ಮಗನನ್ನು ಗೆಲ್ಲಿಸಲು ಇಡೀ ಜೋಡೆತ್ತು ಟೀಮ್ ಸದಸ್ಯರ ಫೋನ್ ಟ್ಯಾಪ್ ಮಾಡಿಸಿದ್ರಾ ಕುಮಾರಸ್ವಾಮಿ?

ಸಿಎಂ ಕುರ್ಚಿ ಉಳಿಸಿಕೊಳ್ಳಲು ಮತ್ತು ಚುನಾವಣೆಯಲ್ಲಿ ಮಗನನ್ನು ಗೆಲ್ಲಿಸಲು ಕುಮಾರಸ್ವಾಮಿ ಅವರು ಪೊಲೀಸ್ ಅಧಿಕಾರಿಗಳ ಮೂಲಕ ವಿರೋಧಿಗಳ ಫೋನ್ ಟ್ಯಾಪಿಂಗ್ ಮಾಡಿಸಿರುವ ಶಂಕೆ ಇದೆ.

news18-kannada
Updated:August 15, 2019, 8:21 PM IST
ಮಗನನ್ನು ಗೆಲ್ಲಿಸಲು ಇಡೀ ಜೋಡೆತ್ತು ಟೀಮ್ ಸದಸ್ಯರ ಫೋನ್ ಟ್ಯಾಪ್ ಮಾಡಿಸಿದ್ರಾ ಕುಮಾರಸ್ವಾಮಿ?
ಎಚ್​.ಡಿ. ಕುಮಾರಸ್ವಾಮಿ.
  • Share this:
ಬೆಂಗಳೂರು(ಆ. 15): ದೂರವಾಣಿ ಕದ್ದಾಲಿಕೆ ಪ್ರಕರಣದ ಸದ್ದು ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುತ್ತಿದೆ. ಕುಮಾರಸ್ವಾಮಿ ಅವರ ಮೈಸುತ್ತಿ ಉಸಿರುಗಟ್ಟಿಸುವ ಹಂತಕ್ಕೆ ಹೋಗುವಂತಿದೆ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಒಂದಲ್ಲ ಎರಡಲ್ಲ, ಹತ್ತಲ್ಲ ಇಪ್ಪತ್ತಲ್ಲ, ನೂರಾರು ಮಂದಿಯ ಫೋನ್ ಟ್ಯಾಪಿಂಗ್ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ. ಈ ಪ್ರಕರಣವನ್ನು ಮೊದಲು ಹೊರಗೆಡವಿದ್ದ ನ್ಯೂಸ್18 ಕನ್ನಡ ವಾಹಿನಿ ಮಂಡ್ಯ ಚುನಾವಣೆ ವೇಳೆಯೂ ಫೋನ್ ಟ್ಯಾಪಿಂಗ್ ನಡೆದಿರುವುದನ್ನು ಪತ್ತೆಹಚ್ಚಿದೆ. ನಿಖಿಲ್ ಕುಮಾರಸ್ವಾಮಿ ವಿರುದ್ಧವಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಷ್ ಹಾಗೂ ಅವರಿಗೆ ಬೆಂಬಲವಾಗಿ ನಿಂತ ಪ್ರಮುಖರೆಲ್ಲರ ಫೋನ್ ಟ್ಯಾಪಿಂಗ್ ನಡೆದಿರುವುದು ತಿಳಿದುಬಂದಿದೆ. ನ್ಯೂಸ್18 ಕನ್ನಡಕ್ಕೆ ಉನ್ನತ ಮೂಲಗಳು ಈ ವಿಚಾರವನ್ನು ದೃಢಪಡಿಸಿವೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಸುಮಲತಾ ಅಂಬರೀಷ್ ಮತ್ತು ತಂಡದ ಕಾರ್ಯತಂತ್ರಗಳನ್ನು ತಿಳಿದುಕೊಳ್ಳಲು ಆಗಿನ ಸಿಎಂ ಕುಮಾರಸ್ವಾಮಿ ಅವರು ಅನೇಕ ಕಳ್ಳಗಿವಿಗಳನ್ನ ಇಟ್ಟಿದ್ದರು. ಅಂದರೆ, ಸುಮಲತಾ ಬೆನ್ನಿಗೆ ನಿಂತ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಅವರ ಜನಪ್ರಿಯತೆ ಕುಮಾರಸ್ವಾಮಿ ಅವರಿಗೆ ತಲೆನೋವಾಗಿತ್ತು. ಈ ಜೋಡೆತ್ತುಗಳು ಪ್ರಚಾರಕ್ಕೆ ಹೋದಲೆಲ್ಲಾ ನೂರಾರು, ಸಾವಿರಾರು ಜನರು ಜಮಾಯಿಸುತ್ತಿದ್ದುದನ್ನು ಕಂಡು ಸಿಎಂ ಕಂಗಾಲಾಗಿದ್ದರು. ಈ ಹಿನ್ನೆಲೆಯಲ್ಲಿ ಆ ತಂಡದ ಇಡೀ ಕಾರ್ಯತಂತ್ರವನ್ನು ಪತ್ತೆಹಚ್ಚಿ ಪ್ರತಿತಂತ್ರ ರೂಪಿಸಲು ಅವರು ಫೋನ್ ಟ್ಯಾಪಿಂಗ್ ಮೊರೆ ಹೋಗಿದ್ದರೆನ್ನಲಾಗಿದೆ.

ಇದನ್ನೂ ಓದಿ: ಫೋನ್ ಕದ್ದಾಲಿಕೆ ಸದ್ದು; ಸರ್ಕಾರ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಲಿ; ಶಾಸಕ ಯತ್ನಾಳ್ ಆಗ್ರಹ!

ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ರಾಕ್​ಲೈನ್ ವೆಂಕಟೇಶ್ ಅವರ ಫೋನ್​ಗಳನ್ನೂ ಕದ್ದಾಲಿಸಲಾಗುತ್ತಿತ್ತು. ಯಶ್ ಅವರಿಗೆ ಆಪ್ತರಾಗಿದ್ದ ವಿಜಯ್ ಕಿರಂಗದೂರು ಅವರು ಸುಮಲತಾ ಅಂಬರೀಷ್ ಅವರ ಚುನಾವಣಾ ವೆಚ್ಚಗಳಿಗೆ ಹಣಕಾಸು ಸಹಾಯ ನೀಡಿದ್ದರೆನ್ನಲಾಗಿದೆ. ಹಾಗೆಯೇ, ರಾಕ್​ಲೈನ್ ವೆಂಕಟೇಶ್ ಅವರೂ ಕೂಡ ಚುನಾವಣಾ ಖರ್ಚುವೆಚ್ಚಗಳ ಲೆಕ್ಕಾಚಾರ ನೋಡಿಕೊಂಡಿದ್ದರು. ಹೀಗಾಗಿ, ಇವರ ಫೋನ್​ಗಳನ್ನ ಟ್ಯಾಪ್ ಮಾಡಿಸಲಾಗುತ್ತಿತ್ತು. ಇದು ರಾಕ್​ಲೈನ್ ಅವರ ಗಮನಕ್ಕೂ ಬಂದಿತ್ತೆನ್ನಲಾಗಿದೆ.

ಇನ್ನು, ಸುಮಲತಾ ಅಂಬರೀಷ್ ಅವರ ಎರಡೂ ಫೋನ್​ಗಳನ್ನ ಟ್ಯಾಪ್ ಮಾಡಲಾಗಿತ್ತಂತೆ. ಅವರ ಮಗ ಅಭಿಷೇಕ್ ಅವರ ಫೋನಿಗೂ ವಿನಾಯಿತಿ ನೀಡಿರಲಿಲ್ಲ. ಸುಮಲತಾ ಅವರಿಗೆ ಬೆಂಬಲ ನೀಡಿದ್ದ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಮಳವಳ್ಳಿ ಶಿವಣ್ಣ ಮೊದಲಾದ ಕಾಂಗ್ರೆಸ್ ರೆಬೆಲ್​ಗಳ ದೂರವಾಣಿಗಳನ್ನೂ ಕದ್ದಾಲಿಸಲಾಗುತ್ತಿತ್ತು.

ಇದನ್ನೂ ಓದಿ: ಫೋನ್ ಕದ್ದಾಲಿಕೆ ಪ್ರಕರಣ; ಕೊನೆಗೂ ಮೌನ ಮುರಿದ ಸಿದ್ದರಾಮಯ್ಯ; ತನಿಖೆಯಾಗಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಆಗ್ರಹ!

ಯಾರ್ಯಾರ ಫೋನ್ ಕದ್ದಾಲಿಕೆ?
Loading...

ಸುಮಲತಾ ಅಂಬರೀಷ್, ಅಭಿಷೇಕ್ ಅಂಬರೀಷ್, ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್​ಲೈನ್ ವೆಂಕಟೇಶ್, ವಿಜಯ್ ಕಿರಂಗದೂರು, ಚಲುವರಾಯಸ್ವಾಮಿ, ಮಳವಳ್ಳಿ ಶಿವಣ್ಣ, ನರೇಂದ್ರ ಸ್ವಾಮಿ, ಬೇಲೂರು ಸೋಮಶೇಖರ್, ಸಚ್ಚಿದಾನಂದ, ಮದನ್ ಕುಮಾರ್, ಹೇಮಾ ಮತ್ತಿತರರ ಫೋನ್​ಗಳನ್ನ ಸಿಸಿಬಿ ಇನ್ಸ್​ಪೆಕ್ಟರ್​ಗಳು ಕದ್ದಾಲಿಸುತ್ತಿದ್ದರೆಂದು ಉನ್ನತ ಮೂಲಗಳು ನ್ಯೂಸ್18 ಕನ್ನಡಕ್ಕೆ ಮಾಹಿತಿ ನೀಡಿವೆ.

