HOME » NEWS » State » KUMARASWAMY LETTER TO YEDDYURAPPA AND THE GOVERNOR TO CALL A SPECIAL SESSION IN THE STATE MAK

ರಾಜ್ಯದಲ್ಲಿ ವಿಶೇಷ ಅಧಿವೇಶನ ಕರೆಯುವಂತೆ ಯಡಿಯೂರಪ್ಪ ಹಾಗೂ ರಾಜ್ಯಪಾಲರಿಗೆ ಕುಮಾರಸ್ವಾಮಿ ಪತ್ರ

ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿ ಹದಗೆಟ್ಟಿದೆ, ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಆಡಳಿತದಲ್ಲಿ ಅನ್ಯರ ಹಸ್ತಕ್ಷೇಪ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚಿಸಬೇಕು, ಹೀಗಾಗಿ ವಿಧಾನಮಂಡಲ ಕರೆಯಬೇಕಿದೆ ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

news18-kannada
Updated:June 25, 2021, 9:47 AM IST
ರಾಜ್ಯದಲ್ಲಿ ವಿಶೇಷ ಅಧಿವೇಶನ ಕರೆಯುವಂತೆ ಯಡಿಯೂರಪ್ಪ ಹಾಗೂ ರಾಜ್ಯಪಾಲರಿಗೆ ಕುಮಾರಸ್ವಾಮಿ ಪತ್ರ
ಹೆಚ್.ಡಿ. ಕುಮಾರಸ್ವಾಮಿ.
  • Share this:
ಬೆಂಗಳೂರು (ಜೂನ್ 25); ರಾಜ್ಯದಲ್ಲಿ ಹಲವು ಸಮಸ್ಯೆಗಳಿದ್ದು, ಈ ಬಗ್ಗೆ ಚರ್ಚೆ ನಡೆಸಲು ರಾಜ್ಯ ಸರ್ಕಾರ ಕೂಡಲೇ ವಿಧಾನ ಮಂಡಲ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಲೇ ಇದೆ. ದಿನೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ಕಂಗಾಲಾಗಿದ್ದಾರೆ. ಲಾಕ್​ಡೌನ್​ ನಿಂದಾಗಿ ಬಡವರ ಬದುಕು ಬೀದಿಗೆ ಬಿದ್ದಿದೆ. ಮೇಕೆದಾಟು ಯೋಜನೆಯ ಬಗ್ಗೆ ತಮಿಳುನಾಡು ತಕರಾರು ತೆಗೆಯುತ್ತಿದೆ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಅಗತ್ಯವಾಗಿದ್ದು, ರಾಜ್ಯ ಸರ್ಕಾರ ಕೂಡಲೇ ವಿಧಾನಮಂಡಲ ಅಧಿವೇಶನ ಕರೆಯಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.‘

ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಕುಮಾರಸ್ವಾಮಿ, "ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿ ಹದಗೆಟ್ಟಿದೆ, ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಆಡಳಿತದಲ್ಲಿ ಅನ್ಯರ ಹಸ್ತಕ್ಷೇಪ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚಿಸಬೇಕಿದೆ. ಜೊತೆಗೆ ರಾಜ್ಯದ ಕನ್ನಡಿಗರಿಗೆ ಹಲವರು ವಿಚಾರಗಳಲ್ಲಿ ಅನ್ಯಾಯ ಆಗುತ್ತಿದೆ. ಈ ಎಲ್ಲಾ ವಿಚಾರ ಕುರಿತು ಚರ್ಚೆ ನಡೆಸಬೇಕಾಗಿದೆ. ಹೀಗಾಗಿ ವಿಶೇಷ ಅಧಿವೇಶನ ಕರೆಯುವಂತೆ ಪತ್ರದ ಮೂಲಕ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಮೊದಲು ಚುನಾವಣೆ ನಂತರ ರಾಜತ್ವ ಸ್ಥಾನಮಾನ; ಮೋದಿ ತೀರ್ಮಾನಕ್ಕೆ ಸರ್ವಪಕ್ಷ ಸಭೆ ಒಪ್ಪಿಗೆ

