ಮಂಗಳೂರು (ಅ. 23): ಕರ್ನಾಟಕದ ಪ್ರಸಿದ್ಧ ನಾಗಕ್ಷೇತ್ರವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ಮೇಲೆ ದೇವಾಲಯದ ಆಭರಣಗಳನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿಬಂದಿತ್ತು. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆಡಳಿತಾಧಿಕಾರಿ ರೂಪಾ ಎಂ.ಜೆ ಹಾಗೂ ದೇಗುಲದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿದ್ದ ರವೀಂದ್ರ ಎಂ.ಎಚ್ ಅವರ ಮೇಲೆ ಸುಬ್ರಹ್ಮಣ್ಯದ ನಿವಾಸಿಯಾದ ಶ್ರೀನಾಥ್ ಟಿ.ಎಸ್. ಅವರು ಮಂಗಳೂರಿನ ಪಶ್ಚಿಮ ವಲಯ ಭ್ರಷ್ಟಾಚಾರ ನಿಗ್ರಹದಳದ ಪೋಲಿಸ್ ಅಧೀಕ್ಷಕರಿಗೆ ದೂರು ದಾಖಲಿಸಿದ್ದು, ತನಿಖೆ ನಡೆಸುವಂತೆ ಕೋರಿದ್ದರು. ಈ ಕುರಿತು ದೇವಾಲಯದಿಂದ ಇಂದು ಸ್ಪಷ್ಟನೆ ನೀಡಲಾಗಿದೆ. ದೇವಸ್ಥಾನದ ಎಲ್ಲ ಆಭರಣಗಳು ಸುರಕ್ಷಿತವಾಗಿದ್ದು, ಯಾವುದೇ ಅವ್ಯವಹಾರಗಳು ನಡೆದಿಲ್ಲ ಎಂದು ಸ್ಫಷ್ಟಪಡಿಸಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಡಳಿತ ವಿಭಾಗದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧಿಕೃತ ದಾಖಲಾತಿ ಪುಸ್ತಕದಲ್ಲಿ ದಾಖಲಾಗಿರುವ ಕೋಟ್ಯಾಂತರ ರೂಪಾಯಿ ಮೌಲ್ಯದ ವಜ್ರದ ಕಂಠಿಹಾರ, ಆಭರಣ, ಲಿಂಗ ದೇವರ ಬೆಳ್ಳಿಯ ಒಡವೆಗಳಲ್ಲಿ ಅವ್ಯವಹಾರವಾಗಿದೆ ಎಂದು ದೂರಿ ಈ ದೂರು ದಾಖಲಾಗಿತ್ತು. ವರ್ಷದ ಹಿಂದೆ ಈ ಬಗ್ಗೆ ದೇವಸ್ಥಾದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಮೋನಪ್ಪ ಮಾನಾಡು ಎಂಬುವವರು ದೇವಸ್ಥಾನಕ್ಕೆ ಈ ವಸ್ತುಗಳ ಬಗ್ಗೆ ವಿವರ ನೀಡುವಂತೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ ನಾಪತ್ತೆ; ಆಡಳಿತ ಮಂಡಳಿ ವಿರುದ್ಧ ದೂರು
ಈ ಅರ್ಜಿಗೆ ದೇವಸ್ಥಾನದಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲದ ಹಿನ್ನೆಲೆಯಲ್ಲಿ ಶ್ರೀನಾಥ್ ಟಿ.ಎಸ್ ಈ ಒಡವೆಗಳಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕುಕ್ಮೆ ಸುಬ್ರಹ್ಮಣ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್, ದೇವಸ್ಥಾನದ ಎಲ್ಲ ಆಭರಣಗಳು ಸುರಕ್ಷಿತವಾಗಿದ್ದು, ಯಾವುದೇ ಅವ್ಯವಹಾರಗಳು ನಡೆದಿಲ್ಲ ಎಂದು ಸ್ಫಷ್ಟಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