ಚುನಾವಣಾ ಏಜೆಂಟ್ ಆಗಿದ್ದ ಮದನ್ ಕುಮಾರ್ ಅವರು ಅಂಬರೀಷ್ ಅವರ ಅಣ್ಣನ ಮಗನೂ ಹೌದು. ಹಾಗೆಯೇ, ಹೇಮಾ ಅವರು ಸುಮಲತಾರ ಸಂಬಂಧಿಯಾಗಿದ್ದಾರೆ.

ಇದನ್ನೂ ಓದಿ: ಯಾರ ಕಾಲದಲ್ಲಿ ಏನೆಲ್ಲ ಆಗಿದೆ ಅಂತ ನನಗೂ ಗೊತ್ತಿದೆ; ಫೋನ್​ ಕದ್ದಾಲಿಕೆ ಆರೋಪಕ್ಕೆ ದೇವೇಗೌಡ ತಿರುಗೇಟು

ಮೈತ್ರಿ ಸರ್ಕಾರದ ವಿರುದ್ಧ ಅತೃಪ್ತಿ ಹೊಗೆಯಾಡುತ್ತಿದ್ದ ಹಿನ್ನೆಲೆಯಲ್ಲಿ ಸರ್ಕಾರವನ್ನು ಉಳಿಸಿಕೊಳ್ಳಲು ಹಾಗೂ ಚುನಾವಣೆಯಲ್ಲಿ ತಮ್ಮ ಮಗ ನಿಖಿಲ್ ಅವರನ್ನ ಗೆಲ್ಲಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಫೋನ್ ಟ್ಯಾಪಿಂಗ್​ನ ಮಾಸ್ಟರ್​ಮೈಂಡ್ ಆಗಿದ್ದರಾ ಎಂಬ ಸಂಶಯವಿದೆ. ಹಲವು ತಿಂಗಳ ಹಿಂದೆಯೇ ಬಿಜೆಪಿ ನಾಯಕ ಆರ್. ಅಶೋಕ್ ಅವರು ಫೋನ್ ಟ್ಯಾಪಿಂಗ್ ವಿಚಾರವನ್ನು ಪ್ರಸ್ತಾಪಿಸಿ ಮೈತ್ರಿ ಸರ್ಕಾರವನ್ನು ಹರಿಹಾಯ್ದಿದ್ದರು. ಅವರ ಆರೋಪ ಇದೀಗ ಸತ್ಯವಾದಂತಿದೆ. ಈ ಹಗರಣದ ಬಗ್ಗೆ ಮೊದಲು ವರದಿ ಮಾಡಿದ ನ್ಯೂಸ್18 ಕನ್ನಡ ಹಲವು ಉನ್ನತ ಮೂಲಗಳಿಂದ ಮಾಹಿತಿಯನ್ನು ಖಚಿತಪಡಿಸಿಕೊಂಡಿದೆ.

ಮೈತ್ರಿ ಸರ್ಕಾರದ ವಿರುದ್ಧ ರೆಬೆಲ್ ಆಗಿದ್ದ ಶಾಸಕರ ಫೋನ್​ಗಳೂ ಟ್ಯಾಪ್ ಆಗಿದ್ದವು. ಹಾಗೆಯೇ, ರೆಬೆಲ್ ಶಾಸಕರ ಆಪ್ತರಾಗಿದ್ದ ಸಿದ್ದರಾಮಯ್ಯ ಅವರ ಫೋನಿಗೂ ಕಳ್ಳಗಿವಿ ಇಡಲಾಗಿತ್ತು ಎಂಬುದು ಬೆಚ್ಚಿಬೀಳಿಸುವ ಬೆಳವಣಿಗೆಯಾಗಿದೆ. ಕುಮಾರಸ್ವಾಮಿ ಅವರನ್ನ ಸಿಎಂ ಮಾಡಿದ ಕಾಂಗ್ರೆಸ್ ನಾಯಕರ ಫೋನುಗಳನ್ನೇ ಟ್ಯಾಪ್ ಮಾಡಿಸಿರುವುದು ಕೈ ಮುಖಂಡರಿಗೆ ಬೇಸರ ತಂದಿದೆ. ಫೋನ್ ಟ್ಯಾಪಿಂಗ್ ಹಗರಣದಲ್ಲಿ ಕುಮಾರಸ್ವಾಮಿ ಅವರಿಗೆ ಯಾವ ರೀತಿಯಲ್ಲೂ ಬೆಂಬಲಕ್ಕೆ ನಿಲ್ಲಬಾರದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೇ ತಮ್ಮ ನಾಯಕರಿಗೆ ಸೂಚನೆ ನೀಡಿದ್ದಾರೆ. ಒಟ್ಟಾರೆಯಾಗಿ ಕುಮಾರಸ್ವಾಮಿ ಅವರು ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಒಬ್ಬಂಟಿಯಾಗಿ ಸಿಲುಕಿಕೊಂಡು ವಿಲವಿಲ ಒದ್ದಾಡುತ್ತಿರುವುದು ವಿಪರ್ಯಾಸವೇ ಸರಿ.

(ವರದಿ: ಚಿದಾನಂದ ಪಟೇಲ್)

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
First published:August 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...