ಮೇಕೆದಾಟು ವಿಚಾರದ ಬಗ್ಗೆಯೂ ಈ ಹಿಂದೆ ಸರಣಿ ಟ್ವೀಟ್ ಮಾಡಿದ್ದ ಕುಮಾರಸ್ವಾಮಿ, "ಮೇಕೆದಾಟು ಡ್ಯಾಂಗೆ ಅನುಮತಿ ನೀಡಬಾರದೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿರುವ ತಮಿಳುನಾಡು ಮಾಜಿ ಸಿಎಂ ಪಳನಿಸ್ವಾಮಿ, ಯೋಜನೆ ತಡೆಯಲು ಪ್ರಧಾನಿ ಮೇಲೆ ಒತ್ತಡ ಹೇರುತ್ತಾ ಬಂದಿದ್ದಾಗಿ ಹೇಳಿದ್ದಾರೆ. ಕೇಂದ್ರವು ತಮಿಳುನಾಡಿನ ಒತ್ತಡಕ್ಕೆ ಮಣಿದು ಅನುಮತಿ ಮುಂದೂಡತ್ತಾ ಬಂದಿದ್ದೇ ಆದರೆ ಅದು ಕನ್ನಡಿಗರಿಗೆ ಬಗೆದ ದ್ರೋಹ.·

ಮೇಕೆದಾಟು ಯೋಜನೆ ಜಾರಿಗೆ ತಂದು ನನ್ನ ಸರ್ಕಾರ ಧೈರ್ಯ ಪ್ರದರ್ಶಿಸಿತ್ತು. ಪರಿಸರ ಅನುಮತಿ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈ ವರೆಗೆ ಅನುಮತಿ ಸಿಕ್ಕಿಲ್ಲ. ಇತ್ತ, ಯೋಜನೆ ವಿರುದ್ಧ ಅರ್ಜಿಗಳು ಸಲ್ಲಿಕೆಯಾಗುತ್ತಾ ಬಂದವು. ಇದೆಲ್ಲ ಗಮನಿಸಿದರೆ ಯೋಜನೆ ತಡೆಯಲು ತಮಿಳುನಾಡು–ಕೇಂದ್ರ ಷಡ್ಯಂತ್ರ ಹೆಣೆದ ಅನುಮಾನ ಮೂಡುತ್ತಿದೆ.

ಇದನ್ನೂ ಓದಿ: ಮಾಜಿ ಕಾರ್ಪೊರೇಟರ್​ ರೇಖಾ ಕದಿರೇಶ್ ಕೊಲೆ ಪ್ರಕರಣ; ಆರೋಪಿಗಳ ಸುಳಿವು ಹಿಡಿದ ಪೊಲೀಸರು

ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಒತ್ತಡ ಹೇರಿತ್ತೇ? ಅದರ ಮಾತು ಕೇಳಿ ಅನುಮತಿ ವಿಳಂಬ ಮಾಡಲಾಯಿತೇ? ಈ ಬಗ್ಗೆ ಪ್ರಧಾನಿ ಸ್ಪಷ್ಟನೆ ನೀಡಬೇಕು. ಇಲ್ಲವೇ ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ ‘ಭಾಷಾ ದುರಭಿಮಾನಿ ಬಿಜೆಪಿ ಸಂಸದರು’ ಪ್ರಶ್ನೆ ಮಾಡಿ ಉತ್ತರ ಪಡೆದುಕೊಂಡು ಬರಬೇಕು. ಇಲ್ಲವೇ ಬಾಕಿ ಇರುವ ಪರಿಸರ ಅನುಮತಿಯನ್ನು ಶೀಘ್ರ ನೀಡಬೇಕು" ಎಂದು ಒತ್ತಾಯಿಸಿದ್ದರು. ಇದೀಗ ಇದೇ ವಿಚಾರವಾಗಿ ಚರ್ಚೆ ನಡೆಸಲು ವಿಧಾನ ಮಂಡಲ ಅಧಿವೇಶನ ಕರೆಯಬೇಕು ಎಂದು ಮಾಜಿ ಸಿಎಂ ಹೆಚ್.ಡಿ.  ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: MAshok Kumar
First published: June 25, 2021, 9:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories