ ಮಾತನಾಡಿದ ಸಚಿವ ಹಾಗೂ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ, ಪಕ್ಷಭೇದ ಮರೆತು ಕುರುಬರೆಲ್ಲರೂ ಒಂದಾಗಿದ್ದೇವೆ ಎಂದು ತಿಳಿಸಿದರು. ಕುರುಬರಷ್ಟೇ ಅಲ್ಲ ಬೇರೆ ಸಮುದಾಯಗಳನ್ನೂ ಎಸ್​ಟಿಗೆ ಸೇರ್ಪಡೆ ಮಾಡುವ ಒತ್ತಾಯ ಇದೆ. ಆದರೆ, ಕುರುಬ ಸಮುದಾಯಕ್ಕೆ ಎಸ್​ಟಿ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಲಾಗಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ಸಿಗುವ ನಿರೀಕ್ಷೆ ಇದೆ. ಅದಕ್ಕಾಗಿ ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ 11ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ. ಪಕ್ಷಾತೀತವಾಗಿ ಸಮುದಾಯದ ಎಲ್ಲರಿಗೂ ಆಹ್ವಾನ ನೀಡಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿಗಳೂ ಆದ ಕೆ.ಎಸ್. ಈಶ್ವರಪ್ಪ ಮಾಹಿತಿ ನೀಡಿದರು.

ರಾಜ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಇರುವ ಸಮುದಾಯಗಳಲ್ಲಿ ಕುರುಬರದ್ದೂ ಒಂದು. ರಾಜಕೀಯವಾಗಿ ಅನೇಕ ಮುಖಂಡರು ಪ್ರವರ್ಧಮಾನಕ್ಕೆ ಬಂದಿದ್ದಾರಾದರೂ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಕುರುಬ ಸಮುದಾಯ ಇನ್ನೂ ಹಿಂದುಳಿದಿದೆ ಎಂಬ ಮಾತುಗಳಿವೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆ.ಎಸ್. ಈಶ್ವರಪ್ಪ, ಹೆಚ್.ಎಂ. ರೇವಣ್ಣ, ಹೆಚ್. ವಿಶ್ವನಾಥ್, ಎಂ.ಟಿಬಿ. ನಾಗರಾಜ್ ಮೊದಲಾದ ಅನೇಕ ರಾಜಕೀಯ ಮುಖಂಡರು ಕುರುಬ ಸಮುದಾಯಕ್ಕೆ ಸೇರಿದವರಾಗಿದ್ಧಾರೆ.

ವರದಿ: ಚಿದಾನಂದ ಪಟೇಲ್
Published by:Vijayasarthy SN
First published: